ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ವೈಜ್ಞಾನಿಕ ಪ್ರೇಕ್ಷಣೀಯ ಹಾಗೂ ಸಂಶೋಧನಾ ಕೇಂದ್ರವಾದ ಜವಾಹರ್‌ಲಾಲ್ ನೆಹರು ತಾರಾಲಯಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಡಿ ಸ್ಮಾರ್ಟ್ ಟಚ್ ನೀಡಲಾಗುತ್ತಿದೆ.
ನಗರದ ಹೈಗ್ರೌಂಡ್ಸ್‌ನ ಚೌಡಯ್ಯ ರಸ್ತೆಯಲ್ಲಿರುವ ನೆಹರು ತಾರಾಲಯದಲ್ಲಿ ಅನೇಕ ದಶಕಗಳಿಂದ ಸಂಶೋಧನಾ ತಜ್ಞರು ಹಾಗೂ ವಿದ್ಯಾರ್ಥಿಗಳು ಆಗಮಿಸಿ, ವಿಜ್ಞಾನ ಮತ್ತು ಬಾಹ್ಯಕಾಶಕ್ಕೆ ಸಂಬಂಧಪಟ್ಟಂತಹ ವಿಶೇಷ ಮಾಹಿತಿಯನ್ನು ಪಡೆಯುತ್ತಾರೆ. ಆದ್ದರಿಂದ ಮಾಹಿತಿಗಾಗಿ ಆಗಮಿಸುವವರಿಗೆ ಸಂಶೋಧನಾ ಅಭ್ಯರ್ಥಿಗಳಿಗೆ ಹಾಗೂ ವಿಜ್ಞಾನ ವಿದ್ಯಾರ್ಥಿಗಳಿಗೆ ಸುಸಜ್ಜಿತ ವ್ಯವಸ್ಥೆಯನ್ನು ಕಲ್ಪಿಸುವ ನಿಟ್ಟಿನಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್(ಐಜಿಬಿಸಿ) ಮಾರ್ಗಸೂಚಿಯಂತೆ ನೂತನ ಬೃಹತ್ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ.
ಈ ನೂತನ ಕಟ್ಟಡವನ್ನು ಹಿಂದೆ ಇದ್ದ ತಾರಾಲ ಯದ ಕಟ್ಟಡದ ಹಿಂಭಾಗದಲ್ಲಿನ 6,772.95 ಚ.ಅಡಿ ಪ್ರದೇಶದಲ್ಲಿ ನಿರ್ಮಿಸಲಾಗುತ್ತಿದೆ. ಒಟ್ಟು 42 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿ ರುವ ಮೂರು ಅಂತಸ್ತಿನ ಬೃಹತ್ ಕಟ್ಟಡದ ಕಾಮಗಾರಿಯನ್ನು 2021ರ ಜುಲೈನಲ್ಲಿ ಪ್ರಾರಂಭಿಸಲಾಗಿದ್ದು, 2022ರ ಮೇ ತಿಂಗಳಿಗೆ ಕಾಮಗಾರಿ ಸಂಪೂರ್ಣವಾಗಬೇಕಿತ್ತು. ಆದರೆ, ಕೊರೊನಾ, ಮಳೆ, ಚುನಾವಣೆ ಹೀಗೆ ನಾನಾ ಕಾರಣಗಳಿಂದಾಗಿ ಕಾಮಗಾರಿ ವಿಳಂಬವಾಗಿದ್ದು, ಮುಂಬರುವ ಜು. 23ಕ್ಕೆ ಕೆಲಸ ಪೂರ್ಣಗೊಳ್ಳಲಿದೆ ಎಂದು ಸ್ಮಾರ್ಟ್ ಸಿಟಿ ಯೋಜನೆಯ ಜಂಟಿ ವ್ಯವಸ್ಥಾಪಕ ನಿರ್ದೇಶಕಿ ಸುಶೀಲಮ್ಮ ತಿಳಿಸುತ್ತಾರೆ.
