Advertisement

ಕೇರಳ-ಕರ್ನಾಟಕ ಗಡಿಭಾಗದ ಜನರೊಂದಿಗೆ ಬಾಂಧವ್ಯ ಬೆಸೆದ ಶಾಲೆ

10:17 AM Nov 17, 2019 | mahesh |

19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಕರ್ನಾಟಕ ರಾಜ್ಯೋತ್ಸವ ಸಂದರ್ಭದಲ್ಲಿ ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1900 ಶಾಲೆ ಆರಂಭ
ಪ್ರಸ್ತುತ 190 ವಿದ್ಯಾರ್ಥಿಗಳು

ಈಶ್ವರಮಂಗಲ: ಕ್ರಿ.ಶ. 1900ರ ಅವಧಿಯಲ್ಲಿ ನೆಲ್ಲಿತ್ತಿಮಾರಿನಲ್ಲಿ ಮುಳಿ ಮಾಡಿನ ಗುಡಿಸಲಿನಲ್ಲಿ ಪ್ರಾರಂಭವಾದ ಶಾಲೆ ಇಂದು ನೂತನ ಕಟ್ಟಡದ ಮೂಲಕ ಪಾಠ ಪ್ರವಚನ ನಡೆಯುತ್ತಿದೆ. ಪಾಣಾಜೆಯಲ್ಲಿ ಶತಮಾನಗಳ ಹಿಂದೆ ಯಾವುದೇ ಪಾಠ ಶಾಲೆ ಇರಲಿಲ್ಲ. ಶಿಕ್ಷಣ ಪಡೆದವರ ಸಂಖ್ಯೆ ಬೆರಳಣಿಕೆಯಷ್ಟು ಇದ್ದರು. ಯಾವುದೇ ವಾಹನ ಸೌಕರ್ಯ ಇರಲಿಲ್ಲ. ಕೇರಳ ಗಡಿಭಾಗದಲ್ಲಿದ್ದ ಮಕ್ಕಳಿಗೆ ಯಾವುದೇ ಜಾತಿಮತ ಭೇದವಿಲ್ಲದೇ ಪಾಠ ಪ್ರವಚನ ಇಲ್ಲಿ ನಡೆಯುತ್ತಿತ್ತು.

ಅನಂತರ ಆರ್ಲಪದವಿನಲ್ಲಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಯಿತು. ನೆಲ್ಲಿತ್ತಿಮಾರುವಿನಿಂದ 1944ರಲ್ಲಿ ಆರ್ಲಪದವಿನಲ್ಲಿ ನೂತನ ಪ್ರಾಥಮಿಕ ಶಾಲೆಯನ್ನು ತೆರೆಯಲಾಯಿತು. 5ನೇ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ನೀಡುತ್ತಿದ್ದ ಶಾಲೆ 1949ರಲ್ಲಿ ಬೋರ್ಡ್‌ ಹೈಯರ್‌ ಎಲಿಮೆಂಟ್ರಿ ಶಾಲೆಯಾಗಿ ಮೇಲ್ದರ್ಜೆಗೇರಿಸಲಾಗಿತ್ತು. ಆಗ ಪಬ್ಲಿಕ್‌ ಪರೀಕ್ಷೆ ಇತ್ತು. ಅನಂತರ ಶಾಲೆ ಅಭಿವೃದ್ಧಿಕೊಂಡು ಇಂದು 190 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಪಡೆಯುತ್ತಿದ್ದಾರೆ..

