Advertisement

ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು: ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ರಾಜಕೀಯ ಕ್ಷೇತ್ರದ ಸಾಧಕ

04:23 AM Aug 17, 2020 | Hari Prasad |

ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಅಸಾಮಾನ್ಯ ಸೇವೆ ಸಲ್ಲಿಸುತ್ತಿರುವ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು ಶಿಕ್ಷಣ ರಂಗದ ಓರ್ವ ಅಪೂರ್ವ ಸಾಧಕ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ಅತೀ ಕಡಿಮೆ ಶುಲ್ಕದಲ್ಲಿ ಆಂಗ್ಲ ಮಾಧ್ಯಮದ ಮೂಲಕ ಮಾನವೀಯ ಮೌಲ್ಯಾಧಾರಿತ, ನೈತಿಕ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಮೌನ ಕ್ರಾಂತಿಯನ್ನೇ ಮಾಡುತ್ತಿರುವ ಇವರು ಸ್ಥಾಪಿಸಿದ ರತ್ನಾ ಎಜ್ಯುಕೇಶನ್‌ ಟ್ರಸ್ಟ್‌ ಕೇವಲ ಶಿಕ್ಷಣವನ್ನು ಪಾಠಕ್ಕೇ ಸೀಮಿತಗೊಳಿಸದೆ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ದಿಗೆ ಇಲ್ಲಿ ಪೂರಕ ವಾತಾವರಣ ಸೃಷ್ಟಿಸಲಾಗಿದೆ. ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯೊಂದು ಕನ್ನಡ ಸಾಹಿತ್ಯದಲ್ಲಿ ತೊಡಗಿಸಿಕೊಳ್ಳಬಹುದು ಎನ್ನುವ ನಿಟ್ಟಿನಲ್ಲಿ ರತ್ನೋತ್ಸವದಂತಹ ಕನ್ನಡ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನವನ್ನು ಆಯೋಜಿಸಿ ಸಾಹಿತ್ಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಸೇವೆಗೆ ಕಟಿಬದ್ಧರಾಗಿದ್ದಾರೆ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು.

Advertisement

ಕೆ. ರವೀಂದ್ರ ಶೆಟ್ಟಿ ಅವರ ಶೈಕ್ಷಣಿಕ ದೂರದೃಷ್ಟಿತ್ವ
ಮಂಗಳೂರು ತಾಲೂಕಿನ ಗ್ರಾಮಾಂತರ ಪ್ರದೇಶವಾದ ಹರೇಕಳ ಉಳಿದೊಟ್ಟು ಎಂಬಲ್ಲಿ ಪ್ರಗತಿಪರ ಕೃಷಿಕ ಕೊರಗಪ್ಪ ಶೆಟ್ಟಿ , ಮತ್ತು ಕಲ್ಲೆಕ್ಕಾರು ಗುತ್ತು ರತ್ನಾವತಿ ಶೆಟ್ಟಿ ಅವರ ಮಗನಾಗಿ ಜನಿಸಿದ ರವೀಂದ್ರ ಶೆಟ್ಟರು ಮಧ್ಯಮ ವರ್ಗದ ರೈತ ಕುಟುಂಬಕ್ಕೆ ಸೇರಿದವರು. ಸ್ವಂತ ಪರಿಶ್ರಮದಿಂದ ವ್ಯಾಸಾಂಗ ಮಾಡಿ ಪದವಿಯವರೆಗೆ ವಿದ್ಯಾರ್ಹತೆ ಪಡೆದ ಆವರು ತಮ್ಮ ಸಾಮಾಜಿಕ ಮತ್ತು ವ್ಯಾವಹಾರಿಕ ಚಟುವಟಿಕೆಗಳಿಂದ ಹಂತ ಹಂತವಾಗಿ ಮೇಲೇರಿದವರು.

ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ನೆರವಾಗಬೇಕೆಂಬ ಮಹಾತ್ವಾಕಾಂಕ್ಷೆಯಿಂದ 1991ರಲ್ಲಿ ದೇರಳಕಟ್ಟೆಯ ಡಾ|ಬಾಲಕೃಷ್ಣ ಮುದ್ಯ ಅವರ ಕಟ್ಟಡದಲ್ಲಿ ಸ್ಥಾಪಿಸಿದ ರತ್ನ ಟ್ಯುಟೋರಿಯಲ್‌ ಎಂಬ ಶಿಕ್ಷಣ ಸಹಾಯ ಕೇಂದ್ರವನ್ನು ವಿಸ್ತರಿಸಿ 1998ರಲ್ಲಿ ದೇರಳಕಟ್ಟೆಯಲ್ಲಿ ವಿದ್ಯಾರತ್ನ ಪೂರ್ವ ಪ್ರಾಥಮಿಕ ಶಾಲೆಯನ್ನು ತೆರೆದರು. ತನ್ನ ತಾಯಿಯ ಹೆಸರಲ್ಲಿ ಆರಂಭಿಸಿದ ಈ ವಿದ್ಯಾಸಂಸ್ಥೆ ಇಂದು ಅತ್ಯಾಧುನಿಕ ಸೌಕರ್ಯಗಳೊಂದಿಗೆ ಸಹಸ್ರಾರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವ ವಿದ್ಯಾರತ್ನ ಪ್ರೌಢಶಾಲೆಯಾಗಿ ರಾಜ್ಯ ಮಟ್ಟದಲ್ಲಿ ಹೆಸರಾಂತ ವಿದ್ಯಾಸಂಸ್ಥೆಯೆನಿಸಿದೆ.


ಸರ್ವಾಂಗೀಣ ಅಭಿವೃದ್ಧಿಗೆ ಪೂರಕ ವಾತಾವರಣ

ವಿದ್ಯಾರತ್ನ ಶಿಕ್ಷಣ ಸಂಸ್ಥೆಗೆ ಸೇರಿದ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾದ ವಾತಾವರಣ ಇಲ್ಲಿದೆ. ಸಾಂಸ್ಕೃತಿಕ, ಶೈಕ್ಷಣಿಕ, ಸಾಮಾಜಿಕವಾಗಿ ಇಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಸಂಸ್ಥೆಯ ವಿದ್ಯಾರ್ಥಿಗಳು ಜಾನಪದ ನೃತ್ಯದಲ್ಲಿ ರಾಜ್ಯಮಟ್ಟ, ಸ್ಕೌಟ್ಸ್‌ ಗೈಡ್ಸ್‌ನಲ್ಲಿ ರಾಷ್ಟ್ರಪತಿ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆ. ಎಲ್ಲಾ ಧರ್ಮದ ಮಕ್ಕಳಲ್ಲಿ ಸಾಮರಸ್ಯಕ್ಕಾಗಿ ದೀಪಾವಳಿ, ರಂಝಾನ್‌, ಕ್ರಿಸ್‌ಮಸ್‌, ಹಬ್ಬದ ಆಚರಣೆ, ತುಳುನಾಡಿನ ಆಟಿ ಆಚರಣೆಯ ಮೂಲಕ ಧಾರ್ಮಿಕ ಹಾಗೂ ನೈತಿಕವಾಗಿ ಮಕ್ಕಳನ್ನು ಸದೃಡಗೊಳಿಸುವ ಕಾರ್ಯವನ್ನು ವಿದ್ಯಾಸಂಸ್ಥೆ ಮಾಡುತ್ತಿದೆ. ಈ ಶಾಲೆ ಯಲ್ಲಿ ಮೂಲಭೂತ ಸೌಕರ್ಯ ಮಕ್ಕಳ ಕಲಿಕೆಗೆ ಪೂರಕ ವಾಗಿದ್ದು, ವ್ಯವಸ್ಥಿತ ಕಟ್ಟಡ, ನೀರಿನ ವ್ಯವಸ್ಥೆ, ಪ್ರಯೋಗಾಲಯ, ಕಂಪ್ಯೂಟರ್‌ ಶಿಕ್ಷಣ, ಲೈಬ್ರೇರಿ, ಭರತ ನಾಟ್ಯ, ಜಾನಪದ ನೃತ್ಯ, ಯೋಗ, ಚಿತ್ರಕಲೆ, ಯಕ್ಷಗಾನ, ಕರಾಟೆ ತರಬೇತಿ, ಕ್ರೀಡೆಗೆ ಆದ್ಯತೆ ಯಿದ್ದು, ವಿದ್ಯಾರ್ಥಿಗಳಲ್ಲಿ ಶಿಸ್ತು, ನಾಯಕತ್ವ ಗುಣ ಬೆಳೆಸುವ ನಿಟ್ಟಿನಲ್ಲಿ ಸ್ಕೌಟ್ಸ್‌- ಗೈಡ್ಸ್‌, ಶಾಲಾ ವಿದ್ಯಾರ್ಥಿ ಸಂಸತ್ತು, ಇಕೋ ಕ್ಲಬ್‌, ವಿಜ್ಞಾನ ಕ್ಲಬ್‌, ಸಾಹಿತ್ಯ ಕಲಾ ಸಂಘ, ಕೃಷಿ ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳುವ ಮೂಲಕ ವಿದ್ಯಾರ್ಥಿಗಳನ್ನು ರತ್ನವನ್ನಾಗಿಸುವ ಕಾರ್ಯದಲ್ಲಿ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರ ಮಾರ್ಗದರ್ಶನದಲ್ಲಿ ಶಿಕ್ಷಕರು ಕಾರ್ಯ ನಿರ್ವಹಿಸುತ್ತಿದ್ದಾರೆ.