ನೆಲ ಅಂತಸ್ತು ಸೇರಿದಂತೆ ನಾಲ್ಕು ಮಹಡಿಯ ಕಟ್ಟಡವನ್ನು ಹಳೆಯ ತಾರಾಲಯದ ಮಾದರಿ ಯಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ನಿರ್ಮಿಸಲಾಗಿದೆ. ಇಲ್ಲಿ ವಿಶೇಷವಾಗಿ ಹೆಚ್ಚಿನ ಆಸನಗಳನ್ನು ಹೊಂದಿರುವ ಕೊಠಡಿಗಳನ್ನು ಹೊಂದಿದ್ದು, ನೈಸರ್ಗಿಕ ಹವಾನಿಯಂತ್ರಣವನ್ನು ಅಳವಡಿಸಲಾಗಿದೆ. ಕಡಿಮೆ ವಿದ್ಯುತ್ ಬಳಸುವಂತೆ ಆಧುನಿಕ ವೆಂಟಿಲೇಟರ್, ನೀರಿನ ಮರುಬಳಕೆ ಘಟಕಗಳನ್ನು ಹೊಂದಿದ್ದು, ಇಂಡಿಯನ್ ಗ್ರೀನ್ ಬಿಲ್ಡಿಂಗ್ ಕೌನ್ಸಿಲ್-ಕರ್ನಾಟಕ ಚಾಪ್ಟರ್ ಈ ಕಟ್ಟಡಕ್ಕೆ “ಪ್ಲಾಟಿನಂ’ ರೇಟಿಂಗ್ ನೀಡಲಾಗಿದೆ ಎಂದು ಹೇಳಿದರು.
ತಾರಾಲಯದಲ್ಲಿ ಮುಖ್ಯವಾಗಿ ಪ್ರೌಢ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ವರ್ಷವಿಡೀ ವಾರಾಂತ್ಯ ದಲ್ಲಿ ವಿಜ್ಞಾನಕ್ಕೆ ಸಂಬಂಧಿತ ಕಾರ್ಯಕ್ರಮ, ಪದವಿ ವಿದ್ಯಾರ್ಥಿಗಳಿಗೆ ಮೂರು ವರ್ಷಗಳಾವಧಿಯ ಭೌತಶಾಸ್ತ್ರ ಸಂಬಂಧಿತ ಕಾರ್ಯಕ್ರಮ ಮತ್ತು 3-5 ತರಗತಿ ಮಕ್ಕಳಿಗೆ ವಿಜ್ಞಾನ ಶಿಕ್ಷಣ (ಸೀಡ್) ಎಂಬ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾ ಗುತ್ತಿದೆ ಎಂದು ತಿಳಿಸುತ್ತಾರೆ.
ಈ ನೂತನ ಕಟ್ಟಡದ ವಿಶೇಷತೆಗಳು:
600 ಆಸನಗಳುಳ್ಳ ಬೃಹತ್ ಸಭಾಂಗಣ
50 ಆಸನಗಳ ಸಾಮರ್ಥ್ಯವುಳ್ಳ ನಾಲ್ಕು ಉಪನ್ಯಾಸ ಸಭಾಂಗಣಗಳು
100 ಆಸನ ಸಾಮರ್ಥ್ಯವುಳ್ಳ ಒಂದು ಉಪನ್ಯಾಸ ಸಭಾಂಗಣ ಹವ್ಯಾಸಿ ವಿಜ್ಞಾನಿಗಳಿಗೆ ಕೊಠಡಿ
60 ಕಾರುಗಳಿಗೆ ಪಾರ್ಕಿಂಗ್
20 ಕೆಎಲ್‌ಡಿ ಸಾಮರ್ಥ್ಯದ ಕೊಳಚೆ ನೀರು ಶುದ್ಧೀಕರಣ ಘಟಕ
ಸ್ಮಾರ್ಟ್‌ಸಿಟಿ ಯೋಜನೆಯಡಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿ ಈ ಕಟ್ಟಡ ನಿರ್ಮಿಸಲಾಗುತ್ತಿದೆ. ವಿವಿಧ ಕಾರಣಾಂತರಗಳಿಂದಾಗಿ ಕೆಲಸ ತಡವಾಗಿದ್ದು, ಈಗಾಗಲೇ ಶೇ.75-80ರಷ್ಟು ಕಾಮಗಾರಿ ಪೂರ್ಣಗೊಂಡಿದೆ. ಮುಂದಿನ ಜುಲೈನೊಳಗೆ ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ. –
ಸುಶೀಲಮ್ಮ, ಸ್ಮಾರ್ಟ್‌ಸಿಟಿ ಯೋಜನೆ ಜಂಟಿ ವ್ಯವಸ್ಥಾಪಕ ನಿರ್ದೇಶಕಿ
– ಭಾರತಿ ಸಜ್ಜನ್