Advertisement

ಎನಿ ಡೇ ನೌ ಸಿನಿಮಾ: ಜೀವನಪ್ರೀತಿಯ ಜಲಧಾರೆ ಎದುರಿಗಿನ ಕ್ಷಣ

02:44 PM Sep 05, 2022 | Team Udayavani |

ಸಿನಿಮಾದ ಶೀರ್ಷಿಕೆಯೇ ವ್ಯಕ್ತಪಡಿಸುವಂತೆ ಯಾವುದೇ ದಿನ.. ಯಾವುದೇ ಗಳಿಗೆ.. ಯಾವುದೇ ಕ್ಷಣ.. ಆ ಕ್ಷಣ ಎದುರಿಗೆ ಬಂದು ಬಿಡಬಹುದು. ಅದನ್ನು ತಿಳಿದುಕೊಂಡೇ ಆ ಕ್ಷಣಕ್ಕೆ ನಮ್ಮನ್ನು ನಾವು ಸಜ್ಜುಗೊಳಿಸಿಕೊಳ್ಳುತ್ತಾ ಜೀವನವನ್ನು ಪ್ರೀತಿಸುವುದು ಬಗೆ ಕುರಿತೇ ಸಿನಿಮಾ ಹೆಚ್ಚಾಗಿ ಚರ್ಚಿಸುತ್ತದೆ.

Advertisement

ಸಿನಿಮಾದ ಕಥೆಯೂ ಅತ್ಯಂತ ಸರಳ. ಕುಟುಂಬವೊಂದು ಫಿನ್‌ ಲ್ಯಾಂಡ್‌ ನಲ್ಲಿ ನಿರಾಶ್ರಿತರ ಪಟ್ಟಿಯಲ್ಲಿ ಸ್ಥಾನ ಪಡೆಯಲು ಪ್ರಯತ್ನಿಸುತ್ತದೆ. ಸ್ಥಳೀಯ ಸರಕಾರ ಆ ಪಟ್ಟಿಯ ಮೇಲೆ ಕುಳಿತಿದೆ. ಎರಡೂ ಸಾಧ್ಯತೆ ಇದೆ. ಒಂದು ವೇಳೆ ನಿರಾಶ್ರಿತರ ಪಟ್ಟಿಯಲ್ಲಿ ಈ ಕುಟುಂಬದ ಹೆಸರಿಗೆ ಮೊಹರು ಒತ್ತಿದರೆ ಕುಟುಂಬ ಆಶ್ರಯ ಸಿಕ್ಕಿತೆಂದು ಸಂಭ್ರಮಿಸಬಹುದು. ಆಕಸ್ಮಾತ್ ಮೊಹರು ಬೀಳದಿದ್ದರೆ ಈ ಊರು ಬಿಟ್ಟು ಬೇರೆ ಊರು ಹುಡುಕಬೇಕಾಗಬಹುದು. ಎರಡೂ ಕ್ಷಣಗಳು ಅನಿರೀಕ್ಷಿತ ಎನಿಸಿದರೂ ನಿಶ್ಚಿತವಾದುದು. ಆ ಕ್ಷಣವನ್ನು ಮುಂದೂಡಲು ಸಾಧ್ಯವೇ ಇಲ್ಲ.

ಇದು ವಾಸ್ತವ. ನಮ್ಮೆಲ್ಲರ ಬದುಕಿನಲ್ಲೂ ಬಂದಿರಬಹುದಾದ ಹಾಗೂ ಬರಬಹುದಾದ ಕ್ಷಣಗಳು. ಆ ಸಂದರ್ಭದಲ್ಲಿ ನಮ್ಮೊಳಗಿನ ಜೀವನ ಪ್ರೀತಿ, ಜೀವನ ದ್ರವ್ಯ ಹೇಗೆ ಬದುಕಿನತ್ತ ಮುಖ ಮಾಡಿಸುತ್ತದೆ ಎಂಬುದೇ ವಾಸ್ತವದ ಖಚಿತ ಮುಖಾಮುಖಿ. ಚಿತ್ರ ನಿರ್ದೇಶಕ ಹಮಿ ರಮಿಜಾನ್‌ ರು 2020 ರಲ್ಲಿ ರೂಪಿಸಿದ ಪರ್ಸಿಯನ್‌/ಫಿನ್ನಿಶ್‌ ಭಾಷೆಯಲ್ಲಿನ ಚಲನಚಿತ್ರವಿದು. ಈ ಸಿನಿಮಾ ಬದುಕನ್ನು ಪ್ರೀತಿಸುವ ಎಲ್ಲರಿಗೂ ಒಪ್ಪುವಂಥ ಚಿತ್ರ.

ಇರಾನಿ ಮೂಲದ ಬಹ್ಮಾನ್‌ ಮೆಹ್ದಿಪೊರ್‌ ನ ಕುಟುಂಬ ಫಿನ್‌ ಲ್ಯಾಂಡ್‌ ನಲ್ಲಿ ನಿರಾಶ್ರಿತರ ಹಣೆಪಟ್ಟಿ ಕಟ್ಟಿಕೊಂಡು ಬದುಕುತ್ತಿದೆ. ಸ್ಥಳೀಯ ಸರಕಾರಕ್ಕೆ ಆಶ್ರಯ ಕೋರಿ ಅರ್ಜಿ ಸಲ್ಲಿಸಿದೆ. ಬಹ್ಮಾನ್‌ ನ ಪತ್ನಿ ಮಹ್ತಾಬ್‌, ಮಗ ರಮಿನ್ ಹಾಗೂ ಮಗಳು ದೊನ್ಯಾರ ಕುಟುಂಬವಿದು. ಮಗ ಮತ್ತು ಮಗಳು ಹತ್ತಿರದ ಶಾಲೆಯಲ್ಲಿ ಕಲಿಯುತ್ತಿರುತ್ತಾರೆ. ಒಂದು ಬಾರಿ ಸಲ್ಲಿಸುವ ಅರ್ಜಿಗೆ ಪುರಸ್ಕಾರ ಸಿಗದು. ಮತ್ತೊಮ್ಮೆ ವಿನಂತಿಸಿ ಅರ್ಜಿ ಸಲ್ಲಿಸುತ್ತಾರೆ. ಅದರ ತೀರ್ಪಿಗಾಗಿ ಎಲ್ಲರೂ ಕಾಯುತ್ತಿದ್ದಾರೆ.

ಈ ಕ್ಷಣ ಬದುಕಿನದ್ದು. ತೀರಾ ಆತಂಕದ್ದೂ ಸಹ. ನಾಳೆ ಬೆಳಗ್ಗೆ ಮನೆ ಮಾಲೀಕ ಮನೆ ಖಾಲಿ ಮಾಡಿ ಎಂದರೆ ನಮ್ಮೊಳಗೆ ಸೃಷ್ಟಿಯಾಗುವ ಆತಂಕದ ಅಲೆಗೆ ಯಾವುದರ ಹೋಲಿಕೆಯೂ ಸಾಧ್ಯವಿರದು. ಅಂಥದ್ದರಲ್ಲಿ ನಾಳೆ ಬೆಳಗ್ಗೆ ಈ ದೇಶವೇ ಬಿಡಿ ಎಂದರೆ ಹೇಗೆನಿಸಬಹುದು? ಇಂಥದೊಂದು ಭವಿಷ್ಯದ ಅನಿಶ್ಚಿತತೆಯ ಪ್ರಶ್ನೆಯನ್ನು ಎದುರಿಟ್ಟುಕೊಂಡು ನಗುನಗುತಾ ಬದುಕುವುದು ನಾವೆಲ್ಲ ಅಂದುಕೊಂಡಷ್ಟು ಸುಲಭವಲ್ಲ. ಆದರೆ ಈ ಕುಟುಂಬ ನಮಗೆ ಅಂಥದೊಂಧು ಸಾಧ್ಯತೆಯನ್ನಷ್ಟೇ ಹೇಳುವುದಿಲ್ಲ, ಬದಲಾಗಿ ಅಭ್ಯಾಸ ಮಾಡಿಸಲು ಪ್ರಯತ್ನಿಸುತ್ತದೆ.

