Advertisement
ಮೈದಾನದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಉತ್ತರ ಕರ್ನಾಟಕ ಭಾಗದ ಅತ್ಯಂತ ಎರಡನೇ ದೊಡ್ಡ ಕ್ರೀಡಾಂಗಣ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಮೂಲ ಸೌಕರ್ಯಗಳ ಕೊರತೆಯೆ ನಡುವೆಯೂ ಗದಗಿನಲ್ಲಿ ಫುಟ್‌ಬಾಲ್ ಬಗ್ಗೆ ಯುವಕರು ಆಸಕ್ತಿ ತೋರಿಸುತ್ತಿದ್ದಾರೆ. ಈ ನಡುವೆಯೇ ಫುಟ್‌ಬಾಲ್ ಕ್ರೀಡಾಂಗಣ ಒಂದೊಳ್ಳೆ ಅವಕಾಶಗಳನ್ನು ಸ್ಥಳೀಯ ಯುವಕರಿಗೆ ನೀಡುವುದರಲ್ಲಿ ಅನುಮಾನವಿಲ್ಲ.
ನಗರದಲ್ಲಿ ವಿವಿಧ ವಯೋಮಿತಿಯೊಳಗೆ 200-300 ಜನ ಫುಟ್‌ಬಾಲ್ ಆಟಗಾರರಿದ್ದಾರೆ. ಆ ಪೈಕಿ ವಿದ್ಯಾರ್ಥಿ ಒಲಿಂಪಿಕ್ ಅಸೋಶಿಯೇಷನ್‌ನಿಂದ ಇತ್ತೀಚೆಗೆ ಮಣಿಪುರದಲ್ಲಿ ನಡೆದ ರಾಷ್ಟ್ರಮಟ್ಟದ ಫುಟ್‌ಬಾಲ್ ಪಂದ್ಯಾವಳಿಯಲ್ಲಿ ವಿವಿಧ ವಯೋಮಿತಿ ಒಳಗೆ ಒಟ್ಟು 40 ಜನರು ಭಾಗವಹಿಸಿದ್ದರು. ಅದರಂತೆ ಥಾಯ್ಲೆಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಗದಗಿನ 8 ಫುಟ್‌ಬಾಲ್ ಪಟುಗಳು ಪಾಲ್ಗೊಂಡಿದ್ದರು. ಆದರೆ, ನಗರದಲ್ಲಿ ಫುಟ್‌ಬಾಲ್ ಅಭ್ಯಾಸಕ್ಕೆ ಸುಸಜ್ಜಿತ ಕ್ರೀಡಾಂಗಣವಿಲ್ಲ ಎಂಬ ಕೊರಗು ಸದಾ ಸ್ಥಳೀಯ ಕ್ರೀಡಾಳುಗಳನ್ನು ಕಾಡುತ್ತಿತ್ತು. ಬಯಲು ಹಾಗೂ ಮಣ್ಣಿನ ಅಂಕಣಗಳಲ್ಲಿ ಅಭ್ಯಾಸ ಮಾಡಿದವರು, ಸುಸಜ್ಜಿತ ಟರ್ಫ್‌ನಲ್ಲಿ ನಡೆಯುವ ಉನ್ನತ ದರ್ಜೆಯ ಕೂಟದಲ್ಲಿ ತಮ್ಮ ಪ್ರತಿಭೆ ಪ್ರದರ್ಶಿಸಲಾಗದೇ ಮರಳುತ್ತಿದ್ದರು. ಇದು ಅವರ ಕ್ರೀಡಾ ಭವಿಷ್ಯವನ್ನೂ ಮಂಕಾಗಿಸುತ್ತಿತ್ತು.ಈ ಹಿನ್ನೆಲೆಯಲ್ಲಿ ಫುಟ್‌ಬಾಲ್ ಪಟುಗಳ ಅಭ್ಯಾಸಕ್ಕೆ ಅನುಕೂಲಕ್ಕಾಗಿ ನಗರದ ಮುಳಗುಂದ ರಸ್ತೆಯ ಧೋಬಿ ಘಾಟ್ ಬಳಿ ಅಂತಾರಾಷ್ಟೀಯ ಮಟ್ಟದ ಫೀಫಾ ಅಪ್ರೂವ್x ಆಸ್ಟೋì ಟರ್ಫ್ ನಿರ್ಮಿಸಲಾಗುತ್ತಿದೆ. ಸ್ಥಳೀಯ ಶಾಸಕ ಎಚ್.ಕೆ. ಪಾಟೀಲ ಆಸಕ್ತಿಯಿಂದಾಗಿ ಸಮಾಜ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ 86.90 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಲಾಗುತ್ತಿದೆ.