ರಾಜಕೀಯ ಕ್ಷೇತ್ರದ ಭರವಸೆಯ ನಾಯಕ


ಸಾಮಾಜಿಕ ಧಾರ್ಮಿಕ ಕ್ಷೇತ್ರದ ಸಾಧನೆ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರನ್ನು ರಾಜಕೀಯ ಕ್ಷೇತ್ರವನ್ನು ಪ್ರವೇಶಿಸುವಂತೆ ಮಾಡಿತು. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ನಾಯಕತ್ವದಿಂದ ಆಕರ್ಷಿತರಾಗಿ ಅವರ ಕೆಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿ ಜಿಲ್ಲಾ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಯಡಿಯೂರಪ್ಪ ಮರಳಿ ಬಿಜೆಪಿಗೆ ಬಂದಾಗ ಶೆಟ್ಟಿಯವರು ಬಿಜೆಪಿಗೆ ಸೇರ್ಪಡೆಯಾಗಿ ರಾಜ್ಯ ಸಮಿತಿ ಸದಸ್ಯರಾಗಿದ್ದರು. ಬಿ.ಎಸ್‌. ಯಡಿಯೂರಪ್ಪ ಅವರ ನಿಕಟವರ್ತಿಗಳಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವುದರೊಂದಿಗೆ ಅವರ ಹುಟ್ಟಿದ ದಿನವನ್ನು ರವೀಂದ್ರ ಶೆಟ್ಟಿಯವರು ಪ್ರತೀ ವರ್ಷ ವಿನೂತನವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಬಿಜೆಪಿ ಪಕ್ಷದಲ್ಲಿ ಸಕ್ರೀಯರಾಗಿದ್ದುಕೊಂಡು ಎಲ್ಲಾ ಧರ್ಮದ ಜನರೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿರುವ ಶೆಟ್ಟಿಯವರು ಸರಳ, ಸಜ್ಜನ ರಾಜಕಾರಣಿ ಎಂದು ಗುರುತಿಸಿಕೊಂಡಿದ್ದಾರೆ.

Advertisement

ಕರಾವಳಿ ಕರ್ನಾಟಕದ ಸಾಹಿತ್ಯ ಸಾಂಸ್ಕೃತಿಕ ಸಮ್ಮೇಳನ ನಾಡು – ನುಡಿ ವೈಭವದ ರತ್ನೋತ್ಸವ


ವಿದ್ಯಾರ್ಥಿಗಳನ್ನು ಪಠ್ಯದ ಜೊತೆ, ಕನ್ನಡ ಸಾಹಿತ್ಯ, ಸಂಸ್ಕೃತಿ ಬೆಳೆಸುವ ನಿಟ್ಟಿನಲ್ಲಿ ಕರಾವಳಿ ಕರ್ನಾಟಕದ ಸಾಹಿತ್ಯ ಸಮ್ಮೇಳನ ಕನ್ನಡ ನಾಡು – ನುಡಿ ವೈಭವದ ರತ್ನೋತ್ಸವವನ್ನು ಪ್ರತೀ ವರ್ಷ ಆಚರಿಸುವ ಮೂಲಕ ಆಂಗ್ಲ ಮಾಧ್ಯಮ ಶಿಕ್ಷಣ ಸಂಸ್ಥೆಯೊಂದು ಕನ್ನಡದ ನಾಡು ನುಡಿಗಾಗಿ ತೊಡಗಿಸಿಕೊಳ್ಳಬಹುದು ಎಂದು ರವೀಂದ್ರ ಶೆಟ್ಟಿ ತೋರಿಸಿಕೊಟ್ಟವರು. ನಾಡಿನ ಪ್ರಸಿದ್ಧ ಸಾಹಿತಿಗಳು, ಕವಿಗಳು, ಧಾರ್ಮಿಕ, ಸಾಮಾಜಿಕ ಚಿಂತಕರನ್ನು ಒಂದೆಡೆ ಸೇರಿಸಿ ಕನ್ನಡ ಸಾಹಿತ್ಯ, ಸಂಸ್ಕೃತಿ, ಸಾಂಸ್ಕೃತಿಕ ಕಾರ್ಯಕ್ರಮ ಜನಪದ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ಗ್ರಾಮೀಣ ಪ್ರದೇಶದ ಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸುವ ಕಾರ್ಯ ರತ್ನೋತ್ಸವದಿಂದ ನಡೆಯುತ್ತಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಜನರು ಇದೊಂದು ಸರ್ವಧರ್ಮ ಸಮ್ಮೇಳನ ಎಂದು ಅಭಿಪ್ರಾಯ ಪಡುತ್ತಾರೆ.


ಸಮಾರೋಪ ಸಮಾರಂಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರಿಗೆ ಪ್ರತಿಷ್ಠಿತ ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದ್ದು, 2011ರಿಂದ 2019ರವರೆಗೆ ರಥೋತ್ಸವದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿ, ಗುರುಕಿರಣ್‌, ಪದ್ಮಭೂಷಣ ಡಾ| ಬಿ.ಎಂ. ಹೆಗ್ಡೆ, ಕೈಯ್ನಾರ ಕಿಂಇಣ್ಣ ರೈ, ಪಾಲ್ತಾಡಿ ರಾಮಕೃಷ್ಣ ಆಚಾರ್‌, ಪ್ರೊ| ಅಮೃತ ಸೋಮೇಶ್ವರ, ಮನೋಹರ ಪ್ರಸಾದ್‌, ಡಾ| ವಾಮನ ನಂದಾವರ, ಕದ್ರಿ ನವನೀತ ಶೆಟ್ಟಿ, ಕುದ್ರೋಳಿ ಗಣೇಶ್‌ ಪ್ರತಿಷ್ಠಿತ ವಿದ್ಯಾರತ್ನ ಪ್ರಶಸ್ತಿಯನ್ನು ಪಡೆದಿದ್ದಾರೆ. ಸಮ್ಮೇಳನದಲ್ಲಿ ನಾಡಿನ ಗಣ್ಯ ಸಾಹಿತಿಗಳು, ಚಿಂತಕರು, ಸಾಹಿತ್ಯ ಸಂಘಟಕರು ಸಮ್ಮೇಳನಾಧ್ಯಕ್ಷರಾಗಿ ಭಾಗವಹಿಸಿದ್ದು, ಈವರೆಗೆ ಏರ್ಯ ಲಕ್ಷ್ಮೀನಾರಾಯಣ ಆಳ್ವ, ಪ್ರೊ| ಎ.ವಿ. ನಾವಡ, ಹರಿಕೃಷ್ಣ ಪುನರೂರು, ಕೆ.ಟಿ.ಗಟ್ಟಿ , ಡಾ| ತಾಳ್ತಾಜೆ ವಸಂತ ಕುಮಾರ್‌, ಪ್ರೊ| ಅ. ರಾ. ಮಿತ್ರ, ಮಲಾರು ಜಯರಾಮ ರೈ, ನಾ. ಡಿ.ಸೋಜ, ಪ್ರೊ| ಭುವನೇಶ್ವರೀ ಹೆಗಡೆ ಸಮ್ಮೇಳನಾಧ್ಯಕ್ಷರಾಗಿ ಭಾಗವಹಿಸಿದ್ದರು.

