ಅಮೀನಗಡ: ಪಟ್ಟಣದ ಪಪಂನಲ್ಲಿ ಗಣರಾಜ್ಯೋತ್ಸವವನ್ನು ಸರಳವಾಗಿ ಆಚರಿಸಲಾಯಿತು. ಇದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಸಿದ್ಧರಾಗಿದ್ದ ನೂರಾರು ಮಕ್ಕಳಿಗೆ ನಿರಾಸೆಯಾಗಿದೆ.
ಪಪಂನಲ್ಲಿ ಪ್ರತಿ ವರ್ಷ ನಡೆಯುವ ಸ್ವಾತಂತ್ರದ್ಯ ದಿನಾಚರಣೆ ಮತ್ತು ಗಣರಾಜ್ಯೋತ್ಸವವನ್ನು ಅದ್ಧೂರಿಯಾಗಿ ನೆರವೇರಿಸಿ ಪಟ್ಟಣದ ಹಲವು ಶಾಲೆ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿತ್ತು. ಆದರೆ ಕಳೆದ ಆಗಸ್ಟ್ ತಿಂಗಳಲ್ಲಿ ನೆರೆ ಹಾಗೂ ಮಳೆ ಕಾರಣದಿಂದ ಸರಳವಾಗಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಗಿತ್ತು.
ಹೀಗಾಗಿ ಗಣರಾಜ್ಯೋತ್ಸವದಂದು ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಉತ್ಸುಕರಾಗಿದ್ದರೂ ಕೂಡ ಕಾರ್ಯಕ್ರಮಗಳಿಗೆ ಅವಕಾಶ ನೀಡದಿರುವುದು ಮಕ್ಕಳಲ್ಲಿ ನಿರಾಶೆಯನ್ನುಂಟು ಮಾಡಿದೆ. ಪ್ರತಿ ವರ್ಷ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಪಂ ಆವರಣದಲ್ಲಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡು ಅದ್ಧೂರಿಯಾಗಿ ಆಚರಿಸಿ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪಪಂ ಆಡಳಿತ ಮಂಡಳಿ ಹಾಗೂ ಕೆಲ ಸದಸ್ಯರಿಂದ ಮಕ್ಕಳಿಗೆ ಪ್ರೋತ್ಸಾಹಿಸಲು ವೈಯಕ್ತಿಕ
ಬಹುಮಾನ ನೀಡಲಾಗುತಿತ್ತು. ಆದರೆ ಈ ಬಾರಿಯೂ ಜ.26ರಂದು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿಲ್ಲ. ಇದರಿಂದ ಗಣರಾಜ್ಯೋತ್ಸವದಲ್ಲಿ ಹಬ್ಬದ ವಾತಾವರಣ ಕಂಡು ಬರಲಿಲ್ಲ. ಪಪಂ ಈ ನಿರ್ಧಾರಕ್ಕೆ ಪಟ್ಟಣದ ಪ್ರಜ್ಞಾವಂತರೂ ಬೇಸರ ವ್ಯಕ್ತಪಡಿಸಿದ್ದಾರೆ.
ಮಕ್ಕಳಿಗೆ ಬೇಸರ: ಗಣರಾಜ್ಯೋತ್ಸವ ನಿಮಿತ್ತ ಪಟ್ಟಣದ ವಿವಿಧ ಶಾಲೆಗಳಲ್ಲಿ ತಿಂಗಳಿಂದ ಸಿದ್ಧತೆ ಮಾಡಿಕೊಂಡು ಶಾಲೆಗಳಲ್ಲಿ ಪ್ರತಿಭೆ ಪ್ರದರ್ಶಿಸುತ್ತಾರೆ. ಅದರಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪಪಂಯಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವಕಾಶ ನೀಡುತ್ತಾರೆ. ಆದರೆ ಪಪಂನಲ್ಲಿ ಈ ಬಾರಿಯೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯದಿರುವುದು ಮಕ್ಕಳಲ್ಲಿ ಬೇಸರವನ್ನುಂಟು ಮಾಡಿದೆ.