Advertisement

Adani Group: ಅದಾನಿ ಗ್ರೂಪ್‌ನಲ್ಲಿ ರಹಸ್ಯ ಹೂಡಿಕೆ? 

07:43 PM Aug 31, 2023 | Team Udayavani |

ನವದೆಹಲಿ/ಮುಂಬೈ: ಅಮೆರಿಕದ ಹಿಂಡನ್‌ಬರ್ಗ್‌ ರೀಸರ್ಚ್‌ ಅದಾನಿ ಗ್ರೂಪ್‌ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ತನಿಖೆ ಮುಂದುವರಿದಿರುವಂತೆಯೇ, ಇನ್ನೊಂದು ದೂರು ಕೇಳಿ ಬಂದಿದೆ. ಮಾರಿಷಸ್‌ ಮೂಲದ ರಹಸ್ಯ ನಿಧಿಗಳ ಮೂಲಕ ಕಂಪನಿ ಷೇರುಪೇಟೆಗಳಲ್ಲಿ ಕೋಟ್ಯಂತರ ರೂ.ಗಳನ್ನು ಹೂಡಿಕೆ ಮಾಡಿದೆ. ಈ ಬಗ್ಗೆ ಸಂಘಟಿತ ಅಪರಾಧ ಮತ್ತು ಭ್ರಷ್ಟಾಚಾರ ವರದಿಗಾರಿಕೆ ಯೋಜನೆ (ಒಸಿಸಿಆರ್‌ಪಿ) ತನ್ನ ವರದಿಯಲ್ಲಿ ಗಂಭೀರ ಆರೋಪ ಮಾಡಿದೆ.

Advertisement

ಕೆಲ ತಿಂಗಳುಗಳ ಹಿಂದೆಯೇ ಹಿಂಡನ್‌ಬರ್ಗ್‌ ರೀಸರ್ಚ್‌ ಗ್ರೂಪ್‌ನ ಆರೋಪಗಳಿಂದ ಅದಾನಿ ಗ್ರೂಪ್‌ಗೆ 150 ಬಿಲಿಯನ್‌ ಅಮೆರಿಕನ್‌ ಡಾಲರ್‌ ನಷ್ಟವಾಗಿತ್ತು. ಉದ್ಯಮಿ ಜಾರ್ಜ್‌ ಸೊರೊಸ್‌ ಮತ್ತು ರಾಕ್‌ಫೆಲ್ಲರ್‌ ಬ್ರದರ್ಸ್‌ ಫ‌ಂಡ್‌ ಪ್ರಾಯೋಜಿತ ಒಸಿಸಿಆರ್‌ಪಿ ಆರೋಪಗಳ ಪ್ರಕಾರ ಸಾರ್ವಜನಿಕವಾಗಿ ಚಲಾವಣೆಯಲ್ಲಿ ಇರುವ ಷೇರುಗಳಲ್ಲಿ ಅದಾನಿ ಕುಟುಂಬಕ್ಕೆ ಸಂಬಂಧಿಸಿದವರು ಹೂಡಿಕೆ ಮಾಡಿದ್ದಾರೆ, ನಂಬುವಂತೆ ಬೇನಾಮಿ ಹೆಸರಲ್ಲಿ ಬಂಡವಾಳ ಹೂಡಿದ್ದಾರೆ. ಒಟ್ಟು ಎರಡು ಹಂತಗಳಲ್ಲಿ ರಹಸ್ಯ ಹೂಡಿಕೆದಾರರು ಅದಾನಿ ಕಂಪನಿಗಳ ಷೇರುಗಳನ್ನು ಖರೀದಿ ಮಾಡಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಗೌತಮ್‌ ಅದಾನಿಯವರ ಹಿರಿಯ ಸಹೋದರ ವಿನೋದ್‌ ಅದಾನಿಯವರು ವಿದೇಶಗಳಲ್ಲಿರುವ ಕಂಪನಿಗಳ ಮೂಲಕ ಷೇರುಗಳ ಖರೀದಿ ಮತ್ತು ಮಾರಾಟ ಮಾಡಿದ್ದಾರೆ ಎಂದು ದೂರಲಾಗಿದೆ. ದುಬೈನ ನಾಸಿರ್‌ ಅಲಿ ಶಬಾನ್‌ ಅಹ್ಲಿ ಮತ್ತು ತೈವಾನ್‌ನ ಚಾಂಗ್‌ ಚುಂಗ್‌ ಲಿಂಗ್‌ ಮೂಲಕ ಹೂಡಿಕೆಗಳನ್ನು ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ.

