Advertisement
ಉದಾಹರಣೆಗೆ ಸುಕೇಶ್ ಹಿಮಾನಿ ಇದ್ದಾರೆ. ಅವರು ಬಹುಶಃ ಮೊದಲ ಪಂಕ್ತಿಯ ಸಿರಿವಂತರು. ಅವರಿಗೂ ತಾಪತ್ರಯಗಳು ಇದ್ದೇ ಇವೆ. ಸುಕೇಶ್ ಹಿಮಾನಿ ಅವರದ್ದು ಮೂವತ್ತು ಮಹಡಿಯ ದೊಡ್ಡ ಮನೆ. ಮಹಾನಗರದ ಹೃದಯಭಾಗದಲ್ಲಿದೆ. ಅವರು ಬೆಳಗ್ಗೆ ಏಳುವುದು 15ನೆಯ ಮಾಳಿಗೆಯಲ್ಲಿ. ಯಾಕೆಂದರೆ, ಅವರ ಬೆಡ್ ರೂಮ್ ಇರುವುದು ಅಲ್ಲಿಯೇ. ಆಮೇಲೆ, ಟ್ರೆಡ್‌ಮಿಲ್‌ನಲ್ಲಿ ಓಡಬೇಕಾದರೆ 9ನೆಯ ಮಾಳಿಗೆಗೆ ಇಳಿಯಬೇಕು. ಜಿಮ್ ಇತ್ಯಾದಿಗಳಿಗೆ ಆ ಮಹಡಿ ಮೀಸಲು. ಆಮೇಲೆ, ಈಜಾಡುವ ಮನಸ್ಸಾದರೆ, 12ನೆಯ ಮಹಡಿಯಲ್ಲಿರುವ ಈಜುಕೊಳದತ್ತ ಸಾಗಬೇಕು. 19ನೆಯ ಮಹಡಿಗೆ ಹೋಗಿ ಬೆಳಗಿನ ಉಪಾಹಾರ ಮುಗಿಸಬೇಕು. ಚಹಾ ಕುಡಿಯುವಾಗ ಸಮುದ್ರ ಕಾಣುತ್ತದೆ ಎಂಬ ಕಾರಣಕ್ಕೆ ಡೈನಿಂಗ್ ಹಾಲ್‌ನ್ನು ಅಲ್ಲಿಯೇ ಮಾಡಲಾಗಿದೆ. 14ನೆಯ ಮಹಡಿಯಲ್ಲಿ ಆಫೀಸ್ ಡ್ರೆಸ್ ಹಾಕಿಕೊಳ್ಳಬೇಕು. 21ನೆಯ ಮಹಡಿಯಲ್ಲಿರುವ ಪರ್ಸನಲ್ ಆಫೀಸ್‌ನಲ್ಲಿ ಫೈಲ್ ಸಂಗ್ರಹಿಸಬೇಕು. 16ನೆಯ ಮಹಡಿಯಲ್ಲಿರುವ ಪತ್ನಿ ಗೀತಾ ಹಿಮಾನಿಯವರಿಗೆ “ಬಾಯ್’ ಹೇಳಬೇಕು. 13ನೆಯ ಮಹಡಿಯಲ್ಲಿರುವ ಮಕ್ಕಳಿಗೆ “ಸೀ ಯೂ’ ಹೇಳಬೇಕು. ಲಗುಬಗೆಯಿಂದ 3ನೆಯ ಮಹಡಿಯತ್ತ ಇಳಿದುಕೊಂಡು ಬರುವಾಗ ಲಿಫ್ಟ್ ಕೈಕೊಟ್ಟರೂ ಕೊಟ್ಟಿàತು. ಪವರ್ ಕಟ್ ಆದರೆ ಜನರೇಟರ್ ಚಾಲೂ ಮಾಡುವವರೆಗೆ ಲಿಫ್ಟ್ನೊಳಗೆಯೇ ಬಾಕಿ.
