Advertisement

ರಾಜ್ಯಕ್ಕಾಗೇ ಪ್ರತ್ಯೇಕ ವಾಹನ ವಿನ್ಯಾಸ?

07:40 AM Oct 25, 2017 | |

ಬೆಂಗಳೂರು: ರಾಜ್ಯ ಸರ್ಕಾರ 100 ಸಿಸಿಗಿಂತ ಕಡಿಮೆ ಇರುವ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರರಿಗೆ ಅವಕಾಶವಿಲ್ಲ ಎಂದು ಆದೇಶ ಹೊರಡಿಸಿರುವ ಹಿನ್ನೆಲೆಯಲ್ಲಿ ಇದೀಗ ದ್ವಿಚಕ್ರ ವಾಹನ ತಯಾರಿಕಾ ಕಂಪನಿಗಳಿಗೆ ಕರ್ನಾಟಕಕ್ಕಾಗಿಯೇ ಪ್ರತ್ಯೇಕವಾಗಿ ವಾಹನಗಳನ್ನು ವಿನ್ಯಾಸಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. 100 ಸಿಸಿಗಿಂತ ಕಡಿಮೆ ಸಾಮರ್ಥ್ಯದ ಸಿಂಗಲ್‌ ಸೀಟು ಇರುವ ದ್ವಿಚಕ್ರ ವಾಹನಗಳ ನೋಂದಣಿಗೆ ನಿಯಮದಲ್ಲಿ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ, ಇನ್ಮುಂದೆ ದ್ವಿಚಕ್ರ ವಾಹನಗಳ ತಯಾರಿಕಾ ಕಂಪೆನಿಗಳು ಪ್ರತ್ಯೇಕವಾಗಿ ವಿನ್ಯಾಸಗೊಳಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಬೇಕಿದೆ. ಸಾರಿಗೆ ಇಲಾಖೆ
ಮೂಲಗಳ ಪ್ರಕಾರ ಬೇರೆ ರಾಜ್ಯಗಳಲ್ಲಿ 100 ಸಿಸಿಗಿಂತ ಕಡಿಮೆ ಸಾಮರ್ಥ್ಯ ಇರುವ ವಾಹನಗಳ ಹಿಂಬದಿ ಸವಾರರಿಗೆ ನಿಷೇಧಿಸಿದ ಉದಾಹರಣೆಗಳು ಇಲ್ಲ. ರಾಜ್ಯದಲ್ಲಿ ಮಾತ್ರ ನಿಯಮ ಜಾರಿಗೊಳಿಸಲಾಗಿದೆ.

Advertisement

65 ಪ್ರಕಾರ; 6 ಲಕ್ಷ ವಾಹನಗಳು: ಈ ಮಧ್ಯೆ ಮಾರುಕಟ್ಟೆಯಲ್ಲಿ 6,075ಕ್ಕೂ ಅಧಿಕ ಪ್ರಕಾರದ ದ್ವಿಚಕ್ರ ವಾಹನಗಳಿದ್ದು, ಈ ಪೈಕಿ ಟಿವಿಎಸ್‌- 50, ಸ್ಕೂಟಿ, ಲೂನಾ ಸೇರಿದಂತೆ 100 ಸಿಸಿಗಿಂತ ಕಡಿಮೆ ಸಾಮರ್ಥ್ಯ ಹೊಂದಿರುವ ಅಂದಾಜು 65ಕ್ಕೂ ಅಧಿಕ ಪ್ರಕಾರದ ವಾಹನಗಳಿವೆ. ರಾಜ್ಯದಲ್ಲಿ ಈ ಮಾದರಿಯ ಸುಮಾರು 6 ಲಕ್ಷ ದ್ವಿಚಕ್ರ ವಾಹನಗಳಿವೆ. ಆದರೆ, ಪ್ರತಿ ವರ್ಷ ಸಾವಿರಾರು ವಾಹನಗಳು ಬೆಂಗಳೂರಿನಲ್ಲಿ ರಸ್ತೆಗಿಳಿಯುತ್ತವೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

