Advertisement

ಕೊಳವೆ ಬಾವಿಯಲ್ಲಿ ಬಾಲಕಿ: 4 ಬಾರಿ ಮೇಲಕ್ಕೆತ್ತುವ NDRF ಯತ್ನ ವಿಫ‌ಲ

03:45 AM Apr 23, 2017 | Team Udayavani |

ಬೆಳಗಾವಿ: ಆರು ವರ್ಷದ ಬಾಲಕಿಯೊಬ್ಬಳು ಆಕಸ್ಮಿಕವಾಗಿ ಕಾಲುಜಾರಿ ನಿರುಪಯುಕ್ತ ಕೊಳವೆ ಬಾವಿಗೆ ಬಿದ್ದ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಝುಂಜರವಾಡ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ.ಸ್ಥಳದಲ್ಲಿ ಬಿರುಸಿನ ರಕ್ಷಣಾ ಕಾರ್ಯ ನಡೆಸಲಾಗುತ್ತಿದ್ದು ಎನ್‌ಡಿಆರ್‌ಎಫ್ ನ ನೂರಾರು ಸಿಬಂದಿಗಳು ಬಾಲಕಿಯನ್ನು ಮೇಲಕ್ಕೆ ತರಲು ಹರ ಸಾಹಸ ನಡೆಸುತ್ತಿದ್ದಾರೆ.

Advertisement

ಕ್ಯಾಮರಾ ಬಿಟ್ಟು ಪರಿಶೀಲನೆ ನಡೆಸಿದಾಗ 20 ಅಡಿ ಆಳದಲ್ಲಿ ಬಾಲಕಿಯ ಕೈ ಸ್ಪಷ್ಟವಾಗಿ ಗೋಚರವಾಗಿದೆ. ಹುಕ್‌ ಮೂಲಕ ಮೇಲಕ್ಕೆತ್ತುವ ಪ್ರಯತ್ನ ವಿಫ‌ಲವಾಗಿದ್ದು ರಕ್ಷಣಾ ಕಾರ್ಯ ಮುಂದುವರಿಸಿರುವ ಎನ್‌ಡಿಆರ್‌ಎಫ್ ತಜ್ಞರು ಕೊಳವೆ ಬಾವಿ ಪಕ್ಕದಲ್ಲಿ ಇನ್ನೊಂದು ಗುಂಡಿ ತೆಗೆಯುತ್ತಿದ್ದಾರೆ. ಅಗ್ನಿಶಾಮಕ ದಳ, ಪೊಲೀಸ್‌ ಪಡೆ ಹಾಗೂ ವೈದ್ಯಕೀಯ ತಂಡ ಸ್ಥಳದಲ್ಲೇ ಬೀಡು ಬಿಟ್ಟಿದ್ದು ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
 

ಹಲವು ವಿಘ್ನಗಳು 

ಹುಕ್‌ ಮೂಲಕ ಮೇಲಕ್ಕೆತ್ತಲು ಎನ್‌ಡಿಆರ್‌ಎಫ್ ಸಿಬಂದಿಗಳು ನಡೆಸಿದ ಯತ್ನ 4 ಬಾರಿ ವಿಫ‌ಲವಾಗಿದೆ. ಬಾವಿಯಲ್ಲಿರುವ ಬಂಡೆ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗಿದೆ.ಜೆಸಿಬಿ ಯಂತ್ರ ಕೆಟ್ಟ ಕಾರಣ ಕಾರ್ಯಾಚರಣೆಯನ್ನು ಕೆಲ ಹೊತ್ತು ಸ್ಥಗಿತಗೊಳಿಸಲಾಗಿತ್ತು. 

ತಾಯಿ ಅಸ್ವಸ್ಥ 
ಕಾವೇರಿಯ ತಾಯಿ ಘಟನೆಯಿಂದ ತೀವ್ರ ಕಂಗಾಲಾಗಿದ್ದು ಕುಸಿದು ಬಿದ್ದಿದ್ದಾರೆ. ಅವರಿಗೆ 108 ವಾಹನದಲ್ಲಿ ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ. 

