Advertisement
ಹಿಂಜಾವೇ ನೇತೃತ್ವದಲ್ಲಿ ಕಾರ್ಯಕರ್ತರು ಹಾಗೂ ಮುಖಂಡರು ಪುತ್ತೂರು ಮಿನಿ ವಿಧಾನಸೌಧದ ಎದುರು ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಿದರು. ಹುತಾತ್ಮ ಸೈನಿಕರ ಸ್ಮಾರಕಕ್ಕೆ ಪುಷ್ಪಾರ್ಪಣೆ ಮಾಡಿ, ಪ್ರತಿಭಟನೆಗೆ ಚಾಲನೆ ನೀಡಲಾಯಿತು. ಸಹಾಯಕ ಕಮಿಷನರ್ ಹಾಗೂ ಪುತ್ತೂರು ಎಎಸ್ಪಿ ಕಚೇರಿಗೆ ಮನವಿ ನೀಡಲಾಯಿತು.
ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ, ನ್ಯಾಯ ಒದಗಿಸಬೇಕಾದ ಪೊಲೀಸರು ನ್ಯಾಯ ಕೇಳಿದವರ ಮೇಲೆಯೇ ದಾಳಿ ನಡೆಸಿ, ಬಂಧಿಸುವ ಮೂಲಕ ಭಯದ ವಾತಾವರಣ ನಿರ್ಮಿಸಿದ್ದಾರೆ. ಹಿಂದೂ ಸಮಾಜದ ದೌರ್ಜನ್ಯ ಎಸಗುವವರ ವಿರುದ್ಧ ಯಾವ ರೀತಿಯ ಹೋರಾಟಕ್ಕೂ ವೇದಿಕೆ ಸಿದ್ಧವಿದೆ ಎಂದರು. ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆ ಸರಹದ್ದಿನಲ್ಲಿ ಅಕ್ರಮ ಮರಳುಗಾರಿಕೆ, ಗೋ ಸಾಗಾಟ, ಮರಗಳ್ಳರಿಂದ ಹಫ್ತಾ ವಸೂಲಿ ನಡೆಯುತ್ತಿದೆ. ಅನೈತಿಕ ವ್ಯವಹಾರಗಳಿಗೆ ಕಡಿವಾಣ ಹಾಕದೆ ಇಲ್ಲಿನ ಪೊಲೀಸರು ಬೆಂಬಲ ನೀಡುತ್ತಿದ್ದಾರೆ. ನ್ಯಾಯಯುತ ಹೋರಾಟ ಮಾಡುವ ಹಿಂದೂಗಳ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
Related Articles
ಹಿಂದೂ ಸಂಘಟನೆಗಳ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ನ್ಯಾಯ ಕೇಳಲು ಬಂದ ಹಿಂದೂ ಕಾರ್ಯಕರ್ತರ ಮೇಲೆ ಸಂಪ್ಯ ಠಾಣೆಯ ಪೊಲೀಸರು ಹಲ್ಲೆ ನಡೆಸಿ, ಲಾಠಿ ಚಾರ್ಜ್ ಸಂದರ್ಭದಲ್ಲಿ ಗಾಯಗೊಂಡಿದ್ದಾರೆ ಎಂದು ತಿರುಚುವ ಪ್ರಯತ್ನ ನಡೆಸಿದ್ದಾರೆ. ಇಂತಹ ಕುಕೃತ್ಯಗಳಲ್ಲಿ ತೊಡಗಿರುವ ಎಸ್‌ಐ ಖಾದರ್ ಹಾಗೂ ಬೆಂಬಲಿತ ಸಿಬಂದಿಯನ್ನು ಕೂಡಲೇ ಅಮಾನತು ಮಾಡಿ ಇಲಾಖೆ ಶಾಂತಿ ಕಾಪಾಡಬೇಕು ಎಂದು ಆಗ್ರಹಿಸಿದರು.
Advertisement
ಹಿಂಜಾವೇ ಪ್ರಾಂತ ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಟಿ., ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಯಂತ್ ಬೆಳ್ಳಾರೆ, ಸಂದೀಪ್ ಪಂಪ್‌ವೆಲ್, ಸಾರ್ವಜನಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ರಾಕೇಶ್ ನಾೖಕ್, ಮುಖಂಡರಾದ ಚಿನ್ಮಯ್ ರೈ, ಸಹಜ್ ರೈ ಬಳಜ್ಜ, ರವಿರಾಜ್ ಶೆಟ್ಟಿ ಕಡಬ, ಸಚಿನ್ ರೈ ಪಾಪೆಮಜಲು, ಜೀವಂಧರ್ ಜೈನ್, ಶಿವರಂಜನ್, ನವೀನ್ ಪಟ್ನೂರು ಸಹಿತ 50ಕ್ಕೂ ಮಿಕ್ಕಿ ಕಾರ್ಯಕರ್ತರು ಪಾಲ್ಗೊಂಡರು .
ಸರಣಿ ಪ್ರತಿಭಟನೆಡಿ. 27ರಂದು ಹಿಂಜಾವೇ ಕಡಬ ತಾಲೂಕು ಸಮಿತಿ, ಡಿ. 28ರಂದು ಸುಳ್ಯ, ಡಿ. 29ರಂದು ಬಂಟ್ವಾಳ, ಡಿ. 30 ರಂದು ವಿಟ್ಲ ಸಮಿತಿ, ಜ. 1ರಂದು ಪುತ್ತೂರು ಜಿಲ್ಲಾ ಸಮಿತಿಯಿಂದ ಪ್ರತಿಭಟನೆ ನಡೆದು ಮನವಿ ನೀಡಲಾಗುತ್ತದೆ. ಜ. 2ರಂದು ಹಿಂದೂ ಸಂಘಗಳಿಂದ ಪುತ್ತೂರಿನಲ್ಲಿ ಬೃಹತ್ ಪ್ರತಿಭಟನ ಜಾಥಾ, ಸಭೆ ನಡೆಯಲಿದೆ ಎಂದು ಸಂಘಟನೆಯ ಚಿನ್ಮಯ್ ರೈ ತಿಳಿಸಿದ್ದಾರೆ.