Advertisement

“ಒಂದು ಭಾರತ ಒಂದು ಸ್ಮಾರ್ಟ್‌ ಗ್ರಿಡ್‌’ಯೋಜನೆ ಜಾರಿಗೆ ಮನವಿ

07:13 AM Jun 29, 2019 | Team Udayavani |

ಬೆಂಗಳೂರು: ದೇಶದಲ್ಲಿ ಇಂಧನ ವ್ಯವಸ್ಥೆಯಲ್ಲಿ ಸುಸ್ಥಿರತೆ ಕಾಯ್ದುಕೊಳ್ಳಲು “ಒಂದು ಭಾರತ ಒಂದು ಸ್ಮಾರ್ಟ್‌ ಗ್ರಿಡ್‌’ (ಒನ್‌ ಇಂಡಿಯಾ ಒನ್‌ ಸ್ಮಾರ್ಟ್‌ ಗ್ರಿಡ್‌) ಪಂಚ ವಾರ್ಷಿಕ ಯೋಜನೆಯನ್ನು 2019-20ನೇ ಸಾಲಿನ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿ ಜಾರಿಗೊಳಿಸಲು ಚಿಂತಿಸಬೇಕು ಎಂದು ಕೋರಿ ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮನವಿ ಮಾಡಿದ್ದಾರೆ.

Advertisement

ಈ ಸಂಬಂಧ ಪ್ರಸ್ತಾವ ಕುರಿತಂತೆ ಶುಕ್ರವಾರ ಪತ್ರ ಬರೆದಿರುವ ಅವರು, ಹಿಂದಿನ ಕೇಂದ್ರ ಸರ್ಕಾರವು 2015ರಲ್ಲೇ “ನ್ಯಾಷನಲ್‌ ಸ್ಮಾರ್ಟ್‌ ಗ್ರಿಡ್‌ ಮಿಷನ್‌’ ಯೋಜನೆ ಆರಂಭಿಸಿತ್ತು. ಸಂಬಂಧಪಟ್ಟ ಇಲಾಖೆಗಳ ನಡುವೆ ಸಮನ್ವಯ ಹಾಗೂ ನಿರ್ವಹಣೆಗೆ ಸರಳ ವ್ಯವಸ್ಥೆ ಕಲ್ಪಿಸುವುದು. ಸುರಕ್ಷಿತ, ಸುಸ್ಥಿರ ಹಾಗೂ ಡಿಜಿಟಲ್‌ ವ್ಯವಸ್ಥೆ ಒಳಗೊಂಡ ಪೂರಕ ವಾತಾರಣ ಸೃಷ್ಟಿಸುವ ಜತೆಗೆ ಎಲ್ಲರಿಗೂ ದಕ್ಷತೆಯಿಂದ ವಿದ್ಯುತ್‌ ಪೂರೈಕೆಗೆ ಸ್ಮಾರ್ಟ್‌ ಗ್ರಿಡ್‌ ವ್ಯವಸ್ಥೆ ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ಪ್ರಾಯೋಗಿಕವಾಗಿ ಯೋಜನೆಯನ್ನು ಜಾರಿಗೊಳಿಸಿರುವ ಕಡೆ ಸಾಕಷ್ಟು ಪ್ರಯೋಜನಗಳಾಗಿರುವುದು ಕಂಡುಬಂದಿದೆ. ಜತೆಗೆ ಸ್ಮಾರ್ಟ್‌ ಸಿಟಿ ಪರಿಕಲ್ಪನೆಗೂ ಪೂರಕವಾಗಿವೆ. ಆಧುನಿಕ ಭಾರತದಲ್ಲಿ ದೀರ್ಘಾವಧಿಯಲ್ಲಿ ಇಂಧನ ವ್ಯವಸ್ಥೆಯಲ್ಲಿ ಸುಸ್ಥಿರತೆ ಕಾಯ್ದುಕೊಳ್ಳುವ ಗುರಿ ತಲುಪಲು ಇದು ಸಹಕಾರಿಯಾಗಲಿದೆ.

ಇಂಧನ ಕ್ಷೇತ್ರದಲ್ಲಿ ಆರ್ಥಿಕ ಪ್ರಗತಿ, ಅಭಿವೃದ್ಧಿ, ಹೊಸ ತಂತ್ರಜ್ಞಾನಗಳ ಅಳವಡಿಕೆ, ಹೊಸ ಪ್ರಯೋಗಗಳಿಗೆ ಸ್ಮಾರ್ಟ್‌ ಗ್ರಿಡ್‌ ವ್ಯವಸ್ಥೆ ಉಪಯುಕ್ತವೆನಿಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಆ ಹಿನ್ನೆಲೆಯಲ್ಲಿ “ಒಂದು ಭಾರತ ಒಂದು ಸ್ಮಾರ್ಟ್‌ ಗ್ರಿಡ್‌’ ಯೋಜನೆಯನ್ನು ಘೋಷಿಸಿ ಮುಂದಿನ ಐದು ವರ್ಷಗಳಲ್ಲಿ ಹಂತ ಹಂತವಾಗಿ ಜಾರಿಗೊಳಿಸುವತ್ತ ಚಿಂತಿಸಬೇಕು.

ಈ ಯೋಜನೆಗೆ ತಗಲುವ ವೆಚ್ಚವನ್ನು ಕೇಂದ್ರ ಹಾಗೂ ಸಂಬಂಧಪಟ್ಟ ರಾಜ್ಯ ಸರ್ಕಾರಗಳು 50:50 ಅನುಪಾತದಲ್ಲಿ ಭರಿಸುವ ವ್ಯವಸ್ಥೆ ಕಲ್ಪಿಸಬಹುದು. ಈಗಾಗಲೇ ಬೆಂಗಳೂರಿನ ಕೆಲವು ಭಾಗಗಳಲ್ಲಿ ಸ್ಮಾರ್ಟ್‌ ಗ್ರಿಡ್‌ ವ್ಯವಸ್ಥೆ ಅಳವಡಿಸಿಕೊಳ್ಳುವ ಮೂಲಕ ರಾಜ್ಯ ಈ ಪ್ರಯತ್ನದಲ್ಲಿ ಮುಂಚೂಣಿಯಲ್ಲಿದೆ. ಹಾಗಾಗಿ ಕರ್ನಾಟಕವೂ ಒಳಗೊಂಡಂತೆ ಮೊದಲ ಹಂತದಲ್ಲಿ ಯೋಜನೆ ಜಾರಿಗೆ ಚಿಂತಿಸಬೇಕು ಎಂದು ಎಸ್‌.ಎಂ.ಕೃಷ್ಣ ಪತ್ರದಲ್ಲಿ ಮನವಿ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next