Advertisement

ಕಣ್ಣಾ ಮುಚ್ಚೆ ವಾಡೆ ಗೂಡೆ

09:38 AM May 06, 2019 | Hari Prasad |

ವಾಡೆಗಳು ಎಂಬುದು, ವಿಶಾಲ ವಿಸ್ತಾರದಿಂದ ಕೂಡಿದ ಸರ್ವತಂತ್ರ ಸ್ವತಂತ್ರವಾಗಿ ವಾಸಿಸಲು ಅವಕಾಶ ಹೊಂದಿರುವಂಥ ಸ್ಥಳ. ವಾಡೆ ಕೇವಲ ದೊಡ್ಡ ದೊಡ್ಡ ಗೋಡೆಗಳುಳ್ಳ ಕಟ್ಟಡವಷ್ಟೇ ಅಲ್ಲ, ಅದು ಮನೆತನದ ಇತಿಹಾಸ, ಸಂಸ್ಕೃತಿ, ಆಳ್ವಿಕೆದಾರನ ವ್ಯಕ್ತಿತ್ವ ಸಾರುವ ಕುರುಹು. ಕರ್ನಾಟಕದಲ್ಲಿ ವಾಡೆಗಳು ಎಲ್ಲೆಲ್ಲಿವೆ? ಅವು ಹೇಗಿವೆ? ಅವುಗಳ ಸ್ಥಿತಿ-ಗತಿಯ ಬಗ್ಗೆ ಇಲ್ಲಿ ಮಾಹಿತಿಯಿದೆ…

Advertisement

ಉತ್ತರ ಕರ್ನಾಟಕದ ಭಾಗದ ವಾಡೆಗಳ ಮುಂದೆ ನಿಂತರೆ ಅದು ಕೇವಲ ಮನೆಯಂತೆ ಕಾಣು­ವುದಿಲ್ಲ. ಸೂಕ್ಷ್ಮವಾಗಿ ಗಮನಿಸಿದರೆ, ಆ ಕಾಲಘಟ್ಟದ, ಆರ್ಥಿಕ, ರಾಜಕೀಯ, ಸಾಮಾಜಿಕ ಸ್ಥಿತಿಗತಿಯ ಕಥೆಗಳನ್ನು ಹೇಳುತ್ತಾ ಹೋಗುತ್ತವೆ. ಸಂಶೋಧನೆಯ ಸಲುವಾಗಿ ನಾನು ಕರ್ನಾಟಕದ ಬಹುತೇಕ ವಾಡೆಗಳಿಗೆ ಭೇಟಿ ನೀಡಿದ್ದೇನೆ. ಅವುಗಳ ಇತಿಹಾಸ, ಸ್ಥಿತಿಗತಿಗಳನ್ನು ಅರಿತಿದ್ದೇನೆ. ಎಲ್ಲ ಕಡೆ ಸುತ್ತಿದ ಮೇಲೆ ತಿಳಿದದ್ದು ಏನೆಂದರೆ, ವಾಡೆ ಅನ್ನೋದು ಮೇಲ್ವರ್ಗದ ವೈಭವೋಪೇತ ಬದುಕಿನ ಸಂಕೇತ ಅನ್ನೋದು.


ಜಾತಿಯ ಘಮಲು
ವಾಡೆಯಲ್ಲಿ ಮೊದಲು ಹೊರಗಡೆ ಜಗುಲಿ, ಒಳಗೆ ಕುಳಿತುಕೊಳ್ಳಲು ಕಟ್ಟೆಗಳು, ಅದರ ಒಳಗೆ ಅಡುಗೆ ಮನೆ, ರೂಮುಗಳು, ದನದ ಕೊಠಡಿಗಳು, ಸ್ಟೋರ್‌ ರೋಮ್‌ ಹೀಗೆ ವಿಭಾಗಗಳಾಗಿರುತ್ತವೆ. ಇದು ಜಾತಿಯ ಶ್ರೇಣಿಕೃತ ವ್ಯವಸ್ಥೆ ಅನ್ನೋದು ಸೂಕ್ಷ್ಮವಾದ ನೂಲಿದ್ದಂತೆ. ಅದನ್ನು ಜಗ್ಗುತ್ತಾ ಹೋದರೆ, ಆ ವಾಡೆಯ ಯಜಮಾನ ಯಾವ ಜಾತಿಯವರನ್ನು ವಾಡೆಯ ಎಲ್ಲಿವರೆಗೆ ಬಿಟ್ಟುಕೊಳ್ಳುತ್ತಿದ್ದರು, ಒಳಾಂಗಣದ ಕಟ್ಟೆಯ ಮೇಲೆ ಯಾವ ಜಾತಿಯವರಿಗೆ ಮಣೆ ಹಾಕುತ್ತಿದ್ದರು, ಸ್ವಜಾತಿಯ ಆತ್ಮೀಯರನ್ನು ದೇವರ ಮನೆ ತನಕ ಬಿಟ್ಟುಕೊಳ್ಳುತ್ತಿದ್ದರೇ? ಅನ್ನೋ ವಿಚಾರವೆಲ್ಲ ತಿಳಿಯುತ್ತಾ ಹೋಗುತ್ತದೆ. ಒಟ್ಟಾರೆಯಾಗಿ, ಅಲ್ಲಿರುವ ಕಟ್ಟೆಗಳು, ಅಂಗಳಗಳು ವಾಡೆಯಲ್ಲಿ ಜಾತಿ ವ್ಯವಸ್ಥೆ ಹೇಗಿತ್ತು ಅನ್ನೋದನ್ನು ಕೂಗಿ ಹೇಳುತ್ತವೆ; ನಾವು ಕೇಳಿಸಿಕೊಳ್ಳಬೇಕಷ್ಟೇ.

