Advertisement

ರೈಲು ಢಿಕ್ಕಿ  ಆರು ವರ್ಷದ ಬಾಲಕ ಸಾವು 

02:30 PM Sep 24, 2017 | |

ಮಂಗಳೂರು: ಜಪ್ಪು ಮಹಾಕಾಳಿಪಡ್ಪು ರೈಲ್ವೇ ಗೇಟ್‌ ಬಳಿ ಶನಿವಾರ 6 ವರ್ಷದ ಬಾಲಕನೊಬ್ಬ ಚಲಿಸುತ್ತಿದ್ದ ರೈಲಿಗೆ ಢಿಕ್ಕಿ ಹೊಡೆದು ಸಾವನ್ನಪ್ಪಿದ್ದಾನೆ. ಮಹಾಕಾಳಿಪಡು³ ಅನ್ವರ್‌ ಮತ್ತು ಶಮೀನಾ ದಂಪತಿಯ ಪುತ್ರ ಮಹಮದ್‌ ಹುಸೇನ್‌ ಹಾಫಿಲ್‌ (6) ಮೃತಪಟ್ಟವನು.

Advertisement

ಈತ ಜಪ್ಪು ಕಾಸ್ಸಿಯಾ ಸೈಂಟ್‌ ರೀಟಾ ಇಂಗ್ಲಿಷ್‌ ಮೀಡಿಯಂ ಶಾಲೆಯ 2ನೇ ತರಗತಿ ವಿದ್ಯಾರ್ಥಿ. ಮಧ್ಯಾಹ್ನ 3.30ಕ್ಕೆ ಹಾಫಿಲ್‌ ಪಕ್ಕದ ಅಂಗಡಿಗೆ ಹೋಗಿ ಚಾಕೊಲೇಟ್‌ ಖರೀದಿಸಿ ಮನೆಗೆ ವಾಪಸಾಗಲು ರೈಲ್ವೇ ಗೆಟ್‌ ಬಳಿ ಹಳಿ ದಾಟುತ್ತಿದ್ದಾಗ ಕೇರಳದಿಂದ ಉತ್ತರ ಭಾರತದ ಕಡೆಗೆ ಹೋಗುತ್ತಿದ್ದ ಎಕ್ಸ್‌ಪ್ರೆಸ್‌ ರೈಲು ಢಿಕ್ಕಿ ಹೊಡೆಯಿತು.

ಢಿಕ್ಕಿಯ ರಭಸಕ್ಕೆ ರೈಲು ಬಾಲಕನನ್ನು ಸುಮಾರು 75 ಮೀಟರ್‌ಗಳಷ್ಟು ದೂರ ಎಳೆದಾಡಿಕೊಂಡು ಹೋಗಿದೆ. ಆತನ ದೇಹ ಛಿದ್ರವಾಗಿತ್ತು. ಸ್ಥಳೀಯ ಜನರು ಓಡಿ ಬಂದು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ  ಬಾಲಕ ಸಾವನ್ನಪ್ಪಿದ್ದ. 

ಪಾರಾದ ತಮ್ಮ:
ಚಾಕೊಲೇಟ್‌ ತರಲು ಅಣ್ಣ  ಹಾಫಿಲ್‌ ಮತ್ತು 4 ವರ್ಷ ಪ್ರಾಯದ ತಮ್ಮ ಜುನೈದ್‌ ಹಾಗೂ ಇತರ ಇಬ್ಬರು ಬಾಲಕರು ಹೋಗಿದ್ದರು. ಮನೆಯ ಪಕ್ಕದಲ್ಲಿಯೇ ಇರುವ ಅಂಗಡಿಗೆ ಹೋಗಿ ಬರುವಂತೆ ಹಾಫಿಲ್‌ ತಾಯಿ ಶಮೀನಾ ತಿಳಿಸಿದ್ದರು.  ಆದರೆ ಮನೆ ಪಕ್ಕದ ಅಂಗಡಿ ಮುಚ್ಚಿದ್ದರಿಂದ ಅಣ್ಣ ತಮ್ಮಂದಿರು ಇತರ ಇಬ್ಬರು ಹುಡುಗರ ಜತೆ ರೈಲು ಹಳಿ ದಾಟಿ ಮಸೀದಿ ರಸ್ತೆಯ ಮೂಲಕ ಇನ್ನೊಂದು ಅಂಗಡಿಗೆ ಹೋಗಿದ್ದರು. ಅಲ್ಲಿಂದ ಚಾಕೊಲೇಟ್‌ ಖರೀದಿಸಿ ಮನೆಗೆ ಹಿಂದಿರುಗುವಾಗ ಜುನೈದ್‌ ಮತ್ತು ಇತರ ಇಬ್ಬರು ಮುಂದೆ ಇದ್ದು, ಹಳಿ ದಾಟಿದ್ದರು. ಅವರು ದಾಟಿರುವುದನ್ನು ಗಮನಿಸಿ ಹಿಂದಿನಿಂದ ಹಾಫಿಲ್‌ ಕೂಡ ಓಡಿ ಬಂದಿದ್ದ. ಆದರೆ ಆತ ದಾಟುತ್ತಿದ್ದಂತೆ ವೇಗವಾಗಿ ಬಂದ ರೈಲು ಢಿಕ್ಕಿ ಹೊಡೆಯಿತು.

ಬಡ ಕುಟುಂಬದವರಾಗಿರುವ ಹಾಫಿಲ್‌ನ ತಂದೆ ಅನ್ವರ್‌ 6 ತಿಂಗಳ ಹಿಂದೆಯಷ್ಟೇ ವಿದೇಶಕ್ಕೆ ತೆರಳಿದ್ದರು. ಅನ್ವರ್‌ ಅವರು ಸೌದಿಯಲ್ಲಿ ಚಾಲಕ ವೃತ್ತಿಯಲ್ಲಿದ್ದಾರೆ. ಅನ್ವರ್‌ ಅವರಿಗೆ ಮೂವರು ಪುತ್ರರು. ಹಾಫಿಲ್‌ ಹಿರಿಯ ಮಗ. ರೈಲ್ವೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಇಲ್ಲಿ ಹಳಿ ದಾಟುವುದು ಅಪಾಯಕಾರಿ. ಇದು ರೈಲ್ವೇ ಗೇಟ್‌ ಇರುವ ಜಾಗ ಅಲ್ಲ. ರೈಲು ಮಾರ್ಗದ ಪಕ್ಕದಲ್ಲಿಯೇ ಅಂಗಡಿ ಇದ್ದರೂ ಮಾರ್ಗದ ಬದಿಗೆ ಯಾವುದೇ ತಡೆ ಬೇಲಿ ಇಲ್ಲ. ಕೇರಳ ಕಡೆಯಿಂದ ಮಂಗಳೂರು ಜಂಕ್ಷನ್‌ ಕಡೆಗೆ ಹೋಗುವ ಅಥವಾ ಮಂಗಳೂರು ಜಂಕ್ಷನ್‌ ನಿಲ್ದಾಣ ಕಡೆಯಿಂದ ಕೇರಳದ ಕಡೆಗೆ ಹೋಗುವ ರೈಲುಗಳು ವೇಗವಾಗಿ ಸಂಚರಿಸುತ್ತಿವೆ.

Advertisement

Udayavani is now on Telegram. Click here to join our channel and stay updated with the latest news.

Next