Advertisement

ಶ್ರೇಷ್ಟರ ಕುರಿತ ಕಿರುಚಿತ್ರ

12:10 PM Oct 02, 2017 | Team Udayavani |

ಒಂದು ಸಿನಿಮಾ ನಿರ್ದೇಶನ ಮಾಡುವುದಕ್ಕೆ ಮೊದಲ ವೇದಿಕೆ ಅಂದರೆ, ಯಾವುದಾದರೊಂದು ಶಾರ್ಟ್‌ಫಿಲ್ಮ್ ಮಾಡುವುದು. ಇದು ಈಗಿನ ಟ್ರೆಂಡ್‌. ಈಗಾಗಲೇ ಹೊಸಬರು ಅಂಥದ್ದೊಂದು ಸಾಹಸಕ್ಕೆ ಕೈ ಹಾಕುವ ಮೂಲಕ ಅದರಲ್ಲಿ ಎಷ್ಟೋ ಮಂದಿ ಸಕ್ಸಸ್‌ ಆಗಿದ್ದೂ ಉಂಟು. ಇದೀಗ ಅಂಥದ್ದೇ ಯುವತಂಡವೊಂದು ಕಿರುಚಿತ್ರ ಮಾಡುವ ಮೂಲಕ ಅದನ್ನೀಗ ಯೂಟ್ಯೂಬ್‌ಗ ಅಪ್‌ಲೋಡ್‌ ಮಾಡಿ, ತಮ್ಮ ಪ್ರತಿಭೆಯನ್ನು ಹೊರಹಾಕಿದೆ. ಅಂದಹಾಗೆ, ಆ ಕಿರುಚಿತ್ರದ ಹೆಸರು “ಶ್ರೇಷ್ಟರು’. ಶೀರ್ಷಿಕೆಯೇ ಹೇಳುವಂತೆ, ಇದೊಂದು ದೇಶ ಕಾಯುವ ಸೈನಿಕ ಹಾಗೂ ದೇಶಕ್ಕೆ ಅನ್ನ ಕೊಡುವ ರೈತಾಪಿ ವರ್ಗದ ಚಿತ್ರ.

Advertisement

ಈ ಕಿರುಚಿತ್ರವನ್ನು ನಿರ್ದೇಶಿಸಿರುವುದು ತ್ಯಾಗರಾಜ್‌. ಇದು ಇವರ ಮೊದಲ ಪ್ರಯತ್ನ. ಕಥೆ, ಚಿತ್ರಕಥೆ ಬರೆದಿದ್ದಾರೆ. ಹೊಸಬರ ಪ್ರಯತ್ನವನ್ನು ಮೆಚ್ಚಿಕೊಂಡು ಅವರಿಗೆ ಸಾಥ್‌ ಕೊಡುವ ಮೂಲಕ ಕಿರುಚಿತ್ರವನ್ನು ನಿರ್ಮಾಣ ಮಾಡಿರುವುದು ರಾಜೇಶ್ವರಿ. ಇವರ ಪ್ರೋತ್ಸಾಹ ಸಿಕ್ಕಿದ್ದರಿಂದಲೇ ತ್ಯಾಗರಾಜ್‌, ಒಳ್ಳೆಯ ಕಥೆ ಹೆಣೆದು, ಹೊಸ ತಂಡ ಕಟ್ಟಿಕೊಂಡು 27 ನಿಮಿಷದ ಕಿರುಚಿತ್ರವನ್ನು ನಿರ್ದೇಶಿಸಿದ್ದಾರೆ. ಈಗಾಗಲೇ “ಶ್ರೇಷ್ಟರು’ ಕಿರುಚಿತ್ರವನ್ನು ನಿರ್ದೇಶಕರು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿದ್ದಾರೆ.

