ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು ಒಂದೇ ಚಿತ್ರದಲ್ಲಿ ಸುಮಾರು ನಾಲ್ಕು ಕಥೆಗಳನ್ನು ಇಟ್ಟುಕೊಂಡು 1974ರಲ್ಲಿ “ಕಥಾ ಸಂಗಮ’ ಎನ್ನುವ ಹೆಸರಿನಲ್ಲಿ ಚಿತ್ರ ನಿರ್ದೇಶಿಸಿ ತೆರೆಗೆ ತಂದಿದ್ದರು. ಆಗಿನ ಕಾಲದಲ್ಲಿ ಹೊಸಥರದ ಪ್ರಯೋಗವಾಗಿದ್ದ “ಕಥಾ ಸಂಗಮ’ ಚಿತ್ರಕ್ಕೆ ವಿಮರ್ಶಕರಿಂದ, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈಗ “ಒಂದ್ ಕಥೆ ಹೇಳಾ’ ಎಂಬ ಹೆಸರಿನಲ್ಲಿ ಅಂಥದ್ದೆ ಚಿತ್ರವೊಂದು ತೆರೆಗೆ ಬರೋದಕ್ಕೆ ಸಿದ್ಧವಾಗುತ್ತಿದೆ.
ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ ಹಾರರ್ ಶೈಲಿಯ “ಒಂದ್ ಕಥೆ ಹೇಳ್ಳಾ’ ಚಿತ್ರದಲ್ಲಿ ಒಟ್ಟು ಐದು ಕಥೆಗಳನ್ನು ಚಿತ್ರದಲ್ಲಿ ತೆರೆದಿಡಲಾಗುತ್ತಿದೆ. “ಒಂದ್ ಕಥೆ ಹೇಳಾ’ ಚಿತ್ರದ ಟ್ರೇಲರ್‌ನ್ನು ನಿರ್ದೇಶಕ ಕಂ ನಟ ರಿಷಭ್ ಶೆಟ್ಟಿ ಇತ್ತೀಚೆಗೆ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ರಿಷಭ್ ಶೆಟ್ಟಿ, “ನಮ್ಮ ಪ್ರೇಕ್ಷಕರು ಅನ್ನ ಸಾಂಬರ್ ಅಲ್ಲದೆ ಬಿರಿಯಾನಿ ಕೂಡ ಇಷ್ಟಪಡುತ್ತಾರೆ. ಅದಕ್ಕಾಗಿ ಹಲವು ಹೊಸಬಗೆಯ ಚಿತ್ರಗಳನ್ನು ಕೊಡಬೇಕಾಗಿದೆ. ನಾನು ಸಹ ಹಲವು ಕಿರು ಕಥೆಗಳನ್ನು ಹೆಕ್ಕಿಕೊಂಡು “ಕಥಾ ಸಂಗಮ’ ಚಿತ್ರ ಮಾಡಿದ್ದು, ಸದ್ಯದಲ್ಲೇ ಅದು ಕೂಡ ತೆರೆಗೆ ಬರಲಿದೆ. ಚಿತ್ರಗಳಿಗೆ ಹೊಸಬರು ಬಂಡವಾಳ ಹೂಡುತ್ತಿರುವುದು ಚಿತ್ರರಂಗದ ಮಟ್ಟಿಗೆ ಒಳ್ಳೆಯ ಬೆಳವಣಿಗೆ. ತುಂಬ ಜನರು ಸಕಾರಾತ್ಮಕ ಉದ್ದೇಶ, ಯೋಚನೆ ಇಟ್ಟುಕೊಂಡು ಸಿನಿಮಾರಂಗಕ್ಕೆ ಬರುತ್ತಿದ್ದಾರೆ. ಇವತ್ತು ಸಿನಿಮಾ ಮಾಡೋದಕ್ಕಿಂತ ಅದನ್ನು ಜನರಿಗೆ ತಲುಪಿಸುವುದು ಕಷ್ಟದ ಕೆಲಸ. ಹೊಸಬರೆ ಸೇರಿಕೊಂಡು ಒಳ್ಳೆಯ ಸಿನಿಮಾ ಮಾಡಿದ್ದಾರೆ ಅವರಿಗೆ ಒಳ್ಳೆಯದಾಗಲಿ’ ಎಂದು ಚಿತ್ರತಂಡಕ್ಕೆ ಶುಭ ಹಾರೈಸಿದರು.
