Advertisement
ಜಿಲ್ಲೆಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧೀನದಲ್ಲಿರುವ ಶಿರಸಿ, ಯಲ್ಲಾಪುರ, ಹಳಿಯಾಳ, ಮುಂಡಗೋಡ, ಜೋಯಿಡಾ, ಭಟ್ಕಳ, ಅಂಕೋಲಾ ಮುಂತಾದ ತಾಲೂಕಿನ ಕ್ರೀಡಾಂಗಣಗಳು ಅವ್ಯವಸ್ಥೆ, ಅಸಮರ್ಪಕ, ಅವೈಜ್ಞಾನಿಕ, ಸಮತಟ್ಟು ಇಲ್ಲದ, ಕಳಪೆ ಹಾಗೂ ಸೂಕ್ತ ಕ್ರೀಡಾ ಸಾಮಗ್ರಿಗಳ ಕೊರತೆಯಿಂದ ಬಳಲುತ್ತಿದ್ದು, ಅನೇಕ ಕ್ರೀಡಾಂಗಣಕ್ಕೆ ಶೌಚಾಲಯದ ಸೌಲಭ್ಯ ಕೂಡ ಇಲ್ಲದಿರುವುದು ದುರದೃಷ್ಟಕರ. ಇಲಾಖೆಯು ಎಲ್ಲಾ ಕ್ರೀಡಾಂಗಣಗಳ ನಿರ್ವಹಣೆಯಲ್ಲಿ ಸಂಪೂರ್ಣ ವೈಫಲ್ಯವಾಗಿದ್ದು ಒಳಚರಂಡಿ, ಕ್ರೀಡಾಂಗಣ ಸಮತಟ್ಟು ಮಾಡುವಿಕೆ, ಮೈದಾನದ ಸುತ್ತಲೂ ತಡೆಗೋಡೆ, ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳಿಗೆ ಬಟ್ಟೆ ಬದಲಿಸಲು ಕೊಠಡಿ ಇಲ್ಲದಿರುವಿಕೆ ಖೇದಕರ ಸಂಗತಿಯಾಗಿದೆ. ಶಿರಸಿ ಹೊರತಾಗಿ ಇನ್ನುಳಿದ ಯಾವುದೇ ಕ್ರೀಡಾಂಗಣದಲ್ಲಿಯೂ ವ್ಯಾಯಾಮ ಶಾಲೆ ಇಲ್ಲದಿರುವುದು ದುರದೃಷ್ಟಕರ. ಇಂಥ ಅವ್ಯವಸ್ಥೆಗಳಿಂದ ಕೆಲವೊಂದು ಕ್ರೀಡಾಂಗಣದಲ್ಲಿ ಕ್ರೀಡಾಕೂಟ ಜರುಗಿಸಲು ಅಸಾಧ್ಯವಾಗಿರುವುದು ಕಂಡು ಬಂದಿದೆ. ಅಪಾಯಕಾರಿ ಕ್ರೀಡಾಂಗಣದಲ್ಲಿ ಅನೇಕ ಕ್ರೀಡಾಪಟುಗಳು ಗಾಯಗೊಂಡ ನಿದರ್ಶನಗಳು ಸಾಕಷ್ಟಿವೆ.
Related Articles
Advertisement
ಜಿಲ್ಲೆಯ ಸಶಕ್ತ, ಬುಡಕಟ್ಟು ಮತ್ತು ದೈಹಿಕ ಸಾಮರ್ಥ್ಯದ ಕ್ರೀಡಾಪಟುಗಳಿದ್ದರೂ ಕ್ರೀಡೆಗೆ ಪೂರಕವಾದ ಕ್ರೀಡಾಂಗಣ, ಪ್ರೋತ್ಸಾಹ, ತಂತ್ರಜ್ಞಾನ, ಕುಶಲತೆ ತರಬೇತಿ ಇಲ್ಲದಿರುವುದು ಹಿನ್ನೆಡೆಗೆ ಕಾರಣವಾಗಿದೆ. ಇಲ್ಲಿ ರಾಜ್ಯಮಟ್ಟದ ಕ್ರೀಡಾಕೂಟ ಜರುಗಿಸದೇ ಇರಲು ಕಳಪೆ ಮಟ್ಟದ ಕ್ರೀಡಾಂಗಣವೇ ಕಾರಣವಾಗಿದೆ.
ಪ್ರತಿ ತಾಲೂಕಿನಲ್ಲಿಯೂ ಪ್ರತಿವರ್ಷ ಪ್ರಾಥಮಿಕ, ಪ್ರೌಢ, ಪಪೂ, ಮಹಾವಿದ್ಯಾಲಯ, ದಸರಾ, ಪೈಕಾ ಕ್ರೀಡಾಕೂಟಗಳಲ್ಲಿ ಪ್ರತಿ ತಾಲೂಕಿನಲ್ಲಿಯೂ ಪ್ರತಿ ಶೈಕ್ಷಣಿಕ ವರ್ಷದಲ್ಲಿ 7 ರಿಂದ 8 ಸಾವಿರ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಯಲ್ಲಿ ನೇರವಾಗಿ ಭಾಗವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ತಾಲೂಕು ಕೇಂದ್ರದಲ್ಲಿ ಸುಸಜ್ಜಿತ 400 ಮೀ. ಓಟ ಪಥದ ಪರಿವ್ಯಾಪ್ತಿಯ ಕ್ರೀಡಾಂಗಣದ ಅವಶ್ಯಕತೆಗೆ ಕಾನೂನಾತ್ಮಕ ಹೋರಾಟ ಹಮ್ಮಿಕೊಳ್ಳುವ ಉದ್ದೇಶದಿಂದ ಹಾಗೂ ಕ್ರೀಡಾ ಪೂರಕ ಚಟುವಟಿಕೆಗೆ ಸುಸಜ್ಜಿತ ಕ್ರೀಡಾಂಗಣದ ಅವಶ್ಯಕತೆ ಇರುವುದನ್ನು ಮನಗಂಡು ಪ್ರತಿ ತಾಲೂಕಿನಲ್ಲಿಯೂ ಸುಸಜ್ಜಿತ ಕ್ರೀಡಾಂಗಣ ಹಾಗೂ ಜಿಲ್ಲೆಗೊಂದು ಸಿಂಥೆಟಿಕ್ ಅಥ್ಲೆಟಿಕ್ ಕ್ರೀಡಾಂಗಣವನ್ನು ಸರ್ಕಾರ ಒದಗಿಸಬೇಕಿದೆ. ಈ ನಿಟ್ಟಿನಲ್ಲಿ ಕಾನೂನು ಹೋರಾಟ ಆರಂಭಿಸಲಾಗುತ್ತಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.