ಕೆ.ಆರ್.ಪೇಟೆ: ತಾಲೂಕಿನ ಪುರಾಣ ಪ್ರಸಿದ್ಧ ಪುಣ್ಯಕ್ಷೇತ್ರ ಭೂವೈಕುಂಠ ಎಂದೇ ಪ್ರಖ್ಯಾತವಾದ ಶ್ರೀಲಕ್ಷ್ಮೀಸಮೇತ ಭೂ ವರಹನಾಥ ಸ್ವಾಮಿ ಕಲ್ಲಹಳ್ಳಿ ದೇವಾಲಯಕ್ಕೆ ಯುಗಾದಿ ಪ್ರಯುಕ್ತ ಭಕ್ತ ಸಾಗರವೇ ಹರಿದು ಬಂದಿತ್ತು.
ಮೈಸೂರಿನ ಬ್ರಹ್ಮತಂತ್ರ ಸ್ವತಂತ್ರ ಪರಕಾಲ ಮಠದ ಪೀಠಾಧಿಪತಿಗಳಾದ ಶ್ರೀಲಕ್ಷ್ಮೀ ಹಯಗ್ರೀವ ಪರಕಾಲ ಸ್ವಾಮೀಜಿಗಳು ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆ ಮಾಡಿ, ಪೂಜೆ ಸಲ್ಲಿಸಿದರು.
ವಿಶೇಷ ಅಭಿಷೇಕ: ಶ್ರೀವಿಷ್ಣುವು ದುಷ್ಠರ ಸಂಹಾರಕ್ಕಾಗಿ ಭೂ ವರಹನಾಥನಾಗಿ ಅವತಾರ ತಾಳಿ ಭೂಮಿಗೆ ಬಂದ ದಿನವು ರೇವತಿ ನಕ್ಷತ್ರವಾದ ಕಾರಣ ವರಹನಾಥ ಸ್ವಾಮಿಗೆ ಒಂದು ಸಾವಿರ ಲೀಟರ್ ಹಾಲು, ಐನೂರು ಲೀಟರ್ ಕಬ್ಬಿನ ಹಾಲು, ಐನೂರು ಲೀಟರ್ ಎಳನೀರು, ತುಪ್ಪ, ಜೇನುತುಪ್ಪ, ಅರಿಶಿನ, ಶ್ರೀಗಂಧ ಸೇರಿದಂತೆ ಪವಿತ್ರ ಗಂಗಾಜಲದಿಂದ ಅಭಿಷೇಕ ಮಾಡಲಾಯಿತು.
ಮಲ್ಲಿಗೆ, ಜಾಜಿ, ಸಂಪಿಗೆ, ಗುಲಾಬಿ, ಪತ್ರೆಗಳು, ಕಮಲ, ಸುಗಂಧರಾಜ, ಕನಕಾಂಬರ, ಮರಳೆ, ತುಳಸಿ ಸೇರಿದಂತೆ 58 ರೀತಿಯ ಅಪರೂಪದ ಹೂವುಗಳಿಂದ ವರಹಾಸ್ವಾಮಿಯ 17 ಅಡಿ ಎತ್ತರದ ಸಾಲಿಗ್ರಾಮ ಕೃಷ್ಣಶಿಲೆಯ ಮೂರ್ತಿಗೆ ಪುಷ್ಪಾಭಿಷೇಕ ನಡೆಸಿ, ಸ್ವಾಮಿಯ ಪಟ್ಟಾಭಿಷೇಕ ಮಾಡಿ ಲೋಕ ಕಲ್ಯಾಣಾರ್ಥವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಜಿಪಂ ಮಾಜಿ ಸದಸ್ಯೆ ನಾಗಮ್ಮ ಪುಟ್ಟರಾಜು, ಎಸ್‌ಟಿಜಿ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಶಿವರಾಜ್ ದಂಪತಿ, ಉದ್ಯಮಿ ವಿಜಯ್ ರಾಮೇಗೌಡ, ಬೂಕನಕೆರೆ ರಾಜಶೇಖರ್, ಭಂಡಾರಿ, ಮೈಸೂರಿನ ಜಿಲ್ಲಾ ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನಪ್ಪ, ಕೆ.ಅರ್.ಪೇಟೆ ಪುರಸಭೆ ಅಧ್ಯಕ್ಷೆ ಮಹಾದೇವಿ ನಂಜುಂಡ, ಭೂ ವರಹನಾಥ ಸ್ವಾಮಿ ದೇವಾಲಯ ಜೀರ್ಣೋದ್ಧಾರ ಕಾರ್ಯದ ಡಾ.ದೇವರಾಜನ್ ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಭಕ್ತರು ಯುಗಾದಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಭೂವರಹನಾಥಸ್ವಾಮಿ ದೇವಾಲಯ ಅಭಿವೃದ್ಧಿ ವ್ಯವಸ್ಥಾಪನಾ ಸಮಿತಿ ಧರ್ಮದರ್ಶಿ ಶ್ರೀನಿವಾಸರಾಘವನ್ ಪೂಜಾ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು.