ವಿಜಯಪುರ: ವಿಜಯಪುರ ಜಿಲ್ಲಾಡಳಿತ ವಿಶೇಷ ಚೇತನ ಮಕ್ಕಳ ಮನೆ ಬಾಗಿಲಿಗೆ ತೆರಳಿ ಸಮಾಜಿಕ ಭದ್ರತಾ ಯೋಜನೆಯಲ್ಲಿ ಮಾಸಾಶನ ಆದೇಶದ ಪ್ರತಿ ತಲುಪಿಸಿದೆ.
ನಗರದ ಲಕ್ಷ್ಮೀ ನಗರದ ನಿವಾಸಿಗಳಾದ ಕಿರಣ ಮಲ್ಲಿಕಾರ್ಜುನ ಮಂಗಲವೆಡೆ ಮತ್ತು ಸಾವಿತ್ರಿ ಮಲ್ಲಿಕಾರ್ಜುನ ಮಂಗಲವೇಡ ಎಂಬುವರೇ ಸರ್ಕಾರ ನೀಡುವ ಅಂಗವಿಕಲ ಪೋಷಣಾ ವೇತನ ಪಿಂಚಣಿ ಯೋಜನೆಯಡಿ ಮಾಸಿಕ ಪಿಂಚಣಿ 2000 ರೂ. ಆದೇಶ ಪತ್ರ ಪಡೆದ ಭಾಗ್ಯಶಾಲಿಗಳು.
ಜಿಲ್ಲಾಧಿಕಾರಿಗಳು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಫಲಾನುಭವಿಗಳಾದ ಕಿರಣ ಮಂಗಳವೇಡೆ ಹಾಗೂ ಸಾವಿತ್ರಿ ಮಂಗಳವೇಡೆ ಅವರ ಮನೆಗೆ ಮೇ 26ರಂದು ಖುದ್ದಾಗಿ ಭೇಟಿ ನೀಡಿ ಮಾಸಿಕ ಪಿಂಚಣಿ ಮಂಜೂರಾತಿ ಆದೇಶ ಪತ್ರ ವಿತರಿಸಿದರು.
ಜಿಲ್ಲಾಧಿಕಾರಿಗಳ ಕೈಯಿಂದ ಪಿಂಚಣಿ ಮಂಜೂರಾತಿ ಆದೇಶ ಪಡೆದ ಇಬ್ಬರು ಫಲಾನುಭವಿಗಳ ಮೊಗದಲ್ಲಿ ಸಂತಸ ಕಂಡು ಬಂತು. ತನ್ನ ಮಗನಿಗೆ ಆಧಾರ್ ಕಾರ್ಡ್ ಇಲ್ಲ, ಪಿಂಚಣಿ ಇಲ್ಲ ಎಂದು ಕೊರಗುತ್ತಿದ್ದ ಕಿರಣ್ ಅವರ ತಾಯಿ ಅವರ ಮೊಗದಲ್ಲೂ ಕೂಡ ಸಂತಸ ಕಂಡು ಬಂದಿತು. ಕಿರಣ್ ಅವರ ಮನೆಗೆ ಖುದ್ದು ಭೇಟಿ ನೀಡಿ ಸಹಾಯ ಮಾಡಿದ ಜಿಲ್ಲಾಧಿಕಾರಿ ಡಾ| ವಿಜಯಮಹಾಂತೇಶ ದಾನಮ್ಮನವರ ಅವರಿಗೆ ಕಿರಣ ಅವರ ತಾಯಿ ಇದೆ ವೇಳೆ ಧನ್ಯವಾದಗಳನ್ನು ತಿಳಿಸಿದರು.
ವಿಜಯಪುರ ನಗರದ ಲಕ್ಷ್ಮೀ ನಗರದ ನಿವಾಸಿಗಳಾದ ಕಿರಣ ಮಂಗಳವೆಡೆ ಅವರಿಗೆ ಆಧಾರ್ ಕಾರ್ಡ್ ಇಲ್ಲದ್ದಕ್ಕೆ ಪಿಂಚಣಿ ಸೌಲಭ್ಯ ವಂಚಿತನಾಗಿದ್ದ ಬಗ್ಗೆ ಕೂಡಲೇ ಕ್ರಮ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಮೇ 21ರಂದೇ ನಿರ್ದೇಶನ ನೀಡಲಾಗಿತ್ತು. ಕಿರಣ ಅವರಿಂದ ಅಷ್ಟೇ ಅಲ್ಲ, ಆತನ ಸಹೋದರಿ ಸಾವಿತ್ರಿ ಅವರಿಂದಲೂ ಅಗತ್ಯ ದಾಖಲೆಗಳನ್ನು ಪಡೆದುಕೊಂಡು ಪರಿಶೀಲಿಸಿ ಇಬ್ಬರಿಗೂ ಮಾಸಿಕ ಪಿಂಚಣಿ ಮಂಜೂರಾತಿಗೆ ಕ್ರಮ ವಹಿಸಲಾಗಿದೆ. ಕಿರಣ ಮಲ್ಲಿಕಾರ್ಜುನ ಮಂಗಲವೆಡೆ ಮತ್ತು ಸಾವಿತ್ರಿ ಮಲ್ಲಿಕಾರ್ಜುನ ಮಂಗಲವೇಡ ಅವರಿಗೆ ಇದೆ ಜೂನ್ 1ರಿಂದ ಮಾಸಿಕ ತಲಾ 2000 ರೂ. ಸಿಗಲಿದೆ ಎಂದು ತಿಳಿಸಿದರು.
ಆಧಾರ್ ಕಾರ್ಡ್ ಇಲ್ಲದ್ದಕ್ಕೆ ವಿಕಲಚೇತನರ ಪಿಂಚಣಿ ಲಭಿಸಿಲ್ಲ ಎಂದು ಪತ್ರಿಕೆಗಳಲ್ಲಿ ವರದಿಯಾಗಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿ ಕಿರಣಗೆ ಆಧಾರ್ ಕಾರ್ಡ್ ಕೂಡ ಸಿಗುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ವಿಜಯಪುರ ಸಹಾಯಕ ಆಯುಕ್ತ ಬಲರಾಮ ಲಮಾಣಿ, ತಹಶೀಲ್ದಾರ್ ಸಿದ್ದರಾಯ ಭೋಸಗಿ, ತಹಶೀಲ್ದಾರ್ ಐ.ಎಚ್. ತುಂಬಗಿ ಇದ್ದರು.