Advertisement
ಪಿ.ಡೀಕಯ್ಯ ಅವರು ಸಾಹಿತಿ ಅತ್ರಾಡಿ ಅಮೃತಾ ಶೆಟ್ಟಿ ಅವರ ಪತಿಯಾಗಿದ್ದು, ಜು.6 ರಂದು ಮನೆಯಲ್ಲೆ ಬಿದ್ದು ಮೆದುಳಿನ ರಕ್ತಸ್ರಾವದಿಂದ ಗಂಭೀರ ಗಾಯಗೊಂಡ ಸ್ಥಿತಿಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಜು.8 ರಂದು ಮೃತಪಟ್ಟಿದ್ದರು. ಅವರ ಮೃತದೇಹವನ್ನು ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ದರ್ಶನಕ್ಕೆ ಮರುದಿನ ವ್ಯವಸ್ಥೆ ಕಲ್ಪಿಸಿ ಅವರ ಊರಾದ ಪದ್ಮುಂಜದಲ್ಲಿ ದಫನ ಮಾಡಲಾಗಿತ್ತು. ಇದಾದ ವಾರಗಳ ಬಳಿಕ, ಬೀಳುವ ವೇಳೆ ಅವರ ತಲೆಗೆ ಬಲವಾದ ಏಟಾಗಿತ್ತು ಎಂಬ ವಿಚಾರ ಇದೀಗ ಬಹಿರಂಗವಾಗಿದ್ದು, ಈ ಹಿನ್ನಲೆ ಪಿ.ಡೀಕಯ್ಯ ಅವರ ಅಕ್ಕನ ಗಂಡ ಪದ್ಮನಾಭ ಅವರು ಅನುಮಾನ ವ್ಯಕ್ತಪಡಿಸಿ ಡೀಕಯ್ಯರ ಸಾವು ಅಸಹಜ ಎಂಬುದಾಗಿ ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ಜು.18 ರಂದು ಮರಣೋತ್ತರ ಪರೀಕ್ಷೆಗಾಗಿ ಮೃತ ದೇಹವನ್ನು ತಹಶೀಲ್ದಾರ್ ಸಮ್ಮುಖದಲ್ಲಿ ಹೊರತೆಗೆಯಲಾಯಿತು.
Related Articles
Advertisement
ಪಿ.ಡೀಕಯ್ಯ ಅವರು ಬಿಎಸ್ಎನ್ಎಲ್ ಸಂಸ್ಥೆಯ ನಿವೃತ್ತ ಉದ್ಯೋಗಿಯಾಗಿ, ತುಳುನಾಡ ಮನ್ಸ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸಂಘಟನೆಯನ್ನು ಕಟ್ಟಿದ್ದರು. ಮಾತ್ರವಲ್ಲದೆ ಅನೇಕ ಚಳುವಳಿಯ ಮುಂಚೂಣಿಯಲ್ಲಿದ್ದರು. ಜು.17 ರಂದು ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾಭವನದಲ್ಲಿ ದಲಿತ ಸಮನ್ವಯ ಸಂಘಟನೆಗಳ ಸಮನ್ವಯ ಸಮಿತಿ ಮತ್ತು ಬಹುಜನ ಪ್ರಗತಿಪರ ಸಂಘಟನೆಗಳ ಒಕ್ಕೂಟ ವತಿಯಿಂದ ಅವರ ನುಡಿನಮನ ಕಾರ್ಯಕ್ರಮ ನಡೆದಿತ್ತು.
ಮೃತಪಟ್ಟು ಎರಡು ವಾರಗಳು ಕಳೆದ ಬಳಿಕ ಇದೀಗ ಅಸಹಜ ಸಾವು ಎಂದು ದೂರು ನೀಡಿರುವ ಉದ್ದೇಶವೇನು? ಅಥವಾ ಡೀಕಯ್ಯ ಅವರ ಸಾವಿನ ಮಧ್ಯೆ ಕೌಟುಂಬಿಕ ಕಲಹಗಳು ಕಾರಣವೇ ಎಂಬಿತ್ಯಾದಿ ಅನುಮಾನಗಳು ಚರ್ಚೆಗೆ ಕಾರಣವಾಗಿದೆ. ಆದರೆ ದಲಿತ ಚಳುವಳಿಯ ಹಿರಿಯ ಚಿಂತಕನ ಸಾವಿನ ಹಿಂದೆ ವಿವಾದ ಎದ್ದಿರುವುದು ಅವರ ಅಭಿಮಾನಿಗಳಿಗೆ ಬೇಸರ ತರಿಸಿದೆ.