ಅದ್ಯಾರೋ ಇಸ್ತ್ರಿ ಹೊಡೆದು ಕಪಾಟಿನಲ್ಲಿ ಮಲಗಿಸಿಬಿಟ್ಟಿದ್ದರು ಅನಿಸುತ್ತೆ. ನನಗ್ಯಾವ ಅರಿವೂ ಇರಲಿಲ್ಲ. ನನಗೆ ಜೀವ ಬಂದದ್ದು ಆಗಲೇ. ಕಪಾಟು ತೆರೆದು ಅವಳು ನನ್ನ ಮೇಲೆ ಕೈ ಇಟ್ಟಾಗಲೇ. ಮೆಲ್ಲನೆ ಕಣ್ಣು ತೆರೆದು ಆಕೆಯನ್ನೊಮ್ಮೆ ದಿಟ್ಟಿಸಿದೆ. ಅದೇಕೋ ಅವಳು ಲಂಗ-ಕುಪ್ಪಸದಲ್ಲಿದ್ದಳು. ನಾಚಿಕೆ ಎನಿಸಿತು. ಹಾಗೇ ಕಣ್ಣು ಮುಚ್ಚಿಕೊಂಡೆ. ಆದರೆ, ಅವಳು ಬಿಡದೆ ನನ್ನನ್ನು ಎಳೆದು ಎದೆಗವಚಿಕೊಂಡಳಲ್ಲ? ಅವಳ ಸ್ಪರ್ಶ ಅದೇಕೋ ಹಿತವೆನಿಸಿತು. ನನ್ನ ಒಂದು ತುದಿಯನ್ನು ಹಿಡಿದು ಕೊಡವಿ ಮಡಕೆ ಬಿಡಿಸಿಕೊಂಡಳು. ಆಗಲೇ ನಾನವಳನ್ನು ದಿಟ್ಟಿಸಿ ನೋಡಿದ್ದು. ಹಾಲು ಬಣ್ಣ, ತೆಳುವಾದ ಮೈಕಟ್ಟು, ಸುಂದರವಾದ ನಯನಗಳು! ಅಯ್ಯಯ್ಯೋ ಇದೇನಾಯಿತು? ನನ್ನ ಒಂದು ತುದಿಯನ್ನು ಸೊಂಟಕ್ಕೆ ಸಿಕ್ಕಿಸಿಕೊಂಡೇ ಬಿಟ್ಟಳಲ್ಲಾ? ಕಚಗುಳಿ ಇಟ್ಟಂತಾಯಿತು.
ಆದರೂ ಅವಳೆಂದಂತೆ ನಡೆದುಕೊಂಡೆ.
ನನ್ನನ್ನು ಹದವಾಗಿ ಮೈಗೆ ಸುತ್ತಿಕೊಂಡಳು. ನನ್ನ ಇನ್ನೊಂದು ತುದಿಯನ್ನು ಮಡಕೆ ಮಡಕೆಯನ್ನಾಗಿಸಿ ತನ್ನೆದೆಗೆ ಹರವಿಕೊಂಡುಬಿಟ್ಟಳು. ಅಯ್ಯೋ! ಅದೇನು ನನ್ನ ಒಂದು ಬದಿಗೆ ಪಿನ್ನು ಚುಚ್ಚಿಯೇ ಬಿಟ್ಟಳಲ್ಲ? ನೋವೆನಿಸಿತು. ಆದರೂ ಅವಳ ಅಂದಕ್ಕೆ ಮಾರುಹೋಗಿ ಸಾವರಿಸಿಕೊಂಡೆ. ಇನ್ನೊಂದು ತುದಿಯನ್ನು ಅಚ್ಚು ಅಚ್ಚಾಗಿಸಿ ಸೊಂಟಕ್ಕೆ ಸಿಕ್ಕಿಸಿಕೊಂಡಳು. ಹಾ! ಈಗ ನನ್ನ ರೂಪ ಕಂಡು ನಾನೇ ಬೆರಗಾದೆ. ನನ್ನ ಒಡಲೊಳಗೆ ಇಷ್ಟು ಬಣ್ಣಗಳಿದ್ದದ್ದು ನನಗೇ ಗೊತ್ತೇ ಇರಲಿಲ್ಲ. ಆಕೆಯೂ ಒಂದು ಕೆಲಸ ಮುಗಿಯಿತೆಂದುಕೊಂಡಂತೆ ನಿಲುವುಗನ್ನಡಿಯ ಮುಂದೆ ನಿಂತು ತನಗೆ ತಾನೇ ನಾಚಿಕೊಂಡಳು. ಮತ್ತೂಮ್ಮೆ ನನ್ನ ಮೈಯನ್ನೊಮ್ಮೆ ಇಡಿಯಾಗಿ ಸವರಿದಳು. ಹಾಯೆನಿಸಿತು!
