Advertisement

ಯಕ್ಷಗಾನ ಪ್ರದರ್ಶನಕ್ಕೆ ಸರಳ ರಂಗಸ್ಥಳವೇ ಸೂಕ್ತ

11:53 PM Feb 17, 2024 | Team Udayavani |

ಯಕ್ಷಗಾನ ಕಲಾ ಪ್ರದರ್ಶನ ನಡೆಯುವ ರಂಗ ಸ್ಥಳವು ಒಂದು ಅತ್ಯಂತ ಸರಳವಾದ ರಚನೆಯನ್ನು ಹೊಂದಿರುವ ವೇದಿಕೆ. ಅದು ಯಕ್ಷಗಾನದ ಹೆಚ್ಚುಗಾರಿಕೆಯೂ ಹೌದು. ವೇದಿಕೆ ಸರಳವಾಗಿರುವ ಕಾರಣದಿಂದಲೇ, ಯಕ್ಷಗಾನದ ಭವ್ಯವಾದ ವೇಷ ಗಳು ತಮ್ಮ ಕುಣಿತ ಹಾಗೂ ಚಲನೆಗಳ ಮೂಲಕ ವೇದಿಕೆಯನ್ನು ತುಂಬಿಕೊಂಡು ಕಾಣುತ್ತವೆ. ಪಾತ್ರಧಾರಿಗಳ ಬಳಕೆಗಾಗಿ ಈ ರಂಗಸ್ಥಳದಲ್ಲಿ ಅಷ್ಟೇ ಸರಳವಾದ ಅತ್ತಿತ್ತ ಚಲಿಸಬಲ್ಲ ಒಂದು ಪೀಠ ವಿರುತ್ತದೆ. ರಥ ಎಂದೂ ಇದನ್ನು ಕರೆಯುತ್ತಾರೆ. ಪಾರಂಪರಿಕವಾಗಿ ಬಂದಿರುವ ಯಕ್ಷಗಾನ ಪ್ರದ ರ್ಶನಗಳ ಕೆಲವು ನಿರ್ದಿಷ್ಟ ರಂಗಚಲನೆಗಳಿಗೆ ಈ ಚಲಿಸುವ ಪೀಠವು ಪೂರಕವೂ ಆಗಿದೆ. ಆದರೆ ಹಲವು ವರ್ಷಗಳ ಹಿಂದೆಯೇ ಯಕ್ಷಗಾನದ ರಂಗಕಲ್ಪನೆ ಇಲ್ಲದವರ ಕೊಡುಗೆಯಾಗಿ ಈ ಪೀಠ ಅಥವಾ ರಥದ ಜಾಗದಲ್ಲಿ ಭವ್ಯ ಸಿಂಹಾಸನಗಳು ರಂಗಸ್ಥಳವನ್ನೇರಿವೆ. ಯಕ್ಷಗಾನ ಕಲೆಯ ಸ್ವರೂಪದ ಬಗ್ಗೆ ಸರಿಯಾದ ತಿಳಿವಳಿಕೆಯಿಲ್ಲದವರು ಮಾಡಿರುವ ಅಧ್ವಾನ ಇದು. ಕೆಲವು ಮೇಳಗಳು ಮಾತ್ರ ಪರಂಪರೆಗೆ ಅಂಟಿಕೊಂಡು ಈಗಲೂ ಪೀಠವನ್ನೇ ಬಳಸಿ ಕೊಳ್ಳುತ್ತಿರುವುದು ಶ್ಲಾಘಿಸಲೇ ಬೇಕಾದ ವಿಷಯ.

