Advertisement

ದಡ್ಡ ಮಕ್ಕಳಿಗೆ ಮೀಸಲಾದ ಶಾಲೆ !

08:51 PM Apr 27, 2019 | mahesh |

ಒಂದು ಶಾಲೆಯಲ್ಲಿ 50 ಶೇ. ಫ‌ಲಿತಾಂಶ ಬಂದಿದೆ ಎಂದು ಭಾವಿಸೋಣ. ಅಂದರೆ 100 ಮಂದಿಯಲ್ಲಿ 50 ಮಂದಿ ಉತ್ತೀರ್ಣರಾಗಿದ್ದಾರೆ ಎಂದರ್ಥ. 50 ಶೇ. ಮಂದಿಗೆ ಭವಿಷ್ಯದಲ್ಲಿ ಸಾಕಷ್ಟು ಅವಕಾಶದ ಸಾಧ್ಯತೆಗಳಿವೆ. ಅತ್ಯಂತ ಹೆಚ್ಚು ಅಂಕಗಳನ್ನು ಪಡೆದವರು ಉನ್ನತ ಶಿಕ್ಷಣಕ್ಕೆ ತೆರಳಬಹುದು. ಕೇವಲ ಮಾರ್ಕು ಪಡೆದರೆ ಸಾಲದು, ಅವರ ಆರ್ಥಿಕ ಸ್ಥಿತಿಯೂ ಅನುಕೂಲಕರವಾಗಿರಬೇಕು. ಕಡಿಮೆ ಅಂಕ ಗಳಿಸಿದವರು ಯಾವುದಾದರೂ ಉದ್ಯೋಗ ತರಬೇತಿಗೆ, ಮುಂದಿನ ತರಗತಿಗಳಿಗೆ ಸೇರಬಹುದು. ಆದರೆ, ಅನುತ್ತೀರ್ಣರಾದ 50 ಶೇ. ಮಂದಿ ಏನು ಮಾಡುವುದು? ಅನುತ್ತೀರ್ಣರಾದವರು ಮಾತ್ರವಲ್ಲ, ಕಡಿಮೆ ಅಂಕ ಗಳಿಸಿದವರು ಕೂಡ ಮುಂದಿನ ಶಿಕ್ಷಣ ಪಡೆಯಲಾರದೆ ಪರದಾಡುವ ಸ್ಥಿತಿ ಇಂದು ಇದೆ.

Advertisement

ನಿಜವಾಗಿ ಅನುತ್ತೀರ್ಣರಾದ ಮಂದಿ ಆಫೀಸು ಸಹಾಯಕರಾಗಿಯೊ, ಕೂಲಿಕಾರ್ಮಿಕರಾಗಿಯೊ, ಗೂಡಂಗಡಿ ನಡೆಸಿಯೋ ಜೀವನ ನಡೆಸಬಹುದು. ಆದರೆ, ಪರೀಕ್ಷೆಯಲ್ಲಿ ಅನುತ್ತೀರ್ಣರಾಗುವುದೆಂದರೆ ಬದುಕಿನಲ್ಲಿ ಸೋತುಹೋದಂತೆ ಎಂದೇ ಬಿಂಬಿಸಲಾಗುತ್ತಿದೆ. ಫೇಲಾದವರು ಕೂಡಾ ಬದುಕಿಯೇ ಬದುಕುತ್ತಾರೆ. ಆದರೆ, ಪರೀಕ್ಷೆಯಲ್ಲಿ ಫೇಲಾದವರನ್ನು ಮತ್ತು ಫೇಲ್‌ ಆದವರು ಮಾಡುವ ದುಡಿಮೆಯನ್ನು ಒಂದು ಘನತೆಯಿಂದ ಕಾಣುವ ಸ್ಥಿತಿ ನಮ್ಮಲ್ಲಿ ಏಕೆ ಇಲ್ಲ?

“ಗೆಲುವೆಂಬುದು ಗೆಲುವೇ ಅಲ್ಲ’ ಎಂಬುದೊಂದು ಪ್ರಸಿದ್ಧ ಉಕ್ತಿ. ನಮ್ಮಲ್ಲಿ ಉನ್ನತ ಅಂಕ ಪಡೆದವರು ಉನ್ನತ ಹುದ್ದೆಗಳನ್ನು ಪಡೆಯುತ್ತಾರೆ ಎಂದಿಟ್ಟುಕೊಳ್ಳೋಣ. ಅವರಲ್ಲಿ ಕೆಲವರು ಲಂಚ ಪಡೆದು, ವಂಚನೆ ಮಾಡಿ ಶ್ರೀಮಂತರಾಗಬಹುದು. ಹಾಗಿದ್ದರೆ, ಅವರ ವ್ಯಕ್ತಿತ್ವವನ್ನು ಅಂಕಗಳಿಂದ ಅಳೆಯುವುದು ಹೇಗೆ?

