Advertisement

ಹೋಂ ಕ್ವಾರಂಟೈನ್‌ ಕಣ್ಗಾವಲಿಗೆ ಪ್ರತ್ಯೇಕ ತಂಡ

06:28 AM Jun 08, 2020 | Lakshmi GovindaRaj |

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಹೋಂ ಕ್ವಾರಂಟೈನ್‌ ಆಗುವವರ ಜವಾಬ್ದಾರಿ ನಿರ್ವಹಿಸಲು ಪಾಲಿಕೆ ಮತ್ತು ವಿವಿಧ ಇಲಾಖೆಯ ಅಧಿಕಾರಿ, ಸಿಬ್ಬಂದಿಯ ಪ್ರತ್ಯೇಕ ತಂಡ ರಚನೆ ಮಾಡಿ ಪಾಲಿಕೆ ಆಯುಕ್ತ  ಬಿ.ಎಚ್‌.ಅನಿಲ್‌ಕುಮಾರ್‌  ಆದೇಶ ಹೊರಡಿಸಿದ್ದಾರೆ. ನಗರಕ್ಕೆ ವಿದೇಶ ಹಾಗೂ ಹೊರರಾಜ್ಯ ಬಂದು ಹೋಂ ಕ್ವಾರಂಟೈನ್‌ ಆಗುವವರನ್ನು ನಿಭಾಯಿಸುವುದು ಸವಾಲಾಗಿ ಪರಿಣಮಿಸಿದ ಹಿನ್ನೆಲೆಯಲ್ಲಿ ಈ ರೀತಿ ಪ್ರತ್ಯೇಕ ತಂಡ ರಚಿಸಿಕೊಳ್ಳಲಾಗಿದೆ.

Advertisement

ಪಾಲಿಕೆ ವ್ಯಾಪ್ತಿಯ ವಲಯಗಳ ಜಂಟಿ  ಆಯುಕ್ತರು ಈ ತಂಡಗಳ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಈಗಾಗಲೇ ಪಾಲಿಕೆಯ 198 ವಾರ್ಡ್‌ಗಳಲ್ಲಿ ಈ ರೀತಿ 460 ಹೋಂ ಕ್ವಾರಂಟೈನ್‌ ನಿರ್ವಹಣಾ ತಂಡ ರಚಿಸಲಾಗಿದೆ. ಅಲ್ಲದೆ, ನಗರದಲ್ಲಿ ಹೋಂ ಕ್ವಾರಂಟೈನ್‌ಗೆ ಸಂಬಂಧಿಸಿದಂತೆ ಹೊಸ ನಿರ್ದೇಶನಗಳನ್ನು ಪಾಲಿಕೆ ಹೊರಡಿಸಿದೆ. ಹೋಂ ಕ್ವಾರಂಟೈನ್‌ ನಿಯಮ ಪಾಲನೆ ಹಾಗೂ ನಿರ್ವಹಣೆ ನಿಟ್ಟಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿನ ಬೂತ್‌ ಮಟ್ಟದ  ಅಧಿಕಾರಿಗಳು ಇಬ್ಬರು ಸ್ಥಳೀಯರು, ಜಲಮಂಡಳಿ, ಬೆಸ್ಕಾಂ, ಪೊಲೀಸ್‌ ಸಿಬ್ಬಂದಿ, ಗೃಹರಕ್ಷಕ ದಳ ತಂಡದ ಸಿಬ್ಬಂದಿಯನೂ ಬಳಸಿಕೊಳ್ಳಲು ಪಾಲಿಕೆ ಮುಂದಾಗಿದೆ.

ಈ ರೀತಿ ರಚನೆ ಮಾಡಿಕೊಂಡಿರುವ ತಂಡವು ಹೋಂ  ಕ್ವಾರಂಟೈನ್‌ನಲ್ಲಿರುವವರ ಆರೋಗ್ಯ ಪರೀಕ್ಷೆ ಮಾಡಲಿದೆ. ಹೋಂ ಕ್ವಾರಂಟೈನ್‌ ಅವಧಿಯಲ್ಲಿ ಎರಡು- ಮೂರು ಬಾರಿ ಪರಿಶೀಲನೆ ಮಾಡಿ ಕ್ವಾರಂಟೈನ್‌ ವಾಚ್‌ ಆ್ಯಪ್‌ನಲ್ಲಿ ದಾಖಲಿಸಿಕೊಳ್ಳಲು ಸಹ ನಿರ್ದೇಶನ ನೀಡಲಾಗಿದೆ.  ಉಳಿದಂತೆ ಯಾರಾದರು ಹೋಂ ಕ್ವಾರಂಟೈನ್‌ನ ನಿಯಮ ಉಲ್ಲಂಘನೆ ಮಾಡಿದರೆ ಅವರ ಮೇಲೆ ಎಫ್ಐಆರ್‌ ದಾಖಲು ಮಾಡುವುದಕ್ಕೂ ಅವಕಾಶವಿದೆ. ಅದೇ ರೀತಿಯಲ್ಲಿ ಹೋಂ ಕ್ವಾರಂಟೈನ್‌ ನಿಯಮ ಉಲ್ಲಂಘನೆಯಾದರೆ  ಸಾರ್ವಜನಿಕರೂ ಪೊಲೀಸರಿಗೆ ಅಥವಾ ಬಿಬಿಎಂಪಿ ಸಹಾಯವಾಣಿ 9480685888ಗೆ ಕರೆ ಮಾಡಿ ದೂರು ನೀಡಬಹುದು.