Advertisement

ತಾಯಿಯ ಜೊತೆ ಕಟ್ಟಿಗೆ ತರಲು ಹೋದಾಗ ಆಟವಾಡುತ್ತಿದ್ದ ಆರು ವರ್ಷದ ಬಾಲಕಿ ಕಾವೇರಿ ಅಜಿತ್‌ ಮಾದರ ಕೊಳವೆ ಬಾವಿಗೆ ಬಿದ್ದವಳು. ಶಂಕರಪ್ಪ ಹಿಪ್ಪರಗಿ ಎಂಬ ರೈತರ ಹೊಲದಲ್ಲಿ ಶನಿವಾರ ಸಂಜೆ 5ರಿಂದ 5.30ರ ಸುಮಾರಿಗೆ ಈ ಘಟನೆ ನಡೆದಿದೆ.

ಹೊಲದ ಮಾಲೀಕರ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎನ್ನಲಾಗಿದೆ. ಎರಡು ತಿಂಗಳಿಂದ ಕೊಳವೆ ಬಾವಿಯನ್ನು ಹಾಗೆಯೇ ಬಿಟ್ಟಿದ್ದ ಶಂಕರ ಹಿಪ್ಪರಗಿ ಈಗಷ್ಟೇ ಕೇಸಿಂಗ್‌ ಪೈಪ್‌ ಅಳವಡಿಸಲು ಮುಂದಾಗಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಎನ್‌ ಜಯರಾಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಿ. ಆರ್‌. ರವಿಕಾಂತೇಗೌಡ ಪರಿಹಾರ ಕಾರ್ಯದ ಉಸ್ತುವಾರಿ ವಹಿಸಿದ್ದಾರೆ. ರಕ್ಷಣಾ ಕಾರ್ಯಕ್ಕಾಗಿ ಹೈದ್ರಾಬಾದ್‌ನ ತಜ್ಞರ ತಂಡವನ್ನು ಸಂಪರ್ಕಿಸಲಾಗಿದೆ. ಬಾಲಕಿಗೆ ಉಸಿರಾಡಲು ಅನುಕೂಲವಾಗುವಂತೆ ಕೊಳವೆ ಬಾವಿಯಲ್ಲಿ ಪೈಪ್‌ಗ್ಳ ಮೂಲಕ ಆಮ್ಲಜನಕನ್ನು ಪೂರೈಸಲಾಗುತ್ತಿದೆ.

ನಿರುಪಯುಕ್ತ ಕೊಳವೆ ಬಾವಿಗಳನ್ನು ಮುಚ್ಚಬೇಕು ಎಂದು ಸರ್ಕಾರ ಕಠಿಣ ಆದೇಶ ಜಾರಿ ಮಾಡಿದ್ದರೂ ಈ ರೀತಿಯ ದುರಂತ ನಡೆದಿದ್ದು ಬಾಲಕಿಯ ಮನೆಯಲ್ಲಿ ತೀವ್ರ ಆತಂಕ ಉಂಟಾಗಿದೆ.

ಘಟನೆ ಹಿನ್ನಲೆ: ಝುಂಜರವಾಡ ಗ್ರಾಮದ ಹೊರವಲಯದಲ್ಲಿ ಶಂಕರ ಹಿಪ್ಪರಗಿ ಎಂಬುವರ ಹೊಲದಲ್ಲಿ ಎರಡು ತಿಂಗಳ ಹಿಂದೆ ಕೊಳವೆ ಬಾವಿ ಕೊರೆಯಲಾಗಿತ್ತು. ಸುಮಾರು 300 ಅಡಿಗಳವರೆಗೆ ಭೂಮಿ ಕೊರೆದಿದ್ದರೂ ನೀರು ಬಂದಿರಲಿಲ್ಲ. ಆದರೆ ಹೊಲದ ಮಾಲೀಕರು ಇದನ್ನು ಮುಚ್ಚದೆ ಹಾಗೇ ಬಿಟ್ಟಿದ್ದರು.