ವಾಡೆಗಳು ಹಳೇ ಗಾರೆಗಳಿಂದಲೇ ನಿರ್ಮಿತವಾದವು. ಅವುಗಳನ್ನು ಈಗಿನಂತೆ ಪಕ್ಕಾ ವಾಸ್ತು ಪ್ರಕಾರ ಕಟ್ಟಿದ್ದಾರೆ ಅಂತ ಹೇಳಲುಬಾರದು. ಅಗ್ನಿ ಮೂಲೆಯಲ್ಲಿ ಅಡುಗೆ ಮನೆ, ದೇವ ಮೂಲೆಯಲ್ಲೇ ದೇವರ ಮನೆಯನ್ನು ಬಹಳ ಎಚ್ಚರಿಕೆಯಿಂದ ಬಳಸಿಕೊಂಡಿದ್ದಾರೆ; ಆಗಿನವರ ಪಾಲಿಗೆ ವಾಸ್ತು ಎಂದರೆ ಇಷ್ಟೇ. ಬಹುತೇಕ ವಾಡೆಗಳಲ್ಲಿ ಪಶ್ಚಿಮಕ್ಕೋ, ಉತ್ತರಕ್ಕೋ ಬಾಗಿಲುಗಳಿರುತ್ತವೆ. ದಕ್ಷಿಣ, ನೈಋತ್ಯಕ್ಕೆ ಗೋಡೆ ಕಟ್ಟಿರುತ್ತಾರೆ.


ಕಾರಣ, ಹೆಚ್ಚು ಹೆಚ್ಚು ಧೂಳು, ಗಾಳಿ ಅಲ್ಲಿಂದಲೇ ಬರುವುದು ಅಂತ. ಈ ಭಾಗದಿಂದ ಹೇಳಿಕೊಳ್ಳುವ ಬೆಳಕು ಕೂಡ ಬರುವುದಿಲ್ಲ ಅಂತ ಆ ಕಾಲದಲ್ಲೇ ಲೈಟಿಂಗ್‌ ಲೆಕ್ಕಾಚಾರ ಮಾಡಿದ್ದಾರೆ. ಮಿಕ್ಕಂತೆ ಗಾಳಿ-ಬೆಳಕಿಗೆ ಪ್ರಾಮುಖ್ಯತೆ ಕೊಟ್ಟಿದ್ದಾರೆ. ಬಹುತೇಕ ವಾಡೆಗಳ ಸಾಮಾನ್ಯವಾಗಿ ಈ ಎರಡು ಅಂಶ ಕಂಡುಬರುತ್ತದೆ. ಒಂದು ತಮ್ಮ ಅಂತಸ್ತು, ಅಧಿಕಾರವನ್ನು ತೋರಿಸುವುದಕ್ಕಾಗಿ, ಎರಡು- ತಮ್ಮ ಮೇಲಿದ್ದ ರಾಜ ಮಹಾರಾಜರನ್ನು ಅನುಸರಿಸಿ ಅವರನ್ನು ಹೋಲುವಂತೆ ಕಟ್ಟಿರುವುದೇ ಆಗಿವೆ.

ಗೌಡರ ಮನೆ ನೋಡಿ
ರಾಯಚೂರಿನ ರಾಜನಗೌಡರ ಮನೆ ನೋಡಿದರೆ ಖುಷಿಯಾಗುತ್ತದೆ. ಇವರ ಮನೆ ಮೇಲೆ ರಾಜಸ್ಥಾನ ಕಲೆಯ ಪ್ರಭಾವ ಇದೆ ಅನಿಸುತ್ತದೆ. ಇಲ್ಲವೇ ಅಲ್ಲಿಂದಲೇ ಕಲಾಕಾರರನ್ನು ಕರೆಸಿ ಕೆತ್ತಿಸಿದಂತಿರುವ ಕಾಷ್ಠಶಿಲ್ಪ ಗಮನ ಸೆಳೆಯುತ್ತದೆ. ಇದನ್ನು ಬಾವಂಚಿ ಮನೆ ಅಂತಲೂ ಕರೆಯುವುದುಂಟು.