ಸಾಂಸ್ಥಿಕ ಕ್ವಾರಂಟೈನ್‌ನಿಂದ ವಿನಾಯಿತಿ: ಹೊರ ರಾಜ್ಯ ಅಥವಾ ವಿದೇಶದಿಂದ ಬರುವವರಲ್ಲಿ ಕುಟುಂಬದಲ್ಲಿ  ಯಾರಾದರೂ ಮೃತಪಟ್ಟಿದ್ದರೆ, ಗರ್ಭಿಣಿಯರು, 10 ವರ್ಷದೊಳಗಿನ ಮಕ್ಕಳು, 60 ವರ್ಷಕ್ಕಿಂತ ಮೇಲ್ಪಟ್ಟವರು. ಅನಾರೋಗ್ಯಕ್ಕೆ ಒಳಗಾದವರಿಗೆ ಮೊದಲಿನಂತೆ ಕ್ವಾರಂಟೈನ್‌ ನಲ್ಲಿ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ಅದರಂತೆ  ಅವರು ಮೊದಲ ಹಂತದಲ್ಲಿ ಕ್ವಾರಂಟೈನ್‌ ಆಗುವುದಕ್ಕೆ ವಿನಾಯಿತಿ ನೀಡಲಾಗಿದೆ. ಆದರೆ, ಎರಡನೇ ಹಂತದಲ್ಲಿ ಹೋಂಕ್ವಾರಂಟೈನ್‌ನಲ್ಲಿ ಹೆಚ್ಚು ದಿನಗಳ ಕಾಲ ಇರಬೇಕಾಗುತ್ತದೆ.

ಹೋಂ ಕ್ವಾರಂಟೈನ್‌ ಷರತ್ತುಗಳು: ಬೆಂಗಳೂರಿಗೆ ಹೊರ ರಾಜ್ಯ ಹಾಗೂ ವಿದೇಶಗಳಿಂದ ವಿಮಾನ, ರೈಲು ಹಾಗೂ ರಸ್ತೆಗಳ ಮೂಲಕ ಜನ ಬರುತ್ತಿದ್ದಾರೆ. ಯಾವುದೇ ಮಾರ್ಗವಾಗಿ ನಗರ ಪ್ರವೇಶಿಸಿದರೂ ಅವರಿಗೆ ಕಡ್ಡಾಯವಾಗಿ ಸೇವಾ  ಸಿಂಧು ಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಂಡು ಮಾಹಿತಿ ನೀಡಬೇಕು. ಇದರಲ್ಲಿ ಯಾವ ವಾರ್ಡ್‌ನಲ್ಲಿ ಇರಲಿದ್ದಾರೆ ಎನ್ನುವ ಮಾಹಿತಿ ನೀಡಬೇಕು.

Advertisement

ಅವರ ಪೂರ್ಣ ಮಾಹಿತಿ ಪಡೆದು, ಸ್ಟ್ಯಾಂಪಿಂಗ್‌ ಹಾಗೂ ಸೋಂಕಿನ ಲಕ್ಷಣಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಹೋಂಕ್ವಾರಂಟೈನ್‌ ಆಗುವವರು ಕಡ್ಡಾಯವಾಗಿ ಆರೋಗ್ಯ ಸೇತು, ಆಪ್ತಮಿತ್ರ ಹಾಗೂ ಕ್ವಾರಂಟೈನ್‌ ವಾಚ್‌ ಆ್ಯಪನ್ನು ಕಡ್ಡಾಯವಾಗಿ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ಅಲ್ಲದೆ, ಪ್ರತಿದಿನ  ಕ್ವಾರಂಟೈನ್‌ ವಾಚ್‌ ಆ್ಯಪ್‌ನಲ್ಲಿ ಮಾಹಿತಿ  ದಾಖಲಿಸಬೇಕು. ಹೋಂಕ್ವಾರಂಟೈನ್‌ಗೆ ಒಳಗಾಗುವವರ ಮಾಹಿತಿ ಆಯಾ ಜಿಲ್ಲಾಧಿಕಾರಿಗಳ ಕಾರ್ಯವ್ಯಾಪ್ತಿಯಲ್ಲಿಯೂ ದಾಖಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next