Advertisement

Belman: ನದಿ ದಾಟಬೇಕಾದರೆ ಏಣಿ ಹತ್ತಿ ಇಳಿಯಬೇಕು!

12:34 PM Jul 31, 2024 | Team Udayavani |

ಬೆಳ್ಮಣ್‌: ಕಾರ್ಕಳ ತಾಲೂಕಿನ ಬೋಳ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಬೋಳ ಕೋಡಿ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇಗುಲದಮುಂಭಾಗದಲ್ಲಿ ಹಲವು ದಶಕಗಳ ಹಿಂದೆ ಬೋಳ ಮುಗುಳಿ ಹಾಗೂ ಬೋಳ ಕೋಡಿ ಪರಿಸರವನ್ನು ಸಂಪರ್ಕಿಸಲು ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಬ್ಬಿಣದ ರಾಡುಗಳನ್ನು ಬಳಸಿಕೊಂಡು ನಿರ್ಮಸಲಾದ ತೂಗು ಸೇತುವೆಯ ಮಾದರಿಯ ಕಿರು ಸೇತುವೆಯಲ್ಲಿ ಈ ಭಾಗದ ಜನ ದಿನ ನಿತ್ಯ ಸರ್ಕಸ್‌ ಮಾಡುತ್ತಿದ್ದಾರೆ.

Advertisement

ತುಂಬಿ ಹರಿಯುವ ಶಾಂಭವಿ ನದಿಗೆ ಅಡ್ಡದಾಗಿ ಹಲವು ವರ್ಷಗಳ ಹಿಂದೆ ಕಟ್ಟಲಾದ ಕಬ್ಬಿಣದರಾಡುಗಳ ಕಿರು ಸೇತುವೆಯನ್ನು ಏಣಿಯ ಮೂಲಕ ವಿದ್ಯಾರ್ಥಿಗಳು, ಗ್ರಾಮಸ್ಥರುಹತ್ತಿ ಇಳಿದು ಸುಸ್ತಾಗಿದ್ದಾರೆ. ಈರೀತಿ ನದಿಯನ್ನು ದಾಟುತ್ತಿರುವುದು ಅಪಾಯಕಾರಿಯಾಗಿದ್ದರೂ ಸೇತುವೆಯ ನಿರ್ಮಾಣದ ಬಗ್ಗೆ ಯಾವುದೇ ಇಲಾಖೆ ಆಥವಾ ಜನಪ್ರತಿನಿಧಿಗಳು ಮನಸ್ಸು ಮಾಡಿಲ್ಲ ಎಂಬುವುದು ಇಲ್ಲಿನ ಜನರ ಆರೋಪ.

ಧಾರ್ಮಿಕ ಕ್ಷೇತ್ರಗಳ ಸಂಪರ್ಕ ಕೊಂಡಿ
ಈ ನದಿಯ ಒಂದು ಭಾಗದಲ್ಲಿ ರುದ್ರ ಸೋಮನಾಥೇಶ್ವರ ಹಾಗೂ ಮಾರುತಿ ದೇವಳ ಇನ್ನೊಂದು ಭಾಗದಲ್ಲಿ ಮಾರಗುತ್ತು ಬೆಟ್ಟದಲ್ಲಿಸತ್ಯನಾಪುರದ ಸಿರಿಯ ಆಲಡೆ ಮುಗುಳಿ ಕ್ಷೇತ್ರವಿದ್ದು ಇದರ ನಡುವೆ ಶಾಂಭವಿ ನದಿ ಮಳೆಗಾಲದ ಸಂದರ್ಭದಲ್ಲಿ ಉಕ್ಕಿ ಹರಿಯುತ್ತಿದೆ. ಈ ನದಿಯನ್ನುದಾಟಲು ಈ ಭಾಗದ ಗ್ರಾಮಸ್ಥರು ಪ್ರಾಣಭಯದಲ್ಲೇಕಬ್ಬಿಣದ ಸೇತುವೆಯನ್ನು ದಾಟಿಕೊಂಡು ಸಾಗುವುದು ಅನಿವಾರ್ಯವಾಗಿದೆ. ಅಲ್ಲದೆ ಏಣಿಯನ್ನು ಹತ್ತುವ ಪಕ್ಕದಲ್ಲೇ ಗದ್ದೆಯಿದ್ದು ಮಳೆಗಾಲದಲ್ಲಿ ಸಂಪೂರ್ಣ ಕೆಸರಿನಲ್ಲಿಯೂ ಪರದಾಡಬೇಕಾದ ಸ್ಥಿತಿ ಇದೆ.

ಈ ಅಪಾಯಕಾರಿ ಕಬ್ಬಿಣದ ತೂಗು ಸೇತುವೆಯನ್ನು ದಾಟಿಕೊಂಡು ಶಾಲಾ ಮಕ್ಕಳು, ನಿತ್ಯ ಹಾಲು ಒಯ್ಯುವ ಮಹಿಳೆಯರು ಅವಲಂಬಿಸಿದ್ದಾರೆ. ಪ್ರತೀ ಮಳೆಗಾಲದಲ್ಲಿ ನದಿಯು ತುಂಬಿ ಹರಿಯುವ ಸಂದರ್ಭ ನದಿಯ ನೀರು ಗದ್ದೆಗಳಲ್ಲಿಉಕ್ಕಿ ಹರಿಯುವ ಸಂದರ್ಭದಲ್ಲಿ ಸುಮಾರು 5 ರಿಂದ 6 ತಿಂಗಳು ಎರಡು ಗ್ರಾಮದ ಜನರು ಒಬ್ಬರಿಗೊಬ್ಬರಿಗೆ ಸಂಪರ್ಕವಿಲ್ಲದೆ ಸಂಕಷ್ಟ ಪಡುವಂತಾಗಿದೆ. ಸೇತುವೆ ದಾಟಲು ಸಾಧ್ಯವಾಗದೆ ಇದ್ದರೆ 7ರಿಂದ 8 ಕಿ.ಮೀ ಸುತ್ತಿ ಬಳಸಿಕೊಂಡು ಸಾಗಬೇಕು.

Advertisement

ಶಿಥಿಲಗೊಂಡ ಸೇತುವೆ
ಜನ ದಿನನಿತ್ಯ ಸರ್ಕಸ್‌ ಮಾಡುವ ಈ ಕಬ್ಬಿಣದ ಸೇತುವೆಯ ಮಧ್ಯ ಭಾಗದಲ್ಲಿಯೇ ದೊಡ್ಡ ರಂದ್ರವಾಗಿದೆ ಹಾಗೂ ಕಬ್ಬಿಣದ ರಾಡುಗಳು ತುಕ್ಕು ಹಿಡಿದು ಶಿಥಿಲ ವ್ಯವಸ್ಥೆಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಕಳೆದ ಐದು ವರ್ಷಗಳ ಹಿಂದೆ ಗ್ರಾಮಸ್ಥರ ಅನುಕೂಲತೆಗಾಗಿ ತಕ್ಕ ಮಟ್ಟಿಗೆ ದುರಸ್ತಿ ಕಾರ್ಯ ಕೈಗೊಂಡು ನಿರ್ವಹಣೆ ಮಾಡಲಾಗಿತ್ತು. ಹೀಗಾಗಿ ಸೇತುವೆ ಸ್ವಲ್ಪ ಗಟ್ಟಿಯಾದರೂ ಈ ಭಾಗದ ಸಮಸ್ಯೆಗೆ ಮಾತ್ರ ಇನ್ನೂ ಮುಕ್ತಿಕಂಡಿಲ್ಲ.ಸರ್ಕಸ್‌ ತಪ್ಪಿಲ್ಲ..

