Advertisement

ಹತ್ತೂರಿಗೊಂದೇ ಶಾಲೆಯಾಗಿದ್ದು ಶತಮಾನ ಪೂರೈಸಿದ ಹೆಗ್ಗಳಿಕೆ

09:44 AM Dec 04, 2019 | mahesh |

ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್‌ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ ಶಾಲೆಗಳು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿವೆ. ಈಗಿನ ಆಂಗ್ಲ ಮಾಧ್ಯಮ ಶಿಕ್ಷಣದ ಆಕರ್ಷಣೆಯ ನಡುವೆ ಈ ಶಾಲೆಗಳು ಸುತ್ತಮುತ್ತಲಿನ ಊರುಗಳಿಗೆ ಅಕ್ಷರಶಃ ಜ್ಞಾನ ದೇಗುಲಗಳೇ ಆಗಿವೆ. ಇಂತಹ ಶತಮಾನದ ಹಿರಿಮೆಯ ಕನ್ನಡ ಮಾಧ್ಯಮ ಸರಕಾರಿ ಶಾಲೆಗಳನ್ನು ಗುರುತಿಸಿ ಪರಿಚಯಿಸುವ ಪ್ರಯತ್ನ ನಮ್ಮದು.

Advertisement

1916 ಶಾಲೆ ಆರಂಭ
2007ರಲ್ಲಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆಯಾಗಿ ಮಾರ್ಪಾಡು

ಬೆಳ್ತಂಗಡಿ: ತಾಲೂಕಿನ ಬಾರ್ಯ ದ.ಕ. ಜಿ.ಪಂ. ಹಿ.ಪ್ರಾ. ಶಾಲೆ ಶತಮಾನ ಕಂಡು ಗುರುತಿಸಿಕೊಂಡಿದೆ. ಸುತ್ತಮುತ್ತಲ ಹತ್ತಾರು ಹಳ್ಳಿಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸ್ಥಳೀಯರು ಜತೆಗೂಡಿ, ಬಾರ್ಯ ರಾಮಕೃಷ್ಣ ನೂರಿತ್ತಾಯ ಹಾಗೂ ವೆಂಕಟಸುಬ್ಬ ನೂರಿತ್ತಾಯ ಅವರ ಸ್ಥಳದಾನದಿಂದ 1916ರಲ್ಲಿ ಶಾಲೆ ಆರಂಭಗೊಂಡಿತ್ತು.

ರಾಮಕೃಷ್ಣ ಸೂರಿತ್ತಾಯರ ಮನೆಯಲ್ಲಿ ಅಂದು ಪಾಠ ಪ್ರವಚನ ಆರಂಭಿಸಲಾಗಿತ್ತು. 1983ರ ವರೆಗೆ ಏಕೋಪಾಧ್ಯಾಯ ಶಾಲೆಯಾದ್ದು, ಬಳಿಕ 1987ರಲ್ಲಿ 7ನೇ ತರಗತಿ ಆರಂಭಗೊಂಡು, 2007ರಲ್ಲಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆಯಾಗಿ ಮಾರ್ಪಾಡಾಯಿತು.

ಆರಂಭದಲ್ಲಿ 1-4ನೇ ತರಗತಿವರೆಗೆ 25-30 ಮಕ್ಕಳಿದ್ದ ಶಾಲೆ ಬಳಿಕ 200ಕ್ಕೂ ಹೆಚ್ಚು ಮಕ್ಕಳನ್ನು ಕಂಡಿತ್ತು. ಅಂದು ಬಾರ್ಯ, ತೆಕ್ಕಾರು, ತಣ್ಣೀರುಪಂತ, ಕರಾಯ, ಪುತ್ತಿಲ, ಉಳಿ, ತುರ್ಕಳಿಕೆ, ಕಲ್ಲೇರಿ ವ್ಯಾಪ್ತಿಗೆ ಶಾಲೆ ಒಳಗೊಂಡಿತ್ತು. ಪ್ರಸಕ್ತ ಈ ಪ್ರದೇಶಗಳಿಗೆ ಹೊಂದಿಕೊಂಡಂತೆ ಪುತ್ತಿಲ, ಬೇಂಗಿಲ, ಪೆರಿಯೊಟ್ಟು, ಸರಳಿಕಟ್ಟೆ, ಕರಾಯ, ಉಳಿ, ಕಲ್ಲೇರಿ, ತುರ್ಕಳಿಕೆ ಪ್ರದೇಶದಲ್ಲಿ ಶಾಲೆಗಳಿವೆ.

