Advertisement

ಒಂದು ತುತ್ತಿನ ಕಥೆ

06:00 AM Oct 12, 2018 | |

ಸಾತ್ವಿಕ ಬದುಕಿನ ಹಾದಿಯಲ್ಲಿ ನಮ್ಮ ಪ್ರತಿಯೊಂದು ನಡವಳಿಕೆಗಳೂ ಕೌಂಟ್‌ ಆಗುತ್ತವೆ. ಕೆಲವೊಮ್ಮೆ ಏನೂ ಅಲ್ಲದ ಚಿಕ್ಕ ಚಿಕ್ಕ ವಿಷಯಗಳು ಬದುಕಿನಲ್ಲಿ ಅತಿ ದೊಡ್ಡ ಪಾಠ ಕಲಿಸಿ ಬಿಡುತ್ತವೆ. ಅದರಲ್ಲೂ ಈ ವಿದ್ಯಾರ್ಥಿ ಜೀವನವೆಂದರೆ ಕೇಳಬೇಕಾ! ಶಿಲ್ಪಿ ಕೆತ್ತುತ್ತಿರುವ ಕಲ್ಲಿನಂತೆ ಕಲ್ಲು ಒಂಚೂರು ಆ ಕಡೆ ಈ ಕಡೆಯಾದರೂ ಮೂರ್ತಿ ಭಗ್ನವಾಗುವುದು ಗ್ಯಾರಂಟಿ. ನೀವೆಲ್ಲರೂ ನಮ್ಮ ವರನಟ ಅಣ್ಣಾವ್ರು ಅಭಿನಯದ ಒಂದು ಮುತ್ತಿನ ಕಥೆ ಸಿನೆಮಾ ನೋಡಿದ್ದೀರಾ? ಈಗ ನಾನು ನಿಮಗೆ ಹೇಳ್ಳೋಕೆ ಹೊರಟಿರುವುದು ಒಂದು  ತುತ್ತಿನ ಕಥೆ. ಒಂದೇ ಒಂದು ತುಂಡು ಫಿಶ್‌ ಫ್ರೈ ನನ್ನ ಬುಡವನ್ನೇ ಅಲುಗಾಡಿಸಿ ಯೋಚನೆಯ ದಿಕ್ಕನ್ನೇ ಬದಲಿಸಿದ ಸ್ವಾರಸ್ಯಮಯ ಕಥೆ. ಅಂದ ಹಾಗೆ, ಈ ಇಡೀ ಸಿನೆಮಾ ಚಿತ್ರೀಕರಣಗೊಂಡಿದ್ದು ನಮ್ಮ ಕ್ಲಾಸ್‌ರೂಮ್‌ನಲ್ಲಿನ ಸಿಸಿ ಕೆಮರಾದಲ್ಲಿ ಎನ್ನುವುದೇ ಸೋಜಿಗ.

