ಬಸವಕಲ್ಯಾಣ: ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಕಾರು ರ‍್ಯಾಲಿ ವೇಳೆ ಸ್ವ ಪಕ್ಷದ ಕೇಂದ್ರ ಸಚಿವ ಭಗವಂತ ಖೂಬಾ ಮತ್ತು ಸ್ಥಳೀಯ ಶಾಸಕ ಶರಣು ಸಲಗರ ನಡುವೆ ಕಿತ್ತಾಟ ನಡೆದ ಘಟನೆ ಶನಿವಾರ ನಡೆದಿದ್ದು, ಇದರಿಂದ ಕೆಲ ಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಕೇಂದ್ರ ಸಚಿವ ಭಗವಂತ ಖೂಬಾ ಅವರ ನೇತೃತ್ವದಲ್ಲಿ ಕಮಲನಗರ ತಾಲೂಕಿನ ಸಂಗಮ್ ಕ್ರಾಸ್‌ನಿಂದ ಬಸವಕಲ್ಯಾಣವರೆಗೆ ಕಾರು ರ‍್ಯಾಲಿ ಆಯೋಜಿಸಲಾಗಿದ್ದು, ಸಾಯಂಕಾಲ ರ‍್ಯಾಲಿ ನಗರಕ್ಕೆ ಆಗಮಿಸಿದಾಗ ಸಚಿವರು ಮತ್ತು ಶಾಸಕರ ಬೆಂಬಲಿಗರ ಮಧ್ಯೆ ವಾಗ್ವಾದ ನಡೆದಿದೆ ಅಷ್ಟೇ ಅಲ್ಲ ಸಚಿವ ಖೂಬಾ ಮತ್ತು ಶಾಸಕ ಸಲಗರ ನಡುವೆ ಸಹ ಮಾತಿನ ಚಕಮಕಿಯೂ ಆಗಿದೆ.
ಈ ವೇಳೆ ಕೆಲವರು ಕೇಂದ್ರ ಸಚಿವರ ಕಾರು ತಡೆದು ಕಾರಿನ ಮೇಲೆ ದಾಳಿ ನಡೆಸಿದ್ದು, ನೀರಿನ ಬಾಟಲ್ ಎಸೆದು ಮತ್ತು ವೈಫರ್ ಕಿತ್ತು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ನಂತರ ಪೊಲೀಸರು ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದ್ದಾರೆ.
ರ‍್ಯಾಲಿ ನಗರಕ್ಕೆ ಆಗಮಿಸಿದ ನಂತರ ಪ್ರಮುಖ ವೃತ್ತಗಳಲ್ಲಿ ಇಬ್ಬರ ಬೆಂಬಲಿಗರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಶಾಸಕ ಸಲಗರನ್ನು ಬಿಟ್ಟು ಜಾಥಾ ನಡೆಸಲಾಗಿದ್ದು, ವೃತ್ತಗಳ ಬಳಿ ಶಾಸಕರಿಗೆ ಮುಂದೆ ಬರಲು ಅವಕಾಶ ನೀಡಿಲ್ಲ ಎನ್ನುವದು ಶಾಸಕರು, ಅವರ ಬೆಂಬಲಿಗರ ಆಕ್ರೋಶಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಆದರೆ, ಘಟನೆಗೆ ನಿಖರ ಕಾರಣ ಏನು ಎಂದು ಗೊತ್ತಾಗಬೇಕಿದೆ.
ಇದನ್ನೂ ಓದಿ: ಕಾಮನ್‌ವೆಲ್ತ್ ಗೇಮ್ಸ್ ಪದಕ ಸಾಧಕರೊಂದಿಗೆ ಪ್ರಧಾನಿ ಮೋದಿ ಭೇಟಿ
ಘಟನೆ ಹಿನ್ನಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಿಶೋರಬಾಬು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮಹೇಶ ಮೇಘಣ್ಣನವರ, ಡಿಸಿಪಿ ಶೀವಾಂಶು ರಾಜಪುತ ನಗರಕ್ಕೆ ಭೇಟಿ ನೀಡಿ, ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ.