ಹಾಸನ: ಹೇಮಾವತಿ ಜಲಾಶಯದ ಒಳ ಹರಿವು ಕಡಿಮೆಯಾದ್ದರಿಂದ ಸಾರ್ವಜನಿಕರಿಗೆ ಶನಿವಾರ ಪ್ರವೇಶ ನೀಡಲಾಗಿದ್ದು, ಪ್ರವಾಸಿಗರ ದಂಡೇ ಹರಿದು ಬಂದಿದೆ.
ರವಿವಾರದ ರಜೆಯ ಪರಿಣಾಮ ಅಧಿಕ ಪ್ರಮಾಣದಲ್ಲಿ ಪ್ರವಾಸಿಗರು ಬಂದಿದ್ದು, ಕ್ರಸ್ಟ್‌ಗೇಟ್‌ಗಳಿಂದ ನದಿಗೆ ಧುಮ್ಮಿಕ್ಕುವ ನೀರನ್ನು ಕಣ್ತುಂಬಿಕೊಂಡಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು. ಗುರುವಾರದಿಂದ ಶನಿವಾರದವರೆಗೆ 70ರಿಂದ 80 ಸಾವಿರ ಕ್ಯುಸೆಕ್ ನೀರನ್ನು ಜಲಾಶಯದ 6 ಕ್ರಸ್ಟ್‌ಗೇಟ್‌ಗಳ ಮೂಲಕ ನದಿಗೆ ಬಿಡುತ್ತಿರುವುದರಿಂದ ಜಲಾಶಯದ ಬಳಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಜಲಾಶಯದ ಬಳಿ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿತ್ತು.
ಕೃಷ್ಣೆ, ತುಂಗಭದ್ರೆಯಲ್ಲಿ ಉಕ್ಕಿದ ಪ್ರವಾಹ
ರಾಯಚೂರು: ಕೃಷ್ಣಾ ಮತ್ತು ತುಂಗಭದ್ರಾ ನದಿಗಳಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದ್ದು, ಉಭಯ ನದಿಗಳ ತೀರ ಪ್ರದೇಶಗಳಲ್ಲಿ ಪ್ರವಾಹ ಭೀತಿ ಹೆಚ್ಚಾಗಿದೆ.
ನಾರಾಯಣಪುರ ಜಲಾಶಯದಿಂದ ಈಗಾಗಲೇ 3.20 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಬಿಡುತ್ತಿದ್ದು, ಈಗಾಗಲೇ ಕೆಲವೊಂದು ಸೇತುವೆಗಳು ಮುಳುಗಡೆಯಾಗಿ ಸಂಪರ್ಕ ಕಡಿತಗೊಂಡಿದೆ.
ನದಿ ತೀರದ ದೇವಸ್ಥಾನಗಳು ಮುಳುಗಡೆಯಾಗಿವೆ. ನದಿ ತೀರದಲ್ಲಿ ಗ್ರಾಮಗಳಲ್ಲಿ ಕಟ್ಟೆಚ್ಚರ ವಹಿಸಿದ್ದು, ಯಾವುದೇ ಕಾರಣಕ್ಕೂ ನದಿಗೆ ಇಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.