Advertisement
ಸೋಯಿಚಿರೋ ಹೋಂಡಾ ಎನ್ನುವವರ ಉದಾಹರಣೆ ನೀಡುತ್ತೇನೆ. ಈ ವ್ಯಕ್ತಿ ಬೇರಾರೂ ಅಲ್ಲ, ಜಗದ್ವಿಖ್ಯಾತ ಹೋಂಡಾ ಆಟೊಮೊಬೈಲ್ ಸಾಮ್ರಾಜ್ಯದ ಸ್ಥಾಪಕ. ಇಂದು ಹೋಂಡಾ ಎಂದರೆ ಎಲ್ಲರಿಗೂ ಗೊತ್ತಿದೆ, ಈ ಕಂಪನಿಯ ಕಾರುಗಳಿಂದ ಹಿಡಿದು ಬೈಕುಗಳು ಚಿರಪರಿಚಿತ. ಆದರೆ ಈ ಕಂಪನಿಯನ್ನು ಕಟ್ಟಿ ನಿಲ್ಲಿಸಲು ಈ ವ್ಯಕ್ತಿ ಪಟ್ಟ ಕಷ್ಟವೆಷ್ಟು ಗೊತ್ತೇ?ಹೋಂಡಾ ಹುಟ್ಟಿದ್ದ ಜಪಾನ್‌ನಲ್ಲಿ. ಚಿನ್ನದ ಚಮಚವೇನೂ ಬಾಯಲ್ಲಿಟ್ಟುಕೊಂಡು ಹುಟ್ಟಲಿಲ್ಲ ಈತ. ಕೆಳ ಮಧ್ಯಮ ವರ್ಗದಲ್ಲೇ ಜನನವಾಯಿತು. ದಿನಕ್ಕೆ ಎರಡು ಹೊತ್ತು ಊಟ ಬಿಟ್ಟರೆ ಹೇಳಿ ಕೊಳ್ಳುವಂಥದ್ದೇನೂ ಇರಲಿಲ್ಲ. ಆದರೆ ಚಿಕ್ಕ ವಯಸ್ಸಿನಿಂದಲೇ ಹೋಂಡಾಗೆ ತನ್ನಲ್ಲಿ ಮತ್ತು ಸಮಾಜದಲ್ಲಿ ಬೃಹತ್ ಬದಲಾವಣೆ ತರುವಂಥ ಸಾಧನೆ ಮಾಡಬೇಕು ಎಂಬ ಅದಮ್ಯ ಬಯಕೆಯಂತೂ ಕುದಿಯುತ್ತಲೇ ಇತ್ತು. ಬಾಲ್ಯದಿಂದಲೇ ಯಂತ್ರೋಪಕರಣಗಳಲ್ಲಿ ಆಸಕ್ತಿ ಬೆಳೆಸಿಕೊಂಡ ಹೋಂಡಾ, ಮುಂದೆ ಇಂಜಿನಿಯರಿಂಗ್ ಸ್ಕೂಲ್ ಸೇರಿದ. ಆಗ ಆತನ ವಯಸ್ಸು 20 ದಾಟಿರಲಿಲ್ಲ. ಒಂದು ದಿನ ಹಠಾತ್ತನೆ ಹೋಂಡಾಗೆ ವಾಹನಗಳಿಗೆ ಪಿಸ್ಟನ್ ರಿಂಗ್‌ಗಳನ್ನು ತಯಾರಿಸುವ ಐಡಿಯಾ ಹೊಳೆಯಿತು. ಆ ಐಡಿಯಾಗೆ ಮೂರ್ತರೂಪ ಕೊಡಲು ಆತ ಸ್ಕೂಲ್‌ಗೆ ತೆರಳಿ ಅಲ್ಲಿನ ವರ್ಕ್‌ಶಾಪ್‌ನಲ್ಲಿ ಹಗಲು ರಾತ್ರಿ ಶ್ರಮಪಟ್ಟ, ಕೆಲವು ದಿನಗಳಲ್ಲಂತೂ ವರ್ಕ್‌ಶಾಪ್‌ನಲ್ಲಿಯೇ ರಾತ್ರಿ ನಿದ್ದೆ ಮಾಡುತ್ತಿದ್ದ. ತಾನೊಂದು ಅದ್ಭುತ ಡಿಸೈನ್ ರೆಡಿ ಮಾಡಿ, ಟೊಯೋಟಾ ಕಂಪನಿಗೆ ಮಾರುತ್ತೇನೆ ಎಂಬ ಅದಮ್ಯ ನಂಬಿಕೆ ಹೋಂಡಾಗಿತ್ತು. ಆ ಹೊತ್ತಿಗಾಗಲೇ ಹೋಂಡಾಗೆ ಮದುವೆ ಆಗಿತ್ತು, ಪಿಸ್ಟನ್ ತಯಾರಿಕೆಗೆ ಹಣದ ಕೊರತೆ ಎದುರಾದಾಗ ಹೆಂಡತಿಯ ಒಡವೆಯನ್ನೇ ಅಡವಿಟ್ಟ.
