Advertisement

ರಾಜ್ಯದಲ್ಲಿ ಮುಂದುವರಿದ ಸಾವಿನ ಸರಣಿ

08:16 AM May 15, 2020 | Lakshmi GovindaRaj |

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ 19 ವೈರಸ್‌‌ ಸೋಂಕಿತರ ಸಾವಿನ ಸರಣಿ ಮುಂದುವರಿದಿದ್ದು, ಗುರುವಾರ ಬೆಂಗಳೂರು ಹಾಗೂ ದಕ್ಷಿಣ ಕನ್ನಡದಲ್ಲಿ ತಲಾ ಒಬ್ಬ ಸೋಂಕಿತರು ಮೃತಪಟ್ಟಿದ್ದಾರೆ. ಈ ಮೂಲಕ ಸೋಂಕಿಗೆ  ಬಲಿಯಾದವರ ಸಂಖ್ಯೆ 35ಕ್ಕೆ ಏರಿಕೆಯಾಗಿದೆ. ಇದರೊಂದಿಗೆ ರಾಜ್ಯದ ವಿವಿಧೆಡೆ 23 ಸೋಂಕು ಪ್ರಕರಣಗಳು ದೃಢಪಟ್ಟಿದ್ದು, ಒಟ್ಟಾರೆ ಸೋಂಕಿಗೊಳಗಾದವರ ಸಂಖ್ಯೆ 987ಕ್ಕೆ ಏರಿಕೆಯಾಗಿದೆ. ದಕ್ಷಿಣ ಕನ್ನಡದಲ್ಲಿ ಏಪ್ರಿಲ್‌ 26 ರಂದು  ಸೋಂಕು ದೃಢಪಟ್ಟಿದ್ದ 80 ವರ್ಷದ ಮಹಿಳೆ (ಪಿ-507) ಮೃತಪಟ್ಟಿದ್ದಾರೆ. ಇವರಿಗೆ ಏ.23ರಂದು ಜಿಲ್ಲೆಯಲ್ಲಿ ಸೋಂಕಿನಿಂದ ಮೃತಪಟ್ಟಿದ್ದ 75 ವರ್ಷದ ಮಹಿಳೆಯ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿತ್ತು.

Advertisement

ಇವರು  ಪಾರ್ಶ್ವವಾಯು ಸಮಸ್ಯೆ ಹಿನ್ನೆಲೆ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಂಕು ದೃಢಪಟ್ಟ ಹಿನ್ನೆಲೆ ಜಿಲ್ಲೆಯ ನಿಗದಿತ ಆಸ್ಪತ್ರೆಗೆ ದಾಖಲಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಮತ್ತೂಂದು ಪ್ರಕರಣದಲ್ಲಿ ಬೆಂಗಳೂರಿನ ಕೋವಿಡ್  19 ಚಿಕಿತ್ಸಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಂಧ್ರ ಮೂಲದ 60 ವರ್ಷದ ಪುರುಷ ಸಾವಿಗೀಡಾಗಿದ್ದಾರೆ. ಇವರಿಗೆ ವಿಷಮ ಶೀತ ಜ್ವರ ಹಿನ್ನೆಲೆ ಮೇ 10 ರಂದು ಸೋಂಕು ದೃಢಪಟ್ಟಿತ್ತು.