ಶನಿವಾರ ಸಂಜೆ ಸುಮಾರು 5:30ಕ್ಕೆ ತಾಯಿಯ ಜೊತೆ ಕಟ್ಟಿಗೆ ತರಲು ಹೋಗಿದ್ದ ಕಾವೇರಿ ಗೆಳತಿಯರ ಜೊತೆಗೆ ಅಲ್ಲಿಯೇ ಆಟ ಆಡುತ್ತಿದ್ದಾಗ ಒಮ್ಮೆಲೇ ಕಾಲುಜಾರಿ ಈ ಕೊಳವೆ ಬಾವಿಯೊಳಗೆ ಬಿದ್ದಿದ್ದಾಳೆ. ಆಕೆಯ ಜೊತೆಗಿದ್ದ ಇತರ ಮಕ್ಕಳು ಅಲ್ಲಿಂದ ಓಡಿ ಹೋಗಿ ಚೀರಾಡಿದ್ದಾರೆ. ಇದನ್ನು ನೋಡಿದ ತಾಯಿಯು ಭರದಿಂದ ಓಡಿಬಂದು ಮಗಳ ಕೈ ಎಳೆದುಕೊಳ್ಳಲು ಮುಂದಾಗಿದ್ದಾಳೆ. ಆದರೆ ಆಕೆಯ ಓಟದ ರಭಸಕ್ಕೆ ಮಣ್ಣು ಕುಸಿದು ಮಗು ಕಾವೇರಿ ಕೆಳಗಡೆ ಕುಸಿದಿದ್ದಾಳೆ.

ತಾಯಿ ಯತ್ನ ಫ‌ಲಿಸಲಿಲ್ಲ:
ಕೊಳವೆ ಬಾವಿಯೊಳಗೆ ಬಿದ್ದಿದ್ದ ಬಾಲಕಿ ಕಾವೇರಿ ರಕ್ಷಣೆಗಾಗಿ ಕೂಗತೊಡಗಿದ್ದಾಳೆ. ಆದರೆ ಬಹಳ ಆಳದಲ್ಲಿ ಬಿದ್ದಿದ್ದರಿಂದ ಮನೆಯವರೆಗೆ ತಮ್ಮ ಮಗಳನ್ನು ಮೇಲಕ್ಕೆ ಎತ್ತಲು ಆಗಲೇ ಇಲ್ಲ. ತಾಯಿ ಮಗಳ ಕೈಹಿಡಿದುಕೊಳ್ಳಲು ಹರ ಸಾಹಸ ಪಟ್ಟರೂ ಕೇಸಿಂಗ್‌ ಜಾಗ ( ಎಂಟು ಇಂಚು) ಬಹಳ ಕಿರಿದಾಗಿದ್ದರಿಂದ ಮಗಳನ್ನು ಮೇಲಕ್ಕೆ ಎತ್ತಲು ಆಗಲಿಲ್ಲ. ಆದರೆ ಮಣ್ಣು ಒಂದೇ ಸಮನೆ ಕುಸಿದಿದ್ದರಿಂದ ಮಗು ಕಾವೇರಿ ಕೆಳಗಡೆ ಕುಸಿದಳು ಎಂದು ಚಿಕ್ಕೋಡಿ ಉಪವಿಭಾಗಾಧಿಕಾರಿ ಗೀತಾ ಕೌಲಗಿ ಉದಯವಾಣಿಗೆ ತಿಳಿಸಿದರು.

ಈ ಸುದ್ದಿ ತಿಳಿದ ತಕ್ಷಣ ಗ್ರಾಮದ ಜನರು ತಂಡೋಪತಂಡವಾಗಿ ಘಟನಾ ಸ್ಥಳಕ್ಕೆ ಧಾವಿಸಿ ಬಂದರು. ಗ್ರಾಮದ ಜನರಿಂದ ಮಾಹಿತಿ ಪಡೆದ ಐಗಳಿ ಠಾಣೆ ಹಾಗೂ ಅಥಣಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿ ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ ಆರಂಭಿಸಿದರು. ಚಿಕ್ಕೋಡಿ ಉಪವಿಭಾಗಾಧಿಕಾರಿ ಗೀತಾ ಕೌಲಗಿ ಹಾಗೂ ವೈದ್ಯಕೀಯ ಪರಿಣಿತರ ತಂಡ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next