ಧಾರವಾಡದ ಲೋಕೂರ್‌ ವಾಡೆ ಒಂದು ಎಕರೆಗೂ ಹೆಚ್ಚು ವಿಸ್ತಾರವಾಗಿದೆ. ಅಲ್ಲಿ 200 ಜನ ಉಳಿದುಕೊಳ್ಳುವ ವ್ಯವಸ್ಥೆ ಇದೆ. ದೊಡ್ಡದು ಅಂದರೆ ನಾಲ್ಕು ಜನ ಹೆಣ್ಣು ಮಕ್ಕಳು ಎಲ್ಲರಿಗೂ ಒಂದೇ ಸೂರಿನಲ್ಲಿ ಅಡುಗೆ ಮಾಡುವಷ್ಟು ಜಾಗವಿದೆ. ನಾಲ್ಕು ತೊಟ್ಟಿಲುಗಳು ಗಮನ ಸೆಳೆಯುತ್ತವೆ. ಬಾತ್‌ ರೂಮ್‌, ಅದರ ಪಕ್ಕ ಹೆರಿಗೆ ರೂಮ್‌, ಹರಟೆ ಹೊಡೆಯಲು ಜಗುಲಿಗಳು ಕೂಡ ಇವೆ.


ಎಷ್ಟೋ ವಾಡೆಗಳು ಚಿಕ್ಕಚಿಕ್ಕವು. ಮನೆಯ ಸದಸ್ಯರ ಸಂಖ್ಯೆ ಹೆಚ್ಚಾಗುತ್ತಾ ಹೋದಂತೆ ಅವುಗಳನ್ನು ವಿಸ್ತಾರ ಮಾಡಿರುವುದೂ ಉಂಟು. ವಾಡೆಯನ್ನು ನೋಡುತ್ತಿದ್ದಂತೆ ಅದರ ಮಾಲೀಕರ ಅಭಿರುಚಿ, ರಾಜಕೀಯ ಪ್ರಭಾವ, ಆರ್ಥಿಕ ಸ್ಥಿತಿ ಎಲ್ಲವೂ ತಿಳಿಯುತ್ತಾ ಹೋಗುತ್ತದೆ.
ಉತ್ತರ ಕರ್ನಾಟಕದ ವಾಡೆಯ ಮೇಲೆ ಉತ್ತರ ಭಾರತದ ಪ್ರಭಾವ ಜಾಸ್ತಿ. ನವಾಬರು, ಪಾಳೇಗಾರರು, ನಿಜಾಮರ ಆಳ್ವಿಕೆಯ ಕುರುಹುಗಳು ಅಲ್ಲಿ ಕಾಣಸಿಗುತ್ತವೆ. ಇದೊಂಥರಾ ಶ್ರೇಣಿಕೃತ ಬದುಕು.

Advertisement

ಒಬ್ಬರನ್ನು ನೋಡಿ ಇನ್ನೊಬ್ಬರು-ನಾವು ಹಾಗೇ ಇರೋಣ ಅಂತ ಬದುಕಿದವರೇ ಹೆಚ್ಚು. ಬಹುತೇಕ ವಾಡೆಗಳ ಬಾಗಿಲು, ಕಿಟಕಿ ಅದರ ಸುತ್ತ ಮಾಡಿರುವ ಕೆತ್ತನೆಗಳನ್ನು ಗಮಿಸಿದರೆ, ಆ ಪ್ರದೇಶವನ್ನು ಆಳಿರುವವರು ಯಾರು ಅನ್ನೋದು ತಿಳಿಯುತ್ತದೆ. “ಒಂದಾನೊಂದು ಕಾಲದಲ್ಲಿ’ ಸಿನಿಮಾ ಶೂಟಿಂಗ್‌ ಮಾಡಿದ ಧಾರವಾಡದ ಬಳಿಯ ತುಮುರಿ ಗೌಡರ ಮನೆ ನೋಡಬೇಕು. ಅದ್ಭುತ. ಅಣ್ಣಿಗೆರಿಯ ದೇಸಾಯರ ವಾಡೆ ಚೆಂದಕ್ಕಿಂತ ಚಂದ; ಅದು ಈಗಲೂ ಗಟ್ಟಿ ಮುಟ್ಟಾಗಿದೆ. ಗಜೇಂದ್ರಗಡಕ್ಕೆ ಬಂದರೆ ಬೆಟ್ಟದ ತಪ್ಪಲಲ್ಲೇ ಘೋರ್ಪಡೆ ಅವರ ಮನೆ ಇದೆ. ಇವರದು ರಾಜವಂಶ. ಹೀಗಾಗಿ, ಆಯುಧ ಕೋಣೆ, ಪೂಜಾ ಕೋಣೆ ಎಲ್ಲವೂ ಬೇರೆ ಬೇರೆಯೇ ಇದೆ.

