ಅದೊಂದು ಹಳ್ಳಿ. ರಸ್ತೆ ಬದಿಯಲ್ಲಿ ಕುಳಿತಿದ್ದ ಒಬ್ಬ ವೃದ್ಧ ನಿತ್ಯವೂ ಭಿಕ್ಷೆ ಬೇಡುತ್ತಿದ್ದ. ಆ ರಸ್ತೆಯಲ್ಲಿ ಯಾರೂ ಬರುತ್ತಿರಲಿಲ್ಲ. ಬಂದರೂ ದಿನದಲ್ಲಿ ಒಂದಿಬ್ಬರಷ್ಟೇ. ಗೊತ್ತಿದ್ದರೂ ಆ ಭಿಕ್ಷುಕ ನಿತ್ಯವೂ ಬೆಳಗ್ಗೆ 8 ಗಂಟೆಗೆ ಬಂದು ಸಂಜೆ 6 ಗಂಟೆಗೆ ತೆರಳುತ್ತಿದ್ದ. ಇದನ್ನೆಲ್ಲ ದೂರದಲ್ಲೇ ನಿಂತು ಗಮನಿಸುತ್ತಿದ್ದ ಯುವಕನೊಬ್ಬ ವೃದ್ಧನ ಬಳಿ ಬಂದು, ತಾತಾ ನೀನು ನಿತ್ಯವೂ ಇಲ್ಲಿ ಬಂದು ಕುಳಿತುಕೊಳ್ಳುತ್ತಿಯಾ. ಆದರೆ ನಿನಗೆ ಸಿಗುವ ಭಿಕ್ಷೆ ಮಾತ್ರ 10- 20 ರೂ. ಮಾತ್ರ. ಅದೂ ಸಿಕ್ಕರೆ ಸಿಕ್ಕಿತ್ತು. ಇಲ್ಲವಾದರೆ ಇಲ್ಲ. ಒಂದು ದಿನವೂ ನಿನಗೆ ಇದು ಬೇಸರ ತರಿಸಲಿಲ್ಲವೇ ? ಎಂದ. ಆಗ ಆ ವೃದ್ಧ ಹೇಳಿದ ಮಗು, ಜೀವನದಲ್ಲಿ ಯಾವಾಗ ಏನು ಬೇಕಾದರೂ ಆಗಬಹುದು. ನನ್ನ ಹೆತ್ತವರು ಭಿಕ್ಷುಕರಾಗಿದ್ದರು.
ಜೀವನದಲ್ಲಿ ನಾನು ಈ ವೃತ್ತಿಯನ್ನು ಮಾಡಲೇಬಾರದು ಎಂದು ತೀರ್ಮಾನಿಸಿ ನಗರಕ್ಕೆ ಹೋಗಿ ಸಾಕಷ್ಟು ಆಸ್ತಿ, ಹಣ ಸಂಪಾದಿಸಿದೆ. ಆದರೆ ತಂದೆ, ತಾಯಿಯನ್ನು ಮರೆತು ಬಿಟ್ಟೆ. ಒಂದು ದಿನ ಹೆಂಡತಿ, ಮಕ್ಕಳೊಂದಿಗೆ ಇದ್ದಾಗ ನನ್ನ ಹುಡುಕಿ ಬಂದ ಹೆತ್ತವರನ್ನು ಮಾತನಾಡಿಸದೆ ಹೋದೆ. ಇದರಿಂದ ಮನನೊಂದು ಅವರು ಹೊರಟು ಹೋದರು. ಆದರೆ ಯಾವುದೋ ಕಾಯಿಲೆ ನನಗೆ ಬಂತೆಂದು ಹೆಂಡತಿ, ಮಕ್ಕಳು ತಿರಸ್ಕರಿಸಿದರು. ನನ್ನ ಆಸ್ತಿ, ಹಣವನ್ನು ದೋಚಿದರು. ನಾನು ಬೀದಿಗೆ ಬಿದ್ದೆ. ಅನಂತರ ಭಿಕ್ಷಾಟನೆಯೇ ನನ್ನ ವೃತ್ತಿಯಾಯಿತು. ಊರೂರು ಸುತ್ತಿ ಈ ಹಳ್ಳಿ ಸೇರಿದೆ. ಇದು ನಾನು ಬೆಳೆದ ಊರು.
ನನ್ನ ಹೆತ್ತವರು ಇಲ್ಲೇ ಕುಳಿತು ಭಿಕ್ಷೆ ಬೇಡಿ ಬಂದ ಹಣದಲ್ಲಿ ನನ್ನ ಹೊಟ್ಟೆ ತುಂಬಿಸುತ್ತಿದ್ದರು. ಹೀಗಾಗಿ ನಾನು ಇಲ್ಲೇ ಭಿಕ್ಷೆ ಬೇಡುತ್ತಿದ್ದೇನೆ. ಇಲ್ಲಿರುವ ನೆನಪು ಖುಷಿ ಕೊಡುತ್ತದೆ. ತಂದೆ, ತಾಯಿಯೊಂದಿಗೆ ಕಳೆದ ಮಧುರ ಬಾಲ್ಯದ ನೆನಪು ಇನ್ನೂ ಹಸಿಯಾಗಿದೆ ಎಂದು ಹೇಳಿ ಮೌನವಾದ.
ಹೌದು ಬದುಕಿನಲ್ಲಿ ಯಾವಾಗ ಏನೂ ಬೇಕಾದರೂ ಆಗಬಹುದು. ಬದುಕಿನ ತಿರುವಿನಲ್ಲಿ ಸಿಗುವ ಪಾಠ ಎಂದಿಗೂ ಮರೆಯಲಾಗದು. ಮುಗ್ಧ ಮನಸ್ಸಿನವರು ನಾವಾಗಿದ್ದರೆ ಅನುಭವಗಳೇ ನಮಗೆ ಖುಷಿಕೊಡುತ್ತದೆ, ಬದುಕಿಗೊಂದು ದಾರಿ ತೋರುತ್ತದೆ. ಅದನ್ನು ಸಂತೋಷದಿಂದ ಸ್ವೀಕರಿಸುವ ಮನೋಭಾವ ನಮ್ಮದಾಗಿರಬೇಕು.
-ವಿದ್ಯಾ ಕೆ. ಇರ್ವತ್ತೂರು