Advertisement

ಶಾಲಾ ಖಾತೆಗೆ ಹಣ ಬಂದರೂ ಎಲ್‌ಕೆಜಿ ಅತಿಥಿ ಶಿಕ್ಷಕರಿಗೆ ತಲುಪದ ವೇತನ

10:16 PM Sep 23, 2020 | mahesh |

ಪುತ್ತೂರು: ಕರ್ನಾಟಕ ಪಬ್ಲಿಕ್‌ ಸ್ಕೂಲ್‌ಗ‌ಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿಯ ಅತಿಥಿ ಶಿಕ್ಷಕರಿಗೆ ಮತ್ತು ಆಯಾಗಳಿಗೆ ಕೊರೊನಾ ಲಾಕ್‌ಡೌನ್‌ ಅನಂತರ ಆರು ತಿಂಗಳಿನಿಂದ ವೇತನ ಪಾವತಿ ಆಗಿಲ್ಲ. ವೇತನಕ್ಕೆಂದು ಸರಕಾರದಿಂದ ಶಾಲಾ ಖಾತೆಗೆ ಹಣ ಬಿಡುಗಡೆ ಆಗಿದ್ದರೂ ಅಲ್ಲಿಂದ ಶಿಕ್ಷಕರ, ಆಯಾಗಳ ಖಾತೆಗೆ ಹಣ ಪಾವತಿಗೆ ಸೂಚನೆ ಸಿಗದಿರುವುದು ಪಾವತಿ ತೊಡಕಿಗೆ ಕಾರಣವೆನಿಸಿದೆ.

Advertisement

ಸರಕಾರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮ
ರಾಜ್ಯ ಸರಕಾರವು 2019-20ನೇ ಸಾಲಿನಿಂದ ರಾಜ್ಯಾದ್ಯಂತ ಆಯ್ದ ಸರಕಾರಿ ಶಾಲೆಗಳಲ್ಲಿ ಆಂಗ್ಲ ಮಾಧ್ಯಮ ವಿಭಾಗದಲ್ಲಿ ಎಲ್‌ಕೆಜಿ, ಯುಕೆಜಿ ಶಿಕ್ಷಣ ಆರಂಭಿಸಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 9 ಸರಕಾರಿ ಶಾಲೆಗಳಲ್ಲಿ ತರಗತಿಗಳು ಆರಂಭಗೊಂಡಿದ್ದವು. ಕಳೆದ ಒಂದು ವರ್ಷದಿಂದ ಕೆಪಿಎಸ್‌ ಸ್ಕೂಲ್‌ಗ‌ಳಲ್ಲಿ ಕಲಿಕೆ ವ್ಯವಸ್ಥೆ ಪ್ರಗತಿಯಲ್ಲಿದೆ. ಬೋಧನೆಗೆ ಹಾಗೂ ಸಹಾಯಕ್ಕಾಗಿ ಸರಕಾರ ಪ್ರತಿ ಶಾಲೆಗೆ ಎರಡು ಅತಿಥಿ ಶಿಕ್ಷಕರನ್ನು ಮತ್ತು ಓರ್ವ ಆಯಾರನ್ನು ನಿಯೋಜಿಸಿ ಮಾಸಿಕ ವೇತನ ನಿಗದಿಪಡಿಸಿತ್ತು.

ಮಂಜೂರಾದರೂ ಪಾವತಿ ಇಲ್ಲ
ಕೆಪಿಎಸ್‌ ಪೂರ್ವ ಪ್ರಾಥಮಿಕ ಶಾಲೆಯ ಅತಿಥಿ ಶಿಕ್ಷಕಿ ಮತ್ತು ಆಯಾರಿಗೆ ಸರಕಾರದಿಂದ 10 ತಿಂಗಳ ಗೌರವ ವೇತನ ಏಕಕಾಲದಲ್ಲಿ ಪಾವತಿ ಮಾಡುವುದು ನಿಯಮ. ಸರಕಾರದಿಂದ ಶಾಲೆಯ ಖಾತೆಗೆ ಹಣ ಜಮಾವಣೆ ಆದ ಬಳಿಕ ಶಾಲಾ ಪ್ರಾಂಶುಪಾಲರು ಶಿಕ್ಷಕಿಯರಿಗೆ, ಸಹಾಯಕರ ಖಾತೆಗೆ ನೀಡುತ್ತಾರೆ. ಕೊರೊನಾ ಲಾಕ್‌ಡೌನ್‌ ಅನಂತರವೂ ಶಾಲಾ ಖಾತೆಗೆ ವೇತನ ಪಾವತಿಗೆ ಹಣ ಮಂಜೂರಾಗಿದ್ದು, ಆದರೆ ಈ ವರೆಗೆ ಶಿಕ್ಷಕರಿಗೆ ಸಿಕ್ಕಿಲ್ಲ.