Advertisement

ಸಿನಿಮಾದ ಮೊದಲ ಫ್ರೇಮ್‌ ಆರಂಭವಾಗುವುದು ಎಷ್ಟು ಸಹಜವೆಂದರೆ ಇಡೀ ದೃಶ್ಯದಲ್ಲಿ ಲವಲವಿಕೆ, ಜೀವನ ಪ್ರೀತಿ, ಬದುಕನ್ನು ಆವರಿಸಿಕೊಳ್ಳುತ್ತಿರುವ ರೀತಿ ವ್ಯಕ್ತವಾಗುತ್ತದೆ. ಎಲ್ಲಿಯೂ ಆತಂಕದ ಛಾಯೆ ಇಡೀ ದೃಶ್ಯದಲ್ಲಿ ಸುಳಿಯುವುದಿಲ್ಲ. ಈ ಕ್ಷಣವಷ್ಟೇ ನಮ್ಮದು, ಅನುಭವಿಸಬೇಕು ಎಂಬ ಇಚ್ಛೆ ನಾಲ್ವರಲ್ಲೂ ಇರುತ್ತದೆ.

ಅದೇ ನಿರಾಶ್ರಿತರ ವಸತಿ ಸಮುಚ್ಚಯದಲ್ಲಿ ಎಲ್ಲ ಕುಟುಂಬಗಳೂ ನಿರೀಕ್ಷೆಯಲ್ಲೇ ಕಳೆಯುತ್ತಿರುತ್ತವೆ. ಒಬ್ಬೊಬ್ಬರದ್ದು ಒಂದೊಂದು ಮನಸ್ಥಿತಿ. ಒಂದು ಕುಟುಂಬವಂತೂ ಸಂಕಷ್ಟಕಾಲವನ್ನು ಎದುರಿಸುವ ಮನಸ್ಥಿತಿಯನ್ನು ಅಭ್ಯಾಸ ಮಾಡುವಂತಿರುತ್ತದೆ. ಅದಕ್ಕೆ ಕೊಂಚ ಗದ್ದಲ, ಗಲಾಟೆ, ಖುಷಿಯ ಸಂಭ್ರಮ ಯಾವುದೂ ಬೇಡ. ಪಕ್ಕದ ಗೋಡೆಯಿಂದ ಸಣ್ಣದೊಂದು ಹಾಡು ಕೊಂಚ ಜೋರಾಗಿ ಕೇಳಿಬಂದರೂ ದೂರು ನೀಡುವಂಥ ಮನಸ್ಥಿತಿ. ಮೌನಾಭ್ಯಾಸಕ್ಕೆ ಭಂಗವಾದೀತೆಂಬ ಆತಂಕ ಅವರದ್ದು. ಇಂಥ ಪರಿಸರದಲ್ಲಿ ನಗುನಗುತಾ ಬದುಕನ್ನು ಎದುರಿಸುವುದು ಬಹ್ಮಾನ್‌ ಕುಟುಂಬ ಮಾತ್ರ.

ಚಿತ್ರ ನಿರ್ದೇಶಕ ಹಮಿ ರಮಿಜಾನ್‌ ಅವರ ಮೊದಲ ಕಥಾಚಿತ್ರ. ತನ್ನ ಬದುಕಿನ ಕ್ಷಣಗಳಿಗೆ ಕಥಾರೂಪ ಕೊಟ್ಟಿರುವ ನಿರ್ದೇಶಕ, 82 ನಿಮಿಷಗಳ ಸಿನಿಮಾದಲ್ಲಿ ಬದುಕಿನ ವರ್ತಮಾನದ ಕ್ಷಣಗಳನ್ನು ಪ್ರಮುಖವಾಗಿಸುತ್ತಾ, ಭವಿಷ್ಯದ ಬಗ್ಗೆಯೂ ಒಂದಿಷ್ಟು ನಿರೀಕ್ಷೆ ಬಿತ್ತುತ್ತಾನೆ. ಎಲ್ಲಿಯೂ ಬದುಕು ಸ್ಥಗಿತ ಅಥವಾ ನಿಂತತಾಗಿದೆ ಎಂದೆನಿಸುವುದಿಲ್ಲ.