ಉಸಿರಾಟ ತೊಂದರೆ, ಕಡಿಮೆ ರಕ್ತದೊತ್ತಡ,  ಮಧುಮೇಹ ಸಮಸ್ಯೆಗಳಿಂದ ಬಳಲುತ್ತಿದ್ದು, ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಬುಧವಾರದ ಅಂತ್ಯಕ್ಕೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 964 ಇತ್ತು. ಗುರುವಾರ ಸೋಂಕು ದೃಢಪಟ್ಟ 23 ಪ್ರಕರಣಗಳಲ್ಲಿ, ಬೀದರ್‌ನಲ್ಲಿ ಏಳು,  ಮಂಡ್ಯದಲ್ಲಿ ಐದು, ಗದಗದಲ್ಲಿ ನಾಲ್ಕು, ದಾವಣಗೆರೆಯಲ್ಲಿ ಮೂರು, ಕಲಬುರಗಿಯಲ್ಲಿ ಇಬ್ಬರು, ಬಾಗಲಕೋಟೆ ಹಾಗೂ ಬೆಳಗಾವಿಯಲ್ಲಿ ತಲಾ ಒಬ್ಬರಲ್ಲಿ ಸೋಂಕು ಪತ್ತೆ ಯಾಗಿದೆ. ಈ ಎಲ್ಲಾ ಸೋಂಕಿತರನ್ನು ನಿಗದಿತ ಕೋವಿಡ್ 19 ಸೋಂಕು ಚಿಕಿತ್ಸಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬೀದರ್‌ನಲ್ಲಿ ರ್‍ಯಾಂಡಮ್‌ ಪರೀಕ್ಷೆಯಲ್ಲಿ ಹೆಚ್ಚಿದ ಸೋಂಕು: ಬೀದರ್‌ ನಗರದ ಓಲ್ಡ್‌ ಸಿಟಿ ಭಾಗದಲ್ಲಿ ಸೋಂಕು ಹೆಚ್ಚಿರುವ ಹಿನ್ನೆಲೆ ರ್‍ಯಾಂಡಮ್‌ ಪರೀಕ್ಷೆ ಮಾಡಲಾಗುತ್ತಿದೆ. ಈ ಪೈಕಿ  ಬುಧವಾರ ಒಂದೇ ದಿನ 12 ಮಂದಿಯಲ್ಲಿ ಸೋಂಕು ದೃಢಪಟ್ಟಿತ್ತು. ಗುರುವಾರ ಮತ್ತೆ ಮೂವರು ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ಸ್ಥಳೀಯರಲ್ಲಿ ಆತಂಕ ಹೆಚ್ಚಳವಾಗಿದೆ. ಮೂರು ಪ್ರಕರಣಗಳಲ್ಲಿ ಸೋಂಕಿತ (ಪಿ  959) ಸಂಪರ್ಕದಿಂದ ಇಬ್ಬರು ಯುವಕರು ಹಾಗೂ ಒಬ್ಬ ಮಹಿಳೆಗೆ ಸೋಂಕು ತಗುಲಿದೆ. ಬಾಕಿ ಒಂದು ಪ್ರಕರಣದಲ್ಲಿ ಮುಂಬೈ ಪ್ರಯಾಣ ಹಿನ್ನೆಲೆ ಹೊಂದಿದ್ದ 45 ವರ್ಷದ ಮಹಿಳೆ ಸೋಂಕಿತರಾಗಿದ್ದಾರೆ. ಇನ್ನು ಜಿಲ್ಲೆಯ ಸೋಂಕಿತರ  ಸಂಖ್ಯೆ 48ಕ್ಕೆ ಏರಿಕೆಯಾಗಿದ್ದು, 33 ಸಕ್ರಿಯ ಪ್ರಕರಣಗಳಿವೆ.

ಮುಂಬೈ ಟೂ ಮಂಡ್ಯ ಹೆಚ್ಚಿದ ಪ್ರಕರಣ: ಎರಡು ವಾರದಿಂದ ಮುಂಬೈನಿಂದ ಮಂಡ್ಯ ಜಿಲ್ಲೆಯ ವಿವಿಧ ಹಳ್ಳಿ ಹಾಗೂ ನಗರಗಳಿಗೆ ಬಂದವರಲ್ಲಿ ಸೋಂಕು ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಗುರುವಾರ ಮತ್ತೆ ನಾಲ್ಕು ಮಂದಿ  ಸೋಂಕಿತರಾಗಿದ್ದಾರೆ. ಈ ಪೈಕಿ ಇಬ್ಬರು ಪುರುಷರು, ಒಬ್ಬ ಮಹಿಳೆ ಹಾಗೂ ಆರು ವರ್ಷದ ಗಂಡು ಮಗುವಿದೆ. ಜಿಲ್ಲೆಯ ಮತ್ತೂಂದು ಪ್ರಕರಣದಲ್ಲಿ ಸೊಂಕಿತ (ಪಿ-179) ಸಂಪರ್ಕದಿಂದ 37 ವರ್ಷದ ಪುರುಷನಿಗೆ ಸೋಂಕು ತಗುಲಿದೆ.