ಆರು ತಿಂಗಳಿನಿಂದ ವೇತನ ಇಲ್ಲ
ಕೊರೊನಾ ಲಾಕ್‌ಡೌನ್‌ ಪರಿಣಾಮ ಶಾಲೆ ಆರಂಭವಾಗಿಲ್ಲ. ಆದರೆ ಅತಿಥಿ ಶಿಕ್ಷಕರು, ಆಯಾಗಳು ಶಾಲಾ ದಾಖಲಾತಿ ಸಹಿತ ಶೈಕ್ಷಣಿಕ ಅಗತ್ಯದ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ಪ್ರವೇ ಶಾತಿ ಇಲ್ಲದ ಕಾರಣ ತರಗತಿಗಳು ನಡೆದಿಲ್ಲ. ಹೀಗಾಗಿ ಅತಿಥಿ ಶಿಕ್ಷಕರಿಗೆ, ಆಯಾಗಳಿಗೆ ತರಗತಿ ಇಲ್ಲದ ಕಾರಣ ವೇತನ ಪಾವತಿ ಅಗತ್ಯ ಇಲ್ಲ ಎಂಬ ನಿಲುವು ಶಿಕ್ಷಣ ಇಲಾಖೆಯಲ್ಲಿರುವುದೇ ಪಾವತಿ ತಡೆಗೆ ಕಾರಣ ಎನ್ನಲಾಗಿದೆ. ಆದರೆ ಅತಿಥಿ ಶಿಕ್ಷಕರು ಹೇಳುವ ಪ್ರಕಾರ, ಕೊರೊನಾ ಕಾರಣದಿಂದ ಶಾಲೆ ಮುಚ್ಚಿದೆ. ಇದೊಂದು ಅನಿವಾರ್ಯ ಸಂದರ್ಭ. ಉದ್ದೇಶಪೂರ್ವಕ ಗೈರು ಅಲ್ಲ. ನೇಮಕಾತಿ ಸಂದರ್ಭ ಎರಡು ತಿಂಗಳ ರಜಾ ಅವಧಿ ಹೊರತುಪಡಿಸಿ ಉಳಿದ ಎಲ್ಲ ತಿಂಗಳ ವೇತನ ಪಾವತಿಸುವ ವಾಗ್ಧಾನ ಮಾಡಲಾಗಿತ್ತು. ಹತ್ತು ತಿಂಗಳ ವೇತನ ಬಂದಿತ್ತು. ಆದರೆ ಕೊರೊನಾ ರಜಾ ಅವಧಿಯನ್ನು ಕೆಲಸಕ್ಕೆ ಗೈರು ಎಂದು ಪರಿಗಣಿಸಿ ಆರು ತಿಂಗಳಿನಿಂದ ವೇತನ ನೀಡಿಲ್ಲ. ಇದರಿಂದ ಜೀವನ ನಿರ್ವಹಣೆ ಕಷ್ಟವಾಗಿದೆ ಎಂಬ ಅಳಲು ತೋಡಿಕೊಳ್ಳುತ್ತಾರೆ.

ಕ್ರಮ ಕೈಗೊಳ್ಳಲಾಗುವುದು
ಶಾಲೆಯ ಖಾತೆಗೆ ಹಣ ಜಮೆಯಾಗಿದ್ದರೂ ಶಿಕ್ಷಕರಿಗೆ, ಆಯಾಗಳಿಗೆ ವೇತನ ಏಕೆ ನೀಡಿಲ್ಲ ಎಂಬ ಬಗ್ಗೆ ಅಧಿಕಾರಿಗಳ ಜತೆ ಮಾಹಿತಿ ಪಡೆಯುವೆ. ಸರಕಾರದಿಂದ ಸಿಗಬೇಕಾದ ವೇತನ ಹಾಗೂ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು.
-ಸಂಜೀವ ಮಠಂದೂರು ಶಾಸಕರು, ಪುತ್ತೂರು

Advertisement

ವೇತನ ಪಾವತಿಸಲಿ
ಕೊರೊನಾ ಲಾಕ್‌ಡೌನ್‌ ಅನಂತರ ಎಪ್ರಿಲ್‌ನಿಂದ ವೇತನ ಬಂದಿಲ್ಲ. ಶಾಲೆಯ ದಾಖಲಾತಿ ಮತ್ತಿತರ ಇಲಾಖೆಯ ಕೆಲಸಗಳಿಗೆ ಶಾಲೆಗೆ ಹೋಗುತ್ತಿದ್ದೇವೆ. ವೇತನ ಹಣ ಶಾಲೆಯ ಖಾತೆಗೆ ಜಮೆ ಆಗಿದೆ ಎಂಬ ಮಾಹಿತಿ ಇದೆ. ