Advertisement

ಎಲ್ಲಾ ಚುನಾವಣೆಗಳು ಒಮ್ಮೆ ನಡೆದರೆ ಒಳಿತು: ಡಾ|ಭಟ್‌

04:40 PM Aug 06, 2018 | |

ಧಾರವಾಡ: ಒಂದೇ ದೇಶ ಒಂದೇ ತೆರಿಗೆ ಇರುವಾಗ, ಒಂದೇ ದೇಶ ಒಂದೇ ಚುನಾವಣೆ ಕಲ್ಪನೆಯಲ್ಲಿ ಕೆಲ ದೋಷಗಳಿದ್ದರೂ ಅದರ ಜಾರಿಯಿಂದ ಪ್ರಜಾಪ್ರಭುತ್ವ ಸಧೃಡಗೊಳ್ಳಲಿದೆ ಎಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಯ ಕುಲಪತಿ ಡಾ|ಪಿ.ಈಶ್ವರ ಭಟ್‌ ಅಭಿಪ್ರಾಯಪಟ್ಟರು.

Advertisement

ನಗರದ ಆಲೂರು ವೆಂಕಟರಾವ್‌ ಸಭಾಭವನದಲ್ಲಿ ಯೋಗಕ್ಷೇಮ ಸಂಸ್ಥೆ ವತಿಯಿಂದ ಹಮ್ಮಿಕೊಂಡಿದ್ದ ಏಕಕಾಲಕ್ಕೆ ಲೋಕಸಭೆ-ವಿಧಾನಸಭೆ ಚುನಾವಣೆಗಳನ್ನು ನಡೆಸುವ ಸಾಧಕ-ಬಾಧಕಗಳ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಾನೂನಿನಲ್ಲಿ ಕೆಲವು ತಿದ್ದುಪಡಿ, ಸಣ್ಣ ಹೊಂದಾಣಿಕೆಗಳನ್ನು ಮಾಡಿಕೊಂಡು, ರಾಷ್ಟ್ರೀಯ ಪಕ್ಷಗಳ ಸಹಕಾರ ಹಾಗೂ ಅವರ ಇಚ್ಛಾಶಕ್ತಿ ಮೂಲಕ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಏಕಕಾಲಕ್ಕೆ ನಡೆಸಬಹುದು ಎಂದರು.

1999ರಲ್ಲಿ ರಚನೆಯಾದ ನ್ಯಾಯಮೂರ್ತಿ.ಬಿ.ವಿ. ಜೀವನರಡ್ಡಿ ಅವರ ನೇತೃತ್ವದ ಕಾನೂನು ಆಯೋಗವು ಈ ಕುರಿತಾಗಿ ಸರ್ಕಾರಕ್ಕೆ ವರದಿಯೊಂದು ಸಲ್ಲಿಸಿದ್ದು, ಅದರ ಸಾಧಕ-ಬಾಧಕಗಳನ್ನು ಸ್ಪಷ್ಟಪಡಿಸಿದೆ. ಈ ಆಯೋಗದ ವರದಿಯಂತೆ ಏಕಕಾಲದ ಚುನಾವಣೆ ಸಾಮಾನ್ಯವಾಗಿದ್ದು, ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಪ್ರತ್ಯೇಕ ಚುನಾವಣೆ ನಡೆಯಬೇಕು. ಲೋಕಸಭೆಗೆ ಚುನಾವಣೆಗೆ ರಾಜಕೀಯ ಪಕ್ಷಗಳು 30 ಸಾವಿರ ಕೋಟಿ ಹಾಗೂ ಚುನಾವಣಾ ಆಯೋಗ 4,500 ಕೋಟಿ ವೆಚ್ಚ ಮಾಡುತ್ತವೆ. ಅಷ್ಟೇ ಪ್ರಮಾಣದಲ್ಲಿ ವಿಧಾನಸಭೆ ಚುನಾವಣೆಯಲ್ಲೂ ವೆಚ್ಚವಾಗಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಸಾಂವಿಧಾನಿಕ ತಿದ್ದುಪಡಿಯೊಂದಿಗೆ ಏಕಕಾಲದಲ್ಲೂ ಚುನಾವಣೆ ಮಾಡಬಹುದು ಎಂಬುದಾಗಿ ಸೂಚಿಸಿದೆ. ಇದರೊಂದಿಗೆ ಈ ವ್ಯವಸ್ಥೆಯ ಬಾಧಕಗಳನ್ನು ಆಯೋಗ ಸ್ಪಷ್ಟಪಡಿಸಿದೆ ಎಂದರು. 

