Advertisement

ಶಿಕ್ಷಕರ ಜತೆ ಬೀದಿಗೆ ಬಿದ್ದ ರಾಜ್ಯದ ಆಶ್ರಮ ಶಾಲೆ ಮಕ್ಕಳ ಶಿಕ್ಷಣ

01:24 AM Aug 18, 2020 | mahesh |

ಕಾರ್ಕಳ: “ನಾವಂತೂ ಶಾಲೆಯ ಮುಖ ನೋಡದ ದುರ್ದೈವಿಗಳು. ಈಗ ನಮ್ಮ ಮಕ್ಕಳ ಬಾಳು ಕೂಡ ಕತ್ತಲೆಯಲ್ಲಿ ಕಳೆದು ಹೋಗುತ್ತಿದೆ. ನಮ್ಮ ಮಕ್ಕಳಿಗೆ ಈಗ ಶಾಲಾ ಶಿಕ್ಷಣ ಬರೀ ಕನಸು…’ -ಇದು ರಾಜ್ಯದ ಪರಿ ಶಿಷ್ಟ ವರ್ಗಕ್ಕೆ ಸೇರಿದ, ಆಶ್ರಮ ಶಾಲೆಗಳಲ್ಲಿ ಕಲಿಯುತ್ತಿರುವ 14,035 ಮಂದಿ ಮಕ್ಕಳ ಹೆತ್ತವರ ಅಳಲು.

Advertisement

2020-21ನೇ ಶೈಕ್ಷಣಿಕ ವರ್ಷವನ್ನು ಶೂನ್ಯ ಶಿಕ್ಷಣ ವಂಚಿತರ ವರ್ಷವೆಂದು ಕೇಂದ್ರ ಸರಕಾರ ಪ್ರಕಟಿಸಿದೆ. ಕೊರೊನಾ ಕಾಲದಲ್ಲಿ ಶಿಕ್ಷಣ ಮುಂದುವರಿಕೆಗೆ ಸಂಬಂಧಿಸಿ ಶಿಕ್ಷಣ ಇಲಾಖೆ ಮಾರ್ಗಸೂಚಿ ಹೊರಡಿಸಿ, ನಿಯಮಾವಳಿ ರೂಪಿಸಿದೆ. ಪೂರಕ ವ್ಯವಸ್ಥೆಗಳನ್ನು ಶಿಕ್ಷಣ ಸಂಸ್ಥೆಗಳು ಕಲ್ಪಿಸಿಕೊಂಡಿವೆ. ರಾಜ್ಯ ಸರಕಾರವೂ ಮುತುವರ್ಜಿ ವಹಿಸಿದೆ. ಆದರೆ ಪರಿಶಿಷ್ಟ ವರ್ಗದ ಮಕ್ಕಳಿಗೆ ವಸತಿ ಸಹಿತ ಶಿಕ್ಷಣ ಕಲ್ಪಿಸುವ ಆಶ್ರಮ ಶಾಲೆಗಳಲ್ಲಿ ಕಲಿಯುತ್ತಿರುವವರಿಗೆ ಇದ್ಯಾವುದೂ ಸಿಗುತ್ತಿಲ್ಲ. ವೇತನ ನೀಡದೆ ಶಿಕ್ಷಕರನ್ನು ಕೈಬಿಡಲಾಗಿದ್ದು, ಶಾಲೆಯ ಅಂಗಳದಲ್ಲಿ ಅರಳಬೇಕಿದ್ದ ಹೂವು ಗಳು ಬಾಡಿ ಹೋಗುತ್ತಿವೆ.