ನಿರ್ಮಾಣ ಪ್ರಯತ್ನ ಎರಡೆರಡು ಬಾರಿ ಫೇಲ್‌!
ಇಲ್ಲಿನ ಸೇತುವೆ ನಿರ್ಮಾಣದ ಬೇಡಿಕೆಗೆ ಕಾರ್ಕಳದ ಹಿಂದಿನ ಶಾಸಕ ವೀರಪ್ಪ ಮೊಯ್ಲಿ ಅವರು ಸ್ಪಂದಿಸಿದ್ದರು. ನದಿಯ ಕೆಳಭಾಗದಲ್ಲಿ ಸ್ಥಳ ಗುರುತಿಸಿ ಶಂಕುಸ್ಥಾಪನೆ ನೇರವೇರಿಸಿದ್ದರು. ಆದರೆ ಸಕಾರಣಗಳಿಲ್ಲದೇ ಪ್ರಕ್ರಿಯೆ ಸ್ಥಗಿತಗೊಂಡಿತು. ಈಗಿನ ಶಾಸಕ ವಿ.ಸುನಿಲ್‌ ಕುಮಾರ್‌ ಅವರಿಂದ ಅನುದಾನ ಮಂಜೂರಾಗುವ ಎಲ್ಲಾ ಲಕ್ಷಣಗಳು ಇದ್ದರೂ ಇಲ್ಲಿನ ಖಾಸಗಿ ಜಮೀನಿನ ಮಾಲಿಕರ ಜಾಗದ ಸಮಸ್ಯೆಯಿಂದ ಮತ್ತೆ ಸೇತುವೆ ನಿರ್ಮಾಣ ಮರೀಚಿಕೆಯಾಯಿತು.

ಹಲವು ವರ್ಷಗಳಿಂದ ಬೇಡಿಕೆ
ಇಲ್ಲಿ ಸುಸಜ್ಜಿತ ಸೇತುವೆ ನಿರ್ಮಾಣದ ಬೇಡಿಕೆ ಹಲವು ವರ್ಷಗಳಿಂದ ಇದೆ. 2 ಬಾರಿ ಅನುದಾನ ಇಟ್ಟರೂ ಜಾಗದ ಸಮಸ್ಯೆಯಿಂದಸೇತುವೆ ನಿರ್ಮಾಣಕ್ಕೆ ಸಾಧ್ಯವಾಗಿಲ್ಲ. ಇದೀಗ ಜಾಗ ಪಂಚಾಯತ್‌ಗೆ ಹಸ್ತಾಂತರವಾಗಿದೆ.ಮುಂದೆ
ಕಾರ್ಕಳ ಶಾಸಕರು ಹಾಗೂ ಇತರ ಜನಪ್ರತಿನಿಧಿಗಳ ನೆರವಿನಿಂದ ಉತ್ತಮ ಸೇತುವೆ ನಿರ್ಮಾಣವಾಗುವ ಎಲ್ಲ ಸಾಧ್ಯತೆಗಳಿವೆ.
-ಸತೀಶ್‌ ಪೂಜಾರಿ ಬೋಳ, ಬೋಳ ಗ್ರಾ.ಪಂ. ಮಾಜಿ ಅಧ್ಯಕ್ಷ

ಮೊದಲ ಆದ್ಯತೆಯಾಗಲಿ
ಪೌರಾಣಿಕ ಹಿನ್ನೆಲೆಯುಳ್ಳ ಎರಡು ಧಾರ್ಮಿಕ ಕ್ಷೇತ್ರಗಳನ್ನು ಸಂಪರ್ಕಿಸುವ ಈ ಸೇತುವೆ ನಿರ್ಮಾಣ ಜನಪ್ರತಿನಿಧಿಗಳ ಮೊದಲ ಆದ್ಯತೆಯಾಗಲಿ.

– ವಿಕಾಸ್‌ ಶೆಟ್ಟಿ ಬೋಳ ಪರಾರಿ, ಬೋಳ ಮೃತ್ಯುಂಜಯ ರುದ್ರ ಸೋಮನಾಥೇಶ್ವರ ದೇವಸ್ಥಾನದ ಆಡಳಿತ ಮಂಡಳಿಯ ಪ್ರತಿನಿಧಿ

–  ಶರತ್‌ ಶೆಟ್ಟಿ ಮುಂಡ್ಕೂರು

Advertisement

Udayavani is now on Telegram. Click here to join our channel and stay updated with the latest news.

Next