ತೀರ್ಪಿನ ಹತ್ತಿರವಿದ್ದಾಗ್ಯೂ ಸಂಬಂಧಿಕರೊಬ್ಬರ ಹುಟುಹಬ್ಬದ ಸಂಭ್ರಮವನ್ನು ಆಚರಿಸುವ ಬಗೆ, ಮನಸ್ಸಿನೊಳಗೆ ಹಂಬಲವನ್ನು ತುಂಬಿಕೊಳ್ಳುವ ಬಗೆ ನಿಜಕ್ಕೂ ಸೋಜಿಗವೆನಿಸುವುದುಂಟು. ಅಪ್ಪ-ಅಮ್ಮ, ಮಕ್ಕಳ ನಡುವಿನ ಸಂಬಂಧವನ್ನೂ ಅಷ್ಟೇ ನಾಜೂಕಾಗಿ, ರಸಾಭಂಗವಾಗದಂತೆ ದೃಶ್ಯಗಳನ್ನು ಸೃಜಿಸಿರುವುದು ನಿರ್ದೇಶಕನ ಹೆಚ್ಚುಗಾರಿಕೆ. ಅಲೆಮಾರಿಗೆ ಇಂದು ಈ ಊರಾದರೆ, ನಾಳೆ ಬೇರೆ ಊರು ಎಂಬ ಮನಸ್ಥಿತಿ ಇರುತ್ತದೆ. ಅವನು ಮುಂಬರುವ ಕ್ಷಣಗಳಿಗೆ ತಲೆ ಕೆಡಿಸಿಕೊಳ್ಳದೇ, ವರ್ತಮಾನವನ್ನು, ಈ ಕ್ಷಣವನ್ನು ಸಂಪೂರ್ಣವಾಗಿ ಅನುಭವಿಸುವಲ್ಲಿ ಮಗ್ನನಾಗುತ್ತಾನೆ. ಅದೇ ಮನಸ್ಥಿತಿ ಈ ಚಿತ್ರದ ನಾಯಕ ಬಹ್ಮನ್‌ ನದ್ದು.

ಬಹ್ಮನ್‌ ಆಗಿ ನಟಿಸಿರುವ ಶಹಬ್‌ ಹೊಸೇನಿ ನುರಿತ ನಟ. ವಿಭಿನ್ನ ಪಾತ್ರಗಳಲ್ಲಿ ನಟಿಸಿರುವ ಬಹ್ಮನ್‌ ಈ ಚಿತ್ರದ ಓಘ ವನ್ನು ಸರಿಯಾಗಿ ಅರ್ಥೈಸಿಕೊಂಡು ಅದಕ್ಕೆ ಪೂರಕವಾಗಿ ಹೆಚ್ಚು ಅಬ್ಬರವಿಲ್ಲದೇ, ವಾಚ್ಯವೆನಿಸದೇ ಅಭಿನಯಿಸಿರುವುದು ನಿಜಕ್ಕೂ ಮೆಚ್ಚಲೇಬೇಕು. ಅಪ್ಪನ ಲಯಕ್ಕೆ ತಕ್ಕಂತೆ ಮಗ ರಮೀನ್‌ ನಾಗಿ ಆರನ್ ಸಿನಾ ಕೇಶ್ವಾರಿ ನಟಿಸಿದ್ದರೆ, ದೊನ್ಯಾಳಾಗಿ ಕಿಮಿಯಾ ಎಸ್ಕಂದಾರಿ ಸಹ ಮುದ್ದು ಮುದ್ದಾಗಿ ಪಾತ್ರಕ್ಕೆ ಜೀವ ತುಂಬಿದ್ದಾಳೆ.  ಬಹ್ಮನ್‌ ನ ಪತ್ನಿ ಮಹ್ಮಾಬ್‌ ಆಗಿ ಶಬನಮ್‌ ಗೊರ್ಬಾನಿಗೆ ಇರುವ ಅವಕಾಶ ತೀರಾ ಕಡಿಮೆಯಾದದ್ದು. ಆದರೆ ಆ ಮಿತಿಯಲ್ಲೂ ತನ್ನ ನಟನೆಯ ಸಾಧ್ಯತೆಯನ್ನು ಶಬನಮ್‌ ಸಾಬೀತುಪಡಿಸುತ್ತಾರೆ. ಈ ಚಿತ್ರದ ಆಧಾರ ಸ್ತಂಭಗಳೇ ಈ ನಾಲ್ಕು ಪಾತ್ರಗಳು. ಇವುಗಳಲ್ಲಿ ಯಾವುದಾದರೊಂದು ಅಸಹಜತೆಗೋ, ಅಸ್ವಾಭಾವಿಕತೆಗೋ ಹೊರಳಿದ್ದರೆ ಸಿನಿಮಾದ ಓಘವೇ ತಪ್ಪುವ ಆತಂಕವಿತ್ತು. ಅದನ್ನು ನಾಲ್ವರೂ ಸಂಘಟಿತರಾಗಿ ನಿಭಾಯಿಸಿರುವುದು ಹಾಗೂ ನಿರ್ದೇಶಕ ಆ ದಿಸೆಯಲ್ಲಿ ಯಶಸ್ವಿಯಾಗಿರುವುದು ಶ್ಲಾಘನಾರ್ಹ.

ಶಾಲೆಯಲ್ಲಿ ಹುಡುಗಿಯೊಬ್ಬಳಿಗೆ ತನ್ನ ಪ್ರೀತಿಯ ನಿವೇದನೆಯನ್ನು ಹೇಳಿಕೊಳ್ಳುವ ಬಗೆ ಹೇಗೆ ಎಂದು ತಲೆಕೆಡಿಸಿಕೊಂಡು ಕುಳಿತ ಮಗನ ಸಹಾಯಕ್ಕೆ ಬರುವ ಅಪ್ಪ, ’ನೀನೇನೂ ಹೇಳಬೇಡ. ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡು. ಅಷ್ಟೇ ಸಾಕು, ಎಲ್ಲವನ್ನೂ ಹೇಳುತ್ತದೆ’ ಎಂದು ಉಪಾಯ ಹೇಳಿಕೊಡುತ್ತಾನೆ. ಈ ಮಾತು ಪ್ರೀತಿಗೆ ಅನಿಸಿದರೂ ಅದು ಏಕಕಾಲದಲ್ಲಿ ಬದುಕನ್ನು ಪ್ರೀತಿಸುವ, ಅನುಭವಿಸುವ ಬಗೆಯನ್ನೂ ಉಲ್ಲೇಖಿಸುತ್ತದೆ. ಬದುಕನ್ನೂ ನಾವು ಪ್ರೀತಿಸಬೇಕೆಂದರೆ, ಅಷ್ಟೇ ಮಾಡಬೇಕು. ಅದರ ಕಣ್ಣಲ್ಲಿ ಕಣ್ಣಿಟ್ಟು ನೋಡಬೇಕಷ್ಟೇ.

ಹೀಗೆ ದೊಡ್ಡವನಾಗುತ್ತಿರುವ ಮಗನೊಂದಿಗೆ ಅವನ ಆಲೋಚನೆ ಮಟ್ಟಕ್ಕೆ ಇಳಿದು ಸಹಜವಾಗಿ ಪ್ರತಿಕ್ರಿಯಿಸುವ ಅದೇ ಅಪ್ಪ, ಪುಟ್ಟ ಮಗಳೊಂದಿಗೆ ಬೆಳಗ್ಗೆ ಹಲ್ಲುತಿಕ್ಕುವಾಗ ಪೈಪೋಟಿಗೆ ಇಳಿಯುವುದು ಬದುಕಿನ ಮತ್ತೊಂದು ಬಗೆಯ ಅಗತ್ಯವನ್ನು ಒತ್ತಿ ಹೇಳುತ್ತದೆ.

ಪಕ್ಕದ ಕುಟುಂಬವೊಂದು ’ನಮ್ಮ ಅರ್ಜಿ ಪುರಸ್ಕರಿಸಲ್ಪಟ್ಟಿತು’ ಎಂದು ಸಂಭ್ರಮಿಸುತ್ತಾ ಬಂದು ಹೇಳುವಾಗ ಇಡೀ ಕುಟುಂಬ ಅದನ್ನು ತಮ್ಮ ಬದುಕಿನ ವಾಸ್ತವ ಎಂದುಕೊಳ್ಳುವಂತೆ ಸಂಭ್ರಮವನ್ನು ತುಂಬಿಕೊಳ್ಳುವ ರೀತಿಯೂ ಅನನ್ಯವೇ. ನಮ್ಮ ಬಾಳಿನಲ್ಲೂ ಇಂಥದೊಂದು ಕ್ಷಣ ಬಂದೀತೆಂದು ನಿರೀಕ್ಷಿಸುವ ಕುಟುಂಬದಲ್ಲಿ ಎಲ್ಲೂ ಆ ಕ್ಷಣದಲ್ಲಿ ಆತಂಕದ ಸೀಳುಗಳು ಕಾಣಿಸುವುದಿಲ್ಲ.

