Advertisement

ಮುಂದುವರಿದ ಸಾವಿನ ಸರಣಿ

05:28 AM Jun 13, 2020 | Lakshmi GovindaRaj |

ಬೆಂಗಳೂರು: ನಗರದಲ್ಲಿ ಕೋವಿಡ್ 19 ಸೋಂಕಿತರ ಸಾವಿನ ಸರಣಿ ಮುಂದುವರಿದಿದ್ದು, ಮತ್ತೆ ನಾಲ್ಕು ಸೋಂಕಿತರು ಸಾವಿಗೀಡಾಗಿರುವುದು ಶುಕ್ರವಾರ ವರದಿಯಾಗಿದೆ. ಇದರೊಂದಿಗೆ ನಗರದಲ್ಲಿ ಒಂದೇ ದಿನ 36 ಜನರಿಗೆ ಸೋಂಕು  ದೃಡಪಟ್ಟಿದೆ. ನಗರದಲ್ಲಿ ಈವರೆಗೆ ಒಟ್ಟು 617 ಸೋಂಕಿತರು ಪತ್ತೆಯಾಗಿದ್ದು, 27 ಜನ ಮೃತಪಟ್ಟಿದ್ದಾರೆ.

Advertisement

ಸದ್ಯ 290 ಸಕ್ರಿಯ ಪ್ರಕರಣಗಳಲ್ಲಿ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಈ ಪೈಕಿ 11 ಮಂದಿ ತೀವ್ರ  ನಿಗಾಘಟಕದಲ್ಲಿದ್ದಾರೆ. ಶುಕ್ರವಾರ ವಿಷಮ ಶೀತ ಜ್ವರ ಹಿನ್ನೆಲೆ 11, ತೀವ್ರ ಉಸಿರಾಟ ಸಮಸ್ಯೆ ಹಿನ್ನೆಲೆ 5, ಸೋಂಕಿತರ ಸಂಪರ್ಕದಿಂದ 10, ಮಹಾರಾಷ್ಟ್ರ ಪ್ರಯಾಣ ಹಿನ್ನೆಲೆ ಒಬ್ಬರು ಸೋಂಕಿತರಾಗಿದ್ದಾರೆ. ಬಾಕಿ 9 ಮಂದಿ ಸೋಂಕು ಸಂಪರ್ಕ ಪತ್ತೆಯಾಗಿಲ್ಲ, ಸೋಂಕು ದೃಢಪಟ್ಟವರಲ್ಲಿ  ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಬೇಕಿದ್ದ ಇಬ್ಬರು ವಿದ್ಯಾರ್ಥಿಗಳು ಇದ್ದಾರೆ.

ಸೋಂಕಿತರ ಸಾವು: ಗುರುವಾರ ಇಬ್ಬರು ಸೋಂಕಿತರು ಸಾವಿಗೀಡಾದ ಬೆನ್ನಲ್ಲೇ ಶುಕ್ರವಾರ  ನಾಲ್ವರ ಸಾವು ವರದಿಯಾಗಿದೆ. ಈ ಪೈಕಿ ಇಬ್ಬರಿಗೆ ವಿಷಮ ಶೀತ ಜ್ವರ, ಇಬ್ಬರಿಗೆ ತೀವ್ರ ಉಸಿರಾಟ ಸಮಸ್ಯೆ ಇತ್ತು. ಮೂರು ಮಂದಿಯಲ್ಲಿ ಸಾವಿಗೀಡಾದ ಬಳಿಕ ಸೋಂಕು ದೃಢಪಟ್ಟಿದೆ. ಸೋಂಕಿತರ ಸಾವು ಏರಿಕೆ ಹಿನ್ನೆಲೆ ಸೋಂಕಿತರ ಮರಣ ದರ  ಶೇ.4.37ಕ್ಕೆ ಏರಿಕೆಯಾಗಿದೆ.

ವಿದ್ಯಾರ್ಥಿಗಳಿಗೆ ಸೋಂಕು: ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಬೇಕಿದ್ದ ಕಲಾಸಿಪಾಳ್ಯದ ಇಬ್ಬರು ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಡಪಟ್ಟಿದೆ. ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ. ಸದ್ಯ ವಿದ್ಯಾರ್ಥಿಗಳು ನಗರದ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಾಮರಾಜಪೇಟೆಯ 4ನೇ ವೃತ್ತದಲ್ಲಿ ಟೀ ವ್ಯಾಪಾರ ಮಾಡುತ್ತಿದ್ದ ವ್ಯಕ್ತಿಗೆ ಪಾಸಿಟಿವ್‌ ಬಂದಿದೆ. ಲಾಲ್‌ಬಾಗ್‌ಗೆ ವಾಕಿಂಗ್‌ ಹೋಗಿದ್ದ ವೃದ್ಧ, ಸಿಸಿಬಿ ಠಾಣೆಯಲ್ಲಿರುವ ಕೈದಿ,  ಮನೆಗೆಲಸ ಮಾಡುತ್ತಿದ್ದ ವ್ಯಕ್ತಿಗೆ ಸೋಂಕು ತಗುಲಿದೆ.

Advertisement

Udayavani is now on Telegram. Click here to join our channel and stay updated with the latest news.

Next