ಬದುಕು ಮುಗಿದೇ ಹೋಯಿತು ಅನ್ನುವಾಗ ಪವಾಡ ನಡೆದು ಜೀವ ಉಳಿದರೆ, ಮನಸ್ಸಿಗೆ ಖುಷಿ ಯಾಗುತ್ತದೆ. ದಿನಗಟ್ಟಲೆ ನಿಶ್ಚಲವಾಗಿ ಮಲಗಿದ್ದವನು ನಿಧಾನಕ್ಕೆ ಎದ್ದು ಕೂತರೆ, ಆ ಸಂತೋಷಕ್ಕೆ ಆನಂದಬಾಷ್ಪ ಸುರಿಯುತ್ತದೆ. ಅಂಥದೊಂದು ಸ್ಟೋರಿ ಇಲ್ಲಿದೆ. ಸ್ಟ್ರೋಕ್, ಹಾರ್ಟ್ ಅಟ್ಯಾಕ್ ಮತ್ತು ಅಪರೂಪದ ಕಾಯಿಲೆಗೆ ತುತ್ತಾಗಿದ್ದ ಆದಿತ್ಯ ವಶಿಷ್ಟ ಎಂಬ ಬಡ ಕುಟುಂಬದ ಯುವಕ, ಕೇವಲ 8 ತಿಂಗಳಲ್ಲಿ ಅದರಿಂದ ಪಾರಾಗಿ, ಜಿಮ್ ಆರಂಭಿಸುವ ಮಟ್ಟಕ್ಕೆ ಬೆಳೆದ ಎಂಬುದು ಒನ್‌ಲೈನ್ ಸ್ಟೋರಿ. ಉಳಿದ ವಿವರಗಳು ಆದಿತ್ಯನ ಮಾತುಗಳಲ್ಲೇ ಇವೆ. ಓದಿಕೊಳ್ಳಿ:
ರಾಜಸ್ಥಾನ ಮೂಲದ ನನ್ನ ಹೆತ್ತವರು, ಉದ್ಯೋಗ ಹುಡುಕಿಕೊಂಡು ದಿಲ್ಲಿಗೆ ಬಂದರಂತೆ. ಅಲ್ಲಿ, ಮಧ್ಯಮ ವರ್ಗದವರಿದ್ದ ಬಾಡಿಗೆ ಮನೆಯಲ್ಲಿ ನಮ್ಮ ವಾಸ. ನಮ್ಮ ತಂದೆ, ಬೆಳಗ್ಗೆ ಐದು ಗಂಟೆಗೇ ಎದ್ದು ಐದಾರು ಪ್ಲಾಸ್ಟ್ ಗಳಲ್ಲಿ ಟೀ ತುಂಬಿಸಿಕೊಂಡು ಸಮೀಪದ ಮಾರ್ಕೆಟ್ ಪ್ರದೇಶದಲ್ಲಿ ಅದನ್ನು ಮಾರುತ್ತಿದ್ದರು. ಆ ಸಂಪಾದ ನೆಯಿಂದಲೇ ಮನೆ ನಡೆಯುತ್ತಿತ್ತು.