ಪ್ರತಿ ಹಂತವನ್ನೂ ಬಹಳ ಸಹಜ ಹಾಗೂ ಸಕಾರಾತ್ಮಕವಾಗಿ ಸ್ವೀಕರಿಸುವ ಬಹ್ಮನ್‌ ಸಿನಿಮಾಕ್ಕೆ ಜೀವ ತುಂಬುವುದೇ ತನ್ನ ಸಕಾರಾತ್ಮಕ ನೆಲೆಯಿಂದಲೇ. ಸೋಲು, ಗೆಲುವು, ಯಶಸ್ಸು, ಅಪಯಶಸ್ಸು ಎಲ್ಲವೂ ಒಂದೇ ನಾಣ್ಯದ ಎರಡು ಮುಖಗಳು. ಆದರೂ ರಾಜನ ಬಗೆಗಿನ ಮೋಹ ರಾಣಿ ಬಗ್ಗೆ ಇರುವುದು ಕಡಿಮೆ.

ಮೊದಲ ಅರ್ಜಿ ತಿರಸ್ಕೃತಗೊಂಡಿರುವ ಬಗ್ಗೆ ಸರಕಾರದ ಪತ್ರವನ್ನು ಓದುವ ಮಗ, ಅಗತ್ಯವಿದ್ದರೆ ಮತ್ತೊಮ್ಮೆ ನೀವು ಮನವಿ ಸಲ್ಲಿಸಬಹುದು ಎಂದು ಹೇಳುವ ಕೊನೆಯ ಸಾಲು ಬಹ್ಮನ್‌ ಗೆ ಆಪ್ಯಾಯಮಾನವಾಗುತ್ತದೆ. ಅದನ್ನೇ ಒತ್ತಿ, ‘ಅಂದರೆ ಮತ್ತೊಂದು ಅವಕಾಶ ಇದೆ ಎಂದಂತಾಯಿತು’ ಎಂದು ಪುನುರುಚ್ಚರಿಸುವಾಗ ಮಗನ ತಲೆ ಆಡಿಸುವಿಕೆಯೇ ಆ ಕ್ಷಣದ ಗಂಭೀರತೆಗೆ ಮುಕುಟವಾಗುತ್ತದೆ.

ಇವರ ಬದುಕಿನ ಆ ಕ್ಷಣವೂ ಎದುರಾಗುತ್ತದೆ. ಸರಕಾರ ಅವರ ಅರ್ಜಿಯನ್ನು ತಿರಸ್ಕರಿಸುತ್ತದೆ. ಆಗಲೂ ಬಹ್ಮನ್‌ ಗಲಿಬಿಲಿಯಾಗುವುದಿಲ್ಲ. ಈ ಊರಿನ ಪ್ರವಾಸ ಮುಗಿಯಿತು, ನಾಳೆ ಬೆಳಗ್ಗೆ ಆದಷ್ಟು ಬೇಗ ಮತ್ತೊಂದು ಊರಿಗೆ ಹೊರಡಬೇಕೆಂಬ ಒಬ್ಬ ಪ್ರವಾಸಿಗನ ಕುತೂಹಲ ಹಾಗೂ ಧಾವಂತದ ಮನಸ್ಥಿತಿಯನ್ನೇ ಸಹಜವಾಗಿ ಬಿಂಬಿಸುತ್ತಾ ಮರುದಿನದ ಪ್ರಯಾಣ ಆರಂಭಿಸುತ್ತಾನೆ. ಕುಟುಂಬ ಹಿಂಬಾಲಿಸುತ್ತದೆ. ಎಲ್ಲಿಯೂ ಭಾವೋದ್ರೇಕದ ಅತಿರೇಕದ ಸಿಂಚನವಾಗುವುದೇ ಇಲ್ಲ. ಇಲ್ಲಿಯೂ ಗೆಲ್ಲುವುದು ಮತ್ತೆ ಮೌನವೇ ಹೊರತು ಮಾತುಗಳಲ್ಲ.