ಸಾಮಾನ್ಯವಾಗಿ ಕಡಿಮೆ ಸಿಸಿ ಇರುವ ದ್ವಿಚಕ್ರ ವಾಹನಗಳು ಹೆಚ್ಚು ಮೈಲೇಜ್‌ ಕೊಡುತ್ತವೆ. ಇದಕ್ಕಾಗಿ ಜನ ಈ ಮಾದರಿಯ ವಾಹನಗಳನ್ನು ಖರೀದಿಸುತ್ತಾರೆ. ಇದಲ್ಲದೆ, ಲಗೇಜು ಸಾಗಿಸಲು, ಹಗುರವಾಗಿರುವುದರಿಂದ ಮಹಿಳೆಯರು ಈ ಪ್ರಕಾರದ ವಾಹನಗಳನ್ನು ಇಷ್ಟಪಡುತ್ತಾರೆ. 100ಸಿಸಿಗಿಂತ ಕಡಿಮೆ ಸಾಮರ್ಥ್ಯದ ಸುಮಾರು 30 ದ್ವಿಚಕ್ರ ವಾಹನಗಳು ಪ್ರತಿ ತಿಂಗಳು ಮಾರಾಟ ಆಗುತ್ತವೆ ಎಂದು ಬೊಮ್ಮನಹಳ್ಳಿಯ ಅರುಣಗಿರಿ ಮೋಟಾರ್ ಮಾರುಕಟ್ಟೆ ವ್ಯವಸ್ಥಾಪಕ ಮಿತ್ರ ತಿಳಿಸುತ್ತಾರೆ. 

ಅಗತ್ಯಬಿದ್ದರೆ ಪರಿಶೀಲನೆ: ಸದ್ಯಕ್ಕಂತೂ ನ್ಯಾಯಾಲ ಯದ ಆದೇಶದಂತೆ ಈ ಮಾದರಿಯ ವಾಹನಗಳ ನೋಂದಣಿ ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಜನರ ಸ್ಪಂದನೆ ನೋಡಿಕೊಂಡು, ನಿಯಮವನ್ನು ಪರಿಶೀಲನೆಗೊಳಪಡಿಸುವ ಅಗತ್ಯಬಿದ್ದರೆ, ಆ ನಿಟ್ಟಿನಲ್ಲೂ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಇಲಾಖೆ ಕಾರ್ಯದರ್ಶಿ ಬಸವರಾಜು
“ಉದಯವಾಣಿ’ಗೆ ಸ್ಪಷ್ಟಪಡಿಸಿದರು.

ಜನ ಬಯಸಿದರೆ ತಿದ್ದುಪಡಿಗೆ ಸಿದ್ಧ
ಬೆಂಗಳೂರು: ಹೈಕೋರ್ಟ್‌ ಆದೇಶದಂತೆ 100 ಸಿಸಿಗಿಂತ ಕಡಿಮೆ ಸಾಮರ್ಥಯದ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರಿಯನ್ನು ನಿಷೇಧಿಸಲಾಗಿದೆ. ಆದರೆ, ಈ ವಿಚಾರದ ಬಗ್ಗೆ ಸಾರ್ವಜನಿಕರಲ್ಲಿ ಚರ್ಚೆ ಆಗಬೇಕು. ಒಂದೊಮ್ಮೆ ಜನ ಬಯಸಿದರೆ “ಕರ್ನಾಟಕ ಮೋಟಾರು ವಾಹನ ಕಾಯ್ದೆ-1989ರ ನಿಯಮ 143 (3)’ ಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಲಿದೆ ಎಂದು ಸಾರಿಗೆ ಸಚಿವ ಎಚ್‌.ಎಂ. ರೇವಣ್ಣ ತಿಳಿಸಿದ್ದಾರೆ. ವಿಕಾಸೌಧದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 100 ಸಿಸಿಗಿಂತ ಕಡಿಮೆ
ಸಾಮರ್ಥಯದ ಇಂಜಿನ್‌ಗಳನ್ನು ಹೊಂದಿರುವ ದ್ವಿಚಕ್ರ ವಾಹನಗಳಲ್ಲಿ ಹಿಂಬದಿ ಸವಾರಿ ನಿಷೇಧಕ್ಕೆ ಸಂಬಂಧಿಸಿದಂತೆ ಸರ್ಕಾರ ಹೈಕೋರ್ಟ್‌ ಆದೇಶ ಪಾಲನೆ ಮಾಡಿದೆಯಷ್ಟೇ. ಇದು ಸಾರಿಗೆ ಇಲಾಖೆಯ ತೀರ್ಮಾನವೂ ಅಲ್ಲ, ಯಾವುದೇ ಹಸ್ತಕ್ಷೇಪವೂ ಇಲ್ಲ ಎಂದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next