Advertisement

ನಡೆದಾಡುವ ದೇವರಿಗೆ ಭಾವಪೂರ್ಣ ಶ್ರದ್ಧಾಂಜಲಿ

06:51 AM Jan 22, 2019 | Team Udayavani |

ಹೊನ್ನಾಳಿ: ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ಧಗಂಗಾ ಮಠದ ಡಾ| ಶಿವಕುಮಾರ ಸ್ವಾಮೀಜಿ ಶಿವೈಕ್ಯರಾದ ಸುದ್ದಿ ತಿಳಿಯುತ್ತಿದ್ದಂತೆ ಪಟ್ಟಣದ ಜಯಚಾಮರಾಜೇಂದ್ರ ವೃತ್ತದಲ್ಲಿ ಸಾರ್ವಜನಿಕರು, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳು ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಿದವು ಶ್ರೀಗಳು ಲಿಂಗೈಕ್ಯರಾದ ಸುದ್ದಿ ಹಬ್ಬುತ್ತಿದ್ದಂತೆ ಇಡೀ ಪಟ್ಟಣದಲ್ಲಿ ನೀರವ ಮೌನ ಆವರಿಸಿತು.

Advertisement

ಸಾರ್ವಜನಿಕರು ಸ್ವಾಮಿಜಿಯವರ ಶಿಕ್ಷಣ, ವಸತಿ ಹಾಗೂ ಅನ್ನದಾಸೋಹದ ಕ್ರಾಂತಿಯನ್ನು ಸ್ಮರಿಸಿದರು. ಪ್ರತಿನಿತ್ಯ ಸಿದ್ದಗಂಗಾ ಮಠದಲ್ಲಿ 10 ಸಾವಿರ ವಿದ್ಯಾರ್ಥಿಗಳ ಅನ್ನ ದಾಸೋಹ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಟ್ಟಣದ ಅನ್ನಪೂರ್ಣೇಶ್ವರಿ ಖಾನಾವಳಿಯಲ್ಲಿ ಸೋಮವಾರ ಇಡೀ ದಿನ ಉಚಿತ ಊಟದ ವ್ಯವಸ್ಥೆಯನ್ನು ಖಾನಾವಳಿ ಮಾಲೀಕ ಕಾಶಿನಾಥ್‌ ಮಾಡಿದ್ದರು.
 
ಸಂತಾಪ: ಹಿರೇಕಲ್ಮಠದ ಡಾ| ಒಡೆಯರ್‌ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ, ಶಾಸಕ ಎಂ.ಪಿ. ರೇಣುಕಾಚಾರ್ಯ, ತಾ.ಪಂ ಅಧ್ಯಕ್ಷೆ ಚಂದ್ರಮ್ಮ, ಜಿ.ಪಂ ಸದಸ್ಯ ಎಂ.ಆರ್‌. ಮಹೇಶ್‌, ತಹಸೀಲ್ದಾರ್‌ ತುಷಾರ್‌ ಬಿ ಹೊಸೂರ, ತಾ.ಪಂ.ಇಒ ಕೆ.ಸಿ. ಮಲ್ಲಿಕಾರ್ಜುನ್‌, ಪತ್ರಕರ್ತರಾದ ಶ್ರೀನಿವಾಸ್‌, ವಿಜಯಾನಂದಸ್ವಾಮಿ, ಎನ್‌.ಕೆ.ಆಂಜನೇಯ, ಎಚ್‌.ಕೆ.ಮಲ್ಲೇಶ್‌, ಮಾಸಡಿ ಅರುಣ್‌ಕುಮಾರ್‌, ಮುಖಂಡರಾದ ಕಾಯಿ ಬಸವರಾಜು, ಪಲ್ಲವಿ ರಾಜು, ಪ್ರಶಾಂತ ಸಂತಾಪ ಸೂಚಿಸಿದ್ದಾರೆ.

ಕಾಯಕ ಯೋಗಿಗೆ ನುಡಿನಮನ 
ಬಸವಾದಿ ಶರಣರ ತತ್ವಗಳನ್ನು ವಾಸ್ತವದಲ್ಲಿ ಅನುಷ್ಠಾನಗೊಳಿಸಿದವರು, ತ್ರಿವಿಧ ದಾಸೋಹ ಮೂರ್ತಿ, ರಾಜ್ಯ ಕಂಡ ಅಪರೂಪದ ಸ್ವಾಮೀಜಿ. ಶ್ರೀಗಳ ಅಗಲಿಕೆಯಿಂದ ಧಾರ್ಮಿಕ ಕ್ಷೇತ್ರಕ್ಕಷ್ಟೇ ಅಲ್ಲ, ಒಟ್ಟಾರೆ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.
ಸಿದ್ಧರಾಮೇಶ್ವರ ಶಿವಾಚಾರ್ಯ ಶ್ರೀ, ವೃಷಭಪುರಿ ಸಂಸ್ಥಾನ, ನಂದಿಗುಡಿ.

