Advertisement
ಬೇಸಿಗೆಯಲ್ಲಿ ನೀರಿಲ್ಲದೇ ಹಾಗೂ ಮಳೆಗಾಲದ ಪ್ರಾರಂಭದಲ್ಲಿ ಮಳೆಯಿಲ್ಲದೆ ಬತ್ತಿದ್ದ ಕೃಷ್ಣೆ, ಕಳೆದ ಕೆಲವು ದಿನಗಳ ಹಿಂದೆ ಇತಿಹಾಸ ಕಂಡರಿಯದ ಭೀಕರ ಪ್ರವಾಹ ಸೃಷ್ಟಿಸಿತು. ಅದು ಇಲ್ಲಿನ ಜನರ ಬದುಕು ಅತಂತ್ರವಾಗಿಸಿದೆ.
Related Articles
Advertisement
ಅತೀ ಆತ್ಮವಿಶ್ವಾಸದಿಂದ ನಮ್ಮೂರು ಎಂದೂ ಮುಳುಗುವುದಿಲ್ಲ, ಅಧಿಕಾರಿಗಳ ಒತ್ತಡದ ಮೇರೆಗೆ ನಾವು ಊರು ಬಿಟ್ಟಿದ್ದೇವು, ಆದರೆ ಇಷ್ಟೊಂದು ಪ್ರಮಾಣದಲ್ಲಿ ನೀರು ಊರೋಳಗೆ ಬರುತ್ತದೆ ಅಂದುಕೊಂಡಿರಲಿಲ್ಲ. ಅದಕ್ಕಾಗಿ ಅನೇಕ ದಿನಬಳಕೆಯ ವಸ್ತುಗಳು, ಕಾಳು ಕಡಿಗಳು, ಶಾಲಾ ಪುಸ್ತಕಗಳು, ಆಸಿ ್ತಕಾಗದ ಪತ್ರಗಳು, ಟಿವಿ, ಪ್ರೀಡ್ಜ ಸೇರಿದಂತೆ ಅನೇಕ ವಸ್ತುಗಳನ್ನು ಎತ್ತರದ ಪ್ರದೇಶದಲ್ಲಿಟ್ಟು ಹೋಗಿದ್ದೇವು. ಅವೆಲ್ಲ ಈಗ ನೀರುಪಾಲಾಗಿ, ಕಾಳು ಕಡಿಗಳು ಚೀಲದಲ್ಲೇ ಮೊಳಕೆ ಒಡದಿವೆ.
ನದಿ ಶಾಂತವಾದ ಬಳಿಕವಾದರೂ ಇಲ್ಲಿದ್ದ ಕಾಳನ್ನು ಬಿಸಿ ಊಟ ಮಾಡಬಹುದು ಎಂದುಕೊಂಡಿದ್ದೇವು, ಆದರೆ ಅವೆಲ್ಲವೂ ಇಂದು ಹಾಳಾಗಿ ಹೋಗಿವೆ. ಎಷ್ಟಂತ ಪರರು ಕೊಡುವ ಅನ್ನಕ್ಕೆ ನಿತ್ಯ ಕೈಚಾಚುವುದು, ಅಯ್ಯೋ ನಮ್ಮ ಪರಿಸ್ಥಿತಿ ನಮ್ಮ ವೈರಿಗೂ ಬರಬಾರದು ಎಂದು ಎನ್ನುತ್ತಾರೆ ಅಸ್ಕಿಯ ಮಹಾಹೇವ ಬಣಜಿಗೊಂಡ ಮತ್ತು ಪತ್ನಿ ಲಕ್ಷ್ಮಿ ಬಣಜಿಗೊಂಡ.
ಮನೆಯಲ್ಲಿ ನೀರೇ ನೀರು, ಎಲ್ಲ ವಸ್ತುಗಳ ನೀರಲ್ಲಿ ತೇಲಾಡಿವೆ, ಗ್ಯಾಸ್, ಸಿಲಿಂಡರ್ ನೀರಲ್ಲಿ ತೇಲಿಹೋಗಿವೆ. ಕೃಷ್ಣೆ ನಮ್ಮೂರಲ್ಲಿ ರುದ್ರ ನರ್ತನ ಮಾಡಿಹೋಗಿದ್ದಾಳೆ ಎನ್ನುತ್ತಾರೆ ಇವರು.
