Advertisement

ಪ್ರಭಾವಿಗಳ ಖರ್ಚಿನ ಮೇಲೆ ಕಣ್ಣಿಡಲು ವಿಶೇಷ ತಂಡ

12:21 PM Apr 22, 2018 | Team Udayavani |

ಬೆಂಗಳೂರು: ರಾಜಧಾನಿಯ 28 ವಿಧಾನಸಭೆ ಕ್ಷೇತ್ರಗಳ ಪೈಕಿ ಜಿದ್ದಾಜಿದ್ದಿನ ಕಣ ಎಂದೇ ಬಿಂಬಿತವಾಗಿರುವ ಹಾಗೂ ಪ್ರಭಾವಿ ನಾಯಕರು ಸ್ಪರ್ಧಿಸುತ್ತಿರುವ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳು ಮಾಡುವ ಖರ್ಚು, ವೆಚ್ಚಗಳ ಮೇಲೆ ಹದ್ದಿನ ಕಣ್ಣಿರಿಸಲು ಚುನಾವಣಾ ಆಯೋಗ ಅಧಿಕಾರಿಗಳನ್ನು ನೇಮಿಸಿದೆ.

Advertisement

ರಾಜರಾಜೇಶ್ವರಿ ನಗರ, ಶಿವಾಜಿನಗರ, ಚಿಕ್ಕಪೇಟೆ, ಪದ್ಮನಾಭನಗರ, ಬಿಟಿಎಂ ಬಡಾವಣೆ, ಚಾಮರಾಜಪೇಟೆ, ಸರ್ವಜ್ಞನಗರ, ಮಹದೇವಪುರ, ಕೆ.ಆರ್‌.ಪುರ ಹಾಗೂ ಯಶವಂತಪುರ ಕ್ಷೇತ್ರಗಳಲ್ಲಿ ಒಂದೊಂದು ಕ್ಷೇತ್ರಕ್ಕೆ ಪ್ರತ್ಯೇಕ ಅಧಿಕಾರಿ ನಿಯೋಜಿಸಲಾಗಿದೆ.

ಬಿಬಿಎಂಪಿ ವ್ಯಾಪ್ತಿಗೆ ಬರುವ ವಿಧಾನಸಭಾ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ವೆಚ್ಚಗಳ ಮಾಹಿತಿ ಪಡೆಯಲು ಹಾಗೂ ನಿಯಮ ಮೀರಿ ಹಣ ಖರ್ಚು ಮಾಡುವವರ ಮೇಲೆ ನಿಗಾವಹಿಸಲು ಎರಡು ಕ್ಷೇತ್ರಗಳಿಗೆ ಒಬ್ಬರಂತೆ ವೀಕ್ಷಕ ಹಾಗೂ ಸಂಪರ್ಕ ಅಧಿಕಾರಿ ನೇಮಿಸಲಾಗಿದೆಯಾದರೂ ಹತ್ತು ವಿಧಾನಸಭೆ ಕ್ಷೇತ್ರಗಳಲ್ಲಿ ಪ್ರತ್ಯೇಕ ಅಧಿಕಾರಿ ನೇಮಿಸಲಾಗಿದೆ.

ಉಳಿದಂತೆ, ಅಭ್ಯರ್ಥಿಗಳ ಖರ್ಚು ವೆಚ್ಚಗಳ ಪರಿಶೀಲನೆಗಾಗಿ 28 ವಿಧಾನಸಭಾ ಕ್ಷೇತ್ರಗಳಿಗೆ 19 ಮಂದಿ ವೀಕ್ಷಕ ಹಾಗೂ ಸಂಪರ್ಕ ಅಧಿಕಾರಿಗಳನ್ನು ಚುನಾವಣಾ ಆಯೋಗವು ನೇಮಿಸಲಾಗಿದ್ದು, ಖರ್ಚು ವೆಚ್ಚಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರು ಸಹ ಅಧಿಕಾರಿಗಳಿಗೆ ಮಾಹಿತಿ ನೀಡಬಹುದಾಗಿದೆ. 

 ಪ್ರಭಾವಿ ನಾಯಕರು ಸ್ಪರ್ಧಿಸುವ, ನಿಗದಿಗಿಂತ ಹೆಚ್ಚು ಖರ್ಚು-ವೆಚ್ಚ ಮಾಡುವುದು ಸೇರಿದಂತೆ ಈ ಹಿಂದಿನ ಚುನಾವಣೆಗಳಲ್ಲಿ ನಡೆದಿರುವಂತಹ ಘಟನೆಗಳು ಹಾಗೂ ದಾಖಲಾಗಿರುವ ಪ್ರಕರಣಗಳ ಆಧಾರದ ಮೇಲೆ ಕೆಲವೊಂದು ವಿಧಾನಸಭಾ ಕ್ಷೇತ್ರಗಳ ಮೇಲೆ ವಿಶೇಷ ನಿಗಾ ಇರಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

Advertisement

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗೆ 28 ಲಕ್ಷ ರೂ.ವರೆಗೆ ವೆಚ್ಚ ಮಾಡಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಅದನ್ನು ಮೀರಿ ವೆಚ್ಚ ಮಾಡುವುದು, ಮತದಾರರ ಮೇಲೆ ಒತ್ತಡ ಹೇರುವುದು, ಮತದಾರರಿಗೆ ಆಮೀಷವೊಡ್ಡುವುದು, ಹಣ, ಮದ್ಯ ಹಾಗೂ ಇತರೆ ವಸ್ತುಗಳ ಹಂಚಿಕೆಗಳ ಕುರಿತು ಸಾರ್ವಜನಿಕರು ಚುನಾವಣಾ ಆಯೋಗದ ವತಿಯಿಂದ ಅಭಿವೃದ್ಧಪಡಿಸಿರುವ ಅಥವಾ ಕಂಟ್ರೋಲ್‌ ರೂಂಗೆ ಕರೆ ಮಾಹಿತಿ ಮಾಹಿತಿ ನೀಡಬಹುದಾಗಿದೆ. 

ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ಮಾಡುವ ಖರ್ಚು ವೆಚ್ಚಗಳ ಮೇಲೆ ನಿಗಾವಹಿಸಲು 19 ಮಂದಿ ವೀಕ್ಷಕ ಹಾಗೂ ಸಂಪರ್ಕ ಅಧಿಕಾರಿಗಳನ್ನು, 14 ಮಂದಿ ಸಾಮಾನ್ಯ ವೀಕ್ಷಕ ಅಧಿಕಾರಿಗಳು ಹಾಗೂ ಪ್ರತಿ ಏಳು ವಿಧಾನಸಭಾ ಕ್ಷೇತ್ರಗಳಿಗೆ ಒಬ್ಬರಂತೆ ಪೊಲೀಸ್‌ ವೀಕ್ಷಕರನ್ನು ನೇಮಿಸಲಾಗಿದೆ.
-ಎನ್‌.ಮಂಜುನಾಥ ಪ್ರಸಾದ್‌, ಜಿಲ್ಲಾ ಚುನಾವಣಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next