Advertisement

ವೇದಿಕೆಯಲ್ಲಿ ಸಿಂಹಾಸನದ ಬಳಕೆ ನಾಟಕದ ಕ್ರಮ. ನಾಟಕದಲ್ಲಿ ಪ್ರತಿಯೊಂದು ದೃಶ್ಯಕ್ಕೂ ವೇದಿಕೆ ಯನ್ನು ನಾನಾ ಬಗೆಯ ಪರಿಕರಗಳನ್ನು ಬಳಸಿಕೊಂಡು ಸಜ್ಜುಗೊಳಿಸುತ್ತಾರೆ. ಯಕ್ಷಗಾನದಲ್ಲಿ ರಂಗಸಜ್ಜಿಕೆ ಎಂಬ ಪರಿಪಾಠವೇ ಇಲ್ಲ. ಮಾಡಿಸಿದ ವರಿಗೆ ಮತ್ತು ಮಾಡಿದವರಿಗೆ ಮಾತ್ರ ಮೆಚ್ಚುಗೆ ಯಾಗಬಹುದಾದ ಆ ಸಿಂಹಾಸನ, ನಿಜಕ್ಕೂ ಯಕ್ಷ ಗಾನದ ಕೆಲವು ರಂಗಕ್ರಮಗಳಿಗೆ ತೊಡಕೇ ಆಗುತ್ತದೆ.

ದೃಶ್ಯ ಹಿನ್ನೆಲೆಯ ರಚನೆಗಳಿಲ್ಲದೆ ಇರುವ ಯಕ್ಷ ಗಾನದ ಸರಳ ರಂಗಸ್ಥಳದಲ್ಲಿ ಸ್ವರ್ಗ ಮರ್ತ್ಯ, ಪಾತಾಳ, ಕಾಡು, ಬೆಟ್ಟ, ಸಮುದ್ರ, ಅರಮನೆ, ಋಷಿಮನೆ, ಎಲ್ಲವನ್ನೂ ಆ ಪುಟ್ಟ ಜಾಗದಲ್ಲೇ ಕಲಾವಿದರು ಕಟ್ಟಿಕೊಡುತ್ತಾರೆ. ಕಲಾವಿದರ ಹಾವಭಾವ ಮಾತು ಚಲನೆಗಳ ಪರಿಣಾಮವಾಗಿ ರಂಗದ ಮೇಲಿನ ದೃಶ್ಯ ಪ್ರೇಕ್ಷಕನ ಮನಸ್ಸಿನಲ್ಲಿ ರೂಪು ಗೊಳ್ಳುತ್ತದೆ. ಅಂದರೆ ರಂಗದಲ್ಲಿ, ದೃಶ್ಯಗಳು ಮೂಡಿಬರುವ ಪ್ರಕ್ರಿಯೆ ಯಲ್ಲಿ ಪ್ರೇಕ್ಷಕನೂ ಪಾಲುದಾರ ನಾಗಿರುತ್ತಾನೆ. ಅದು ಯಕ್ಷಗಾನ ರಂಗಭೂಮಿಯ ವೈಶಿಷ್ಟé.ನಾನು ಸಿಂಹಾಸನವನ್ನೇರಿಕೊಳ್ಳುತ್ತೇನೆ ಎಂದು ಒಬ್ಬ ಅರಸನ ಪಾತ್ರಧಾರಿ ಹೇಳುವಾಗ ಅಲ್ಲಿ ಸಿಂಹಾಸನವೇ ಇದ್ದರೆ, ಪ್ರೇಕ್ಷಕನಿಗೆ ಹೆಚ್ಚು ಯೋಚಿಸಲಿಕ್ಕೇನೂ ಇಲ್ಲ. ಆದರೆ ರಂಗಸ್ಥಳದ ಸರಳವಾದ ರಥ ಅಥವಾ ಪೀಠವನ್ನು ಉದ್ದೇಶಿಸಿ ಅರಸನ ಪಾತ್ರಧಾರಿ ಸಿಂಹಾಸನವನ್ನೇರಿಕೊಳ್ಳುತ್ತೇನೆ ಅನ್ನುವಾಗ ಪ್ರೇಕ್ಷಕ ಆ ಪೀಠವನ್ನು ಸಿಂಹಾಸನವಾಗಿ ಕಲ್ಪಿಸಿಕೊಳ್ಳುವ ಯೋಚನೆ ಮಾಡಬೇಕಾಗುತ್ತದೆ. ಅಂದರೆ ಯಕ್ಷಗಾನದಲ್ಲಿ ಪ್ರೇಕ್ಷಕರು, ಕೇವಲ ರಂಗಸ್ಥಳ ನೋಟಕರಲ್ಲ. ಪ್ರದರ್ಶನವನ್ನು ನೋಡುತ್ತಾ ಅಲ್ಲಿನ ದೃಶ್ಯಗಳನ್ನು ತಮ್ಮ ಮನಸ್ಸಿನಲ್ಲಿ ತಾವೇ ಕಟ್ಟಿಕೊಳ್ಳುತ್ತಾ ಹೋಗುತ್ತಾರೆ. ಆಗ ಪ್ರೇಕ್ಷಕನ ಮನಸ್ಸು ಹೆಚ್ಚು ಜಾಗೃತ ಹಾಗೂ ಸೃಜನಶೀಲ ಸ್ಥಿತಿಯಲ್ಲಿ ಇರುತ್ತದೆ. ಅಂದರೆ ಒಂದು ರೀತಿಯಲ್ಲಿ ಪ್ರೇಕ್ಷಕ ಕಲಾ ಪ್ರದರ್ಶನದಲ್ಲಿ ತಾನೂ ಒಳಗೊಳ್ಳುತ್ತಾನೆ. ರಂಗಸ್ಥಳ ದಲ್ಲಿ ಸಿಂಹಾಸನದಂತಹ ರಚನೆಯ ಬಳಕೆಯಿಂದ, ಯಕ್ಷಗಾನದ ಪ್ರೇಕ್ಷಕನ ಕಲಾನುಭವಕ್ಕೆ ಅಡಚಣೆಯೇ ಆಗುತ್ತದೆ.