Related Articles
ವಿಶ್ವ ದರ್ಜೆಯ ಫುಟ್‌ಬಾಲ್ ಆಟದಲ್ಲಿ 3 ಪ್ರಕಾರಗಳಲ್ಲಿದ್ದು, ಲೆವೆನ್ ಸೈಡ್ ಕೋರ್ಟ್ (ತಲಾ 11 ಜನ ಪಟುಗಳು) ಗ್ರೌಂಡ್, ಸೆವೆನ್ ಸೈಡ್ ಪ್ರ್ಯಾಕ್ಟೀಸ್ ಕೋರ್ಟ್ (ತಲಾ 7 ಜನರು) ಹಾಗೂ ಫೈವ್ ಸೈಡ್ ಪ್ರ್ಯಾಕ್ಟೀಸ್ ಕೋರ್ಟ್(ತಲಾ 5 ಸದಸ್ಯರು) ಆಡಬಹುದಾಗಿದೆ. ಈ ಪೈಕಿ ಬಳ್ಳಾರಿಯಲ್ಲಿರುವ ಲೆವೆನ್ ಸೈಡ್ ಹಾಗೂ ಗದಗಿನಲ್ಲಿ ನಿರ್ಮಿಸಲಾಗುತ್ತಿರುವ ಸೆವೆನ್ ಸೈಡ್ ಅಂಕಣಗಳಲ್ಲಿ ನಿತ್ಯ ಅಭ್ಯಾಸದೊಂದಿಗೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಹೊನಲು-ಬೆಳಕಿನ ಫುಟ್‌ಬಾಲ್ ಪಂದ್ಯಾವಳಿಗಳನ್ನೂ ಸಂಘಟಿಸಬಹುದು ಎನ್ನುತ್ತಾರೆ ಫುಟ್‌ಬಾಲ್ ಕೋಚ್ ಸಫìರಾಜ್ ಶೇಖ್.
ಫಿಫಾ ಅನುಮೋದಿಸಿರುವ ಆಸ್ಟ್ರೋ ಟರ್ಫ್ ನಿಯಮಾವಳಿಯಂತೆ 30 ಮೀ.ಅಗಲ, 48 ಮೀ. ಉದ್ದದಷ್ಟು ಸೆವೆನ್ ಸೈಡ್ ಪ್ರ್ಯಾಕ್ಟೀಸ್ ಕೋರ್ಟ್ ನಿರ್ಮಿಸಲಾಗುತ್ತಿದೆ. ಚೆಂಡು ಹೊರ ಹೋಗದಂತೆ 6 ಅಡಿ ಎತ್ತರ ಕಬ್ಬಿಣದ ಮೆಷ್ ಹಾಗೂ 19 ಅಡಿ ಎತ್ತರ ನೆಟ್ ಸೇರಿದಂತೆ ಒಟ್ಟು 25 ಮೀ. ಎತ್ತರಕ್ಕೆ ನೆಟ್‌ನ ಮೇಲ್ಛಾವಣಿ ನಿರ್ಮಿಸಲಾಗುತ್ತಿದೆ.
Advertisement
ಸಿಲ್ಕಾ ಸ್ಯಾಂಡ್, ರಬ್ಬರ್ ಮಿಶ್ರಿತ ಆಸ್ಟೋì ಟಫ್ ನಿರ್ಮಾಣ ಮಾಡಲಾಗುತ್ತಿದೆ. ಕ್ರೀಡಾಂಗಣದಲ್ಲಿ ಆಟಗಾರರು ನೆಲಕ್ಕೆ ಬಿದ್ದರೂ ಗಾಯಗಳಾಗುವುದಿಲ್ಲ. ಕ್ರೀಡಾಂಗಣದಲ್ಲಿ ಸುಮಾರು 20 ಸಿಸಿಟಿವಿ ಕ್ಯಾಮರಾ ಅಳವಡಿಕೆಗೆ ಉದ್ದೇಶಿಸಲಾಗಿದೆ. ಆಟಗಾರರು ತಮ್ಮ ಆಟದಲ್ಲಿನ ಸರಿ-ತಪ್ಪುಗಳನ್ನು ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳಲು ಇದು ನೆರವಾಗಲಿದೆ ಎಂದು ಕ್ರೀಡಾಂಗಣದ ವಿಶೇಷತೆ ಕುರಿತು ಕಾಮಗಾರಿ ಗುತ್ತಿಗೆ ಪಡೆದಿರುವ ಕೆಆರ್‌ಐಡಿಎಲ್ ಅ ಧಿಕಾರಿ ಶ್ರೀನಿವಾಸ ಮಾಹಿತಿ ನೀಡಿದರು.
ನಗರದಲ್ಲಿ ಕ್ರೀಡಾಕ್ಷೇತ್ರಕ್ಕೆ ಉತ್ತೇಜನ ನೀಡಲು ಸಂಕಲ್ಪ ಮಾಡಲಾಗಿದೆ. ಸ್ಥಳೀಯ ಕ್ರೀಡಾಪಟುಗಳ ಅಗತ್ಯತೆ ಪೂರೈಸಲು ವಿವಿಧ ಯೋಜನೆ ಹಾಕಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಶಾಸಕ ಎಚ್.ಕೆ. ಪಾಟೀಲ ಪ್ರಯತ್ನದಿಂದ ನಗರದಲ್ಲಿ ಅತ್ಯಾಧುನಿಕವಾದ ಫುಟ್‌ಬಾಲ್ ಅಭ್ಯಾಸಕ್ಕೆ ಕ್ರೀಡಾಂಗಣ ನಿರ್ಮಿಸಲಾಗುತ್ತಿದೆ. ಶೀಘ್ರವೇ ಕಾಮಗಾರಿ ಪೂರ್ಣಗೊಳ್ಳುತ್ತಿದ್ದಂತೆ ಲೋಕಾರ್ಪಣೆಗೊಳಿಸಲಾಗುವುದು.-ಸಿದ್ದು ಪಾಟೀಲ್, ಜಿಪಂ ಅಧ್ಯಕ್ಷ. -ವೀರೇಂದ್ರ ನಾಗಲದಿನ್ನಿ