ಮೇಂಟೇನ್‌ ಕಷ್ಟ
ಇಂದಿನ ಪರಿಸ್ಥಿತಿಯಲ್ಲಿ 30-40 ಅಳತೆಯ ಮನೆಯನ್ನು ಕಾಪಾಡಿಕೊಳ್ಳುವುದೇ ಕಷ್ಟ. ಹೀಗಿರುವಾಗ ಎಕರೆಗಟ್ಟಲೆ ವ್ಯಾಪ್ತಿಯಲ್ಲಿರುವ ಇರುವ ವಾಡೆಗಳ ಸಂರಕ್ಷಣೆ ಇನ್ನೂ ಕಷ್ಟ. ಹೀಗಾಗಿ, ಒಂದೋ ವಾಡೆಯನ್ನು ಮಾರಾಟ ಮಾಡುತ್ತಾರೆ. ನಿರ್ವಹಣೆ ಖರ್ಚನ್ನು ತೂಗಿಸಲು ಸಿನಿಮಾ, ಧಾರಾವಾಹಿಗಳ ಶೂಟಿಂಗ್‌ಗೆ ಬಾಡಿಗೆಗೆ ಕೊಡುತ್ತಾರೆ. ಇಲ್ಲವಾದರೆ, ನೂರಾರು ವರ್ಷಗಳ ಕಾಲದ ಬೆಲೆ ಬಾಳುವ ಮರಮಟ್ಟುಗಳನ್ನು ಮಾರಾಟ ಮಾಡುತ್ತಾರೆ. ಇದರಿಂದ ಕೋಟ್ಯಂತರ ರೂ. ಹಣ ಬಂದಿರುವುದೂ ಉಂಟು.

ಪಾಪ, ಇದೆಲ್ಲವೂ ಅವರ ತಪ್ಪಲ್ಲ. ಆಳು ಕಾಳು ಇಟ್ಟುಕೊಂಡು ಮನೆ ನಿರ್ವಹಣೆ ಮಾಡುವಷ್ಟು ಆದಾಯ ಅವರಿಗೆ ಬೇಕಲ್ಲ? ಕೇವಲ ನಮಗೆ ವಾಡೆ ಇದೆ ಅಂತ ಹೆಮ್ಮೆ ಪಟ್ಟುಕೊಂಡರೆ ಹೊಟ್ಟೆ ತುಂಬಬೇಕಲ್ಲ? ಹೀಗಾಗಿ, ವಾಡೆಗಳ ಉಳಿವು ಕಷ್ಟವಾಗಿದೆ. ನಮ್ಮ ದೇವಾಲಯದಲ್ಲಿರುವ ಶಿಲ್ಪಕಲೆ, ವಾಸ್ತು ಶಿಲ್ಪದಂತ ಜಾನಪದ ಶೈಲಿಯ ಕೆತ್ತನೆಗಳು ವಾಡೆಗಳಲ್ಲಿಯೂ ಇವೆ. ವಾಡೆಗಳು ಅವುಗಳ ಗಾತ್ರ, ಅದರಲ್ಲಿದ್ದವರ ವೈಭವದ ಬದುಕಿನಿಂದ ಹೆಸರಾಯಿತೇ ಹೊರತು, ಅಡಗಿರುವ ಕಲೆ, ಸಂಸ್ಕೃತಿಯಿಂದ ಖ್ಯಾತಿಗಳಿಸಲಿಲ್ಲ.

– ಎಂ.ಪಿ. ವೀಣಾ ಮಹಂತೇಶ್‌
– ನಿರೂಪಣೆ- ಕಟ್ಟೆ
(ಲೇಖಕಿ ಮಾಜಿ ಉಪ ಮುಖ್ಯಮಂತ್ರಿ ದಿ. ಎಂ.ಪಿ. ಪ್ರಕಾಶ್‌ ಅವರ ಪುತ್ರಿ. ಇವರು “ಉತ್ತರ ಕರ್ನಾಟಕ ಜನಪದ ವಾಸ್ತು ಶಿಲ್ಪ’ ಎಂಬ ವಿಷಯದ ಅಡಿಯಲ್ಲಿ ಕರ್ನಾಟಕದಲ್ಲಿರುವ ವಾಡೆಗಳ ಬಗ್ಗೆ ಅಪರೂಪದ ಅಧ್ಯಯನ ಮಾಡಿದ್ದಾರೆ)

Advertisement

Udayavani is now on Telegram. Click here to join our channel and stay updated with the latest news.

Next