ನಾನು, 24ನೇ ವಯಸ್ಸಿಗೆ ಮಾಸ್ಟರ್ ಡಿಗ್ರಿ ಮುಗಿಸಿ, ಒಂದು ಕೆಲಸ ಹಿಡಿದು, ಅದೇ ವರ್ಷ ಮದುವೆಯಾದೆ. ಲೈಫ್ ಈಸ್ ಬ್ಯೂಟಿಫುಲ್ ಎಂದು ನಾವು ಸಂಭ್ರಮಿಸುತ್ತಿದ್ದಾಗಲೇ, 2018ರಲ್ಲಿ ಅದೊಂದು ದಿನ ಜ್ವರ-ತಲೆನೋವು ಬಂತು. ಇಂಜೆಕ್ಷನ್- ಮಾತ್ರೆ ಕೊಟ್ಟ ವೈದ್ಯರು, ಗಾಬರಿಗೆ ಕಾರಣ ವಿಲ್ಲ ಅಂದರು. ಮರುದಿನ ಬೆಳಗ್ಗೆ ಬ್ರಶ್ ಮಾಡುತ್ತಿದ್ದಾಗಲೇ, ಮುಖದ ಬಲಭಾಗ ಒಂದೆಡೆಗೆ ತಿರುಚಿಕೊಂಡಿತು. ಗಾಬರಿಯಿಂದಲೇ ಮನೆಯವರಿಗೆ ವಿಷಯ ತಿಳಿಸಿದೆ. ತತ್‌ಕ್ಷಣ ನನ್ನನ್ನು ಶಾಲಿಮಾರ್ ಭಾಗ್‌ನಲ್ಲಿರುವ ಫೋರ್ಟಿಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಸ್ಟ್ರೋಕ್‌ನ ತೀವ್ರತೆಗೆ ನನ್ನ ದೇಹದ ಬಲಭಾಗ ಸಂಪೂ ರ್ಣವಾಗಿ ನಿಷ್ಕ್ರಿಯಗೊಂಡಿತ್ತು. ನಾನು ಮಂಪರು ಕವಿ ದಂಥ ಸ್ಥಿತಿಯಲ್ಲಿ ನಿಶ್ಚೇಷ್ಟಿತ ನಾಗಿ ಮಲಗಿದ್ದೆ . ಚಿಕಿತ್ಸೆಯ ನೇತೃತ್ವ ವಹಿಸಿದ್ದ ತಜ್ಞ ವೈದ್ಯ ಡಾ| ಜಗದೀಪ್ ರಾಯ್ ಹೇಳಿದರಂತೆ: ಇದು 10 ಸಾವಿರದಲ್ಲಿ ಒಬ್ಬರಿಗೆ ಬರುವ ಕಾಯಿಲೆ. ವೈದ್ಯಕೀಯ ಭಾಷೆಯಲ್ಲಿ ಇದನ್ನು Guillain barre syndrome ಅನ್ನುತ್ತಾರೆ. ಇದು ಒಂದು ನರರೋಗ. ನರದ ತುದಿಗಳು ವೈರಲ್ ಇನ್‌ಫೆಕ್ಷನ್‌ಗೆ ಒಳಗಾಗಿ ಜೋಮು ಹಿಡಿಯುತ್ತವೆ. ಜತೆಗೆ ಮೆದುಳು ಮತ್ತು ಬೆನ್ನುಹುರಿಯು ದೇಹದ ಸ್ನಾಯುಗಳಿಗೆ ಸಂಕೇತಗಳನ್ನು ರವಾನಿಸುವುದಿಲ್ಲ. ಇದರಿಂದ ಸ್ನಾಯು ದೌರ್ಬಲ್ಯ ಉಂಟಾಗುತ್ತದೆ. ವಿಶೇಷವಾಗಿ ದೇಹದ ಕೆಳಗಿನ ಭಾಗದಲ್ಲಿ ದೌರ್ಬಲ್ಯ ಕಾಣಿ ಸಿಕೊಳ್ಳುತ್ತದೆ. ಈಗ ಆಗಿರುವುದೂ ಅದೇ. ಚಿಕಿತ್ಸೆಗೆ ದುಬಾರಿ ಹಣ ಬೇಕಾಗುತ್ತದೆ!- ಡಾಕ್ಟರ್ ಮಾತನ್ನು ಅಷ್ಟಕ್ಕೇ ತಡೆದ ನನ್ನ ತಂದೆ ತತ್‌ಕ್ಷಣ ಹೇಳಿ ದರು: ಎಷ್ಟಾದ್ರೂ ಖರ್ಚಾಗ್ಲಿ ಡಾಕ್ಟ್ರೇ… ನನಗೆ ನನ್ನ ಮಗ ಬೇಕು..! ಅಪ್ಪನ ಪ್ರೀತಿಗೆ ಮಿಗಿಲುಂಟೆ? ಅವತ್ತೇ ಮಧ್ಯರಾತ್ರಿ ನನಗೆ ಚಿಕಿತ್ಸೆ ಶುರುವಾಯಿತು. ಅವತ್ತಿಗೆ ಆಸ್ಪತ್ರೆ ಸೇರಿ ಐದು ದಿನಗಳು ಕಳೆದಿದ್ದವು. ನಾನು ಉಸಿರಾಡುತ್ತಿದ್ದೆ ಮತ್ತು ಕಣ್ಣು ಹೊರಳಿಸುತ್ತಿದ್ದೆ. ದಿನವೂ ದ್ರವಾಹಾರ.
ಅದೊಮ್ಮೆ ರೌಂಡ್ಸ್ ಗೆ ಬಂದ ವೈದ್ಯರು-“ನನ್ನ ಬೆರಳನ್ನು ಗಟ್ಟಿಯಾಗಿ ಹಿಡ್ಕೊ’ ಅಂದರು. ಅರ್ಧ ಗಂಟೆ ಪ್ರಯತ್ನಿಸಿದರೂ ಅವರ ಕೈ ಹಿಡಿಯುವುದಿರಲಿ, ನನ್ನ ಕೈಬೆರಳನ್ನು ನೆಟ್ಟಗೆ ಚಾಚಲೂ ಆಗಲಿಲ್ಲ. ಓಹ್, ಮುಗೀತು ನನ್ನ ಕಥೆ ಅನ್ನಿಸಿದ್ದೇ ಆಗ. ನಾನು ಅಳತೊಡಗಿದೆ. ಆಗ ವೈದ್ಯರು ನನ್ನ ಬಳಿ ಬಂದು-“ನಿನ್ನ ವಿಲ್ ಪವರ್ ಮೇಲೆ ಎಲ್ಲ ನಿಂತಿದೆ.’ ಎಂದರು. ಅವತ್ತಿಂದಲೇ ಕಾಲು-ಕೈಗಳನ್ನು ಅಲುಗಾಡಿಸಲು ಕ್ಷಣಕ್ಷಣವೂ ಪ್ರಯತ್ನಿಸಿದೆ. ಎರಡು ದಿನಗಳ ಸತತ ಪ್ರಯತ್ನದ ಅನಂತರ ಬೆರಳನ್ನು ಚಾಚಲು ಸಾಧ್ಯವಾಯಿತು. ಅದನ್ನು ಕಂಡ ಬಂಧುಗಳು ಓಡಿಹೋಗಿ ವೈದ್ಯರನ್ನು ಕರೆ ತಂದು, “ದೇಹದಲ್ಲಿ ಚಲನೆ ಶುರುವಾಗಿದೆ ನೋಡಿ ಸಾರ್’ ಎಂದರು. ಈ ದಿಢೀರ್ ಖುಷಿಯನ್ನು ತಡೆದುಕೊಳ್ಳುವಂಥ ಶಕ್ತಿ ಕೂಡ ನನಗಿರಲಿಲ್ಲ. ಪರಿಣಾಮ, ಮರುದಿನವೇ ಲಘು ಹೃದಯಾಘಾತ ಆಗಿಬಿಟ್ಟಿತು!
ಈ ವೇಳೆ ಥತ್, ನನ್ನದೂ ಒಂದು ಬದುಕಾ? ಹೀಗೆಲ್ಲಾ ಒದ್ದಾಡಿ ಬದುಕಬೇಕಾ? ಅನ್ನಿಸಿಬಿಟ್ಟಿತು. ಅದೇ ವೇಳೆಗೆ ನನ್ನ ಹೆಂಡತಿಯ ಮುದ್ದುಮುಖ ಕಣ್ಮುಂದೆ ಬಂತು. ಮರುದಿನ ಅಳುತ್ತಲೇ- “ನನ್ನನ್ನು ಮರೆತು ಬಿಡು. ನಿಮ್ಮ ಮನೆಗೆ ಹೋಗಿ ನಿನ್ನಿಷ್ಟದಂತೆ ಬದುಕು, ನನ್ನನ್ನು ಕ್ಷಮಿಸಿಬಿಡು’ ಎಂದೆಲ್ಲ ಬಡಬಡಿಸಿದೆ. ಆಕೆ, ಮಮತೆಯಿಂದ ನನ್ನ ಹಣೆ ನೇವರಿಸಿ-“ಎಲ್ಲ ಸರಿ ಹೋಗುತ್ತೆ, ಜಾಸ್ತಿ ಯೋಚನೆ ಮಾಡಬೇಡಿ. ನಾವೆಲ್ಲರೂ ಸೇರಿ ನಿಮ್ಮನ್ನು ಉಳಿಸಿಕೊಳೆ¤àವೆ’ ಎಂದಳು.
