ಭಾರತೀನಗರ: “ಮನಸ್ಸಿದ್ದರೆ ಮಾರ್ಗ’ ಎಂಬ ಗಾದೆ ಮಾತು ಎಲ್ಲರಿಗೂ ಅನ್ವಯಿಸುತ್ತದೆ. ಏನಾದರು ಸಾಧಿಸಬೇಕೆಂದರೆ ಸೋಮಾರಿ ಯಾದವನಿಗೆ ಸಾಕಷ್ಟು ನೆಪಗಳೇ ಉತ್ತರ. ಆದರೆ ಕ್ರೀಯಾಶೀಲರಾದವರಿಗೆ ಮನಸ್ಸೇ ಕೈತೋಟ. ಹೀಗೆ ಮನೆಯ ಹಿಂದೆ-ಮುಂದೆ, ಅಕ್ಕ-ಪಕ್ಕ ಜಾಗವಿಲ್ಲ ನಾವೇನು ಬೆಳೆಯೋಣ ಎನ್ನುವವರಿಗೆ ಇಲ್ಲಿದೆ ಉತ್ತರ.
ದೈನಂದಿನ ಮನೆ ಬಳಕೆಗೆ ಬೇಕಾದ ಸೊಪ್ಪು-ತರಕಾರಿಗಳನ್ನು ಮನೆಯಂಗಲ, ತಾರಸಿಯಲ್ಲಿ ಸ್ವತಃ ಬೆಳೆದುಕೊಳ್ಳುವುದು ಇತ್ತೀಚೆಗೆ ಅಲ್ಲಲ್ಲಿ ಕಾಣುತ್ತಿದ್ದೇವೆ. ಅದ ರಂತೆ ನಮ್ಮ ಗ್ರಾಮೀಣ ಮಹಿಳೆಯರು ಮನೆಯ ಅಸು-ಪಾಸಿನಲ್ಲಿ ಕೀರೆಮಡಿ ಮಾಡಿ ಕೊಂಡು ಸೊಪ್ಪು, ತರಕಾರಿಗಳನ್ನು ಬೆಳೆದುಕೊಳ್ಳುತ್ತಿದ್ದರು.
ಆಧುನಿಕತೆಗೆ ತೆರೆದುಕೊಂಡ ನಮ್ಮ ಬದುಕು ಹಾಗೂ ಕೌಟುಂಬಿಕ ಜೀವನ ಸಂಕೀರ್ಣ ವಾಗುತ್ತಿದೆ. ಅದರಂತೆ ಜನಸಂಖ್ಯೆ ಹೆಚ್ಚಳವಾಗುತ್ತಾ ಮನೆಯ ಸುತ್ತ-ಮುತ್ತ ಖಾಲಿ ಜಾಗವೂ ಇಲ್ಲದಾಗುತ್ತಿದೆ. ಪರಿಣಾಮ “ಕೀರೆ ಮಡಿ’ ಎಂಬ ಪರಿ ಕಲ್ಪನೆಯೇ ಮಾಯವಾಗುತ್ತಿರುವ ಈ ದಿನ ಗಳಲ್ಲಿ ಮಹಡಿಯ ಮೇಲೆ ಕೀರೆ ಮಡಿ ಮಾಡಿಕೊಳ್ಳುವ ಬೆಳವಣಿಗೆ ಕೆಲವೆಡೆ ಕಂಡು ಬಂದಿದೆ.
ಭಾರತೀನಗರದ ನಿವಾಸಿ ದೇವರಾಜು ಅರಸು ಪತ್ನಿ ಗೌರಮ್ಮ ತಮ್ಮ ಮನೆಯ ಮೂರನೇ ಮಹಡಿಯ ಮೇಲಿನ ಜಾಗದಲ್ಲಿ ಮನೆಗೆ ಬೇಕಾದ ತರಕಾರಿ, ಸೊಪ್ಪು, ಹೂವು ಬೆಳೆದಿದ್ದಾರೆ. ಒಂದಷ್ಟು ಮಣ್ಣು ಸಂಗ್ರಹಿಸಿ ಅದಕ್ಕೆ ಚೌಕಟ್ಟು ಮಾಡಿ ಅಗತ್ಯ ಗೊಬ್ಬರ ಮಿಶ್ರಣ ಮಾಡುವ ಮೂಲಕ ಫಲವತ್ತಾದ ಭೂಮಿಕೆ ಸಿದ್ದಪಡಿಸಿದ್ದಾರೆ. ವಿವಿಧ ಮಾದರಿಯ ಸೊಪ್ಪುಗಳನ್ನು ಬೆಳೆದಿದ್ದು ಅದರ ಸುತ್ತ-ಮುತ್ತ ಪ್ಲಾಸ್ಟಿಕ್ ಕುಂಡ, ಮಡಿಕೆ, ಅನುಪಯುಕ್ತ ಬಿಂದಿಗೆ, ಬಕೆಟ್‌ಗಳನ್ನು ಅರ್ಧಕ್ಕೆ ಕತ್ತರಿಸಿಕೊಂಡು ಅದನ್ನೆ ಕುಂಡದ ರೀತಿ ಬಳಸಿ ತರಕಾರಿಗಳನ್ನು ಬೆಳೆದಿದ್ದಾರೆ.
ದಿನನಿತ್ಯ ಬಳಕೆಗೆ ಸೊಪ್ಪು, ಕೊತ್ತಂಬರಿ, ಪಾಲಾಕ್, ಮೆಂತ್ಯಸೊಪ್ಪು, ಹಸಿ ಮೆಣಸಿನಕಾಯಿ, ಬದನೆ, ದಾಸವಾಳವನ್ನು ಬೆಳೆದಿದ್ದಾರೆ. ಇವುಗಳಿಗೆ ರೋಗ ಮತ್ತುಕೀಟ ಬಾಧೆ ಇಲ್ಲ. ಇದು ಆರೋಗ್ಯಕರ ಮತ್ತು ಪೌಷ್ಟಿಕಾಂಶಯುಕ್ತವಾಗಿದೆ.
ನಾವು ಬಾಡಿಗೆ ಮನೆಯಲ್ಲಿದ್ದೇವೆ. ಸುಮ್ಮನೆ ಕೂತು ಕಾಲಹರಣ ಮಾಡುವ ಬದಲು ಚಿಕ್ಕದೊಂದು ಕೀರೆಮಡಿಯನ್ನು 3ನೇ ಮಹಡಿಯಲ್ಲಿ ಮಾಡಿಕೊಂಡು ಮನೆಗೆ ಅಗತ್ಯವಾದ ಸೊಪ್ಪು, ತರಕಾರಿಯನ್ನು ಬೆಳೆದು ಕೊಳ್ಳುತ್ತಿದ್ದೇನೆ. ಇದರಿಂದ ಆರ್ಥಿಕ ಮಿತ ವ್ಯಯವೂ ಕಾಣಬಹುದು. ಜೊತೆಗೆ ಆರೋಗ್ಯಕರ ಮತ್ತು ತಾಜಾ ಸೊಪ್ಪು, ತರಕಾರಿ ಮನೆ ಬಳಕೆಗೆ ದೊರೆಯುತ್ತದೆ.
-ಗೌರಮ್ಮ, ಗೃಹಿಣಿ.