ಸಾಮಾಜಿಕ ಕಾರ್ಯದಲ್ಲಿ ಮುಂಚೂಣಿ
ಸಮಾಜದಿಂದ ಪಡೆದದನ್ನು ಸಮಾಜಕ್ಕೆ ಅರ್ಪಿಸುವ ಗುಣ ಹೊಂದಿರುವ ರವೀಂದ್ರ ಶೆಟ್ಟಿ ಆವರು ರೋಟರಿ ಕ್ಲಬ್‌ ದೇರಳಕಟ್ಟೆ ಮಂಗಳೂರು ದ.ಕ. ಇದರ ಅಧ್ಯಕ್ಷರಾಗಿ, ನಿರ್ದೇಶಕರಾಗಿ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ದೀನ ದಲಿತರ ಸೇವೆ ಮಾಡುತ್ತಿರುವ ಶೆಟ್ಟಿ ಅವರು ಶ್ರೀ ಶೃಂಗೇರಿ ಶಾಖಾ ಮಠ, ಕೋಟೆಕಾರು ಮಂಗಳೂರು ಇದರ ಉತ್ಸವ ಸಮಿತಿಯ ಆಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ಸೂರ್ಯ ಚಂದ್ರ ಜೋಡುಕರೆ ಕಂಬಳ ಸಮಿತಿ ಪಂಜಾಲ ತಲಪಾಡಿ ಇದರ ಅಧ್ಯಕ್ಷರಾಗಿ, ಅನೇಕ ಧಾರ್ಮಿಕ ಕೇಂದ್ರ ಸಂಘ ಸಂಸ್ಥೆಗಳ ಪೋಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ರಾಜ್ಯ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಒಕ್ಕೂಟ (ರಿ.) ಬೆಂಗಳೂರು ಇದರ ನಿರ್ದೇಶಕರಾಗಿ. ದ.ಕ. ಮತ್ತು ಉಡುಪಿ ಜಿಲ್ಲಾ ಆಂಗ್ಲ ಮಾಧ್ಯಮ ಶಾಲೆಗಳ ಒಕ್ಕೂಟ (ರಿ.) ಮಂಗಳೂರು ಇದರ ಕಾರ್ಯದರ್ಶಿಯಾಗಿ ರಾಜ್ಯಾದಾದ್ಯಂತ ಖಾಸಗಿ ಶಿಕ್ಷಣ ಸಂಸ್ಥೆಗಳ ಸಮಸ್ಯೆಗೆ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ಕೋವಿಡ್‌-19 ಸಂತ್ರಸ್ತರ ಸೇವೆ


ಕೋವಿಡ್‌ ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಲಾಕ್‌ಡೌನ್‌ ಘೋಷಿಸಿದಾಗ ಮಂಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಜನರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದರು. ಈ ಸಂದರ್ಭದಲ್ಲಿ ರವೀಂದ್ರ ಶೆಟ್ಟಿಯವರು ಪ್ರಥಮ ಬಾರಿಗೆ 20 ಮನೆಗಳಿಗೆ ಆಹಾರ ಕಿಟ್‌ ವಿತರಿಸುವ ಮೂಲಕ ಸೇವಾ ಕಾರ್ಯವನ್ನು ಆರಂಭಿಸಿ ಸೇವಾ ಕಾರ್ಯಕ್ಕೆ ಚಾಲನೆ ನೀಡಿದರು. ಲಾಕ್‌ಡೌನ್‌ ನಡೆದ ಎರಡು ತಿಂಗಳ ಅವಧಿಯಲ್ಲಿ ಸುಮಾರು 1500 ಕುಟುಂಬಗಳಿಗೆ ಯಾವುದೇ ಫಲಾಪೇಕ್ಷೆಯಿಲ್ಲದೆ ಸ್ವಂತ ಖರ್ಚಿನಲ್ಲಿ ಆಹಾರ ಕಿಟ್‌ ವಿತರಿಸಿದರು. ಜೊತೆಗೆ ವಿವಿಧ ಸಂಘ ಸಂಸ್ಥೆಗಳಿಗೆ ಮತ್ತು ಆಶಾ ಕಾರ್ಯಕತೆಯರಿಗೂ ದಿನಸಿ ಸಾಮಾಗ್ರಿಗಳನ್ನು ನೀಡಿರುತ್ತಾರೆ.