ಫಿಸಿಯೋಥೆರಪಿಯ ಅನಂತರ ಇಷ್ಟಿಷ್ಟೇ ಚೇತರಿ ಸಿಕೊಂಡೆ. ಗೋಡೆಗೆ ಒರಗಿ ಕೂರಲು ಸಾಧ್ಯವಾಯಿತು. ಕಡೆಗೊಮ್ಮೆ ವೈದ್ಯರ ಅನುಮತಿ ಪಡೆದು ಮನೆಗೆ ಬಂದೆ. ಮನೆಯಲ್ಲಿ ನನ್ನನ್ನು ವಿಪರೀತ ಪ್ರೀತಿಸುತ್ತಿದ್ದ ಅಜ್ಜಿ ಯಿದ್ದಳು. ಆಕೆಗೆ ಕ್ಯಾನ್ಸರ್ ಇತ್ತು. ನಾನು ಮನೆಗೆ ಹೋದಾಗ ಹೆಚ್ಚು ಖುಷಿಪಟ್ಟದ್ದು ಆಕೆಯೇ. ಅವತ್ತು ರಾತ್ರಿ 9 ಗಂಟೆಯ ತನಕ ಮಾತಾಡಿದವಳು, ಮರುದಿನ ಬೆಳಗ್ಗೆ 6 ಗಂಟೆಗೆ ಜೀವ ಬಿಟ್ಟಳು. ಜೀವನ ಎಷ್ಟು ಕ್ಷಣಿಕ ಎಂದು ಅರ್ಥವಾದ ಕ್ಷಣ ಅದು!
ಹಾರ್ಟ್ ಅಟ್ಯಾಕ್, ಸ್ಟ್ರೋಕ್, ಆಪರೇಶನ್- ಇವನ್ನೆಲ್ಲ ಒಟ್ಟೊಟ್ಟಿಗೇ ನೋಡಿಬಿಟ್ಟಿದ್ದೆ. ಹೆಲ್ತ್ ಇನ್ಶೂರೆನ್ಸ್ ಇದ್ದ ಕಾರಣಕ್ಕೆ ಆಸ್ಪತ್ರೆಯ ವೆಚ್ಚ ಭರಿಸಲು ಸುಲಭ ವಾಯಿತು. ಪ್ರತೀಕ್ಷಣವನ್ನೂ ಖುಷಿಯಿಂದ ಕಳೆಯ ಬೇಕು ಎಂದು ನನಗೆ ನಾನೇ ಹೇಳಿಕೊಂಡೆ. ಫಿಟೆ°ಸ್ ಬಗ್ಗೆ ಮೊದಲಿಂದಲೂ ನನಗೆ ಒಲವಿತ್ತು. ನಾನೇ ಫಿಟೆ°ಸ್ ಸೆಂಟರ್ ಆರಂಭಿಸಿ ಬೇಕು ಅಂದು ಕೊಂಡೆ. ನನ್ನ ಬದುಕಿನ ಕಥೆಯನ್ನು ಸೋಶಿಯಲ್ ಮೀಡಿಯಾ ದಲ್ಲಿ ವೀಡಿಯೋ ಮೂಲಕ ಹಂಚಿಕೊಂಡೆ. ನನ್ನ ಕಷ್ಟ ಮತ್ತು ಪರಿಶ್ರಮವನ್ನು ಲಕ್ಷಾಂತರ ಜನ ಗುರುತಿಸಿದರು, ಬೆನ್ನು ತಟ್ಟಿದರು. ಈಗ ಊಟ-ಬಟ್ಟೆಗೆ ಕೊರತೆಯಿಲ್ಲ ಅನ್ನುವಷ್ಟು ಸಂಪಾದನೆಯಿದೆ. ಮುದ್ದು ಕಂದನ ಪ್ರವೇಶದೊಂದಿಗೆ ಬದುಕಲ್ಲಿ ಖುಷಿ ಹೆಚ್ಚಾಗಿದೆ…’ ಎಂದು ನಗುತ್ತಾ ತಮ್ಮ ಯಶೋಗಾಥೆಗೆ ಫುಲ್ ಸ್ಟಾಪ್ ಹಾಕುತ್ತಾರೆ ಆದಿತ್ಯ.
ವಿಧಿ ಎಂಬ ವಿಧಿಗೇ ಸಡ್ಡು ಹೊಡೆದು ಬಂದ ಆದಿತ್ಯನಿಗೆ ಅಭಿನಂದನೆ ಹೇಳಲು-
adityaadison@gmail.com
– ಎ.ಆರ್.ಮಣಿಕಾಂತ್