ಒಬ್ಬರು ಹಳ್ಳಿ ಶಾಲೆಯ ಮೇಸ್ಟರು ಹೇಳುತ್ತಿದ್ದರು, “”ನಮ್ಮಲ್ಲಿ ಕೇವಲ ಹತ್ತೇ ಮಂದಿ ಅನುತ್ತೀರ್ಣರಾಗಿದ್ದಾರೆ” “”ನಿಮ್ಮ ಶಾಲೆ ಸೆಂಟ್‌ ಪರ್ಸೆಂಟ್‌ ಬಾರದ ಬಗ್ಗೆ ಬೇಸರವಿಲ್ಲವೆ?” ಎಂದು ಕೇಳಿದರೆ ಅವರ ಉತ್ತರ: “”ನಾವು ಕೇವಲ ಬುದ್ಧಿವಂತರಾದ ಮಕ್ಕಳಿಗೆ ಮಾತ್ರ ಕಲಿಸುವುದಲ್ಲ, ನಮ್ಮಲ್ಲಿ ದಡ್ಡ ಮಕ್ಕಳು ಕಲಿಯುತ್ತಾರೆ. ಎಲ್ಲರನ್ನೂ ಒಂದೇ ಬಾರಿ ಪರೀಕ್ಷೆಗೆ ಕೂರಿಸುತ್ತೇವೆ”.

ಸ್ನೇಹಿತರೊಬ್ಬರು ಸೀಮಿತ ಸಂಖ್ಯೆಯ ಮಕ್ಕಳಿಗೆ ಬೇಸಿಗೆ ಶಿಬಿರ ನಡೆಸುತ್ತಿದ್ದರು. ಆ ಶಿಬಿರದಲ್ಲಿ ಭಾಗವಹಿಸಬೇಕಾದರೆ ಮಕ್ಕಳಿಗೆ ಇರಬೇಕಾದ ಒಂದೇ ಒಂದು ಅರ್ಹತೆ ಎಂದರೆ ಶಾಲಾ ಪರೀಕ್ಷೆಗಳಲ್ಲಿ 40 ಶೇ.ಕ್ಕಿಂತ ಹೆಚ್ಚಿನ ಅಂಕ ಗಳಿಸಿರಬಾರದು!

Advertisement

ಅವರು ಅದಕ್ಕೆ ಕೊಡುವ ಸಮರ್ಥನೆ ಹೀಗಿದೆ: “ಒಳ್ಳೆಯ ಅಂಕ ಪಡೆಯಲು ಪ್ರಯತ್ನಿಸುವುದು ತಪ್ಪೇನೂ ಅಲ್ಲ. ಇಂದಿನ ಕಾಲ ಹಾಗೆಯೇ ಇದೆ. ಅಂಕ ಚೆನ್ನಾಗಿ ಪಡೆಯದವರನ್ನು ಯಾರೂ ಪರಿಗಣಿಸುವುದಿಲ್ಲ. ಆದರೆ, ಹೆಚ್ಚು ಅಂಕ ಪಡೆಯಲಾಗದ ವಿದ್ಯಾರ್ಥಿಗಳಿಗೆ ತಾವಿನ್ನು ಇಲ್ಲೇನೂ ಸಾಧಿಸಲಾರೆವು ಎಂದು ಮನದಟ್ಟಾಗಿರುತ್ತದೆ. ಅವರಲ್ಲಿ ಹೆಚ್ಚಿನವರು ಚಿತ್ರಕಲೆಗಳಲ್ಲಿ, ಕರಕುಶಲ ಕಲೆಯಲ್ಲಿ , ಹಾಡುವುದರಲ್ಲಿ ಪ್ರತಿಭಾವಂತರಾಗಿರುತ್ತಾರೆ. ಶಾಲೆಯಲ್ಲಿ ನಿರುಪಯುಕ್ತರೆಂದು ಭಾವಿಸಿದ ಆ ಮಕ್ಕಳಿಗೆ ಇಂಥ ಅಭಿವ್ಯಕ್ತಿಯ ಅವಕಾಶ ಸಿಕ್ಕಿದರೆ ಅದ್ಭುತವಾಗಿ ಮಿಂಚುತ್ತಾರೆ. ಹಾಗಾಗಿ, ತಮ್ಮ ಶಿಬಿರದಲ್ಲಿ ಯಾವತ್ತೂ ದಡ್ಡ ಮಕ್ಕಳಿಗೆ ಅವಕಾಶ’.

ದಡ್ಡತನಕ್ಕೆ ಆ ಹುಡುಗನೊಬ್ಬನೇ ಕಾರಣವಲ್ಲ, ಆತ ಬೆಳೆದುಬಂದ ರೀತಿ, ವಾಸಿಸುತ್ತಿರುವ ಸ್ಥಿತಿಯೂ ಕಾರಣವೇ.

ಕೆ. ಜೆ. ಪ್ರಕಾಶ್‌

Advertisement

Udayavani is now on Telegram. Click here to join our channel and stay updated with the latest news.

Next