ಹರೇಕಳದಲ್ಲಿ ಲಾಕ್‌ಡೌನ್‌ ಸಾಮರಸ್ಯದ ಕೊಂಡಿಯಾದ ಶೆಟ್ಟಿ
ಉಳ್ಳಾಲ ವ್ಯಾಪ್ತಿಯಲ್ಲಿ ಕೋವಿಡ್‌ -19 ಸೋಂಕು ಹೆಚ್ಚಳವಾದಾಗ ತನ್ನ ಹುಟ್ಟೂರು ಆದ ಹರೇಕಳ ಗ್ರಾಮದಲ್ಲೂ ಸೋಂಕು ದೃಢಪಡುತ್ತಿದಂತೆ ಗ್ರಾಮವನ್ನು ಕೋವಿಡ್‌ -19 ಮುಕ್ತವಾಗಿಸುವ ನಿಟ್ಟಿನಲ್ಲಿ ಹರೇಕಳ ಗ್ರಾಮ ಪಂಚಾಯತ್‌ ಆಡಳಿತ, ಗ್ರಾಮಸ್ಥರ ಅಪೇಕ್ಷೆಯಂತೆ ಹರೇಕಳ ಗ್ರಾಮವನ್ನು ಹತ್ತು ದಿನಗಳ ಕಾಲ ಸಾರ್ವಜನಿಕರೇ ಸೇರಿ ಲಾಕ್‌ಡೌನ್‌ ನಡೆಸಿದ್ದರು. ಈ ಸಂದರ್ಭದಲ್ಲಿ ಎಲ್ಲಾಪಕ್ಷಗಳು, ಧಾರ್ಮಿಕ ಸಂಘಟನೆಗಳು ಒಂದೇ ವೇದಿಕೆಯಡಿ ನಿಂತು ಲಾಕ್‌ಡೌನ್‌ ಯಾಶಸ್ವಿಯಾಗಿ ನಿರ್ವಹಿಸಲು ನೇತೃತ್ವ ವಹಿಸಿದವರಲ್ಲಿ ಓರ್ವರಾದ ರವೀಂದ್ರ ಶೆಟ್ಟಿ ಸರ್ವ ಧರ್ಮದ ಜನರ ಕೊಂಡಿಯಾಗಿ ಕಾರ್ಯ ನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರರಾದರು.

ಪರಿಸರ ಪ್ರೇಮಿ


ಬಾಲ್ಯದಿಂದಲೇ ಕೃಷಿ ಕುಟುಂಬದಲ್ಲಿ ಬೆಳೆದ ರವೀಂದ್ರ ಶೆಟ್ಟಿ ಅವರು ಪರಿಸರದ ಬಗ್ಗೆ ಕಾಳಜಿ ಇಟ್ಟುಕೊಂಡವರು. ತನ್ನ ಶಿಕ್ಷಣ ಸಂಸ್ಥೆಯ ವತಿಯಿಂದ ಸಾವಿರಾರು ಗಿಡಗಳನ್ನು ವಿದ್ಯಾರ್ಥಿಗಳ ಮೂಲಕ ನೆಡುವ ಕಾರ್ಯವನ್ನು ನಡೆಸು ತ್ತಿದ್ದಾರೆ. ಕಳೆದ 4 ವರ್ಷಗಳಿಂದ ಪ್ರತೀ ವರ್ಷ 1000 ಗಿಡಗಳನ್ನು ವಿವಿಧ ಶಾಲೆಗಳಿಗೆ ತಮ್ಮ ಸ್ವಂತ ಖರ್ಚಿನಲ್ಲೇ ವಿತರಣೆ ಮಾಡುತ್ತಿದ್ದಾರೆ. ಸ್ವತ್ಛತಾ ಅಭಿಯಾನ, ಸಾಂಕ್ರಾಮಿಕ ರೋಗಗಳ ಬಗ್ಗೆ ಮಾಹಿತಿ ಕಾರ್ಯಾಗಾರ ನಡೆಸುತ್ತಾ ಬಂದಿದ್ದು, ಆ ಮೂಲಕ ಆರೋಗ್ಯ ಪೂರ್ಣ ಸಮಾಜ ನಿರ್ಮಾಣದಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ.