ಯಕ್ಷಗಾನದ ಸರಳ ರಂಗಸ್ಥಳದ ಪರಿಕಲ್ಪನೆಗೆ ಹಾನಿ ಯನ್ನು ಉಂಟುಮಾಡುವ ಇನ್ನಿತರ ಕಲಾಪಗಳೂ ಅನೇಕ ಪ್ರದರ್ಶನ ಗಳಲ್ಲಿ ನಡೆಯುತ್ತಿವೆ. ಪ್ರದರ್ಶನ ಭರ್ಜರಿಯಾಗಬೇಕೆಂಬ ನಿಟ್ಟಿನಲ್ಲಿ ರಂಗಸ್ಥಳವನ್ನು ಅತಿಯಾಗಿ ಅಲಂಕರಿಸುವುದು ಅಂತಹ ಇನ್ನೊಂದು ತೆವಲು. ರಂಗಸ್ಥಳದ ಅಲಂಕಾರ ಅತಿಯಾದಷ್ಟೂ ಪ್ರದರ್ಶನ ಕಳೆಗೆಡುತ್ತದೆಂಬ ಸತ್ಯವನ್ನರಿಯದ ಈ ಮಂದಿ ಬಾಹ್ಯಾಡಂಬರಕ್ಕೆ ನೀಡುವ ಪ್ರಾಶಸ್ತ್ಯದ ಬದಲು ತಾವೊಂದು ಕಲಾಸೇವೆ ಮಾಡುತ್ತಿದ್ದೇವೆ; ತಮ್ಮ ಸೇವೆಯಿಂದ ದೇವರಿಗೆ ಪ್ರೀತಿಯುಂಟಾಗಬೇಕೆಂದು ಯೋಚಿಸುವುದಿಲ್ಲ. ಕಲೆಯ ಮೂಲಸತ್ವವನ್ನರಿಯದ ಕೆಲವು ಅಲಂಕಾರ ಸಂಯೋಜಕರ ಸೂಚನೆ ಹಾಗೂ ಕೆಲವು ಮಂದಿ ಪ್ರೇಕ್ಷಕರ ಹೊಗಳಿಕೆಯ ಮಾತಿಗೆ ಬೆಲೆ ಕೊಡುವುದ ರಿಂದ ಇಂತಹ ಅಪಸವ್ಯಗಳು ನಡೆಯುತ್ತಿರುತ್ತವೆ.