ಅಂದಾಜು ಪಟ್ಟಿ ಸಲ್ಲಿಕೆ
ಶಾಲೆ 5 ಎಕ್ರೆ 47 ಸೆಂಟ್ಸ್‌ ಜಾಗವನ್ನು ಹೊಂದಿದೆ. 6,177 ಚದರ ಮೀಟರ್‌ ವ್ಯಾಪ್ತಿಯಲ್ಲಿ ಆಟದ ಮೈದಾನ ಇದೆ. 6 ತೆಂಗಿನಮರ ಇದೆ. ನೂತನ ಬಯಲು ಮಂದಿರವಿದೆ. ಸರಕಾರ ಮತ್ತು ಇಲಾಖೆಯ ನಿಯಾಮನುಸಾರ ಬೀಳುವ ಹಂತದಲ್ಲಿದ್ದ ಕಟ್ಟಡವನ್ನು ತೆರವುಗೊಳಿಸಲಾಗಿದೆ. ನೂತನ ಕಟ್ಟಡ ನಿರ್ಮಾಣಕ್ಕೆ 35 ಲಕ್ಷ ರೂ. ವೆಚ್ಚದ ಅಂದಾಜು ಪಟ್ಟಿಯನ್ನು ಇಲಾಖೆ ಮುಖಾಂತರ ಸರಕಾರಕ್ಕೆ ಸಲ್ಲಿಸಲಾಗಿದ್ದು, ಕಾರ್ಯರೂಪಕ್ಕೆ ಬರಲು ಬಾಕಿ ಇದೆ. ಸರಕಾರದಿಂದ 10 ಶಿಕ್ಷಕರ ಹುದ್ದೆ ಮತ್ತು ಒಂದು ಪದವೀಧರ ಮುಖ್ಯ ಶಿಕ್ಷಕಿ ಹುದ್ದೆ ಮಂಜೂರಾಗಿದೆ. ಒಂದು ಪದವೀಧರ ಮುಖ್ಯ ಶಿಕ್ಷಕ ಮತ್ತು 8 ಸಹಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, 2 ಹುದ್ದೆಗಳು ಖಾಲಿ ಇವೆ.

Advertisement

ಕಡಂದೇಲು ವೆಂಕಟರಮಣ ಭಟ್‌, ಬಟ್ಯ ಮಾಸ್ಟ್ರೆ, ಕುಂಞಿರಾಮ ಮಾಸ್ಟ್ರೆ, ಗುಡ್ಡಪ್ಪ ರೈ, ಬೀರಣ್ಣ ರೈ, ವೆಂಕಟ್ರಾಯ, ನಾರಾಯಣ ಪೂಜಾರಿ, ರಾಮಚಂದ್ರ ನಾಯಕ್‌, ಎಂ.ಪಿ. ಜಯಶಂಕರ್‌, ಮಾಧವ ಗೌಡ, ವೆಂಕಟರಮಣ ಭಟ್‌ ಸಜಿಪ, ಬೊಳಂಬಳ ಸುಬ್ರಾಯ ಓಕುಣ್ಣಾಯರು, ಕುಮಾರನ್‌, ರಾಮ ಭಟ್‌, ನಂಜುಂಡಯ್ಯ, ರಾಮ ನಾಯ್ಕ ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿದ್ದರು. ಪ್ರಸ್ತುತ ಶೀಲಾವತಿ ಮುಖ್ಯ ಶಿಕ್ಷಕಿಯಾಗಿದ್ದಾರೆ.

ಸಾಧಕರು
ಶಾಲೆಯಲ್ಲಿ ಕಲಿತ ಸಾವಿರಾರು ಮಂದಿ ಊರ ಪರವೂರ ಮಹನೀಯರು ಸರಕಾರಿ ನೌಕರರಾಗಿ, ಡಾಕ್ಟರ್‌, ಎಂಜಿನಿಯರ್‌, ಅಧ್ಯಾಪಕರಾಗಿ, ಉಪನ್ಯಾಸಕರು ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಸಾಧಕರಾಗಿದ್ದಾರೆ.