ಸೇವಾ ಮನೋಭಾವ
– ಪ್ರತೀ ವರ್ಷ 18 ವಿದ್ಯಾರ್ಥಿಗಳ ದತ್ತು ಸ್ವೀಕಾರ
– ಆರ್ಥಿಕವಾಗಿ ಹಿಂದುಳಿದ ವಿದ್ಯುತ್‌ ಸಂಪರ್ಕ ರಹಿತ ಕುಟುಂಬಗಳಿಗೆ ಸೋಲಾರ್‌ ದೀಪದ ಕೊಡುಗೆ
– ಪ್ರತೀ ವರ್ಷ ಸುಮಾರು 300 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ಅರ್ಹರಿಗೆ ಕೃತಕ ಕಾಲು ಮತ್ತು ಕನ್ನಡಕ ವಿತರಣೆ
– ಪ್ರತೀ ವರ್ಷ ಸಾರ್ವಜನಿಕರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಅಯೋಜನೆ
– ಪ್ರತೀ ವರ್ಷ ಆರ್ಥಿಕವಾಗಿ ಹಿಂದುಳಿದ 50ಕ್ಕೂ ಹೆಚ್ಚು ಮಕ್ಕಳಿಗೆ ಉಚಿತ ಶಿಕ್ಷಣ
– ಕೋವಿಡ್‌ -19 ಸಂಕಷ್ಟದ ಹಿನ್ನಲೆಯಲ್ಲಿ ತನ್ನ ಶಾಲೆಯಲ್ಲಿ ಕಲಿಯುತ್ತಿರುವ 969 ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ 2500-00ರಂತೆ 24 ಲಕ್ಷ ರೂ. ಕಡಿತಗೊಳಿಸಿ ರಾಜ್ಯದಲ್ಲಿಯೇ ಮಾದರಿ ಎನಿಸಿಕೊಂಡಿದ್ದಾರೆ.
– ಶಾಲಾ ಮಕ್ಕಳಲ್ಲಿ ಸಾವಯವ ಕೃಷಿ ಚಟುವಟಿಕೆಯ ಅರಿವು ಮೂಡಿಸುವ ಕಾರ್ಯ

ರವೀಂದ್ರ ಶೆಟ್ಟಿ ಅವರ ಸಾಧನೆಗೆ ಸಂದ ಪ್ರಶಸ್ತಿಗಳು
– ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ
– ಗಡಿನಾಡ ಧ್ವನಿ ರಾಷ್ಟ್ರೀಯ ಪ್ರಶಸ್ತಿ
– ಬಾಪೂಜಿ ಅಮೃತಗಂಗಾ ಪ್ರಶಸ್ತಿ
– ಸಮಾಜ ರತ್ನಪ್ರಶಸ್ತಿ
– ಮಧುರ ಸಂಗಮ ಪ್ರಶಸ್ತಿ
– ಇಂದಿರಾ ಪ್ರಿಯದರ್ಶಿನಿ ಪ್ರಶಸ್ತಿ
– ನವಕರ್ನಾಟಕ ರತ್ನ ಪ್ರಶಸ್ತಿ
– ಮಹಾತ್ಮ ಗಾಂಧೀಜಿ ರಾಷ್ಟ್ರೀಯ ಪ್ರಶಸ್ತಿ
– ಜ್ಞಾನರತ್ನ ಪ್ರಶಸ್ತಿ
– ಶ್ರೀ ಗಾನಯೋಗಿ ಪಂಡಿತ ಪುಟ್ಟರಾಜ ಗವಾಯಿ ಸದ್ಭಾವನ ಪ್ರಶಸ್ತಿ
– ಕನ್ನಡ ರಾಜ್ಯೋತ್ಸವ ಪ್ರಶಸ್ತಿ
– ಸುಮ ಸೌರಭ ಪ್ರಶಸ್ತಿ
– ಡಾ| ಶಿವರಾಮ ಕಾರಂತ ಸದ್ಭಾವನ ಪ್ರಶಸ್ತಿ
– ಸಾಧನ ಪ್ರಶಸ್ತಿ
– ಸಾಧಕ ರತ್ನ ಪ್ರಶಸ್ತಿ.
ರವೀಂದ್ರ ಶೆಟ್ಟಿಯವರ ಸಾಧನೆಯನ್ನು ಗುರುತಿಸಿ ಇನ್ನೂ ಹಲವಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಗೌರವಿಸಿದೆ.

ಕೆ. ರವೀಂದ್ರ ಶೆಟ್ಟಿಯವರು ಸ್ಥಾಪಿಸಿದ ವಿದ್ಯಾಸಂಸ್ಥೆಗಳು
1991: ರತ್ನ ಟ್ಯಟೋರಿಯಲ್‌ ಕಾಲೇಜು ದೇರಳಕಟ್ಟೆ
1998: ವಿದ್ಯಾರತ್ನ ಪೂರ್ವ – ಪ್ರಾಥಮಿಕ ಶಾಲೆ ದೇರಳಕಟ್ಟೆ, ಮಂಗಳೂರು
2000: ವಿದ್ಯಾರತ್ನ (ಆಂಗ್ಲ ಮಾಧ್ಯಮ) ಪ್ರಾಥಮಿಕ ಶಾಲೆ ದೇರಳಕಟ್ಟೆ ಮಂಗಳೂರು
2005: ವಿದ್ಯಾರತ್ನ (ಆಂಗ್ಲ ಮಾಧ್ಯಮ) ಹಿರಿಯ ಪ್ರಾಥಮಿಕ ಶಾಲೆ ದೇರಳಕಟ್ಟೆ ಮಂಗಳೂರು
2007: ವಿದ್ಯಾರತ್ನ ( ಆಂಗ್ಲ ಮಾಧ್ಯಮ) ಪ್ರೌಢಶಾಲೆ ದೇರಳಕಟ್ಟೆ ಮಂಗಳೂರು

ನಮ್ಮ ಸಂಸ್ಥೆಯ ಸ್ಥಾಪಕಾಧ್ಯಕ್ಷರ ಕನಸಿನ ಕೂಸು ಈ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲೆ ಈ ರೀತಿ ಅಭಿವೃದ್ಧಿ ಹೊಂದಲು ನಮ್ಮ ಶಾಲಾ ಅಧ್ಯಕ್ಷರ ನಿರಂತರ ಪರಿಶ್ರಮ, ಪರಿಸರದ ಜನರ ಸಹಕಾರ ನಮ್ಮ ಶಾಲೆಯ ಮುಖ್ಯೋಪಾಧ್ಯಾ ಯರು, ಶಿಕ್ಷಕರು, ಸಹ ಶಿಕ್ಷಕರು ಮೇಲಾಗಿ ನಮ್ಮ ಶಾಲೆಯ ವಿದ್ಯಾರ್ಥಿಗಳ ಹೆತ್ತವರ ಸಹಕಾರದಿಂದ ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಿಯೂ ಎಲ್ಲರ ಸಹಕಾರದೊಂದಿಗೆ ಈ ಶಿಕ್ಷಣ ಸಂಸ್ಥೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಶ್ರಮಿಸಲಾಗುವುದು.


– ಶ್ರೀಮತಿ ಸೌಮ್ಯ ಆರ್‌. ಶೆಟ್ಟಿ , ಕಾರ್ಯದರ್ಶಿ, ವಿದ್ಯಾರತ್ನ ವಿದ್ಯಾ ಸಂಸ್ಥೆ ದೇರಳಕಟ್ಟೆ

ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಪಠ್ಯ, ಪಠ್ಯೇತರ ಚಟುವಟಿಕೆ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಕೊಡಲು ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರ ಪೂರ್ತಿ ಸಹಕಾರದಿಂದ ಸಾಧ್ಯವಾಗಿದೆ. ನಮ್ಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ನಮ್ಮೆಲ್ಲರಲ್ಲಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳೆಂಬ ಭಾವನೆಯನ್ನು ಮೂಡಿಸಿರುವುದರಿಂದ ನಮ್ಮ ಸಂಸ್ಥೆಯ ಶಿಕ್ಷಣ ಸಂಸ್ಥೆಯ ಸಿಬ್ಬಂದಿಗಳೆಲ್ಲರೂ ವಿದ್ಯಾರತ್ನ ಕುಟುಂಬದ ಸದಸ್ಯರ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದೇವೆ. ಸಂಸ್ಥೆಯ ಆಭಿವೃದ್ಧಿಯಲ್ಲಿ ಶಾಲಾ ವಿದ್ಯಾರ್ಥಿಗಳ ಪೋಷಕರ ಸಹಕಾರ ಆನನ್ಯ.


– ಶ್ರೀಮತಿ ನಯೀಮ್‌ ಹಮೀದ್, ಮುಖ್ಯೋಪಾಧ್ಯಾಯರು, ವಿದ್ಯಾರತ್ನ ಅಂಗ್ಲ ಮಾಧ್ಯಮ ಶಾಲೆ ದೇರಳಕಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next