ರಂಗಸ್ಥಳದ ಕಂಬಗಳನ್ನು ಹೂಮಾಲೆಗಳಿಂದ ಸುತ್ತಿ ಸುತ್ತಿ ಉಬ್ಬಿಸುವುದು, ಹೂಗಳ ಜಾಲರಿಯನ್ನು ಮೇಲಿನಿಂದ ಇಳಿಬಿಟ್ಟು ದೃಶ್ಯವೀಕ್ಷಣೆಯ ಕ್ಷೇತ್ರವನ್ನು ಕುಗ್ಗಿಸುವುದು ಅಲಂಕಾರಪ್ರಿಯರ ಚಾಳಿ. ಒಂದು ಅಚ್ಚುಕಟ್ಟಾದ ಉತ್ತಮ ಬಯಲಾಟ ಪ್ರದರ್ಶನಕ್ಕೆ ಸರಳ ರಂಗಸ್ಥಳವೇ ಸೂಕ್ತ. ರಂಗಸ್ಥಳದ ಅತಿಯಾದ ಅಲಂಕಾರ, ರಂಗದ ಮೇಲಿನ ಪಾತ್ರಗಳನ್ನು ಮಸುಕುಗೊಳಿಸುತ್ತವೆ ಮಾತ್ರವಲ್ಲ, ತಮ್ಮ ಶ್ರದ್ಧಾ ಪೂರ್ವಕ ನಿರ್ವಹಣೆಯಿಂದ ಪಾತ್ರವನ್ನು ನಿರ್ವ ಹಿಸುವ ಕಲಾವಿದನ ಪರಿಶ್ರಮದ ಮೇಲೆ ಋಣಾತ್ಮಕ ಪರಿಣಾಮವನ್ನೇ ಬೀರುತ್ತದೆ.
ಸೇವೆ ಆಟಗಳಲ್ಲಿ ಸಾಕಷ್ಟು ಅಲಂಕಾರ ಮಾಡ ದಿದ್ದರೆ ಸಮಾಧಾನ ಹೊಂದದ ಸೇವಾಕರ್ತರಿಗೆ ಒಂದು ಸಲಹೆ ಏನೆಂದರೆ, ರಂಗಸ್ಥಳವನ್ನು ಅಲಂ ಕರಿಸುವ ಕೆಲಸ ಬಿಟ್ಟುಬಿಡಿ. ಅದರ ಬದಲು ರಂಗ ಸ್ಥಳದ ಎದುರು ಭಾಗದಲ್ಲಿ, ಪ್ರೇಕ್ಷಕರ ಹಿಂಭಾಗದಲ್ಲಿ ಒಂದು ಭವ್ಯ ಮಂಟಪವನ್ನು ಕಟ್ಟಿ, ಅದನ್ನು ಪ್ರೇಕ್ಷಕರ ಪ್ರವೇಶದ್ವಾರವೆಂದು ಪರಿಗಣಿಸಿ ಭರ್ಜರಿಯಾಗಿ ಅಲಂಕರಿಸಿದರೆ, ಅದರಿಂದ ರಂಗಸ್ಥಳಕ್ಕೆ ಉಪದ್ರವೂ ಇಲ್ಲ; ಅಲಂಕಾರದ ವೈಭವವನ್ನು ಇಷ್ಟಪಡುವ ಪ್ರೇಕ್ಷಕರು ಅದನ್ನು ಹತ್ತಿರದಿಂದಲೇ ನೋಡಿ ಆನಂದಿಸುವ ಅವಕಾಶವೂ ಲಭ್ಯವಾಗುತ್ತದೆ.
ಸಂಪ್ರದಾಯ, ಪರಂಪರೆಗಳ ಬಗ್ಗೆ ಮೂಗು ಮುರಿಯದೆ, ರಂಗಸ್ಥಳದಲ್ಲಿ ನಿಜಕ್ಕೂ ಉಪ ಯುಕ್ತವೂ ಕಲೆಯ ಪ್ರದರ್ಶನಕ್ಕೆ ಪೂರಕವೂ ಆಗಿರುವ ಸರಳ ರಂಗಸ್ಥಳ ಮತ್ತು ರಥದ ಬಳಕೆಯನ್ನು ಎಲ್ಲ ವೃತ್ತಿಪರ ಮೇಳಗಳೂ, ಹವ್ಯಾಸಿ ಯಕ್ಷಗಾನ ಸಂಘಟನೆಗಳೂ ಅಳವಡಿಸುವ ಬಗ್ಗೆ ಯೋಚಿಸು ವರೆಂದು ನಿರೀಕ್ಷಿಸಬಹುದೇ?

Advertisement

 ಸದಾಶಿವ , ಉಚ್ಚಿಲ

Advertisement

Udayavani is now on Telegram. Click here to join our channel and stay updated with the latest news.

Next