Advertisement

ಗದಗಕ್ಕೆ ತಬ್ಲೀಘಿಗಳಿಂದ ಸೋಂಕು: ಗುಜರಾತ್‌ನ ಅಹಮದಾಬಾದ್‌ನಲ್ಲಿ ನಡೆದ ತಬ್ಲೀ ಜಮಾತ್‌ ಮರ್ಕಜ್‌ನಲ್ಲಿ ಭಾಗವಹಿಸಿ ಗದಗ ಜಿಲ್ಲೆಗೆ ಮರಳಿದ್ದವರ ಪೈಕಿ ನಾಲ್ಕು ಮಂದಿ ಪುರುಷರಿಗೆ ಸೋಂಕು ತಗುಲಿದೆ. ಈ ಮೂಲಕ ರಾಜ್ಯದ  ಮತ್ತೂಂದು ಜಿಲ್ಲೆಗೂ ತಬ್ಲೀಘಿಗಳಿಂದ ಸೋಂಕು ಹೆಚ್ಚಳವಾಗಿದೆ. ಇನ್ನು ಜಿಲ್ಲೆಯ ಒಟ್ಟಾರೆ ಸೋಂಕಿತರ ಸಂಖ್ಯೆ 12 ಇದ್ದು, ಇದರಲ್ಲಿ ನಾಲ್ಕು ಮಂದಿ ಗುಣಮುಖರಾಗಿ, ಒಬ್ಬ ಸೋಂಕಿತೆ ಸಾವಿಗೀಡಾಗಿದ್ದಾರೆ. ಬಾಗಲಕೋಟೆಯಲ್ಲಿ ಅಂತಾರಾಜ್ಯ ಪ್ರಯಾಣ ಹಿನ್ನೆಲೆ ಯ 23 ವರ್ಷ ಯುವಕ, ಬೆಳಗಾವಿಯಲ್ಲಿ ಮುಂಬೈ ಪ್ರಯಾಣ ಹಿನ್ನೆಲೆ ಹೊಂದಿರುವ 27 ವರ್ಷದ ಮಹಿಳೆ, ಕಲಬುರಗಿಯಲ್ಲಿ ಸೋಂಕಿತರ ಸಂಪರ್ಕದಿಂದ ಒಬ್ಬ ಯುವಕ ಹಾಗೂ ಒಬ್ಬ ವೃದೆಟಛಿಗೆ  ಸೋಂಕು ದೃಢಪಟ್ಟಿದೆ.

9 ಮಂದಿ ಬಿಡುಗಡೆ: ಸೋಂಕಿತರ ಪೈಕಿ ಗುರುವಾರ ಕಲಬುರಗಿ, ಮೈಸೂರು, ಬೆಂಗಳೂರು, ದಕ್ಷಿಣ ಕನ್ನಡದಲ್ಲಿ ತಲಾ ಇಬ್ಬರು, ವಿಜಯಪುರದಲ್ಲಿ ಒಬ್ಬರು ಸೇರಿ ಒಟ್ಟು 9 ಮಂದಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈ ಮೂಲಕ  ಸೊಂಕಿನಿಂದ ಗುಣ ಮುಖರಾದ ಸಂಖ್ಯೆ 460ಕ್ಕೆ ತಲುಪಿದೆ.

ದಾವಣಗೆರೆಯಲ್ಲಿ ಮತ್ತೆ 3 ಮಂದಿಗೆ ಸೋಂಕು; 3ನೇ ಸ್ಥಾನಕ್ಕೆ ಏರಿಕೆ: ದಾವಣಗೆರೆ ನಗರದಲ್ಲಿ ನಿರಂತರವಾಗಿ ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದು, ಮತ್ತೆ ಮೂವರಲ್ಲಿ ಸೋಂಕು ಕಾಣಿಸಿಕೊಂಡಿದೆ. ವಿಷಮ ಶೀತ ಜ್ವರ ಹಿನ್ನೆಲೆ ಹೊಂದಿದ್ದ 32 ವರ್ಷದ ಪುರುಷನಿಗೆ, ನಗರದ ಕಂಟೈನ್ಮೆಂಟ್‌ ಝೋನ್‌ಸಂಪರ್ಕ ಹೊಂದಿದ್ದ 34 ವರ್ಷದ ಪುರುಷನಿಗೆ ಹಾಗೂ ಸೋಂಕಿತ (ಪಿ-852) ಸಂಪರ್ಕದಿಂದ 40 ವರ್ಷದ ಪುರುಷನಿಗೆ ಸೋಂಕು ಪತ್ತೆಯಾಗಿದೆ.

ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತ ಪ್ರಕರಣಗಳ ಸಂಖ್ಯೆ 88 ಕ್ಕೆ  ರಿಕೆಯಾಗಿದೆ.  ಸದ್ಯ ಮೈಸೂರು ಮತ್ತು ದಾವಣಗೆರೆ ಜಿಲ್ಲೆಗಳು ಸರಿಸಮ ಸೋಂಕು ಪ್ರಕರಣ ಹೊಂದಿವೆ. ಆದರೆ, ದಾವಣಗೆರೆಯಲ್ಲಿ ಸಕ್ರಿಯ ಪ್ರಕರಣಗಳು 82 ಇದ್ದು, ನಾಲ್ಕು ಮಂದಿ ಸಾವಿಗೀಡಾಗಿ ದ್ದಾರೆ. ಮೈಸೂರಿನಲ್ಲಿ ಎರಡು ಸಕ್ರಿಯ  ಕರಣಗಳಿದ್ದು, ಸೋಂಕಿತರ ಸಾವಾಗಿಲ್ಲ. ಇದರಿಂದ ದಾವಣಗೆರೆಯು ಜಿಲ್ಲಾವಾರು ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೇರಿದೆ.

ಪ್ಲಾಸ್ಮಾ ಥೆರಪಿ ಚಿಕಿತ್ಸೆಗೆ ಒಳಗಾಗಿದ್ದ ಸೋಂಕಿತ ಸಾವು: ರಾಜ್ಯದಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆಗೊಳಗಾಗಿದ್ದ ಮೊದಲ ಕೋವಿಡ್ 19 ವೈರಸ್‌ ಸೋಂಕಿತ ಗುರುವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆಂಧ್ರಪ್ರದೇಶದ ಅನಂತಪುರ ಮೂಲದ 60 ವರ್ಷದ ವ್ಯಕ್ತಿಗೆ (ಪಿ -796)  ವಿಷಮಶೀತ ಜ್ವರ ಹಿನ್ನೆಲೆ ಮೇ 10 ರಂದು ಸೋಂಕು ದೃಢಪಟ್ಟಿತ್ತು.

ತೀವ್ರ ನಿಮೋನಿಯಾ, ಉಸಿರಾಟ ತೊಂದರೆ, ಶೀತಜ್ವರ ಮಾದರಿ ಕಾಯಿಲೆ (ಐಎಲ್‌ಐ), ಕಡಿಮೆ ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದರು. ಈ ಸೋಂಕಿತರನ್ನು ಚೇತರಿಕೆಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಮೇ 11 ರಂದು ಸಂಜೆ ಪ್ಲಾಸ್ಮಾ ಥೆರಪಿ ನಡೆಸಿದ್ದರು. ಅಂದರೆ, ಈಗಾಗಲೇ ಸೋಂಕಿನಿಂದ ಗುಣಮುಖರಾದವರ ರಕ್ತದಿಂದ ಪ್ಲಾಸ್ಮಾ ತೆಗೆದು ಈ ವ್ಯಕ್ತಿಗೆ ನೀಡಲಾಗಿತ್ತು. ಆರಂಭದಲ್ಲಿ ಚೇತರಿಕೆ ಕಂಡು ಬಂದರೂ ಬಳಿಕ ತೀವ್ರ ನಿಮೋನಿಯಾ ಹಾಗೂ ರಕ್ತ ಸೋಂಕು ಸಮಸ್ಯೆ ಉಂಟಾಗಿತ್ತು.

ಗುರುವಾರ ಬೆಳಗ್ಗೆ ತೀವ್ರ ಹೃದಯಾಘಾತ ಉಂಟಾಗಿ ಮೃತಪಟ್ಟರು ಎಂದು  ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ) ನಿರ್ದೇಶಕಿ ಡಾ.ಸಿ.ಆರ್‌. ಜಯಂತಿ ಮಾಹಿತಿ ನೀಡಿದ್ದಾರೆ. ಇನ್ನು ಮೃತ ಸೋಂಕಿತ ವ್ಯಕ್ತಿಗೆ ಪ್ಲಾಸ್ಮಾ ಥೆರಪಿಯಿಂದಲೇ ರಕ್ತದ ಸೋಂಕಾದ ಸೆಪ್ಟಿಸಿಮಿಯಾ ಸಮಸ್ಯೆಯಿಂದ ಕಾಣಿಸಿಕೊಂಡಿತೆ ಎಂಬ ಅನುಮಾನ ಮೂಡಿದ್ದು, ಈ ಕುರಿತು ಆರೋಗ್ಯ ಇಲಾಖೆ ಖಚಿತಪಡಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next