ಇನ್ನೇನು, ಕಾರಿನೊಳಗೆ ಕೂರಬೇಕು ಎನ್ನುವಾಗ ಕಾರಿನ ಕೀ ಮರೆತು ಬಿಟ್ಟಿರುವುದು ಅರಿವಿಗೆ ಬರುತ್ತದೆ.
ಆದರೆ, ಯಾವ ಮಹಡಿಯಲ್ಲಿ ಕೀ ಮರೆತದ್ದು?
15, 16, 14, 19, 21, 16 ಅಥವಾ 13?
ಎಷ್ಟು ತಲೆ ಓಡಿಸಿದರೂ ತಿಳಿಯುವುದಿಲ್ಲ. ಅಲ್ಲಿರುವ ಸೆಕ್ಯುರಿಟಿಗೆ ಧಣಿಯ ತಳಮಳ ತಿಳಿಯುತ್ತದೆ. ಓವರ್ ಸ್ಮಾರ್ಟ್ ಆಗುವ ಉದ್ದೇಶದಲ್ಲಿ ಕೂಡಲೇ ಗೀತಾ ಹಿಮಾನಿಯವರಿಗೆ ಫೋನ್ ಮಾಡುತ್ತಾನೆ. ಅಷ್ಟರಲ್ಲಿ ಮನೆಯಲ್ಲಿರುವ ಎಲ್ಲ ಕೆಲಸಗಾರರು ಸೈರನ್ ಮೊಳಗಿದ್ದನ್ನು ಕೇಳಿದರೋ ಎಂಬಂತೆ ಎಲರ್ಟ್ ಆಗುತ್ತಾರೆ. ಮನೆಗೆಲಸದವರು, ಕಾರ್ಯದರ್ಶಿಗಳು, ನೌಕರರು, ಸಹಾಯಕರು, ಈಜುಕೊಳ ನೋಡಿಕೊಳ್ಳುವವವರು, ಜಿಮ್‌ನ ನಿರ್ವಾಹಕರು, ಲಿಫ್ಟ್ ಮೇಲ್ವಿಚಾರಕರು ಎಲ್ಲರೂ ಕೀ ಹುಡುಕಲು ತೊಡಗುತ್ತಾರೆ. ಎಲ್ಲಿ ಹುಡುಕಿದರೂ ಕಾರಿನ ಕೀ ಇಲ್ಲ. ಕೊನೆಗೆ ಸುಕೇಶ್ ಹಿಮಾನಿ ಅವರು ಕೈಕೊಡವಿ ಐಕಾನ್ ಕಾರಿನಲ್ಲಿ ಆಫೀಸಿಗೆ ಹೋಗುತ್ತಾರೆ. ದಾರಿಯುದ್ದಕ್ಕೂ ಕಾರಿನ ಕೀಯ ಸಮಸ್ಯೆ ಅವರ ತಲೆಯನ್ನು ಕೊರೆಯುತ್ತಿರುತ್ತದೆ. ಬೀದಿಯಲ್ಲಿ ಎಲ್ಲರೂ ಇವತ್ತೇಕೆ ಸುಕೇಶ್ ಅವರು ಬಿಎಂಡಬ್ಲೂನಲ್ಲಿ ಹೋಗುತ್ತಿಲ್ಲ ಎಂಬ ಬಗ್ಗೆ ಸಮಾಲೋಚನೆ ನಡೆಸಲಾರಂಭಿಸುತ್ತಾರೆ. ಮಧ್ಯಾಹ್ನ 3.30 ಆಗುವಾಗ ಒಂದು ಸಂಗತಿ ಗೊತ್ತಾಗುತ್ತದೆ. ಹೊಸದಾಗಿ ಸೇರಿದ ಕೆಲಸಗಾರ್ತಿಯೊಬ್ಬಳು ಧಣಿಗಳ ಪ್ಯಾಂಟನ್ನು ಒಗೆದು 16ನೆಯ ಮಹಡಿಯಲ್ಲಿ ಒಣ ಹಾಕಿರುತ್ತಾಳೆ. ಕೀ ಅದರ ಜೇಬಿನಲ್ಲಿ ಉಳಿದಿರುತ್ತದೆ. ಅದು ಗೊತ್ತಾದದ್ದು ಶ್ರೀಮತಿ ಗೀತಾ ಹಿಮಾನಿಯವರಿಗೆ. ಪ್ರತಿದಿನ ಅವರು ಇಸ್ತ್ರಿ ಹಾಕಿದ ಡ್ರೆಸ್‌ಗಳನ್ನು ನೀಟ್ ಹಾಕಿ ತೆಗೆದಿಡುವಾಗ ಕಾರಿನ ಕೀಯ ರಹಸ್ಯ ಹೊರಬಿದ್ದಿತ್ತು.