Advertisement

ಆದದ್ದಿಷ್ಟೇ, ಆಗಿನ್ನೂ ನಾನು ನನ್ನ ಕನಸಿನ ಕಾಲೇಜಿಗೆ ಕಾಲಿಟ್ಟು ಸರಿಯಾಗಿ ಒಂದು ವಾರವೂ ಕಳೆದಿರಲಿಲ್ಲ. ಆಗಲೇ ನನ್ನಿಂದ ಬಹುದೊಡ್ಡ ರಾದ್ಧಾಂತವೊಂದು ನನಗರಿವಿಲ್ಲದೇ ಘಟಿಸಿ ಹೋಗಿತ್ತು. ಏನೆಂದರೆ, ಅದು ಮಧ್ಯಾಹ್ನದ ಊಟದ ಬ್ರೇಕ್‌ನ ಸಮಯದಲ್ಲಿ ನಾನು ಹಾಸ್ಟೆಲಿನಿಂದ ಬೇಗ ಊಟ ಮುಗಿಸಿಕೊಂಡು ಕಾಲೇಜಿಗೆ ಬಂದೆ. ನನ್ನ ಸೀನಿಯರ್ ಗುಂಪೊಂದು ಅವರ ಕ್ಲಾಸ್‌ರೂಮ್‌ನಲ್ಲಿ ಕುಳಿತು ಊಟ ಮಾಡುತ್ತಿದ್ದದನ್ನು ಕಂಡು ಒಳಗೆ ಹೋದೆ. ಪ್ರೀತಿಯಿಂದ ಮಾತನಾಡಿಸಿದ ಅವರು ನಂತರ ನನ್ನೊಂದಿಗೆ ಮಾತಿಗಿಳಿದರು. ಸೀನಿಯರ್‌ ಒಬ್ಬರು ಮನೆಯಿಂದ ತಂದಿದ್ದ ಫಿಶ್‌ ಫ್ರೈ ಕೊಡಲು ಮುಂದಾದರು. ಆಗತಾನೇ ಊಟ ಮುಗಿಸಿ ಬಂದಿದ್ದ ನಾನು ಸಹಜವಾಗಿಯೇ “ಬೇಡ’ ಎಂದೆ. ಆದರೆ, ಅವರು ಜೂನಿಯರ್‌ ಎನ್ನುವ ಆತ್ಮೀಯತೆಯಿಂದ ಒಂದು ಸಣ್ಣ ತುಂಡು ಫ್ರೈಯ ಪೀಸನ್ನು ಕೈತುತ್ತು ತಿನ್ನಿಸಿದರು. ಇಷ್ಟೇ ಸಾಕಾಗಿತ್ತು ನೋಡಿ ನನ್ನ ಗ್ರಹಚಾರ ಕೆಡಲು. ನಮ್ಮ ಪ್ರಿನ್ಸಿಪಾಲ್‌ ನಮ್ಮ ಈ ವರ್ತನೆಯಿಂದ ಕೆಂಡಾಮಂಡಲವಾಗಿದ್ದರು. ಬಿಗ್‌ಬಾಸ್‌ ಮನೆಯ ಹಾಗೆ ನಮ್ಮ ಕ್ಲಾಸ್‌ರೂಮ್‌ನಲ್ಲಿನ ಸಿಸಿ ಕೆಮರಾದಲ್ಲಿ ಕೈತುತ್ತು ತಿನ್ನಿಸುತ್ತಿದ್ದನ್ನು ನೋಡಿ ಮರುದಿನವೇ ನಮ್ಮನ್ನೆಲ್ಲ ಕನ್‌ಫೆಷನ್‌ ರೂಮಿಗೆ ಕರೆಸಿಯೇ ಬಿಟ್ಟರು. ನಮ್ಮೆಲ್ಲ ಲೆಕ್ಚರರ್ , ಆಫೀಸ್‌ ಬ್ಯಾರಿಯರ್ ನ ಸಮ್ಮುಖದಲ್ಲಿಯೇ ನಡೆಯಿತು ನಮಗೆ ಮಹಾಮಂಗಳಾರತಿ ಕಾರ್ಯಕ್ರಮ.

ಅರೆ ! ಕೈತುತ್ತು ತಿನ್ನಿಸಿದ್ದರಲ್ಲೇನಿದೆ ತಪ್ಪು? ಎಂದು ನಿಮಗೆ ಅನಿಸುತ್ತಿರಬಹುದು. ನನಗೂ ಕೂಡ ಇದರಲ್ಲೇನಿದೆ ಅಂತಹ ಅಪರಾಧ. ನಮ್ಮದು 21ನೆಯ ಶತಮಾನದ 4ಜಿ ಸ್ಪೀಡಿನಲ್ಲಿ ಓಡುತ್ತಿರುವ ಬದುಕು. ಹೀಗಿರುವಾಗ ಜಸ್ಟ್‌ ಒಂದು ಕೈತುತ್ತು ತಿಂದಿದ್ದು ತಪ್ಪಾ ಎಂದು ಅನಿಸಿದ್ದುಂಟು. ಆದರೆ, ನಮ್ಮ ಪ್ರಿನ್ಸಿಪಾಲರ ದೃಷ್ಟಿಕೋನ ಹಾಗೂ ಅವರ ನಿಲುವು ಬೇರೆಯೇ ಆಗಿತ್ತು. ಆಧುನೀಕತೆಯ ಭರಾಟೆಯಲ್ಲಿ ಇಂತಹ ಅನಾಗರಿಕ ವರ್ತನೆ ಅವರಿಗೆ ಕಿಂಚಿತ್ತೂ ಹಿಡಿಸಿರಲಿಲ್ಲ. “ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗಿತೇ’ ಎಂದು ಪ್ರಾರಂಭದಲ್ಲಿಯೇ ತಪ್ಪನ್ನು ನಮ್ಮ ಅರಿವಿಗೆ ತಂದು ಬುದ್ಧಿಹೇಳಿ ವಾರ್ನ್ ಮಾಡಿದ್ದರು. ರುಚಿ ರುಚಿಯಾದ ಮೀನು ಚಪ್ಪರಿಸಿದ್ದ ನನ್ನ ಪರಿಸ್ಥಿತಿ ಅಂದು ಕಾದ ಬಾಣಲೆಗೆ ಹಾಕಿದ ಮೀನಿನಂತಾಗಿದ್ದಂತೂ ಸತ್ಯ!