“ಒಂದ್ ಕಥೆ ಹೇಳಾ’ ಚಿತ್ರಕ್ಕೆ ಮೆಕಾನಿಕಲ್ ಇಂಜಿನಿಯರ್ ಆಗಿರುವ ಗಿರೀಶ್.ಜಿ ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಮಾತನಾಡುವ ನಿರ್ದೇಶಕ ಗಿರೀಶ್, “ಈಗಿನ ಪ್ರೇಕ್ಷಕರು ಹಾರರ್ ಕಥೆಗಳನ್ನು ಇಷ್ಟಪಡುತ್ತಿದ್ದಾರೆ. ಚಿತ್ರದಲ್ಲಿ ಮೂವರು ಹುಡುಗರು, ಇಬ್ಬರು ಹುಡುಗಿಯರು ಬೆಂಗಳೂರಿನಿಂದ ಸಕಲೇಶಪುರಕ್ಕೆ ಪ್ರಯಾಣ ಮಾಡುವಾಗ ಅವರುಗಳಲ್ಲೆ ಒಂದೊಂದು ಕಥೆಗಳು ಹುಟ್ಟಿಕೊಳ್ಳುತ್ತವೆ. ಆ ಎಲ್ಲಾ ಕಥೆಗಳಲ್ಲೂ ಶೇಕಡಾ 60ರಷ್ಟು ಹಾರರ್ ಅಂಶಗಳು ಬರುತ್ತವೆ. ಒಂದು ಕಥೆಯಲ್ಲಿ ಭಕ್ತಪ್ರಹ್ಲಾದ ನಾಟಕವನ್ನು ಯಾಕಾಗಿ ಮಾಡುವುದಿಲ್ಲವೆಂದು ಹೇಳಲಾಗಿದೆ. ಹೋಂ ಸ್ಟೇಗಳಲ್ಲಿ ನಡೆದ ಕೆಲವು ಘಟನೆಗಳನ್ನು ಆಧರಿಸಿ ಈ ಚಿತ್ರದ ಕಥೆ ಮಾಡಲಾಗಿದೆ. ಚಿತ್ರದಲ್ಲಿ ಕೋಳಿಯೊಂದು ಮುಖ್ಯ ಪಾತ್ರವಹಿಸಿದ್ದು, ಅದೇನು ಎಂಬುದನ್ನು ತೆರೆಮೇಲೆ ನೋಡಬೇಕು’ ಎಂಬುದು ಅವರ ಮಾತು.
“ಒಂದ್ ಕಥೆ ಹೇಳಾ’ ಚಿತ್ರದಲ್ಲಿ ಪ್ರತೀಕ್, ದೀಪಕ್, ತಾರಾ, ತಾಂಡವ್, ಸೌಮ್ಯಾ, ರಮಾಕಾಂತ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸಕಲೇಶಪುರ, ರಾಮನಗರ, ಕುಣಿಗಲ್ ಮೊದಲಾದ ಕಡೆಗಳಲ್ಲಿ ಸುಮಾರು 30 ದಿನಗಳ ಕಾಲ ಚಿತ್ರದ ಚಿತ್ರೀಕರಣ ನಡೆಸಲಾಗಿದೆ.
ಸುಮಾರು 22 ಜನ ಸಿನಿಮಾಸಕ್ತರು ಸೇರಿಕೊಂಡು ಕ್ರೌಡ್ ಫಂಡಿಂಗ್ ಮೂಲಕ ಈ ಚಿತ್ರವನ್ನು ನಿರ್ಮಿಸಿರುವುದು ವಿಶೇಷ. ಸದ್ಯ ಬಿಡುಗಡೆಯಾಗಿರುವ ಚಿತ್ರದ ಟ್ರೇಲರ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗುತ್ತಿದ್ದು, ಇದೇ ಖುಷಿಯಲ್ಲಿರುವ ಚಿತ್ರತಂಡ, ಫೆಬ್ರವರಿ ಅಂತ್ಯಕ್ಕೆ ಚಿತ್ರವನ್ನು ತೆರೆಗೆ ತರಲು ಪ್ಲಾನ್ ಮಾಡಿಕೊಂಡಿದೆ.