ಒಬ್ಬ ನಿರ್ದೇಶಕನಿಗೆ ಮೌನ ಹಾಗೂ ಮಾತಿನ ಎರಡರ ನೈಜ ಸಾಮರ್ಥ್ಯಗಳು ಕರಾರುವಕ್ಕಾಗಿ ತಿಳಿದಿರಬೇಕು. ಜತೆಗೆ ಅದನ್ನು ದುಡಿಸಿಕೊಳ್ಳುವ ಔಚಿತ್ಯವೂ ಸಹ. ಆ ದಿಸೆಯಲ್ಲಿ ನಿರ್ದೇಶಕ ಈ ಸಿನಿಮಾದಲ್ಲಿ ಯಶಸ್ವಿಯಾಗಿದ್ದಾನೆ. ಕುಟುಂಬ ಅನುಭವಿಸಬಹುದಾದ ಕ್ಷಣಗಳನ್ನು ಆತ ಮಾತಿಗಿಂತ ಮೌನ, ಸನ್ನೆ ಮುಂತಾದುವುಗಳಿಂದಲೇ ಅಭಿವ್ಯಕ್ತಿಸುವ ಪ್ರಯತ್ನ ಮಾಡಿದ್ದಾನೆ. ನೈಜ ಬದುಕಿನಲ್ಲೂ ಸಹ ಅಪೂರ್ವ ಕ್ಷಣಗಳನ್ನು ಅನುಭವಿಸುವ ಬಗೆಯೇ ಅಂಥದ್ದು. ಕಥನ ಕ್ರಿಯೆಯಲ್ಲಿ ಹಮಿಗೆ ಬರವಣಿಗೆಯಲ್ಲಿ ಸಹಕರಿಸಿದ್ದು Antti Rautava. ಇವರ ಪ್ರಯತ್ನವೂ ಉಲ್ಲೇಖನಾರ್ಹ.

ಛಾಯಾಗ್ರಹಣಕ್ಕೆ ಬಹಳ ದೊಡ್ಡ ಅವಕಾಶವಿಲ್ಲ. ಯಾಕೆಂದರೆ ಕೆಲವು ನಿರ್ದಿಷ್ಟ ಸಂದರ್ಭಗಳು. ಆದರೂ ಸಿನೆಮಾ ಛಾಯಾಗ್ರಹಣವೂ ಸಿನಿಮಾದ ಸನ್ನಿವೇಶಗಳ ಸೌಂದರ್ಯವನ್ನು (ಛಾಯಾಗ್ರಹಣ – Arsen Sarkisiants] ವಿಸ್ತರಿಸುತ್ತದೆ. ಇದರೊಂದಿಗೆ ಸಿನಿಮಾದ ಸಹಜತೆಗೆ ಪುಟಕ್ಕಿಟ್ಟಂತೆ ಒಪ್ಪುವುದು Tuomas Nikinen ಅವರ ಸಂಗೀತ.

ನಿರ್ದೇಶಕ ಹಮಿ ಕುಟುಂಬ ಸಹ ಮೂವತ್ತು ವರ್ಷಗಳ ಹಿಂದೆ ಇರಾನ್‌ ಮತ್ತು ಇರಾಕ್‌ ನಡುವಿನ ಯುದ್ಧದ ಸಂದರ್ಭದಲ್ಲಿ ದೇಶವನ್ನು ತ್ಯಜಿಸಿ ನಿರಾಶ್ರಿತರಾಗಿ ಫಿನ್‌ ಲ್ಯಾಂಡ್‌ ಗೆ ಬರುತ್ತದೆ. ಆಗ ಎದುರಿಸಿದ ಸವಾಲುಗಳನ್ನು ಈ ಚಿತ್ರದಲ್ಲಿ ಹೇಳುವ ಚಿಕ್ಕದೊಂದು ಪ್ರಯತ್ನವಿದು.

ಬರ್ಲಿನ್‌ ಸಿನಿಮೋತ್ಸವದಲ್ಲಿ ಪ್ರೀಮಿಯರ್‌ ಕಂಡ ಈ ಚಲನಚಿತ್ರ ಹಲವು ಚಿತ್ರೋತ್ಸವಗಳಲ್ಲಿ ಪಾಲ್ಗೊಂಡು ವಿವಿಧ ವಿಭಾಗಗಳಲ್ಲಿ ಬಹುಮಾನವನ್ನೂ ಪಡೆದಿದೆ.

ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next