ಸಂಪೂರ್ಣ ಸುಳ್ಳು: ಅದಾನಿ ಸಮೂಹ
ಸಂಸ್ಥೆಯ ವಿರುದ್ಧ ಹೊಸತಾಗಿ ಕೇಳಿ ಬಂದ ಆರೋಪವನ್ನು ಅದಾನಿ ಗ್ರೂಪ್‌ ಸಾರಾಸಗಟಾಗಿ ತಿರಸ್ಕರಿಸಿದೆ. ಈ ಆರೋಪ ಬಹುಕೋಟಿ ಉದ್ಯಮಿ ಜಾರ್ಜ್‌ ಸೊರೊಸ್‌ ಒಸಿಸಿಆರ್‌ಪಿಯ ಪಿತೂರಿಯ ಭಾಗ ಎಂದು ಹೇಳಿಕೆಯಲ್ಲಿ ಟೀಕಿಸಿದೆ. ಸೊರೊಸ್‌ ಅವರಿಂದ ಪ್ರಾಯೋಜಿತವಾಗಿರುವ ಕೆಲವೊಂದು ವಿದೇಶಿ ಮಾಧ್ಯಮ ಸಂಸ್ಥೆಗಳು ಕಂಪನಿ ವಿರುದ್ಧದ ಪಿತೂರಿಯಲ್ಲಿ ಭಾಗಿಯಾಗಿವೆ ಎಂದು ಸ್ಪಷ್ಟನೆ ನೀಡಿದೆ. ನಮ್ಮ ಕಂಪನಿಯ ಲಾಭಾಂಶವನ್ನು ತಗ್ಗಿಸಲು, ಷೇರುಗಳ ಬೆಲೆ ಕಡಿಮೆಯಾಗುವಂತೆ ಮಾಡಿದ ವ್ಯವಸ್ಥಿತ ಸಂಚು ಎಂದು ಹೇಳಿಕೆ ನೀಡಿದೆ. ನಮ್ಮ ಕಂಪನಿ ವಿರುದ್ಧ ಈ ಹಿಂದೆ ಕೇಳಿ ಬಂದ ಆರೋಪಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮತ್ತು ಸೆಬಿ ಉಸ್ತುವಾರಿಯಲ್ಲಿ ತನಿಖೆ ನಡೆಯುತ್ತಿದೆ. ಅದರ ಮೇಲೆ ವಿಶ್ವಾಸವಿದೆ ಎಂದು ಪ್ರತಿಪಾದಿಸಿದೆ.

ಯಾರಿದು ಸೊರೊಸ್‌?
ಹಂಗೇರಿ ಮೂಲದ, ಸದ್ಯ ಅಮೆರಿಕದ ಉದ್ಯಮಿ ಜಾರ್ಜ್‌ ಸೊರೊಸ್‌ ಬಹುಕೋಟಿ ಉದ್ಯಮಿಯಾಗಿದ್ದಾರೆ. ಅವರು ಓಪನ್‌ ಸೊಸೈಟಿ ಫೌಂಡೇಶನ್‌ ಎಂಬ ಪ್ರತಿಷ್ಠಾನವನ್ನೂ ಹೊಂದಿದ್ದಾರೆ. ಅದರ ವಿರುದ್ಧ ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಸರ್ಕಾರ ಪತನಗೊಳಿಸಿದ ಆರೋಪಗಳೂ ಇವೆ. ಆ.24ರಂದು ಜಗತ್ತಿನ 24 ತನಿಖಾ ಸಂಸ್ಥೆಗಳ ನೆರವಿನಿಂದ ಭಾರತದ ದೊಡ್ಡ ಉದ್ದಿಮೆ ಸಂಸ್ಥೆ ವಿರುದ್ಧ ಹೊಸ ಆರೋಪಗಳನ್ನು ಮಾಡುವುದಾಗಿ ಹೇಳಿಕೊಂಡಿತ್ತು.

Advertisement

ಷೇರುಗಳು ಕುಸಿತ: ಕಂಪನಿಯ ವಿರುದ್ಧ ಹೊಸ ಆರೋಪಗಳು ಬಹಿರಂಗವಾಗುತ್ತಲೇ ಅದಾನಿ ಗ್ರೂಪ್‌ನ ವಿವಿಧ ಷೇರುಗಳು ಕುಸಿತ ಕಂಡಿವೆ. ಅದಾನಿ ಗ್ರೀನ್‌ ಎನರ್ಜಿಯ ಷೇರುಗಳು ಶೇ.4.43, ಅದಾನಿ ಪವರ್‌ ಶೇ.3.82, ಅದಾನಿ ಎಂಟರ್‌ಪ್ರೈಸಸ್‌ ಶೇ.3.56 ಕುಸಿತ ಕಂಡವು.

Advertisement

Udayavani is now on Telegram. Click here to join our channel and stay updated with the latest news.

Next