Advertisement

Uv Fusion: ಮಲೆನಾಡಿನಲ್ಲೊಂದು ಸಮುದ್ರ

03:59 PM Oct 10, 2023 | Team Udayavani |

ಅದೆಷ್ಟೋ ಬಾರಿ ನನ್ನ ಊರಿಗೆ ಹೋದಾಗ ಮನಸ್ಸಿಗೆ ನೆಮ್ಮದಿ ಸಿಗಲು ಒಂದು ಜಾಗಕ್ಕೆ ಹೋಗುವುದುಂಟು. ಅದೇ ತಡಸ. ಸುತ್ತಲೂ ಶಾಂತ ನೀರು. ಸ್ವಲ್ಪ ಮುಂದೆ ನೋಡಿದರೆ ಬಯಲು, ಅದರ ಆಚೆ ಹಚ್ಚಹಸುರಿನಿಂದ ಕೂಡಿದ ಬೆಟ್ಟ ಗುಡ್ಡಗಳು,ಅಲ್ಲಲ್ಲಿ ನಿಂತಿರುವ ಒಣಗಿದ ಮರಗಳು, ಪಕ್ಷಿಗಳ ಕಲರವ, ನಿರಂತರವಾಗಿ ಬೀಸುವ ತಂಗಾಳಿ, ಹೀಗೆ ಎಲ್ಲಾ ರೀತಿಯ ಸೌಂದರ್ಯದಿಂದ ಮೈಗೂಡಿದ ಈ ಜಾಗ ಇರುವುದು ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಜೈಲು ರಸ್ತೆಯಲ್ಲಿ ನಾಲ್ಕು ಕಿಲೋಮೀಟರ್‌ ಹೋದರೆ ಸಿಗುವುದೇ ತಡಸ ಸೇತುವೆ.

Advertisement

ಅಷ್ಟಕ್ಕೂ ಏನಿದರ ವಿಶೇಷ? ಬನ್ನಿ ತಿಳಿದುಕೊಳ್ಳೋಣ. 1901ರಲ್ಲಿ ಬ್ರಿಟಿಷರು ಈ ತಡಸ ಸೇತುವೆಯನ್ನು ನಿರ್ಮಿಸುತ್ತಾರೆ. ಇದು ಭದ್ರಾ ಹಿನ್ನಿರಾಗಿದೆ. ಇದರ ಆಚೆ ಕಾಣುವುದು ಲಕ್ಕವಳ್ಳಿ ಡ್ಯಾಮ್.‌

ಇದನ್ನು ವಿಶ್ವೇಶ್ವರಯ್ಯನವರ ಕಾಲದಲ್ಲಿ ನಿರ್ಮಿಸಲಾಗಿದೆ ಎನ್ನುತ್ತಾರೆ. ಸುಣ್ಣ, ಇಟ್ಟಿಗೆ, ಮರಳು,ಇವುಗಳನ್ನು ಬಳಸಿ ಸ್ವದೇಶಿ ತಂತ್ರಜ್ಞಾನದ ಮೂಲಕ ಇದನ್ನು ನಿರ್ಮಿಸಲಾಗಿದೆ. ಈ ಸೇತುವೆಯು ಒಟ್ಟು ಒಂಬತ್ತು ಕಮಾನುಗಳಿಂದ ಕೂಡಿದೆ. ಈ ಸೇತುವೆಯಲ್ಲಿ ಒಂದು ಕಾಲದಲ್ಲಿ ರೈಲು ಹಳಿ ಮತ್ತು ರಸ್ತೆ ಸಾರಿಗೆಯ ಅನುಕೂಲವಿತ್ತು.