Advertisement

ಹಳೆ ವಿದ್ಯಾರ್ಥಿಗಳಿವರು
ಸೆಲ್ಕೋ ಕಂಪೆನಿಯ ಜನರಲ್‌ ಮ್ಯಾನೇಜರ್‌ ಆಗಿರುವ ಜಗದೀಶ್‌ ಪೈ, ಯೋಧ ಭವಾನಿಶಂಕರ್‌, ಮುಖ್ಯ ಮಂತ್ರಿಗಳ ಆಪ್ತಸಹಾಯಕರಾಗಿ ಸೇವೆ ಸಲ್ಲಿಸುತ್ತಿರುವ ಅರುಣ್‌ ಪುಟ್ರಾಡೋ, ಎಸ್‌.ಬಿ.ಐ. ಬ್ಯಾಂಕ್‌ನ ಉನ್ನತ ಹುದ್ದೆಯಲ್ಲಿರುವ ಶೋಭಾ ಪೈ, ಪುತ್ತೂರು ಯಕ್ಷಗಾನ ಕಲಾ ಸಂಘದ ಪ್ರಮುಖ ಭಾಸ್ಕರ್‌ ಬಾರ್ಯ ಸಹಿತ ನೂರಾರು ಸಾಧಕರು ಈ ಶಾಲೆಯ ಹಳೆ ವಿದ್ಯಾರ್ಥಿಗಳು.

ಮುಖ್ಯೋಪಾಧ್ಯಾಯರು
ಆರಂಭದಲ್ಲಿ ಹಲವು ಮಂದಿ ಮುಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿದ್ದು, ಬಳಿಕದ ದಿನಗಳಲ್ಲಿ ವಿಶ್ವೇಶ್ವರಯ್ಯ, ಲಿಂಗಪ್ಪ ಮಾಸ್ಟರ್‌, ಕೃಷ್ಣಪ್ಪ ಮಾಸ್ಟರ್‌ ಸೇರಿದಂತೆ ಪ್ರಸಕ್ತ ಕೂಸಪ್ಪ ಮೂಲ್ಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕೃಷ್ಣಯ್ಯ ಮಾಸ್ಟರ್‌ ಮತ್ತು ಫಿಲೋಮಿನ ಇ ಬ್ರೆಗ್ಸ್‌ ಅವಧಿಯಲ್ಲಿ ಶಾಲೆ ಅಭಿವೃದ್ಧಿ ಕಂಡಿತ್ತು¤.

ಮೂಲ ಸೌಕರ್ಯ
ಪ್ರಸಕ್ತ 1ರಿಂದ 8ನೇ ತರಗತಿ ವರೆಗೆ 67 ಮಕ್ಕಳು ಹಾಗೂ 3 ಶಿಕ್ಷಕರನ್ನು ಹೊಂದಿದೆ. 1.4 ಎಕ್ರೆ ಸ್ಥಳದಲ್ಲಿ ಶಾಲೆ ಕಟ್ಟಡ ಸಹಿತ ಶೌಚಾಲಯ, ನೀರಾವರಿ ವ್ಯವಸ್ಥೆ, ಮೈದಾನ, ಕಂಪ್ಯೂಟರ್‌ ಕೊಠಡಿ ಹೊಂದಿದೆ. ತೆಂಗಿನ ಸಸಿ ಮತ್ತು ಅಡಿಕೆ ಸಸಿ ನೆಡಲಾಗಿದೆ, ಸ್ವಲ್ಪ ತರಕಾರಿ ಕೃಷಿಯೂ ಮಾಡಲಾಗುತ್ತಿದೆ.