ಎರಡನೇ ಬಾರಿ ಕಾರ್ಖಾನೆಯ ನಿರ್ಮಾಣದ ಕೆಲಸ ಭರದಿಂದ ಸಾಗಿತ್ತು. ಆದರೆ ಅದು ಪೂರ್ಣವಾಗುವ ಮೊದಲೇ ಜಪಾನ್ ಎರಡನೇ ವಿಶ್ವಯುದ್ಧವನ್ನು ಪ್ರವೇಶಿಸಿಬಿಟ್ಟಿತು. ಆ ಸಮಯದಲ್ಲಿ ದೇಶಾದ್ಯಂತ ಸಿಮೆಂಟ್‌ನ ಪೂರೈಕೆ ಅಜಮಾಸು ನಿಂತೇ ಹೋಯಿತು. ಈಗೇನು ಮಾಡಬೇಕು ಎಂದು ಎಲ್ಲರೂ ತಲೆ ಮೇಲೆ ಕೈಹೊತ್ತುಕೊಂಡು ಕುಳಿತಾಗ, ಹೋಂಡಾ ಅಂದ, “ಆದದ್ದಾಯಿತು. ಸಿಮೆಂಟ್ ಸಿಗುತ್ತಿಲ್ಲ ಎಂದರೆ, ನಾವೇ ಸಿಮೆಂಟ್ ತಯಾರಿಸೋಣ!’
Related Articles
Advertisement
ಅದೊಂದು ದುರ್ದಿನ ಅಮೆರಿಕನ್ ಪಡೆಗಳು ಜಪಾನ್‌ನ ಮೇಲೆ ವಾಯುದಾಳಿ ನಡೆಸಿದಾಗ ಹೋಂಡಾ ಫ್ಯಾಕ್ಟರಿಯೂ ಬಾಂಬ್ ದಾಳಿಗೆ ತುತ್ತಾಯಿತು. ಆಗ ಜಪಾನ್‌ನಲ್ಲಿ ಸ್ಟೀಲ್‌ನ ತೀವ್ರ ಅಭಾವ ಎದುರಾಯಿತು. ಆಗ ಹೋಂಡಾ ಕೈಚೆಲ್ಲಿದನಾ? ಖಂಡಿತ ಇಲ್ಲ!
ಆ ಸಮಯದಲ್ಲಿ ಅಮೆರಿಕದ ಯುದ್ಧ ವಿಮಾನಗಳೆಲ್ಲ ಇಂಧನದ ಟ್ಯಾಂಕ್‌ಗಳನ್ನು ಹೊತ್ತು ಹಾರುತ್ತಿದ್ದವು. ಈ ಟ್ಯಾಂಕ್‌ಗಳಲ್ಲಿದ್ದ ಇಂಧನವನ್ನು ಬಳಸಿದ ನಂತರ, ಆಗಸದಿಂದ ತೆಳಕ್ಕೆ ಬಿಸುಟುತ್ತಿದ್ದವು (ವಿಮಾನದಲ್ಲಿ ಭಾರ ಕಡಿಮೆಯಾಗಲೆಂದು). ಈ ರೀತಿ ಅಮೆರಿಕದ ಯುದ್ಧ ವಿಮಾನಗಳು ಜಪಾನ್‌ನ ತುಂಬೆಲ್ಲ ಸ್ಟೀಲ್ ಟ್ಯಾಂಕ್‌ಗಳನ್ನು ಎಸೆದು ಹೋಗಿದ್ದವು. ಹೋಂಡಾ ಅವುಗಳನ್ನೇ ಕರಗಿಸಿ ತನ್ನ ಫ್ಯಾಕ್ಟರಿ ನಿರ್ಮಾಣಕ್ಕೆ ಬಳಸಿಕೊಂಡ. ಈ ಸ್ಟೀಲ್ ಟ್ಯಾಂಕ್‌ಗಳನ್ನು ಹೋಂಡಾ “ಅಮೆರಿಕದ ಅಧ್ಯಕ್ಷ ಟ್ರೂಮನ್‌ರ ಕೊಡುಗೆ’ ಎಂದೇ ಕರೆದ.