ಅದಾದ ಕೆಲದಿನಗಳವರೆಗೆ ನಾನು ಮಾಡಿದ್ದು  ತಪ್ಪೇ ಅಲ್ಲ ಎಂದು ನನ್ನೊಳಗೊಳಗೇ ಪ್ರತಿಭಟಿಸಿದೆ. ಆದರೆ, ದಿನಗಳೆದಂತೆ ನಮ್ಮ ಪ್ರಿನ್ಸಿಪಾಲರ ಒಳ ಮರ್ಮ ಅರ್ಥವಾಗತೊಡಗಿತು. ನಾನಿಂದು ಬದಲಾದ ಆಧುನಿಕ ಸಮಾಜದಲ್ಲಿ “ಐ ಡೋಂಟ್‌ ಕೇರ್‌’ ಎನ್ನುವ ವ್ಯಕ್ತಿತ್ವದೊಂದಿಗೆ ಬದುಕುತ್ತಿದ್ದೇನೆಂದು ಬೀಗಬಹುದು. ಆದರೆ, ನಾನೊಂದು ಸುಸಂಸ್ಕೃತ ಸಮಾಜದಲ್ಲಿ ಬದುಕುತ್ತಿದ್ದೇನೆ ಎಂಬ ಕನಿಷ್ಠ ಪ್ರಜ್ಞೆಯನ್ನು ಮರೆಯಬಾರದು. ಮುಂದಿನ ದಿನಗಳ ಶಿಕ್ಷಕರಾಗುವ ಹಾದಿಯಲ್ಲಿರುವ ನಾವು ಇಂತಹ ಸೂಕ್ಷ್ಮತೆಗಳನ್ನು ಅಗತ್ಯವಾಗಿ ಅರಿತಿರಬೇಕು. ಕೈತುತ್ತು ತಿಂದಿದ್ದು, ತಿನ್ನಿಸಿದ್ದು ನಮ್ಮ ಪಾಲಿಗದು ತಪ್ಪಲ್ಲದಿರಬಹುದು. ಆದರೆ, ಸಮಾಜ ನೋಡುವ ರೀತಿಯೇ ಬೇರೆ. “ಯಥಾರಾಜ ತಥಾ ಪ್ರಜಾ’ ಎಂಬಂತೆ ನಮ್ಮ ವಿದ್ಯಾರ್ಥಿಗಳು ನಮ್ಮನ್ನು ಅನುಸರಿಸುತ್ತಾರೆ ಎನ್ನುವುದರಲ್ಲಿ ಸಂಶಯವಿಲ್ಲ. ನಮ್ಮ ವಿದ್ಯಾರ್ಥಿಗಳ ತಪ್ಪನ್ನು ತಿದ್ದಿ ಸರಿದಾರಿಗೆ ತರಬೇಕಿರುವ ನಾವೇ ಹೀಗೆ ಅಸಭ್ಯವಾಗಿ ವರ್ತಿಸಿದರೆ ಇನ್ನು ನಮ್ಮ ಮಕ್ಕಳ ಪಾಡೇನು ಅಲ್ಲವೇ? ಉತ್ತಮ ಶಿಕ್ಷಕನಾಗುವ ಹಂಬಲದಲ್ಲಿರುವ ನಾವು ಸ್ವಚ್ಛಂದ, ಸಮಾಜಕ್ಕೆ ಹಿಡಿದಿರುವ ಕನ್ನಡಿಯಂತೆ. ನಮ್ಮ ಪ್ರತಿಯೊಂದು ಮಾತು, ಚಿಂತನೆ, ವರ್ತನೆಯಲ್ಲಿ ಸದಾಕಾಲ ಸಭ್ಯತೆ ಹಾಗೂ ಸುಸಂಸ್ಕೃತಿಯನ್ನು ಹೊಂದಿರಬೇಕು.

ಅದೇನೇ ಇರಲಿ ಹಸಿದ ಹೊಟ್ಟೆ , ಖಾಲಿ ಜೇಬು ಬದುಕಿನಲ್ಲಿ ಅನೇಕ ಪಾಠಗಳನ್ನು ಕಲಿಸುತ್ತದೆ ಎಂಬ ಮಾತಿದೆ. ಆದರೆ, ಅಂದು ನನ್ನ ಹೊಟ್ಟೆಯೂ ಹಸಿದಿರಲಿಲ್ಲ. ಜೇಬೂ ಖಾಲಿ ಇರಲಿಲ್ಲ. ಆದರೂ ಯಕಶ್ಚಿತ್‌ ಒಂದು ತುಂಡು ಪಿಶ್‌ಫ್ರೈ ಶಿಸ್ತು ಎನ್ನುವ ಬಹುದೊಡ್ಡ ಪಾಠ ಕಲಿಸಿ ಜೀರ್ಣವಾಗಿತ್ತು. 

Advertisement

ಮಹೇಶ್‌ ಎಂ.ಸಿ.
ಪ್ರಥಮ ಎಂಸಿಜೆ ಎಸ್‌ಡಿಎಂ ಬಿ. ಎಡ್‌ ಕಾಲೇಜು, ಉಜಿರೆ

Advertisement

Udayavani is now on Telegram. Click here to join our channel and stay updated with the latest news.

Next