“ಶ್ರೇಷ್ಟರು’ ಕಿರುಚಿತ್ರದ ಮೂಲಕ ನಿರ್ದೇಶಕರು ಹೇಳಿರುವ ವಿಷಯವಿಷ್ಟೇ. ದೇಶಕ್ಕಾಗಿ, ದೇಶದ ಜನರ ಹಿತಕ್ಕಾಗಿ ಬಿಸಿಲು, ಮಳೆ, ಛಳಿ ಎನ್ನದೆ ಗಡಿಭಾಗದಲ್ಲಿ ರಾತ್ರಿ, ಹಗಲು ಗಡಿ ಕಾಯುವ ಸೈನಿಕರ ನೋವು, ನಲಿವು ಹಾಗೂ ಇಡೀ ದೇಶಕ್ಕೆ ಅನ್ನ ಕೊಡುವ ರೈತಾಪಿ ವರ್ಗದ ನೂರಾರು ಸಮಸ್ಯೆಗಳ ನಡುವೆಯೂ, ಮುಂದುವರೆಸುವ ತಮ್ಮ ಕಾಯಕ ಎಂಥದ್ದು ಎಂಬುದನ್ನು ಈ ಕಿರುಚಿತ್ರ ಮೂಲಕ ಹೇಳಹೊರಟಿದ್ದಾರಂತೆ ನಿರ್ದೇಶಕರು. ಇಷ್ಟೆಲ್ಲಾ ಆಗಿದ್ದರೂ, ದೇಶ ಕಾಯುವ ಯೋಧರಿಗೆ, ದೇಶಕ್ಕೇ ಅನ್ನ ಕೊಡುವ ರೈತರಿಗೆ ಈಗಲೂ ಸಿಗಬೇಕಾದ ಸೌಲಭ್ಯ ಸಿಕ್ಕಿದೆಯಾ? ಎಂಬುದನ್ನಿಲ್ಲಿ ಹೇಳಿದ್ದಾರಂತೆ. 

ಅಂದಹಾಗೆ, ತ್ಯಾಗರಾಜ್‌, ತಮ್ಮ ಕಿರುಚಿತ್ರದಲ್ಲಿ ಹಲವು ಹೊಸ ಪ್ರತಿಭೆಗಳನ್ನು ಪರಿಚಯಿಸಿದ್ದಾರೆ. ನವೀನ್‌, ರಾಜ್‌, ಗಿರೀಶ್‌ ಬಿಜ್ಜಲ್‌, ಭಾರ್ಗವ ಮಹೇಶ್‌, ಅಶ್ವಿ‌ನಿ.ಕೆ.ಎನ್‌.ಕಣ್ಣನ್‌ ಸೇರಿದಂತೆ ಹಲವು ಯುವ ನಟ,ನಟಿಯರು ಇಲ್ಲಿ ನಟಿಸಿದ್ದಾರೆ. ಇನ್ನು, ಈ ಚಿತ್ರಕ್ಕೆ “ರಾಮಾ ರಾಮಾರೇ’ಗೆ ಹಿನ್ನಲೆ ಸಂಗೀತ ನೀಡಿದ್ದ ನೋಬಿಲ್‌ಪೌಲ್‌ ಸಂಗೀತವಿದೆ. ಅಜಿತ್‌ ಅವರ ಛಾಯಾಗ್ರಹಣವಿದೆ. ಕಿರಣ್‌ ಸಂಕಲನ ಮಾಡಿದ್ದಾರೆ. ಅಂದು ಪ್ರತಿಯೊಬ್ಬರೂ ತಮ್ಮ “ಶ್ರೇಷ್ಟರು’ ಕುರಿತು ಪ್ರೀತಿಯಿಂದ ಮಾತನಾಡಿದರು. ಈ ಪ್ರಯತ್ನದ ಮೂಲಕ ಹೊಸ ಹೆಜ್ಜೆ ಇಡುವ ಭರವಸೆಯೊಂದಿಗೆ ಅಂದಿನ ಮಾತುಕತೆಗೆ ಇತಿಶ್ರೀ ಹಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next