ನೀತಿ ಸಂಹಿತೆಯೇ ಮಾರಕ: ಒಮ್ಮೆ ಲೋಕಸಭೆ, ಇನ್ನೊಮ್ಮೆ ವಿಧಾನಸಭೆ ಮತ್ತೂಮ್ಮೆ ಜಿಲ್ಲಾ ಪಂಚಾಯ್ತಿ ಹಾಗೂ ಮಗದೊಮ್ಮೆ ಸ್ಥಳೀಯ (ಪಾಲಿಕೆ, ನಗರಸಭೆ, ಪುರಸಭೆ)ಸಂಸ್ಥೆಗಳ ಚುನಾವಣೆ ನಡೆಯುವುದರಿಂದ ಪದೇ ಪದೇ ನೀತಿ ಸಂಹಿತೆ ಜಾರಿ ಮಾಡಬೇಕಾಗುತ್ತದೆ. ಅಭಿವೃದ್ಧಿ ದೃಷ್ಟಿಯಿಂದ ಇದು ಮಾರಕ ಆಗಲಿದೆ. ಪ್ರಚಾರದ, ನಾಮಪತ್ರ ಸಲ್ಲಿಕೆ ಸಂದರ್ಭದಲ್ಲಿ ರ್ಯಾಲಿಗಳು, ಪ್ರಚಾರ ಸಭೆಯಿಂದ ಸಾರ್ವಜನಿಕರಿಗೆ ಪದೇ ಪದೇ ಕಿರಿಕಿರಿ ಉಂಟು ಮಾಡುತ್ತದೆ. ಜೊತೆಗೆ ಚುನಾವಣೆ ಪ್ರಕ್ರಿಯೆಗೆ ಅಪಾರ ಸಿಬ್ಬಂದಿ ಬೇಕಾಗುತ್ತದೆ. ಸರ್ಕಾರಿ ನೌಕರರೇ ಈ ಕೆಲಸ ಮಾಡಬೇಕಾದ ಕಾರಣ ಹಲವು ದಿನಗಳ ಕಾಲ ಸರ್ಕಾರಿ ಯಂತ್ರವೇ ನಿಂತು ಹೋಗುತ್ತದೆ. ಸಾರ್ವಜನಿಕ ಸೇವೆಗಳು ಕುಂಠಿತ ಆಗುತ್ತವೆ ಎಂದರು. 

ಈ ವ್ಯವಸ್ಥೆ ಸೈದ್ಧಾಂತಿಕವಾಗಿ ಸರಿಯಿಲ್ಲ ಎಂಬ ವಾದವಿದೆ. ಈಗಾಗಲೇ ಬೇರೆ ಬೇರೆ ದಿನಾಂಕಗಳಲ್ಲಿ ವಿಧಾನಸಭೆ ಚುನಾವಣೆಗಳು ಆಗುತ್ತಿವೆ. ಎಲ್ಲವನ್ನೂ ಒಟ್ಟಿಗೆ ಲೋಕಸಭೆಯೊಂದಿಗೆ ಜೋಡಿಸುವುದು ಕಷ್ಟಸಾಧ್ಯ. ಈ ಪ್ರಕ್ರಿಯೆ ತುಂಬಾ ಸಮಯ ಹಿಡಿಯಲಿದೆ ಎಂಬ ಅಭಿಪ್ರಾಯವನ್ನು ಆಯೋಗ ವ್ಯಕ್ತಪಡಿಸಿದೆ ಎಂದರು.