ನೇಕಾರರ ತವರೂರಾದ ರಬಕವಿಯ ಪರಸ್ಥಿತಿ ಕೂಡಾ ಕೃಷ್ಣೆಯ ಪ್ರವಾಹದಿಂದ ಕೊಚ್ಚಿ ಹೋಗಿದೆ. ಸಾವಿರಾರೂ ಏಕರೆಯಲ್ಲಿ ಬೆಳೆದ ಕಬ್ಬು, ಅರಿಶಿಣ, ಬಾಳೆ ನೀರಿನಲ್ಲಿ ನಿಂತು ರೈತನ ಬದುಕು ದುಸ್ತರವಾಗಿಸಿದರೆ. ನಗರದ ಪ್ರಮುಖ 17ನೇ ವಾರ್ಡ್‌ನಲ್ಲಿ ನೀರು ಹೊಕ್ಕು ಬದುಕನ್ನೇ ಬುಡುಮೇಲು ಮಾಡಿದೆ. ರಬಕವಿಯಲ್ಲಿ ವಿದ್ಯುತ್ ಮಗ್ಗಗಳು, ಸೈಜಿಂಗ್ ಘಟಕ, ಗುಡಿ ಕೈಗಾರಿಕೆಯ ಘಟಕಗಳು ಹಾಳಾಗಿ ನೂರಾರೂ ಜನರ ಉದ್ಯೋಗವನ್ನು ಕಸಿಯುವುದರ ಜೊತೆಗೆ ಕೋಟ್ಯಂತರ ಹಾನಿ ಕೂಡಾ ಸಂಭವಿಸಿದೆ.
ಒಮ್ಮೆ ನೀರು ಬಂತು. ಏನ ಮಾಡಬೇಕು ಅನ್ನೂದ ಗೊತ್ತಾಗಲಿಲ್ಲ. ಸಿಕ್ಕಷ್ಟು ವಸ್ತುಗಳನ್ನು ಕಟ್ಟಿಕೊಂಡು ಓಡೋಡಿ ಹೋದವ್ರಿ. ಶನಿವಾರ ಸಂಜೆ ಮನೆಗೆ ಮರಳಿ ಬಂದೆವ್ರಿ. ಮನೆಯ ವಸ್ತುಗಳ ಮೇಲೆ ಕೆಸರು ತುಂಬಿಕೊಂಡರೆ, ಮಗ್ಗಗಳು ಸಂಪೂರ್ಣ ನೀರಿನಿಂದಾಗಿ ಕೆಟ್ಟು ನಿಂತಿವೆ. ಇನ್ನ ಈ ಮಗ್ಗ ರಿಪೇರಿ ಆಗಬೇಕಾದರ 25000 ರೂ. ಖರ್ಚ ಆಗತೈತ್ರಿ ಎನ್ನುತ್ತಾರೆ ಸ್ಥಳೀಯ 17ನೇ ವಾರ್ಡ್ ನೇಕಾರರಾದ ಶಂಕರ ಬೀಳಗಿ, ಪ್ರಭು ಶಿವಶಿಂಪಿ ಮತ್ತು ರಾಜು ಮಟ್ಟಿಕಲ್ಲಿ.
ತಮದಡ್ಡಿ, ಹಳಿಂಗಳಿ, ಕುಲಹಳ್ಳಿ, ಆಸಂಗಿ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಕೂಡಾ ಇದೇ ತರಹದ ಸನ್ನಿವೇಶ ನಿರ್ಮಾಣವಾಗಿದೆ. ಬದುಕು ಕಟ್ಟಿಕೊಂಡು ಸುಂದರ ಕನಸು ಕಾಣುತ್ತಿದ್ದ ಇವರಿಗೆ ಕೃಷ್ಣೆ ಅವರ ಬದುಕನ್ನು ಬರಡು ಮಾಡಿದ್ದಾಳೆ.
ಮನೆ ನೋಡಿ ಮರಳಿ ಪರಿಹಾರ ಕೇಂದ್ರಕ್ಕೆ:
ಪ್ರವಾಹದ ನೀರು ನಿಂತಿದ್ದರಿಂದ ಇಡೀ ಅಸ್ಕಿ ಗ್ರಾಮದೆಲ್ಲೆಲ್ಲ ಗಬ್ಬೆದ್ದು ನಾರುತ್ತಿದ್ದು, ವಾಸಿಸಲು ಸ್ವಲ್ಪವೂ ಅನುಕೂಲವಿಲ್ಲ. ಇತ್ತ ಮನೆಗಳು ಬೀಳುತ್ತಿದ್ದು, ಮನೆಯೊಳಗೆ ಕಾಲಿಟ್ಟರೆ ಜೀವ ಕೈಯಲ್ಲಿ ಹಿಡಿದುಕೊಂಡೇ ಹೋಗಬೇಕಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಪ್ರತಿಯೊಂದು ಕುಟುಂಬವು ಖಾಸಗಿ ವಾಹನಗಳನ್ನು ತಂದು ತಮ್ಮ ಮನೆಯ ಸಾಮಗ್ರಿ ತುಂಬಿಕೊಂಡು ಮರಳಿ ಪರಿಹಾರ ಕೇಂದ್ರಕ್ಕೆ ಹೋಗುತ್ತಿದ್ದಾರೆ.
