Advertisement

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಗಣನೀಯ ಇಳಿಕೆ

03:49 PM May 01, 2020 | mahesh |

ಮೈಸೂರು: ಜಿಲ್ಲೆಗೆ ಎದುರಾಗಿದ್ದ ಕೋವಿಡ್ ವೈರಸ್‌ ಆಂತಕ ನಿಧಾನವಾಗಿ ದೂರವಾಗುತ್ತಿದ್ದು, ಕೆಲದಿನಗಳ ಹಿಂದೆ ಸಕ್ರಿಯ ಸೋಂಕಿತರಲ್ಲಿ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದ್ದ ಮೈಸೂರು ಇದೀಗ ಸೋಂಕಿನಿಂದ ಹೊರ ಬರುತ್ತಿರುವುದು ಸಾರ್ವಜನಿಕರಲ್ಲಿ ನೆಮ್ಮದಿ ಮೂಡಿಸಿದೆ. ಬೆಂಗಳೂರು ಬಳಿಕ ಮೈಸೂರು ಹೆಚ್ಚು ಸೋಂಕಿತರನ್ನು ಹೊಂದಿರುವ ಜಿಲ್ಲೆ. ಬೆಂಗಳೂರಿನಲ್ಲಿ 130ಕ್ಕೂ ಹೆಚ್ಚು ಸೋಂಕು ಪ್ರಕರಣಗಳಿದ್ದರೆ, ಮೈಸೂರಿನಲ್ಲಿ 90 ಪ್ರಕರಣಗಳು ದಾಖಲಾಗಿವೆ. ಕಳೆದ 15 ದಿನಗಳ ಹಿಂದೆ ಪ್ರತಿನಿತ್ಯ 5-10 ಕೋವಿಡ್ ದಾಖಲಾಗುತ್ತಿದ್ದವು. ಇದರಿಂದ ಸಾರ್ವಜನಿಕರಲ್ಲದೆ, ಜಿಲ್ಲಾಡಳಿವೂ ತಲೆ ಕೆಡಿಸಿಕೊಂಡಿತ್ತು. ಇದೀಗ ಕಳೆದ 1 ವಾರದಲ್ಲಿ ಹೊಸ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಈ ಅವಧಿಯಲ್ಲಿ ಕೇವಲ 2 ಪ್ರಕರಣಗಳು ಮಾತ್ರ ದಾಖಲಾಗಿದೆ. ಆದರೆ ಇದೇ ಅವಧಿಯಲ್ಲಿ 15ಕ್ಕೂ ಹೆಚ್ಚು ಮಂದಿ ಬಿಡುಗಡೆ ಯಾಗಿದ್ದಾರೆ.

Advertisement

ಗುರುವಾರ 7 ಮಂದಿ ಗುಣಮುಖರಾಗಿ ಡಿಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಮೈಸೂರು ಕೋವಿಡ್ ಮುಕ್ತವಾಗುತ್ತಿರುವ ಮುನ್ಸೂಚನೆ ನೀಡಿದೆ. ಗುರುವಾರ ಗುಣ ಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆ ಯಾದ ಪಿ 270, ಪಿ 321, ಪಿ 365, ಪಿ 366, ಪಿ 183, ಪಿ 303, ಪಿ 369 ಜ್ಯುಬಿಲಿಯಂಟ್‌ ಗೆ  ಬಂಧಿಸಿದವರಾಗಿದ್ದು, ಎಲ್ಲಾ ಪರೀಕ್ಷೆಗಳನ್ನು ಮಾಡಿದ ಬಳಿಕ ನೆಗೆಟಿವ್‌ ಬಂದ ಮೇಲೆ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಕೆಲ ದಿನಗಳವರೆಗೆ ಎಲ್ಲೂ ಹೋಗದಂತೆ ಸೂಚಿಸಲಾಗಿದೆ. ಈವರೆಗೆ 65 ಮಂದಿ ಸೋಂಕಿತರು ಗುಣಮುಖವಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ 25 ಮಂದಿ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕ್ವಾರಂಟೈನ್‌ಗಳ ಸಂಖ್ಯೆ ಇಳಿಮುಖ: ಜಿಲ್ಲೆ ಯಲ್ಲಿ ಹೋಂ ಕ್ವಾರಂಟೈನ್‌ಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ. ಇದು ವರೆಗೆ 4,762 ಮಂದಿ ಮೇಲೆ ನಿಗಾವಸಿದ್ದು, ಅದರಲ್ಲಿ 4511 ಮಂದಿ 14 ದಿನಗಳ ಕ್ವಾರಂಟೈನ್‌ ಮುಗಿಸಿದ್ದಾರೆ. ಸದ್ಯ 223 ಮಂದಿ ಮಾತ್ರ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಒಟ್ಟಾರೆಯಾಗಿ 3966 ಮಂದಿಯ ಮಾದರಿ ಪರೀಕ್ಷಿಸಲಾಗಿದ್ದು, 3876 ಮಂದಿಗೆ ಕೊರೋನಾ ಸೋಂಕು ಇಲ್ಲದಿರುವುದು ಖಚಿತವಾಗಿದ್ದು, 90 ಮಂದಿಯಲ್ಲಿ ಪಾಸಿಟಿವ್‌ ಬಂದಿತ್ತು. ಇದರ ಜೊತೆಗೆ ಕ್ವಾರಂಟೈನ್‌ಗಳ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಹೊಸ ಪ್ರಕರಣ ದಾಖಲಾಗುತ್ತಿಲ್ಲ.