ಕಾಡಿನ ಮಕ್ಕಳಿಗಿಲ್ಲ ಶಿಕ್ಷಣ
ಕೊರೊನಾ ಕಾಟದಿಂದ ಶಾಲೆಗಳು ಮುಚ್ಚಿ ರುವ ಕಾರಣ ಆನ್‌ಲೈನ್‌ ಶಿಕ್ಷಣ, ಸೇತುಬಂಧ, ವಿದ್ಯಾಗಮ ಕಾರ್ಯಕ್ರಮಗಳನ್ನು ಶಿಕ್ಷಣ ಇಲಾಖೆ ಜಾರಿಗೊಳಿಸಿದೆ. ವಲಸೆ ಮಕ್ಕಳು, ವಿಶೇಷ ಅಗತ್ಯವುಳ್ಳ ಮಕ್ಕಳಿಗೂ ಪ್ರದೇಶಾನು ಸಾರ ಯೋಜನೆ ರೂಪಿಸಲಾಗಿದೆ. ಆದರೆ ಶೇ. 90ರಷ್ಟು ಹೊರಗುತ್ತಿಗೆ ಮತ್ತು ಗೌರವಧನದಡಿ ನೇಮಕವಾದ ಶಿಕ್ಷಕರಿಂದಲೇ ಎಲ್ಲ ಶೈಕ್ಷಣಿಕ ಚಟುವಟಿಕೆ ನಡೆಯುವ ಆಶ್ರಮ ಶಾಲೆ ಮಕ್ಕ ಳಿಗೆ ಮಾತ್ರ ಈ ಎಲ್ಲ ಬಾಗಿಲುಗಳು ಮುಚ್ಚಿವೆ.

ಶೈಕ್ಷಣಿಕ ಚಟುವಟಿಕೆ ಸ್ಥಗಿತಗೊಂಡಿದೆ
ಆಶ್ರಮ ಶಾಲೆಗಳಲ್ಲಿ 10ರಿಂದ 15 ವರ್ಷ ಗಳಿಂದ ಗೌರವಧನ ಮತ್ತು ಹೊರ ಸಂಪನ್ಮೂಲ ಆಧಾರದಲ್ಲಿ ಶಿಕ್ಷಕರು ಕರ್ತವ್ಯ ನಿರ್ವಹಿಸು ತ್ತಿದ್ದು, ಇಲಾಖೆ ಎಪ್ರಿಲ್‌ನಿಂದ ಇದುವರೆಗೆ ವೇತನ ನೀಡಿಲ್ಲ. ಜತೆಗೆ ಹಲವು ಶಿಕ್ಷಕರನ್ನು ಕೈಬಿಟ್ಟಿದೆ. ಹೀಗಾಗಿ ಆಶ್ರಮ ಶಾಲೆಗಳ ಎಲ್ಲ ಶೈಕ್ಷಣಿಕ ಚಟುವಟಿಕೆಗಳು ಸ್ಥಗಿತಗೊಂಡಿವೆ.

ವೇತನ, ಕೆಲಸವಿಲ್ಲದೆಯೂ ದುಡಿಮೆ
ಆಶ್ರಮ ಶಾಲೆಗಳ ವೇತನವಂಚಿತ ಶಿಕ್ಷಕರೂ ಜೂನ್‌- ಜುಲೈ ತಿಂಗಳಲ್ಲಿ ವಿದ್ಯಾರ್ಥಿಗಳ ಸ್ಯಾಟ್ಸ್‌ಗೆ ಸಂಬಂಧಿಸಿದ ಹಾಜರಾತಿ ದಾಖಲು, ಸಿಸಿಇ, ಫ‌ಲಿತಾಂಶ, ವಿದ್ಯಾರ್ಥಿಗಳ ಮುಂಭಡ್ತಿ, ಮುಂಭಡ್ತಿಯಾದ ಮಕ್ಕಳ ದಾಖಲಾತಿ, ಟಿಸಿ, ಇನ್ನಿತರ ದೃಢೀಕರಣ, ಶಾಲಾರಂಭದ ಕುರಿತು ಪೋಷಕರ ಅಭಿಪ್ರಾಯ ಸಂಗ್ರಹ, ವಿದ್ಯಾರ್ಥಿಗಳ ಡಿಜಿಟಲ್‌ ದಾಖಲು, ದೂರವಾಣಿ ಸಂಖ್ಯೆ ಸಂಗ್ರಹ ಮತ್ತಿತರ ಕೆಲಸಗಳನ್ನು ಮಾಡಿದ್ದಾರೆ. ಅವರ ಈ ಸೇವೆಯನ್ನು ಸ್ಮರಿಸಬೇಕಿದ್ದ ಸರಕಾರ ಈ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಕರನ್ನು ಹೊರದೂಡಿದೆ. ಆರ್ಥಿಕವಾಗಿ ತೀರಾ ಕೆಳಮಟ್ಟದಲ್ಲಿದ್ದೇವೆ. ಕೊರೊನಾದಿಂದ ಕೆಲಸ ಇಲ್ಲದೆ ಊಟಕ್ಕೂ ಪರದಾಡುತ್ತಿದ್ದೇವೆ. ಈ ನಡುವೆ ಇಲಾಖೆಯೂ ನಮ್ಮ ಮಕ್ಕಳನ್ನು ಶಿಕ್ಷಣ ವಂಚಿತರನ್ನಾಗಿ ಮಾಡುತ್ತಿದೆ ಎನ್ನುವುದು ಹೆತ್ತವರಲ್ಲೊಬ್ಬರಾದ ರವೀಂದ್ರ ಪಾಟೀಲರ ಅಳಲು.

