Advertisement

ನೆರೆ ಬಾಧಿತ ನಾವುಂದಕ್ಕೆ ಬೇಕಿದೆ ಕಿರು ದೋಣಿ: ಜೀವರಕ್ಷಕ ಸಲಕರಣೆ ಒದಗಿಸಲು ಮನವಿ

03:55 PM Jul 02, 2023 | Team Udayavani |

ಕುಂದಾಪುರ: ಪ್ರತೀ ವರ್ಷದ ಮುಂಗಾರಲ್ಲೂ ನಾವುಂದ ಗ್ರಾಮದ ಸೌಪರ್ಣಿಕಾ ಪಾತ್ರದ ಸಾಲುºಡ, ಕಂಡಿಕೇರಿ, ಅರೆಹೊಳೆ ಪ್ರದೇಶಗಳು ನೆರೆಗೆ ತುತ್ತಾಗುವುದು ಸಾಮಾನ್ಯ. ಈ ವೇಳೆ ಸುಮಾರು 2 ಕಿ.ಮೀ. ದೂರದ ರಸ್ತೆ ಸಂಪರ್ಕ ಕಡಿತಗೊಂಡು, ಇಲ್ಲಿನ ಜನರು, ಮಕ್ಕಳಿಗೆ ಮುಖ್ಯರಸ್ತೆಗೆ ತೆರಳಲು ದೋಣಿಯೇ ಆಸರೆಯಾಗಿದೆ. ಇಲ್ಲೀಗ 3 ದೋಣಿಗಳಿದ್ದರೂ, ಅದರಲ್ಲಿ 1 ದೊಡ್ಡ ದೋಣಿಯಾಗಿದ್ದು, ತುರ್ತಾಗಿ ಕಿರು ದೋಣಿಯ ಅಗತ್ಯವಿದೆ.
ಇಲ್ಲಿ ಸಾಲುºಡ, ಅರೆಹೊಳೆ ಭಾಗದ ಸುಮಾರು 80ಕ್ಕೂ ಅಧಿಕ ಮನೆಗಳಿದ್ದು, 30 ಹೆಕ್ಟೇರ್‌ಗೂ ಮಿಕ್ಕಿ ಗದ್ದೆಗಳಿವೆ. ಕಳೆದ ಬಾರಿ ನೆರೆಯಿಂದ ಹಾನಿಯಾದ ಕೆಲವರಿಗೆ ಕೃಷಿ ಪರಿಹಾರ ಸಿಕ್ಕಿದ್ದು, ಗೇಣಿಗೆ ವಹಿಸಿಕೊಂಡವರಿಗೆ ಮಾತ್ರ ದಾಖಲೆಯಿಲ್ಲದ ಕಾರಣಕ್ಕೆ ನಷ್ಟ ಪರಿಹಾರವೇ ಸಿಕ್ಕಿಲ್ಲ.

Advertisement

ಸದ್ಯಕ್ಕೆ ಮಳೆ ಅಷ್ಟೇನು ಜೋರಾಗಿಲ್ಲದ್ದರಿಂದ ಈವರೆಗೆ ನೆರೆ ಪರಿಸ್ಥಿತಿ ಬಂದಿಲ್ಲ. ಆದರೆ ಜುಲೈನಲ್ಲಿ ಭಾರೀ ಮಳೆಯಾಗುವ ಸಾಧ್ಯತೆಗಳಿದ್ದು, ಅದರಲ್ಲೂ ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆಯಾದರೆ, ಸೌಪರ್ಣಿಕಾ ನದಿ ತೀರದ ನಾವುಂದ ಗ್ರಾಮದ ಸಾಲುºಡ, ಕಂಡಿಕೇರಿ, ಬಾಂಗಿನ್‌ಮನೆ, ಅರೆಹೊಳೆ ಪ್ರದೇಶಗಳು ಸಂಪೂರ್ಣ ಜಲಾವೃತಗೊಂಡು, ಪೇಟೆ, ಮುಖ್ಯ ರಸ್ತೆಯ ಸಂಪರ್ಕವೇ ಕಡಿತಗೊಳ್ಳುವ ಸಾಧ್ಯತೆಗಳಿರುತ್ತವೆ.

