ಮಡಿಕೇರಿ: ಮಡಿಕೇರಿ ಸಮೀಪದ ಮೇಕೇರಿ ಗ್ರಾಮದಲ್ಲಿ ಒಂಟಿ ಮಹಿಳೆ ಉಷಾ (45) ಅವರ ಹತ್ಯೆ ಸಂಬಂಧಿಸಿ ಘಟನೆ ಸಂಭವಿಸಿದ ಇಪ್ಪತ್ತನಾಲ್ಕು ತಾಸಿನೊಳಗೆ ಆರೋಪಿಗಳಾದ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಮೃತರ ಸಂಬಂಧಿ ಅಬ್ಬೂರುಕಟ್ಟೆಯ ಲಿಖೀತಾ (30) ಮತ್ತು ಆಕೆಯ ಪತಿ ಎಂ.ಎಸ್.ರವಿ (37) ಬಂಧಿತರು ಎಂದು ಎಸ್ ಪಿ ಡಾ| ಸುಮನ್ ಪನ್ನೇಕರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ತನ್ನ ಸಹೋದರಿ, ಮೇಕೇರಿಯಲ್ಲಿ ಒಬ್ಬಂಟಿಯಾಗಿ ವಾಸವಿದ್ದ ಉಷಾ ಅವರ ಹತ್ಯೆಯಾಗಿದೆ ಎಂದು ಮೈಸೂರಿನಲ್ಲಿ ವಾಸವಿರುವ ಚರಣ್ ಕುಮಾರ್ ಅವರು ರವಿವಾರ ಪೊಲೀಸರಿಗೆ ದೂರು ನೀಡಿದ್ದರು.
ಮನೆ ಕೆಲಸದಾಕೆ ನಳಿನಿ ರವಿವಾರ ಬೆಳಗ್ಗೆ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಸಹೋದರಿಯ ಚಿನ್ನದ ಸರ, ಓಲೆ, ಉಂಗುರ ಮತ್ತು ಹಣವಿದ್ದ ಪರ್ಸ್ ಕಾಣೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿತ್ತು.
ಈ ದೂರಿನ ಆಧಾರದಲ್ಲಿ ಡಿವೈಎಸ್ಪಿ ಕೆ. ಎಸ್. ಸುಂದರರಾಜ್ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಲ್ಲಿ ಆರೋಪಿಗಳನ್ನು ಸೋಮವಾರಪೇಟೆಯಲ್ಲಿ ಬಂಧಿಸಲಾಗಿದೆ.
ಕೃತ್ಯಕ್ಕೆ ಬಳಸಿದ್ದ ಬೈಕ್, ಕಳವಾಗಿದ್ದ ಚಿನ್ನದ ಸರ ಮತ್ತು ಓಲೆಯನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.