Related Articles
ಮರುದಿನ ಬೆಳಗ್ಗೆ ಎದ್ದ ಕೂಡಲೇ ತಮ್ಮ ಪತಿಯನ್ನು ತರಾಟೆಗೆ ತೆಗೆದುಕೊಂಡರು. “”ರಾತ್ರಿ 3 ಗಂಟೆಗೆಲ್ಲ ನೀವು ಎಲ್ಲಿ ಅಲೆದಾಡಲು ಹೋಗುವುದು?”
“”ಇಲ್ಲವಲ್ಲ, ನಾನು ಮನೆಯಲ್ಲಿಯೇ ಇದ್ದೆ” ಸುಕೇಶ್ ಅವರ ನಿರಾಳ ಉತ್ತರ.
Advertisement
“”ಮತ್ತೆ ಹೆಲಿಕಾಪ್ಟರ್ ರಾತ್ರಿ 3 ಗಂಟೆಗೆ ಮೇಲ್ಮಹಡಿಯಲ್ಲಿ ಲ್ಯಾಂಡ್ ಆಯಿತಲ್ಲ. ಅದರ ಶಬ್ದದ ಕಿರಿಕಿರಿಗೆ ನನಗೆ ನಿದ್ದೆಯೇ ಇಲ್ಲ!”“”ಹೋ ಅದಾ? ಅದು ಕಾರಿನ ಕೀ ಕಳೆದುಹೋದ ಬಗ್ಗೆ ಕಾರಿನ ಕಂಪೆನಿಗೆ ಕಂಪ್ಲೇಂಟ್ ಕೊಟ್ಟಿದ್ದೆ. ಜರ್ಮನಿಯಿಂದ ಅದರ ಟೆಕ್ನೀಶಿಯನ್ಸ್ ಬಂದಿದ್ದ-ಡುಪ್ಲಿಕೇಟ್ ಕೀ ಕೊಡಲು”
“ಹಾ! ಅವಸ್ಥೆಯೆ!’ ಗೀತಾ ಉದ್ಗರಿಸಿದರು.
.
.
ಈ ಸಮಸ್ಯಾ ಪ್ರಕರಣ ಘಟಿಸಿದ ಮೇಲೆ ಅವರ ಮನೆಯಲ್ಲಿ ಕೆಲಸಕ್ಕಿರುವ ಗುಂಡನಿಗೆ ಜ್ಞಾನೋದಯವಾಗಿದೆ. “ನಾನಂತೂ ಹೊಸ ಮನೆ ಖರೀದಿಸುವಾಗ ತುಂಬ ಜಾಗ್ರತೆ ವಹಿಸುತ್ತೇನೆ. ಇಷ್ಟು ದೊಡ್ಡ ಮನೆ ಬೇಡವೇ ಬೇಡ’ ಎಂದು ಆಗಾಗ ಹೇಳುವ ಆತ, ಬ್ರೋಕರ್‌ಗಳಿಗೆ ಫೋನ್ ಮಾಡಿ “”ಎಲ್ಲಿಯಾದರೂ 2 ಬಿಎಚ್‌ಕೆ ಮನೆ ಇದ್ದರೆ ಹೇಳಿ” ಎಂದು ಕೇಳಲಾರಂಭಿಸಿದ್ದಾನೆ. ಶಶಿ