ಇಷ್ಟಕ್ಕೇ ನಿಲ್ಲಲಿಲ್ಲ ಸಮಸ್ಯೆ, ಯುದ್ಧಾ ನಂತರ ಜಪಾನ್‌ಗೆ ತೀವ್ರ ಇಂಧನ ಅಭಾವ ಎದುರಾಯಿತು. ಇಂಧನವೇ ಇಲ್ಲವೆಂದ ಮೇಲೆ ಕಾರುಗಳನ್ನು ಕೊಳ್ಳುವವರು ಯಾರು? ಹೀಗಾಗಿ ಟೊಯೋಟಾ ಕಂಪನಿಯೂ ಕಾರ್ ಉತ್ಪಾದನೆಯನ್ನು ನಿಲ್ಲಿಸಿಬಿಟ್ಟಿತು. ಹೀಗಾಗಿ, ಹೋಂಡಾಗೆ ಪಿಸ್ಟನ್ ರಿಂಗ್‌ಗಳಿಗೆ ಆರ್ಡರ್ ಬರಲೇ ಇಲ್ಲ.
ಆ ಸಮಯದಲ್ಲಿ ಇಂಧನ ಕೊರತೆಯಿದ್ದ ಕಾರಣ, ಜನರು ಒಂದೋ ಕಾಲ್ನಡಿಗೆಯಲ್ಲಿ ಅಥವಾ ಸೈಕಲ್‌ಗಳ ಮೇಲೆ ಓಡಾಡುತ್ತಿದ್ದರು. ಇದನ್ನು ಗಮನಿಸಿದ ಹೋಂಡಾಗೆ, ಸೈಕಲ್‌ಗೇ ಚಿಕ್ಕ ಇಂಜಿನ್ ಕೂಡಿಸಿದರೆ ಹೇಗೆ? ಅದೂ ಹೆಚ್ಚು ಇಂಧನ ಕುಡಿಯದು ಎನ್ನುವ ಐಡಿಯಾ ಬಂತು. ಆ ಐಡಿಯಾ ಕಾರ್ಯ ರೂಪಕ್ಕೂ ಬಂದಿತು. ಹೋಂಡಾ ಆ್ಯಂಡ್ ತಂಡ ಬೈಕ್ ಇಂಜಿನ್ ತಯಾರಿಸಿತು. ಕೆಲವೇ ವರ್ಷಗಳಲ್ಲಿ ಹೋಂಡಾ ಕಂಪನಿಯ ಬೈಕ್ ಇಂಜಿನ್‌ಗಳು ಎಷ್ಟು ಪ್ರಖ್ಯಾತವಾಗಿಬಿಟ್ಟವೆಂದರೆ, ಅವುಗಳನ್ನು ಯೂರೋಪ್ ಮತ್ತು ಅಮೆರಿಕಕ್ಕೂ ಸರಬರಾಜು ಮಾಡಲಾಯಿತು.
ಮುಂದಿನದ್ದು ಇತಿಹಾಸ, 1970ರ ವೇಳೆಗೆ ಹೋಂಡಾ ಕಂಪೆನಿ ಚಿಕ್ಕ ಕಾರುಗಳ ಉತ್ಪಾದನೆಯನ್ನು ಆರಂಭಿಸಿತು. ಅದರೆ ಬೈಕ್‌ಗಳಷ್ಟೇ ಅಲ್ಲದೇ, ಕಾರುಗಳೂ ಲೋಕಪ್ರಿಯವಾದವು..
ಈಗ ಯೋಚಿಸಿ ನೋಡಿ, ಸೋಯಿಚಿರೋ ಹೋಂಡಾ ಜಾಗದಲ್ಲಿ ನೀವಿದ್ದರೆ ಏನು ಮಾಡುತ್ತಿದ್ದಿರಿ?ಅವರಂತೆ ಛಲದಂಕ ಮಲ್ಲನಾಗಿ ಯಶಸ್ವಿಯಾಗುತ್ತಿದ್ದರೋ ಅಥವಾ ಟೊಯೋಟಾ ಕಂಪನಿಯು ಪಿಸ್ಟನ್ ರಿಂಗ್ ಡಿಸೈನ್ ಅನ್ನು ನಿರಾಕರಿಸಿದಾಗಲೋ ಅಥವಾ ಕಾರ್ಖಾನೆಯು ಕುಸಿದುಬಿದ್ದಾಗಲೋ ನಿಮ್ಮ ಹಣೆಬರಹವನ್ನು ಹಳಿದು ಕೈ ಚೆಲ್ಲುತ್ತಿದ್ದಿರೋ? ಆಗಲೇ ಹೇಳಿದೆನಲ್ಲ, ಸಕ್ಸಸ್ ಮತ್ತು ಫೇಲ್ಯೂರ್‌ನ ನಡುವಿನ ವ್ಯತ್ಯಾಸ ಏನು ಎಂದು!
– ಮುಕುಂದಾ ನಂದ