ಕ್ರೀಡಾ ಸಾಧನೆ
ಕ್ರೀಡೆಯಲ್ಲಿ ಹಲವು ವಿದ್ಯಾರ್ಥಿಗಳು ತಾಲೂಕು, ಜಿಲ್ಲಾ ಮಟ್ಟ ಅಲ್ಲದೆ ರಾಜ್ಯ ಮಟ್ಟದ ಹಂತದವರೆಗೆ ಚಾಪು ಮೂಡಿಸಿ ದ್ದಾರೆ. ಪ್ರತಿಭಾ ಕಾರಂಜಿಯಲ್ಲಿ ವಲಯದ ಮಟ್ಟದಿಂದ ತಾಲೂಕು ಮಟ್ಟದವರೆಗೆ ಸಾಧನೆಗೈದ ಹೆಮ್ಮೆ ಈ ಶಾಲೆಯ ವಿದ್ಯಾರ್ಥಿಗಳದ್ದಾಗಿದ್ದು, 2017ರಲ್ಲಿ ಶತಮಾನೋತ್ಸವ ಸಂಭ್ರಮ ಕಂಡಿದೆ.

ನಾನು ನಾಲ್ಕು ವರ್ಷಗಳಿಂದ ಈ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಮಕ್ಕಳ ಕೊರತೆಯಿಂದ 4 ಮಂದಿ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ ಶಿಕ್ಷಣ ಗುಣಮಟ್ಟದಲ್ಲಿ ಕೊರತೆಯಾಗಿಲ್ಲ. ಶಾಲಾಭಿವೃದ್ಧಿ ಸಮಿತಿ ಪ್ರೋತ್ಸಾಹದಿಂದ ಮಕ್ಕಳ ಸಂಖ್ಯೆ ಹೆಚ್ಚಿಸುವಲ್ಲಿ ಪ್ರಯತ್ನ ನಡೆಸಲಾಗುತ್ತಿದೆ.
-ಕೂಸಪ್ಪ ಮೂಲ್ಯ, ಮುಖ್ಯೋಪಾಧ್ಯಾಯರು.

ಎರಡು ವಾರ್ಡ್‌ಗಳಿಗೆ ಏಕೈಕ ಶಾಲೆಯಾಗಿದ್ದುಕೊಂಡು ಒಂದು ದೊಡ್ಡ ಹಾಲ್‌ನಲ್ಲಿ 5 ತರಗತಿ ನಡೆಯುತ್ತಿದ್ದ ದಿನಗಳಲ್ಲಿ ಒಂದರಿಂದ 5ನೇ ತರಗತಿವರೆಗೆ ಇದೇ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರೈಸಿದ್ದೇನೆ. ಆಟದ ಜತೆಗೆ ಪಾಠ, ಪ್ರತಿ ಶನಿವಾರ ಭಜನೆ ಹಾಗೂ ಸಮರ್ಪಣ ಮನೋಭಾವ ಶಿಕ್ಷಕರಿಂದ ನನ್ನ ಇಂದಿನ ಯಶಸ್ಸು ಹಾಗೂ ಶಿಸ್ತಿನ ಜೀವನಕ್ಕೆ ಕಾರಣವಾಗಿದೆ.
-ಜಗದೀಶ್‌ ಪೈ, ಜನರಲ್‌ ಮ್ಯಾನೇಜರ್‌,  ಸೆಲ್ಕೋ ಬೆಂಗಳೂರು, ಹಳೆ ವಿದ್ಯಾರ್ಥಿ

-  ಚೈತ್ರೇಶ್‌ ಇಳಂತಿಲ

Advertisement

Udayavani is now on Telegram. Click here to join our channel and stay updated with the latest news.

Next