ಹುಟ್ಟು, ಲೈಫ್‌ ಜಾಕೆಟ್‌ಗಳಿಲ್ಲ...
3 ದೋಣಿಗಳಿದ್ದರೂ, ಅವುಗಳನ್ನು ಮುನ್ನಡೆಸಲು ಬೇಕಾದ ಹುಟ್ಟು ಸಹ ಇಲ್ಲಿಲ್ಲ. ಇದರಿಂದ ಅನಿವಾರ್ಯವಾಗಿ ಸ್ಥಳೀಯರೇ ಬಿದಿರಿನ ಕೋಲನ್ನು ಹುಟ್ಟಾಗಿ ಮಾಡಿಕೊಂಡು, ಮುನ್ನಡೆಸುತ್ತಿದ್ದಾರೆ. ಇನ್ನು ದೋಣಿಯಲ್ಲಿ ತೆರಳುವ ಅಪಾಯದ ಮುನ್ನೆಚ್ಚರಿಕೆಗಾಗಿ ಲೈಫ್‌ ಜಾಕೆಟ್‌ ಧರಿಸುವುದು ಆವಶ್ಯಕ. ಆದರೆ ಈ ದೋಣಿಗಳಲ್ಲಿ ಅದು ಸಹ ಇಲ್ಲ. ದೋಣಿ ಕಟ್ಟಿಹಾಕಲು ಹಗ್ಗ ಕೂಡ ಇಲ್ಲ. ಅದನ್ನು ತುರ್ತಾಗಿ ತಾಲೂಕು ಆಡಳಿತ ಹಾಗೂ ಜಿಲ್ಲಾಡಳಿತ ಒದಗಿಸಬೇಕಾಗಿದೆ.

ಜಾನುವಾರು ಶೆಡ್‌ಗೆ ಮನವಿ
ಇಲ್ಲಿ ಪ್ರತೀ ವರ್ಷ ನೆರೆಗೆ ತುತ್ತಾಗುವುದರಿಂದ ಈ ವೇಳೆ ತಮ್ಮ – ತಮ್ಮ ಮನೆಗಳ ಜಾನುವಾರುಗಳಿಗೆ ತೊಂದರೆಯಾಗದಂತೆ ಕಾಪಾಡಿಕೊಳ್ಳುವುದೇ ಸವಾಲಿನ ಕೆಲಸ. ಇದಕ್ಕೆ ನಾವುಂದದಲ್ಲಿರುವ ಸರಕಾರಿ ಜಾಗವೊಂದರಲ್ಲಿ ಶಾಶ್ವತ ಜಾನುವಾರು ಶೆಡ್‌ ಮಾಡಿದರೆ ನೆರೆ ಬಂದಾಗಲೆಲ್ಲ ದನಗಳನ್ನು ಇಲ್ಲಿ ತಂದು ಕಟ್ಟಿ ಹೋಗಬಹುದು.

ಸಮಸ್ಯೆಗೆ ಶಾಶ್ವತ ಪರಿಹಾರ ಯಾವಾಗ?
ಸೌಪರ್ಣಿಕಾ ನದಿ ತೀರದಲ್ಲಿ ನದಿದಂಡೆಗಾಗಿ ಜನ ಹಲವು ವರ್ಷದಿಂದ ಬೇಡಿಕೆ ಇಡುತ್ತಿದ್ದರೂ, ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಹಾದುಹೋಗುವ ಅರೆಹೊಳೆಯ ರೈಲು ಮಾರ್ಗದಲ್ಲಿ ನೀರು ಹರಿದು ಹೋಗಲು ವ್ಯವಸ್ಥೆ ಹಾಗೂ ಸೌಪರ್ಣಿಕಾ ನದಿ ತೀರದಲ್ಲಿ ನದಿ ದಂಡೆ ಏರಿಸಿದರೆ ಇಲ್ಲಿ ಕೃತಕ ನೆರೆ ಉಂಟಾಗಲು ಸಾಧ್ಯವಿಲ್ಲ. ಈ ಬಗ್ಗೆ ಇಲ್ಲಿಗೆ ಪ್ರತೀ ಬಾರಿ ಭೇಟಿ ನೀಡುವ ಶಾಸಕರು, ಸಂಸದರು, ಜಿಲ್ಲಾಧಿಕಾರಿ, ತಹಶೀಲ್ದಾರ್‌ಗಳಿಗೆಲ್ಲ ಮನವಿ ಮಾಡಿದ್ದರೂ, ಈವರೆಗೆ ಬೇಡಿಕೆ ಮಾತ್ರ ಈಡೇರಿಲ್ಲ. ಇದರಿಂದ ಪ್ರತೀ ವರ್ಷವೂ ಮಳೆಯಾಗುತ್ತದೆ, ನೆರೆಯಾಗುತ್ತದೆ, ಬೆಳೆದ ಬೆಳೆಗಳೆಲ್ಲವೂ ಜಲಾವೃತಗೊಂಡು, ನಾಶವಾಗುತ್ತದೆ. ಯಾರೂ ಇಲ್ಲಿನ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವುದು ಇಲ್ಲಿನ ಜನರ ಅಭಿಪ್ರಾಯ.