ಚರಕದಿಂದ ನೂಲು ತೆಗೆಯುತ್ತಿದ್ದರು
1963-64ರಲ್ಲಿ ಕೃಷಿ ಸಮ್ಮೇಳನ ನಡೆದಿತ್ತು. ಅಂದಿನ ಮಂತ್ರಿ ಎನ್‌. ರಾಚಯ್ಯ ಆಗಮಿಸಿದ್ದರು. ಐದಾರು ದಿನಗಳ ಕೃಷಿಗೆ ಸಂಬಂಧಿಸಿದ ಶಿಬಿರವಾಗಿತ್ತು. ಪಾಣಾಜೆ ಶಾಲೆಯ ಜತೆ ಸೂರಂಬೈಲು, ಒಡ್ಯ ಶಾಲೆಗಳು ಸೇರಿ ಸಂಯಕ್ತ ವರ್ಧಂತಿ ಶಾಲಾ ವಾರ್ಷಿಕೋತ್ಸವವನ್ನು ಆಚರಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಚರಕದಿಂದ ನೂಲು ತೆಗೆಯುವುದನ್ನು ಕಲಿಸಲಾಗಿತ್ತು. ಕಾಕೆಕೊಚ್ಚಿ ಶಂಕರನಾರಾಯಣ ಭಟ್ಟರು ಚರಕದಿಂದ ನೂಲು ತೆಗೆಯುವುದನ್ನು ಕಲಿಸುವುದರಿಂದ ಅವರು “ಮಗ್ಗದ ಮಾಷ್ಟ್ರು’ ಎಂದೇ ಹೆಸರುವಾಸಿಯಾಗಿದ್ದರು.

ಶತಮಾನ ಕಂಡ ಗಡಿನಾಡ ಶಾಲೆಯಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಪೀಠೊಪಕರಣ, ಆಧುನಿಕ ಪ್ರಯೋಗ ಶಾಲೆ ಮತ್ತು ಗ್ರಂಥಾಲಯ, ಕ್ರೀಡೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸ್ಟೇಡಿಯಂ ಅವಶ್ಯವಾಗಿ ಬೇಕಿದೆ. ಶಾಲಾ ಜಮೀನಿಗೆ ಆವರಣ ಗೋಡೆ, ಶೌಚಾಲಯ, ಹೆಚ್ಚುವರಿ ಕೊಠಡಿ ನಿರ್ಮಾಣ ಕಾರ್ಯಗಳಿಗೆ ಜನಪ್ರತಿನಿಧಿಗಳು ಸ್ಪಂದಿಸಬೇಕಾಗಿದೆ. ಗಡಿನಾಡ ಶಾಲೆ ಪ್ರಗತಿ ಪಥದಲ್ಲಿ ಮುನ್ನೆಡೆಯುತ್ತಿದ್ದು, ಮಾದರಿ ಶಾಲೆಯಾಗಿ ರೂಪಿಸಲು ಸರ್ವರ ಸಹಕಾರ ಅತೀ ಅಗತ್ಯ.
-ಡಾ| ಎಸ್‌. ಅಬೂಬಕರ್‌ ಆರ್ಲಪದವು, ಎಸ್‌ಡಿಎಂಸಿ ಅಧ್ಯಕ್ಷರು

ಶತಮಾನದಲ್ಲಿ ಶಾಲೆಯಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಈ ವರ್ಷ 8ನೇ ತರಗತಿಯನ್ನು ಆರಂಭಿಸಲಾಗಿದೆ. ವರ್ಷದಿಂದ ವರ್ಷ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚುತ್ತಿದೆ. ಸರಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿದೆ. ಮುಂದಿನ ಶೈಕ್ಷಣಿಕೆ ಸಾಲಿನಲ್ಲಿ ಎಲ್‌ಕೆಜಿ, ಯುಕೆಜಿ ಮತ್ತು 6ನೇ ತರಗತಿ ಇಂಗ್ಲಿಷ್‌ ಮಾಧ್ಯಮ ಪ್ರಾರಂಭಿಸುವಂತೆ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಎಲ್ಲರೂ ಸ್ಪಂದಿಸುತ್ತಿದ್ದಾರೆ.
– ಶೀಲಾವತಿ, ಮುಖ್ಯ ಶಿಕ್ಷಕಿ

-   ಮಾಧವ ನಾಯಕ್‌

Advertisement

Udayavani is now on Telegram. Click here to join our channel and stay updated with the latest news.

Next