Advertisement

ಯೋಗಕ್ಷೇಮದ ಸದಸ್ಯರಾದ ನ್ಯಾ| ಎಸ್‌.ಎಚ್‌. ಮಿಟ್ಟಲಕೋಡ ಮಾತನಾಡಿ, ಪ್ರಸ್ತುತ ರಾಜಕೀಯ ವಿಚಿತ್ರವಾಗಿದೆ. ಚುನಾವಣೆಯಲ್ಲೂ ರಾಜಕೀಯ, ಚುನಾವಣೆ ನಂತರವೂ ರಾಜಕೀಯ, ಮುಂದಿನ ಚುನಾವಣೆಗೂ ರಾಜಕೀಯ ಮಾಡುತ್ತಿದ್ದು, ರಾಜಕಾರಣಿಗಳು ಅಭಿವೃದ್ಧಿ ಮರೆತು ಬಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ 5 ವರ್ಷಗಳಿಗೊಮ್ಮೆ ಮಾತ್ರ ಚುನಾವಣೆ ಮಾಡುವುದರಿಂದ ಹಲವು ಸಾಧಕಗಳಿವೆ. ವೆಚ್ಚ ಉಳಿಯುವುದಲ್ಲದೇ ಪದೇ ಪದೇ ಚುನಾವಣೆಗಳಿಂದ ಶಾಂತಿ-ಸುವ್ಯವಸ್ಥೆ ಹದಗೆಡುತ್ತದೆ. ಇದು ರಾಜಕಾರಣಿಗಳಿಗೂ ಹಾಗೂ ಮತದಾರರಿಗೆ ಆತಂಕದ ವಿಷಯ. ಈ ಹಿನ್ನೆಲೆಯಲ್ಲಿ ಈ ವಿಷಯ ಸಾರ್ವಜನಿಕರಿಗೆ ಬಿಟ್ಟಿದ್ದು, ಚರ್ಚೆ ನಡೆಯಬೇಕೆಂದು ಈ ಉಪನ್ಯಾಸ ಹಮ್ಮಿಕೊಳ್ಳಲಾಗಿದೆ ಎಂದರು. ಯೋಗಕ್ಷೇಮದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಬಸವರಾಜ ವಿಭೂತಿ, ಎಂ.ವಿ. ವಡ್ಡೀನ, ಡಾ|ಆರ್‌. ಪರಮೇಶ್ವರಪ್ಪ, ಪ್ರಕಾಶ ಭಟ್‌, ಶಿವಶಂಕರ ಹಿರೇಮಠ, ಮೋಹನ ರಾಮದುರ್ಗ ಇದ್ದರು.

ಚುನಾವಣೆಗಳು ಪ್ರಜಾಪ್ರಭುತ್ವಕ್ಕೆ ಸಾಧನವೇ ಹೊರತು ಅದೇ ಗುರಿಯಲ್ಲ. ಪ್ರಜಾಪ್ರಭುತ್ವದ ಗುರಿ ಅಭಿವೃದ್ಧಿ ಸಾಧಿಸುವುದೇ ಆಗಿದ್ದು, ಏಕಕಾಲಕ್ಕೆ ಚುನಾವಣೆ ನಡೆದರೆ ಒಳಿತು.
. ಡಾ|ಪಿ.ಈಶ್ವರ ಭಟ್‌,
ಕುಲಪತಿ, ಕರ್ನಾಟಕ ಕಾನೂನು ವಿಶ್ವವಿದ್ಯಾಲಯ

Advertisement

Udayavani is now on Telegram. Click here to join our channel and stay updated with the latest news.

Next