ಜಾತಿ, ಮತ, ಪಂಥ, ಧರ್ಮ, ಪ್ರಾಂತ್ಯದ ಎಲ್ಲೆ ಮೀರಿ ತ್ರಿವಿಧ ದಾಸೋಹ ಮಾಡಿದವರು. ನಾಡಿನ ಲಕ್ಷಾಂತರ ಬಡ ಮಕ್ಕಳು ಅವರಿಂದ ಅಕ್ಷರ, ಅನ್ನ, ಆಶ್ರಯ ಪಡೆದು ಬದುಕನ್ನು ಕಟ್ಟಿಕೊಂಡರು. ಒಬ್ಬ ಧರ್ಮಾಧಿಕಾರಿ ಹೇಗಿರಬೇಕೆಂದು ಸಮಾಜಕ್ಕೆ ತೋರಿಸಿಕೊಟ್ಟ ಡಾ| ಶಿವಕುಮಾರ ಶ್ರೀಗಳು ನಿಜ ಅರ್ಥದಲ್ಲಿ ಬಸವಣ್ಣರ ತತ್ವ ಪಾಲಕರಾಗಿದ್ದರು. 
ಫಾ| ಅಂತೋನಿ ಪೀಟರ್‌, ಆರೋಗ್ಯ ಮಾತೆ ಚರ್ಚ್‌, ಹರಿಹರ.

ಶ್ರೀಗಳು ನಾಡನ್ನು ಬೆಳಗಿದ ಸರ್ವಶ್ರೇಷ್ಠ ಸಂತರಾಗಿದ್ದರು. ಬಸವಣ್ಣರ ತತ್ವ ಪಾಲಕರಾಗಿದ್ದರು. ತ್ರಿವಿಧ ದಾಸೋಹ ಅವರ ಮಹತ್ತರ ಕೊಡುಗೆ. ಅವರ ಅಗಲಿಕೆ ನಾಡಿನ ಧಾರ್ಮಿಕ, ಅಧ್ಯಾತ್ಮಿಕ ಕ್ಷೇತ್ರಕ್ಕೆ ಅಪಾರ ನಷ್ಟವನ್ನುಂಟು ಮಾಡಿದೆ. 
ಪ್ರಸನ್ನಾನಂದ ಶ್ರೀ, ಮಹರ್ಷಿ ವಾಲ್ಮೀಕಿ ಗುರುಪೀಠ, ರಾಜನಹಳ್ಳಿ

Advertisement

ಕಾಯಕ ಮತ್ತು ದಾಸೋಹ ತತ್ವಗಳನ್ನು ಅನುಕ್ಷಣವೂ ಬಿಡದೆ ಮರಣದಲ್ಲೂ ಮಾನವೀಯತೆಯ, ಅಂತಃಕರಣದ ಸಂದೇಶ ನೀಡಿ ಭಕ್ತ ಸಮೂಹದಿಂದ ಲೌಕಿಕವಾಗಿ ಅಗಲಿ ಪರಮಾತ್ಮನಲ್ಲಿ ಐಕ್ಯವಾದ ನಡೆದಾಡುವ ದೇವರು ಕಾಯಕಯೋಗಿಗಳು, ತ್ರಿವಿಧ ದಾಸೋಹಿಗಳು. ಅವರ ದೈವ ಚೈತನ್ಯದ ವ್ಯಕ್ತಿತ್ವ ನಮ್ಮ ಜೊತೆ ಸದಾ ಹೆಜ್ಜೆ ಹಾಕುತ್ತಿರುತ್ತದೆ. ಶ್ರೀಗಳ ಜಾತ್ಯತೀತ, ಧರ್ಮಾತೀತ ಸೇವೆಯು, ಭಕ್ತ ಸಮೂಹಕ್ಕೆ ದಾರಿದೀಪವಾಗಿದೆ. ನಿರಂಜನಾನಂದಪುರಿ ಶ್ರೀ, ಕಾಗಿನೆಲೆ ಕನಕ ಗುರುಪೀಠ.

ಶ್ರೀಗಳು ಜನಪರ ಧೋರಣೆ, ಸಮಾಜಮುಖೀ ಚಿಂತನೆ ಉಳ್ಳವರಾಗಿದ್ದರು. ಉಳ್ಳವರಿಂದ ಪಡೆದು ಬಡವರ ಹಸಿವನ್ನು ನೀಗಿಸಿದರು. ಶ್ರೀಗಳು ಇತರೆಲ್ಲಾ ಮಠಗಳಿಗೂ ಆದರ್ಶಪ್ರಾಯವಾಗಿದ್ದರು. ಅವರ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನ ಸರ್ವರಿಗೂ ಮಾದರಿಯಾಗಿದೆ. 
 ವೇಮನಾನಂದ ಶ್ರೀ, ವೇಮನಯೋಗಿ ಗುರುಪೀಠ, ಹೊಸಹಳ್ಳಿ. 

Advertisement

Udayavani is now on Telegram. Click here to join our channel and stay updated with the latest news.

Next