Advertisement

ಸಮನ್ವಯದ ಕೊರತೆ
ಆಶ್ರಮ ಶಾಲೆಗಳು ಸಾರ್ವಜನಿಕ ಶಿಕ್ಷಣ ಇಲಾಖೆಯೊಂದಿಗೆ ನಿಕಟ ಸಂಬಂಧ ಹೊಂದಿಲ್ಲದಿರುವುದೇ ಸಮಸ್ಯೆಗೆ ಮೂಲ ಕಾರಣ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ಆಶ್ರಮ ಶಾಲೆಗಳ ನಿರ್ವಹಣೆಯ ಹೊಣೆ ಹೊತ್ತಿದೆ. ಅವರ ಶಿಕ್ಷಣದ ಜವಾಬ್ದಾರಿ ಮಾತ್ರ ಶಿಕ್ಷಣ ಇಲಾಖೆಯದ್ದು. ಎರಡೂ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದ ಆಶ್ರಮ ಶಾಲೆಗಳು ಹಿಂದುಳಿದಿವೆ.

ಆಶ್ರಮ ಶಾಲೆಗಳ ಹೊರ ಸಂಪನ್ಮೂಲ, ಗೌರವಧನ ಶಿಕ್ಷಕರಿಗೆ ವೇತನ ನೀಡು ವಂತೆ ನೆರವಾಗಲು ಸರಕಾರವನ್ನು ಒತ್ತಾಯಿಸಿದ್ದೇವೆ. ಬಾಕಿ ಸಂಭಾವನೆ ನೀಡಲು ಹಣ ಕಾಸು ಇಲಾಖೆ ಕೂಡ ಸಮ್ಮತಿಸಿದೆ. ಇಷ್ಟಿದ್ದರೂ ಇನ್ನೂ ಹಣ ಕೈ ಸೇರಿಲ್ಲ.
-ರಮೇಶ್‌, ರಾಜ್ಯಾಧ್ಯಕ್ಷರು, ಗೌರವಧನ, ಹೊರಸಂಪನ್ಮೂಲ ಶಿಕ್ಷಕರ ಸಂಘ ಬೆಂಗಳೂರು

ಯಾವ ಮಕ್ಕಳೂ ಯಾವುದೇ ಕಾರಣಕ್ಕೂ ಶಿಕ್ಷಣದಿಂದ ವಂಚಿತರಾಗಬಾರದು. ಆಶ್ರಮ ಶಾಲೆ ಮಕ್ಕಳ ಸಮಸ್ಯೆ ಏನು ಎಂಬ ಬಗ್ಗೆ ನಾಳೆಯೇ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಕರೆದು ಮಾಹಿತಿ ಪಡೆಯುವೆ.
– ಎಸ್‌. ಸುರೇಶ್‌ಕುಮಾರ್‌, ಶಿಕ್ಷಣ ಸಚಿವರು

ಆಶ್ರಮ ಶಾಲೆಗಳೆಷ್ಟಿವೆ?
ರಾಜ್ಯದಲ್ಲಿರುವ ಆಶ್ರಮ ಶಾಲೆಗಳು 116
ದಕ್ಷಿಣ ಕನ್ನಡ 12
ಉಡುಪಿ 04
ಮೈಸೂರು 21
ಚಾಮರಾಜನಗರ 19
ಕೊಡಗು 12
ಬೆಂಗಳೂರು 12
ಕಲಿಯುವ ಮಕ್ಕಳ ಸಂಖ್ಯೆ 14,035
ಹೊರಗುತ್ತಿಗೆ ಶಿಕ್ಷಕ-ಶಿಕ್ಷಕಿಯರು 350

ಬಾಲಕೃಷ್ಣ ಭೀಮಗುಳಿ

Advertisement

Udayavani is now on Telegram. Click here to join our channel and stay updated with the latest news.

Next