ಈ ಸೇತುವೆಯ ಎರಡು ಬದಿಯಲ್ಲಿ ಪಾದ ಚಾರಿ ಮಾರ್ಗವಿದ್ದು ಇದನ್ನು ಹೆಚ್ಚಿನದಾಗಿ ಸೈಕಲ್‌ ಸವಾರರು ಬಳಸುತ್ತಿದ್ದರು. 1949ರಲ್ಲಿ ರೈಲ್ವೇ ಸಂಪರ್ಕ ಸ್ಥಗಿತಗೊಂಡಿತು. ಹೀಗೆ ಕೆಲವು ದಶಕದಲ್ಲಿ ಭದ್ರಾ ಜಲಾಶಯ ನಿರ್ಮಾಣವಾಗಿ ಸೇತುವೆಯು ಮುಳುಗಿ ಹೋಯಿತು. ಆದರೆ ಈ ಸೇತುವೆಯ ನಿರ್ಮಾಣದಿಂದ ಹಲವು ಗ್ರಾಮಗಳು ಭೂಮಿಯನ್ನು ಕಳೆದುಕೊಂಡಿದೆ.

ಅನೇಕ ಪ್ರವಾಸಿಗರು ಈ ಸ್ಥಳವನ್ನು ನೋಡಲು ಬರುತ್ತಾರೆ. ಕಳೆದ ಎರಡು ವರ್ಷಗಳಿಂದ ಜೀಪ್‌ ರೈಸ್‌ ಮಾಡಲಾಗುತ್ತಿದೆ. ಬೇರೆ ಬೇರೆ ಕಡೆಯಿಂದ ಅನೇಕರು ಇದರಲ್ಲಿ ಭಾಗವಹಿಸುತ್ತಾರೆ. ಅಷ್ಟೇ ಅಲ್ಲದೆ ಪ್ರವಾಸಿಗರಿಗೆ ಇನ್ನಷ್ಟು ಮನೋರಂಜಿಸಲು, ಬೇಕಿದ್ದರೆ ತೆಪ್ಪದಲ್ಲಿ ಕರೆದುಕೊಂಡು ಸುತ್ತಿಸಿ ಬರುತ್ತಾರೆ.ಇದರ ನೀರಿನ ಪ್ರಮಾಣವು ಬಹಳ ಆಳವಾಗಿದೆ. ಸಮುದ್ರದಲ್ಲಿ ಆಟ ಆಡುವ ಹಾಗೆ ಇಲ್ಲಿ ಆಟ ಆಡಲು ಸಾಧ್ಯವಿಲ್ಲ.

Advertisement

ಅದೆಷ್ಟೋ ಜೀವಗಳನ್ನು ಈ ನೀರು ಬಲಿ ತೆಗೆದುಕೊಂಡಿದೆ. ಈ ಸೇತುವೆಯು ಸಾಮಾನ್ಯವಾಗಿ ಮಳೆಗಾಲದಲ್ಲಿ ಮುಳುಗಿ ಹೋಗುತ್ತದೆ. ಅನೇಕ ಬಾರಿ ಸೇತುವೆಯು ಬೇಸಿಗೆಯಲ್ಲಿ ಕಾಣಿಸಿಕೊಂಡಿದೆ. ಈಗಲೂ ಸಹ ಅನೇಕ ಕುಟುಂಬವು ಮೀನು ಹಿಡಿಯುವುದರ ಮೂಲಕ ತಮ್ಮ ಜೀವನವನ್ನು ಇಲ್ಲಿ ಸಾಗಿಸುತ್ತಿದ್ದಾರೆ. ನರಸಿಂಹರಾಜಪುರಕ್ಕೆ ಬಂದರೆ ನಿಜಕ್ಕೂ ತಡಸವನ್ನು ವೀಕ್ಷಿಸಲೇಬೇಕು. ಇದು ನಿಜವಾಗಿಯೂ ಬ್ರಿಟಿಷರ ಕಾಲದ ವಿಶಿಷ್ಟ ತಾಂತ್ರಿಕ ರಚನೆಯನ್ನು ತೋರಿಸುತ್ತದೆ. ಆದರೆ ಸ್ವಲ್ಪ ಮೈಮರೆತರೂ ಅವಗಡ ಸಂಭವಿಸಬಹುದು.

-ಸ್ನೇಹ ವರ್ಗೀಸ್‌

ಎಂ.ಜಿ.ಎಂ. ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next