ಆಕೆ ಇಷ್ಟಕ್ಕೂ ಸುಮ್ಮನಾಗಲಿಲ್ಲ. ತನ್ನ ಮುಖಕ್ಕೇನೋ ಬಳಿದುಕೊಂಡಳು. ಕಣ್ಣನ್ನು ಕಪ್ಪಾಗಿಸಿದಳು. ತುಟಿಯನ್ನು ಕೆಂಪಾಗಿಸಿದಳು. ನನ್ನ ಬಣ್ಣವನ್ನೇ ಹೋಲುವ ಓಲೆಯನ್ನೂ ಕಿವಿಗೆ ಸಿಕ್ಕಿಸಿಕೊಂಡಳು. ನನ್ನದೇ ಮೈಬಣ್ಣವನ್ನೇ ಹೋಲುವ ಕೈ ಬಳೆಗಳನ್ನು, ಸರವನ್ನೂ ಧರಿಸಿದಳು. ತನ್ನ ಕೂದಲನ್ನು ಬೆನ್ನ ಮೇಲೆ ಹರವಿಕೊಂಡಳು. ಕನ್ನಡಿಯಲ್ಲೊಮ್ಮೆ ನೋಡಿ ಕಿಸಕ್ಕನ್ನೆ ನಕ್ಕಳು. ಆಕೆಯನ್ನು ನೋಡಿ ನಾನೂ ನಕ್ಕೆ. ಅದೇಕೋ ಅವಳು ನನ್ನನ್ನು ಗಮನಿಸಲೇ ಇಲ್ಲ. ಅವಳನ್ನು ಕಂಡು ಒಂದು ಕ್ಷಣ ನನಗೇ ಹೊಟ್ಟೆಕಿಚ್ಚಾಯಿತು. ನನ್ನಿಂದ ಅವಳ ಅಂದ ಹೆಚ್ಚಾಯಿತೋ, ಅವಳಿಂದ ನನ್ನ ಚಂದ ಹೆಚ್ಚಾಯಿತೋ? ಉತ್ತರ ತಿಳಿಯದೆ ಗಲಿಬಿಲಿಗೊಂಡೆ. ಏನಾದರೂ ಆಗಲಿ, ನನ್ನ ಹುಡುಗಿ ಸುಂದರವಾಗಿರಲಿ ಎಂದು ಹಾರೈಸಿದೆ. ಅದೆಲ್ಲಿಂದಲೋ ಹಾಡೊಂದು ಗಾಳಿಯಲ್ಲಿ ತೇಲಿ ಬಂದಂತಾಯಿತು. ಸೀರೆಲಿ ಹುಡುಗಿಯ ನೋಡಲೇ ಬಾರದು!
ಪಿನಾಕಿನಿ ಪಿ. ಶೆಟ್ಟಿ
ಸಂತ ಆಗ್ನೆಸ್ ಕಾಲೇಜು, ಮಂಗಳೂರು