ಮಾಸ್ಕ್ ರಹಿತ ಓಡಾಡಿದರೆ ದಂಡ
ಕೋವಿಡ್ ತಡೆಗೆ ಮೈಸೂರಿನಲ್ಲಿ ದಂಡ ವಸೂಲಿಗೆ ನಗರ ಪಾಲಿಕೆ ಮುಂದಾಗಿದ್ದು, ಗುರುವಾರ ಮಾಸ್ಕ್ ಧರಿಸದ 142 ಮಂದಿಗೆ ತಲಾ 100 ರಂತೆ ದಂಡ ವಿಧಿಸಿ 14,200 ರೂ. ಸಂಗ್ರಹಿಸಲಾಗಿದೆ. ಈ ಬಗ್ಗೆ ಪಾಲಿಕೆ ಆಯುಕ್ತ ಗುರುದತ್‌ ಹೆಗಡೆ ಮಾಹಿತಿ ನೀಡಿದ್ದು, ಮೈಸೂರಲ್ಲಿ 9 ತಂಡ ರಚನೆ ಮಾಡಲಾಗಿದೆ. 1 ತಂಡದಲ್ಲಿ ಪಾಲಿಕೆ, ಪೊಲೀಸ್‌ ಸಿಬ್ಬಂದಿ ಇರಲಿದ್ದಾರೆ. ಎಲ್ಲೆಂದರಲ್ಲಿ ಉಗಿದರೆ ದಂಡ ಬೀಳಲಿದೆ. ಲಾಕ್‌ಡೌನ್‌ ಸಂಪೂರ್ಣ ಸಡಿಲಗೊಂಡರೂ ಈ ಕಾನೂನು ಜಾರಿಯಲ್ಲಿ ಇರುತ್ತದೆ. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಸಾರ್ವಜನಿಕರು ನಿಯಮ ಉಲ್ಲಂಘಿಸದೆ ಆರೋಗ್ಯ ಕಾಪಾಡಿಕೊಳ್ಳಬೇಕಾಗಿದೆ.

ಕ್ರಿಕೆಟ್‌ ಆಡುತ್ತಿದ್ದ ಯುವಕರಿಗೆ ಡ್ರಿಲ್‌
ಲಾಕ್‌ಡೌನ್‌ ಉಲ್ಲಂಘಿಸಿ ಕ್ರಿಕೆಟ್‌ ಆಡುತ್ತಿದ್ದವರಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಸಿದ್ದಾರ್ಥ ನಗರದಲ್ಲಿ ಮಾಸ್ಕ್ ಧರಿಸದೆ ಕ್ರಿಕೆಟ್‌ ಆಡುತ್ತಿದ್ದ ಯುವಕರಿಗೆ ಡ್ರಿಲ್‌ ಮಾಡಿಸಿದ್ದಾರೆ. ನಜರ್‌ಬಾದ್‌ ಪೊಲೀಸರು ಮೊದಲು ಎಲ್ಲರಿಗೂ ಉಚಿತವಾಗಿ ಮಾಸ್ಕ್ ವಿತರಿಸಿ ಬಳಿಕ ಕ್ರಿಕೆಟ್‌ ಬ್ಯಾಟ್‌ ಕೆಟ್‌ ವಶಕ್ಕೆ ಪಡೆದು ಕೊಂಡು ಬಸ್ಕಿ, ದಂಡ ಹೊಡೆಸಿದ್ದಾರೆ. ನಂತರ ಸ್ಯಾನಿಟೈಸರ್‌ನಿಂದ ಕೈಗಳನ್ನು ಸ್ವಚ್ಛಗೊಳಿಸಿ ಯುವಕರಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next