ಹೊಸದಿಲ್ಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ)ನ “ಪ್ರಯೋಗಾಲಯದಿಂದ ಮಾರುಕಟ್ಟೆಗೆ” ಪರಿಕಲ್ಪನೆಯು ವರ್ಷದಿಂದ ವರ್ಷಕ್ಕೆ ಜನಪ್ರಿಯವಾಗುತ್ತಿರುವಂತೆಯೇ, ಪ್ರತಿಷ್ಠಿತ ಸಂಸ್ಥೆಯು ಇದೇ ಮೊದಲ ಬಾರಿಗೆ ನವೋದ್ಯಮಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ವಿಶೇಷ ನಿಧಿಯೊಂದನ್ನು ಸ್ಥಾಪಿಸಲು ನಿರ್ಧರಿಸಿದೆ.
ಹೊಸದಾಗಿ ಹುಟ್ಟಿಕೊಳ್ಳುವ ಉದ್ಯಮಗಳಿಗೆ ದತ್ತಿ ಉದ್ದೇಶದಿಂದ ನೆರವು ನೀಡುವ ಯೋಜನೆ ಇದಾಗಿದೆ. ಕಂಪೆನಿ ಕಾಯ್ದೆಯ ಸೆಕ್ಷನ್ 8ರಡಿ ಈ ನಿಧಿಯನ್ನು ಸ್ಥಾಪಿಸಲಾಗುತ್ತದೆ. ಐಐಎಸ್‌ಸಿಯಲ್ಲಿ ಅಭಿವೃದ್ಧಿ ಹೊಂದುವಂಥ ಸ್ಟಾರ್ಟ್‌ಅಪ್‌ಗಳಲ್ಲಿ ಹೂಡಿಕೆಗೆ ನೆರವಾಗುವಂಥ ವರ್ಚುವಲ್ ನಿಧಿ ಸ್ಥಾಪನೆಗೆ ಆರಂಭಿಕವಾಗಿ 100-120 ಕೋಟಿ ರೂ.ಗಳ ಅಗತ್ಯವಿದೆ. ಭವಿಷ್ಯದಲ್ಲಿ ಈ ನಿಧಿಯನ್ನು ಹೆಚ್ಚಿಸಲಾಗುತ್ತದೆ ಎಂದು ವಿಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ(ಎಫ್ಎಸ್‌ಐಡಿ)ದ ಮುಖ್ಯಸ್ಥ ಸಿ.ಎಸ್.ಮುರಳಿ ಹೇಳಿದ್ದಾರೆ ಎಂದು “ದ ಟೈಮ್ಸ್ ಆಫ್ ಇಂಡಿಯಾ” ವರದಿ ಮಾಡಿದೆ.
ಈವರೆಗೆ ಐಐಎಸ್‌ಸಿ ಕ್ಯಾಂಪಸ್‌ನಿಂದ ಒಟ್ಟು 80 ಸಂಸ್ಥೆಗಳು ಹುಟ್ಟಿವೆ. ಪ್ರಸ್ತುತ ಕ್ಯಾಂಪಸ್‌ನಲ್ಲಿ 61 ಸ್ಟಾರ್ಟ್‌ಅಪ್‌ಗಳನ್ನು ಬೆಳೆಸಲಾಗುತ್ತಿದೆ. ಈ ಪೈಕಿ 25 ನವೋದ್ಯಮಗಳು ಬೆಂಗಳೂರಿನ ಕ್ಯಾಂಪಸ್‌ನಲ್ಲೇ ಕಾರ್ಯಾಚರಿಸುತ್ತಿವೆ.
ಯಾವುದೇ ಸ್ಟಾರ್ಟ್‌ಅಪ್ ಆರಂಭಿಸಿದಾಗಲೂ ಸರಕಾರಿ ಯೋಜನೆಗಳಿಂದ ಬರುವ ಮೊತ್ತವು ಸಾಲುವುದಿಲ್ಲ. ಇನ್ನು ಸಿಎಸ್‌ಆರ್ ಮತ್ತು ಸರಕಾರಿ ಹಣಕಾಸು ನೆರವು ಸಿಗುತ್ತದೋ, ಇಲ್ಲವೋ ಎಂಬ ಗೊಂದಲವಿರುತ್ತದೆ. ಹೀಗಾಗಿ ಇಂಥದ್ದೊಂದು ನಿಧಿಯನ್ನು ನಾವೇ ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದಿದ್ದಾರೆ ಸಿ.ಎಸ್.ಮುರಳಿ.