ವಿಶೇಷ ವರದಿ-ಮಹಾನಗರ: ನಗರದ ಬೆಂಗ್ರೆಯ ಬದಿಯಲ್ಲಿ ನಾಡದೋಣಿಗಳ ತಂಗುವಿಕೆಗೆ ಪ್ರತ್ಯೇಕವಾಗಿ ಜೆಟ್ಟಿ ನಿರ್ಮಾಣ ಯೋಜನೆ ಸದ್ಯ ಅನುಷ್ಠಾನ ಹಂತದಲ್ಲಿದೆ.
ಮೀನುಗಾರಿಕಾ ಇಲಾಖೆ ನಬಾರ್ಡ್ 24ರ ಯೋಜನೆಯಡಿಯಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಿದೆ. 3.37 ಕೋ. ರೂ.ಗಳ ಈ ಯೋಜನೆಗೆ ಈಗಾಗಲೇ ಅನುಮೋದನೆ ದೊರೆತು, ತಾಂತ್ರಿಕ ಮಂಜೂರಾತಿಯನ್ನೂ ಪಡೆಯಲಾಗಿದೆ. ಸಿಆರ್‌ಝಡ್ ಒಪ್ಪಿಗೆ ಪ್ರಕ್ರಿಯೆ ನಡೆಯುತ್ತಿದ್ದು, ಟೆಂಡರ್ ಆಹ್ವಾನಿಸುವ ಕಾರ್ಯವೂ ಪ್ರಗತಿಯಲ್ಲಿದೆ. ಎಲ್ಲವೂ ಪೂರ್ಣವಾದರೆ ಶೀಘ್ರದಲ್ಲಿ ನಾಡದೋಣಿಗಳಿಗೆ ಪ್ರತ್ಯೇಕ ಜೆಟ್ಟಿ ನಿರ್ಮಾಣ ಸಾಕಾರವಾಗಲಿದೆ.
ಬೆಂಗ್ರೆ ಭಾಗದಲ್ಲಿ ನಡೆಯುತ್ತಿರುವ ಮೂರನೇ ಮೀನುಗಾರಿಕಾ ಜೆಟ್ಟಿಯ ಪಕ್ಕಕ್ಕೆ ಹೊಂದಿಕೊಂಡಂತೆ ನಾಡದೋಣಿಗಳ ನಿಲುಗಡೆಗಾಗಿ ಹೊಸದಾಗಿ ಜೆಟ್ಟಿ ನಿರ್ಮಿಸುವುದು ಉದ್ದೇಶ.ನಾಡದೋಣಿಗಳ ನಿಲುಗಡೆಗೆ ಮಂಗಳೂರು ಬಂದರು ವ್ಯಾಪ್ತಿಯಲ್ಲಿ ಸೂಕ್ತ ವ್ಯವಸ್ಥೆಗಳು ಇಲ್ಲ ಎಂಬ ನೆಲೆಯಲ್ಲಿ ಬೆಂಗ್ರೆ ಪರಿಸರದ ನಾಡದೋಣಿ ಮೀನುಗಾರರು ಹಲವು ವರ್ಷಗಳಿಂದ ಮುಖಂಡರ ನೇತೃತ್ವದಲ್ಲಿ ಆಡಳಿತ ವ್ಯವಸ್ಥೆಯ ಗಮನಸೆಳೆದಿದ್ದರು. ಆದರೆ ಇದಕ್ಕೆ ಸೂಕ್ತ ಸ್ಪಂದನೆ ದೊರಕಿರಲಿಲ್ಲ. ಇದೀಗ ನಾಡದೋಣಿಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕೈಗೊಳ್ಳಬಹುದಾದ ಹೊಸ ಜೆಟ್ಟಿ ನಿರ್ಮಾಣಕ್ಕೆ ಇಲಾಖೆ ಮುಂದಾಗಿರುವುದು ಮೀನುಗಾರರಲ್ಲಿ ಹರ್ಷ ತಂದಿದೆ. ಬೆಂಗ್ರೆ ವ್ಯಾಪ್ತಿಯಲ್ಲಿ ಸುಮಾರು 150 ನಾಡದೋಣಿಗಳಿವೆ. ಸಮುದ್ರದಲ್ಲಿ ಸುಮಾರು 20 ಕಿ.ಮೀ. ಒಳಗಡೆಯಲ್ಲಿ ನಾಡದೋಣಿ ಮೀನುಗಾರಿಕೆ ನಡೆಯುತ್ತದೆ. ಉಳಿದ ಸಮ ಯದಲ್ಲಿ ಗಿಲ್‌ನೆಟ್ ಮೂಲಕ ಮೀನುಗಾರಿಕೆ ನಡೆಸುತ್ತಾರೆ. ಜತೆಗೆ ನದಿಯಲ್ಲಿಯೂ ಮೀನುಗಾರಿಕೆ ನಡೆಸುತ್ತಾರೆ. ಇಂತಹ ದೋಣಿಗಳನ್ನು ನಿಲುಗಡೆ ಮಾಡಲು ಪರದಾಡುವಂತಾಗಿದೆ. ಬೆಂಗ್ರೆ ಫೆರಿ ಜೆಟ್ಟಿಯ ಬಳಿ ನಾಡದೋಣಿ ನಿಲ್ಲಿಸಲಾಗುತ್ತದೆ.
100 ಮೀಟರ್ ಉದ್ದದ ನೂತನ ಜೆಟ್ಟಿ
80 ಮೀ. ಅಗಲ, 100 ಮೀ. ಉದ್ದದಲ್ಲಿ ನೂತನ ಜೆಟ್ಟಿ ನಿರ್ಮಾಣವಾಗಲಿದೆ. ನಾಡದೋಣಿಗಳ ಸುಲಲಿತ ನಿಲುಗಡೆಗೆ ಅವಕಾಶವಿರಲಿದೆ. ಗೋಲ ಮಾದರಿಯಲ್ಲಿ ಡ್ರೆಜ್ಜಿಂಗ್ ಮಾಡಿ ಇಲ್ಲಿ ನಾಡದೋಣಿ ನಿಲುಗಡೆಗೆ ಆದ್ಯತೆ ನೀಡಲಾಗುತ್ತದೆ. ಸುಮಾರು 100 ನಾಡದೋಣಿಗಳಿಗೆ ಇಲ್ಲಿ ನಿಲುಗಡೆಗೆ ಅವಕಾಶ ಸಿಗಲಿದೆ.
ಯೋಜನೆಗೆ ಅನುಮೋದನೆ
ಮಂಗಳೂರು ಮೀನುಗಾರಿಕಾ ಬಂದರಿನ ಬೆಂಗ್ರೆ ಬದಿಯಲ್ಲಿ ನಾಡದೋಣಿಗಳ ತಂಗುವಿಕೆಗಾಗಿ ಕೃತಕ ರೇವು ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. 3.37 ಕೋ.ರೂ.ಗಳ ಈ ಯೋಜನೆ ಈಗಾಗಲೇ ಅನುಮೋದನೆಯಾಗಿದ್ದು, ಅನುಷ್ಠಾನ ಹಂತದಲ್ಲಿದೆ.
-ಸುಜನ್‌ಚಂದ್ರ ರಾವ್
ಸಹಾಯಕ ಕಾ.ನಿ.ಎಂಜಿನಿಯರ್ ಬಂದರು ಹಾಗೂ ಮೀನುಗಾರಿಕಾ ಇಲಾಖೆ-ಮಂಗಳೂರು