Advertisement

ಗಮನಕ್ಕೆ ತಂದಿದ್ದೇವೆ
ಇತ್ತೀಚೆಗೆ ಪ್ರಾಕೃತಿಕ ವಿಕೋಪ ನಿರ್ವಹಣೆ ಕುರಿತು ಗ್ರಾ.ಪಂ.ನಲ್ಲಿ ಸಭೆ ನಡೆದಿದ್ದು, ಸಭೆಯಲ್ಲಿ ಇಲ್ಲಿನ ಜನರ ಬೇಡಿಕೆ ಹಾಗೂ ಅಗತ್ಯತೆಗಳನ್ನು ತಿಳಿಸಿದ್ದೇವೆ. ದೋಣಿ ಬೇಡಿಕೆಯನ್ನು ಗಮನಕ್ಕೆ ತಂದಿದ್ದೇವೆ. ನೆರೆ ಬಂದಾಗ ಇಲ್ಲಿನ ಮನೆಗಳ ಬಾವಿ ನೀರೆಲ್ಲ ಕಲುಷಿತಗೊಂಡು, ಕುಡಿಯಲು ಸಾಧ್ಯವಿಲ್ಲದಂತಾಗುತ್ತದೆ. ಆ ವೇಳೆ ಎಲ್ಲ ಮನೆಗೂ ಕುಡಿಯುವ ಹಾಗೂ ಅಡುಗೆಗೆ ಅಗತ್ಯವಿರುವ ನೀರನ್ನು ತುರ್ತಾಗಿ ಪೂರೈಸಬೇಕಾದ ಅಗತ್ಯವಿದೆ.
– ರಾಜೇಶ್‌ ಸಾಲುºಡ, ಸ್ಥಳೀಯ ಗ್ರಾ.ಪಂ. ಸದಸ್ಯರು

ತುರ್ತು ವ್ಯವಸ್ಥೆ
ಈಗಾಗಲೇ ನಾವುಂದದ ನೆರೆಗೆ ತುತ್ತಾಗುವ ಪ್ರದೇಶಗಳ ಬಗ್ಗೆ ಪ್ರಾಕೃತಿಕ ವಿಕೋಪ ನಿರ್ವಹಣೆ ಸಭೆಯಲ್ಲಿ ಚರ್ಚಿಸಲಾಗಿದ್ದು, ನೆರೆ ಬಂದಾಗ ಏನೆಲ್ಲ ಸೌಕರ್ಯ ಅಗತ್ಯವಿದೆಯೋ ಅದನ್ನು ತುರ್ತಾಗಿ ಒದಗಿಸಲು ವ್ಯವಸ್ಥೆ ಮಾಡಲಾಗುವುದು. ಕಿರು ದೋಣಿ ಬೇಡಿಕೆ ಬಗ್ಗೆ ಜಿಲ್ಲಾಡಳಿತಕ್ಕೆ ಮನವಿ ಮಾಡಲಾಗುವುದು.
– ಶ್ರೀಕಾಂತ್‌ ಹೆಗ್ಡೆ, ಬೈಂದೂರು ತಹಶೀಲ್ದಾರ್‌

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next