21 ಸಾವಿರ ಜನ ಸ್ಥಳಾಂತರ:
ರಬಕವಿ-ಬನಹಟ್ಟಿ ತಾಲೂಕಿನಲ್ಲಿ ಒಟ್ಟು 12 ಗ್ರಾಮಗಳು ಪ್ರವಾಹಕ್ಕೆ ಒಳಗಾಗಿದ್ದು, 3651 ಕುಟುಂಬಗಳು ಅಕ್ಷರಶಃ ಬೀದಿಗೆ ಬಿದ್ದಿವೆ. ಈ ಕುಟುಂಬಗಳ 21,693 ಜನರನ್ನು ಸ್ಥಳಾಂತರಿಸಿ, ಪರಿಹಾರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲಾಗಿದೆ. ಅಲ್ಲದೇ ಒಮ್ಮೆಲೇ ಪ್ರವಾಹ ನುಗ್ಗಿದ್ದರಿಂದ ಜೀವ ಉಳಿಸಿಕೊಳ್ಳಲು 11,861 ಜನರು ತಮ್ಮ ಸಂಬಂಧಿಕರ ಮನೆ, ಹೊಲ-ಗದ್ದೆಗಳಿಗೆ ಹೋಗಿ ಆಶ್ರಯ ಪಡೆದಿದ್ದಾರೆ. ಅಲ್ಲದೇ 8701 ಜಾನುವಾರು ರಕ್ಷಣೆ ಮಾಡಿ, ತಾತ್ಕಾಲಿಕ ಪರಿಹಾರ ಕೇಂದ್ರಕ್ಕೆ ಸಾಗಿಸಲಾಗಿದೆ.
ಹನ್ನೊಂದು ದಿವಸ ಆದ ಮ್ಯಾಲ ಊರಿಗೆ ಬಂದ ಮನಿ ಕೀಲಿ ತಗದರಿ ಎಲ್ಲಾ ನೀರಿನಿಂದಾಗಿ ಬಹಳಷ್ಟ ಅನಾಹುತ ಆಗೇತ್ರಿ. ಇದೆಲ್ಲ ಮೊದಲಿಂಗ ಆಗಬೇಕಾದ್ರ ಇನ್ನೂ ಹದಿನೈದು ದಿವಸ ಆಗತೈತ್ರಿ. ಮನೆ ಗೋಡೆ ಎಲ್ಲ ಸೀಳ್ಯಾವರಿ. ಅವು ಯಾವಾಗ ಬೀಳತಾವ ಅನ್ನುದ ಗೊತ್ತಾಗವಲ್ತರಿ. ಮುಂದಿನ ಜೀವನ ಬಹಳ ಕಠಿಣ ಐತ್ರಿ. • ಶಾಂತಾ ಕೋಳಿ, ಅಸ್ಕಿ ಗ್ರಾಮದ ನಿರಾಶ್ರಿತ ಮಹಿಳೆ.
ಸಾಹೇಬ್ರ ಒಂದು ವರ್ಷದ ಹಿಂದೆ ಹೊಸ ಮನೆಯನ್ನು ಕಟ್ಟಿದ್ದಿರಿ. ಈಗ ಮನೆಯೊಳಗ ನೀರು ಹೋಗಿ ಟಿವಿ, ಪ್ರಿಜ್, ಮಿಕ್ಸರ್, ಸೋಫಾ ಸೆಟ್ ಬಾಂಡಾ ಸಾಮಾನು, ಬಟ್ಟೆಗಳು ಎಲ್ಲಾ ಹಾಳಾಗ್ಯವರಿ. ಜೋಳ ಎರಡ ಚೀಲರಿ, ಒಂದೊಂದು ಚೀಲ ಗೋಧಿ, ಗೊಂಜಾಳರಿ, ಸಜ್ಜಿ ಅಕ್ಕಿ ಎಲ್ಲಾ ನೀರಾಗ ತೊಯದ ಹಾಳಾಗ್ಯಾವರಿ ಏನ ಮಾಡಬೇಕು ಅನ್ನುದ ತಿಳಿವಲ್ತರಿ. • ಮಹಾನಂದ ಗುಡ್ಡಕಾರ.
