Advertisement

ಪ್ರತ್ಯೇಕ ಲಾಂಛನ: ಗ್ರಾ. ಪಂ. ಜನಪ್ರತಿನಿಧಿಗಳ ಬೇಡಿಕೆ  

10:48 PM Sep 08, 2022 | Team Udayavani |

ಬೆಂಗಳೂರು: ರಾಜ್ಯ ಸರಕಾರ ಹೊಂದಿರುವಂತೆ ಸ್ಥಳೀಯ ಸ್ವತಂತ್ರ ಸರಕಾರಗಳಾದ ಗ್ರಾಮ ಪಂಚಾಯತ್‌ಗಳಿಗೂ ಪ್ರತ್ಯೇಕ ಲಾಂಛನ ನೀಡುವಂತೆ ಗ್ರಾಮ ಪಂಚಾಯತ್‌ಗಳ ಚುನಾಯಿತ ಜನಪ್ರತಿನಿಧಿಗಳಿಂದ ಆಗ್ರಹ ಕೇಳಿ ಬಂದಿದೆ.

Advertisement

ರಾಜ್ಯ ಸರಕಾರದ ಲಾಂಛನ ಬಳಸಲು ಗ್ರಾ. ಪಂ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಅವಕಾಶವಿಲ್ಲ ಎಂದಾದ ಮೇಲೆ ನಮಗೆ ಪ್ರತ್ಯೇಕ ಲಾಂಛನ ಬೇಕು. ದೇಶ ಸ್ವಾತಂತ್ರ್ಯದ ಅಮೃತ ಮಹೋತ್ಸವ ಆಚರಿಸುತ್ತಿರುವ ಈ ವಿಶೇಷ ಸಂದರ್ಭದಲ್ಲಿ ಸ್ಥಳೀಯ ಸ್ವಯಂ ಸರಕಾರಗಳಿಗೆ ಲಾಂಛನವನ್ನು ಕೊಡುಗೆಯಾಗಿ ನೀಡಬೇಕೆಂಬ ಬೇಡಿಕೆಯನ್ನು ಸರಕಾರದ ಮುಂದಿಡಲಾಗಿದೆ.

ರಾಜ್ಯದ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಂಚಾಯತ್‌ರಾಜ್‌ ಸಂಸ್ಥೆಗಳು ತಮ್ಮ ಲೆಟರ್‌ ಹೆಡ್‌, ವಿಸಿಟಿಂಗ್‌ ಕಾರ್ಡ್‌ ಹಾಗೂ ತಮ್ಮ ವ್ಯವಹಾರಗಳಲ್ಲಿ ಸರಕಾರದ ಲಾಂಛನ ಬಳಸುವ ಕುರಿತು ಸ್ಪಷ್ಟನೆ ಕೋರಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯತ್‌ ಸದಸ್ಯರ ಮಹಾ ಒಕ್ಕೂಟ ಇತ್ತೀಚೆಗೆ ಸರಕಾರಕ್ಕೆ ಪತ್ರ ಬರೆದಿತ್ತು.

ಅದಕ್ಕೆ ಹಿಂಬರಹ ಕೊಟ್ಟಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್‌ರಾಜ್‌ ಇಲಾಖೆ  ಭಾರತದ ರಾಜ್ಯ ಲಾಂಛನಗಳ (ಬಳಕೆಯ ನಿಯಂತ್ರಣ) ನಿಯಮಗಳು-2007ರ ಪ್ರಕಾರ ಹಾಗೂ 2007ರ ಅ.4ರ ಕೇಂದ್ರ ಸರಕಾರದ ಗೃಹ ಸಚಿವಾಲಯದ ಅಧಿಸೂಚನೆ ಅನ್ವಯ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ತಮ್ಮ ಲೆಟರ್‌ಹೆಡ್‌, ವಿಸಿಟಿಂಗ್‌ ಕಾರ್ಡ್‌ಗಳಲ್ಲಿ ಕರ್ನಾಟಕ ಸರಕಾರದ ಲಾಂಛನ ಬಳಸುವಂತಿಲ್ಲ ಎಂದು ತಿಳಿಸಿತ್ತು.

ಹಾಗಾಗಿ ನಮಗೆ ಪ್ರತ್ಯೇಕ ಲಾಂಛನ ಕೊಟ್ಟು ಬಿಡಿ. ಹೇಗಿದ್ದರೂ ಪಂಚಾಯತ್‌ಗಳನ್ನು ಸ್ಥಳೀಯ ಸ್ವತಂತ್ರ ಸರಕಾರಗಳೆಂದು ಸಂವಿಧಾನದಲ್ಲೇ ಹೇಳಲಾಗಿದೆ. ಅಂದ ಮೇಲೆ ರಾಜ್ಯ ಸರಕಾರಕ್ಕೆ ಇರುವಂತೆ ಪಂಚಾಯತ್‌ಗಳಿಗೂ ತಮ್ಮದೇ ಆದ ಪ್ರತ್ಯೇಕ ಲಾಂಛನ ಇರಬೇಕು ಅನ್ನುವುದು ನ್ಯಾಯೋಚಿತ ಎಂಬುದು ಪಂಚಾಯತ್‌ ಜನಪ್ರತಿನಿಧಿಗಳ ವಾದವಾಗಿದೆ.

Advertisement

 ಯಾರೆಲ್ಲ ಲಾಂಛನ ಬಳಸುವಂತಿಲ್ಲ? :

ಭಾರತದ ರಾಜ್ಯ ಲಾಂಛನಗಳ (ಬಳಕೆಯ ನಿಯಂತ್ರಣ) ನಿಯಮಗಳು-2007 ಪ್ರಕಾರ ಗ್ರಾಮ ಪಂಚಾಯತ್‌ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಂಚಾಯತ್‌ರಾಜ್‌ ಸಂಸ್ಥೆಗಳು ತಮ್ಮ ಲೆಟರ್‌ ಹೆಡ್‌, ವಿಸಿಟಿಂಗ್‌ ಕಾರ್ಡ್‌ ಹಾಗೂ ತಮ್ಮ ವ್ಯವಹಾರಗಳಲ್ಲಿ ರಾಜ್ಯ ಸರಕಾರದ ಲಾಂಛನ ಬಳಸುವಂತಿಲ್ಲ. ಅದೇ ರೀತಿ ಮಾಜಿ ಸಂಸತ್‌ ಸದಸ್ಯರು, ಮಾಜಿ ಶಾಸಕರು, ಮಾಜಿ ನ್ಯಾಯಾಧೀಶರು, ಮಾಜಿ ಅಧಿಕಾರಿಗಳೂ  ಬಳಸುವಂತಿಲ್ಲ. ಜತೆಗೆ ಆಯೋಗಗಳು, ಸಮಿತಿಗಳು, ಸರಕಾರಿ ಸ್ವಾಮ್ಯದ ಸಂಸ್ಥೆಗಳು, ಬ್ಯಾಂಕುಗಳು, ಪೌರ ನಿಗಮಗಳು, ಪಂಚಾಯತ್‌ರಾಜ್‌ ಸಂಸ್ಥೆಗಳಿಗೂ ಲಾಂಛನ ಬಳಸಲು ಅವಕಾಶವಿಲ್ಲ.

ಸರಕಾರಿ ಲಾಂಛನವನ್ನು ಪಂಚಾಯತ್‌ ಬಳಸುವಂತಿಲ್ಲ ಎಂದು ಸರಕಾರವೇ ಸ್ಪಷ್ಟಪಡಿಸಿರುವುದರಿಂದ ಸ್ಥಳೀಯ ಸರಕಾರಗಳಾದ ಪಂಚಾಯತ್‌ಗಳಿಗೆ ಪ್ರತ್ಯೇಕ ಲಾಂಛನ ನೀಡಲು  ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಕೆ.ಎಸ್‌. ಸತೀಶ್‌, ರಾಜ್ಯಾಧ್ಯಕ್ಷರು,ರಾಜ್ಯ ಗ್ರಾ.ಪಂ. ಸದಸ್ಯ ಮಹಾ ಒಕ್ಕೂಟ.

Advertisement

Udayavani is now on Telegram. Click here to join our channel and stay updated with the latest news.

Next