ಅಸ್ಕಿಯ ನಿರಾಶ್ರಿತ ಮಹಿಳೆ ಕೃಷ್ಣಾ ನದಿಯ ಇತಿಹಾಸದಲ್ಲೇ ಭೀಕರ ಪ್ರವಾಹ ಇದಾಗಿದೆ. ನಮ್ಮ ವಾರ್ಡ್ ನಂ. 17 ಸಂಪೂರ್ಣ ಜಲಾವೃತವಾಗಿದ್ದು, ಮುಂದಿನ ದಿನಗಳಲ್ಲಿ ರಬಕವಿ ನಗರಕ್ಕೆ ಮುಳಗಡೆ ಭೀತಿ ತಪ್ಪಿದ್ದಲ್ಲ. ಈ ಪ್ರದೇಶ ಮಲೇರಿಯಾ ಪೀಡಿತ ಪ್ರದೇಶವಾಗಲಿದೆ. ಆದ್ದರಿಂದ ಸರ್ಕಾರ ಈ ಪ್ರದೇಶವನ್ನು ಮುಳಗಡೆ ಪ್ರದೇಶವೆಂದು ಘೋಷಣೆ ಮಾಡಿ ಇಲ್ಲಿಯ ಜನರನ್ನು ಬೇರೆ ಕಡೆಗೆ ಸ್ಥಳಾಂತರಿಸಬೇಕು. • ಸಂಜಯ ತೆಗ್ಗಿ, ರಬಕವಿ ಸಂತ್ರಸ್ತ
ಊರ್ ತುಂಬಾ ನೀರು ಹೊಕ್ಕಿತ್ತು. ಈಗ ನೀರು ಹೋಗೈತೆಂತ ಖುಷಿಯಿಂದ ಮನೆಗೆ ಬಂದೇವು. ಮನೆಯ ಪರಿಸ್ಥಿತಿ ಕಂಡು ಜೀವ ಹಿಂಡ್‌ದಂಗ್ ಆಕೈತಿ. ಮನಿ ಪರಿಸ್ಥಿತಿ ನೋಡಿದ್ರ ಇರಾಕ್ ಆಗುದಿಲ್ಲ. ಹಿಂಗಾಗಿ ಮರಳಿ ಪರಿಹಾರ ಕೇಂದ್ರಕ್ಕ ಹೊಂಟೀವಿ.
• ಮಹಾದೇವ ನಾಯಕ, ಅಸ್ಕಿ ಗ್ರಾಮಸ್ಥ
ಪುನರ್ವಸತಿ ಸ್ಥಳ ಅಥವಾ ಮನೆಯನ್ನಾದರೂ ಸರ್ಕಾರ ನೀಡಿದ್ದರೆ ನಮಗೆ ಬಯಲಲ್ಲೇ ಕುಳಿತುಕೊಳ್ಳುವ ಗತಿ ಬರುತ್ತಿರಲಿಲ್ಲ. ಈಗ ಮನೆ ಬಿಟ್ಟು ಬಯಲಿನಲ್ಲಿ ನಮ್ಮ ವಾಸವಾಗಿದೆ. ಸರ್ಕಾರ ಶೀಘ್ರವೇ ಸೂಕ್ತ ಪರಿಹಾರ ಒದಗಿಸಬೇಕು. •ಯಂಕಪ್ಪ ಕರಿಯಲ್ಲವ್ವಗೋಳ, ಅಸ್ಕಿ ಗ್ರಾಮಸ್ಥ
ಈಗ ನಮ್ಮ ಬದುಕು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಈಗ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ, ಬೆಳೆದ ಬೆಳೆಗಳು ನೀರಿಗೆ ಆಹುತಿಯಾಗಿವೆ. ಈಗ ಮನೆಗಳು ಬಿರುಕು ಬಿಟ್ಟಿವೆ. ಕೂಡಲೇ ಸರ್ಕಾರ ಧನ ಸಹಾಯ ಮಾಡುವ ಬದಲು ಬೆಳೆ ಪರಿಹಾರ ನೀಡುವುದರ ಜೊತೆಗೆ ಶಾಶ್ವತ ಪರಿಹಾರ ಕಂಡುಕೊಂಡು ಸೂಕ್ತ ಜಾಗದಲ್ಲಿ ಮನೆ ಕಟ್ಟಿಸಿಕೊಡಬೇಕು. • ಮಹಾವೀರ ಬಿಲವಡಿ, ತಮದಡ್ಡಿ ಗ್ರಾಮಸ್ಥ
•ಕಿರಣ ಶ್ರೀಶೈಲ ಆಳಗಿ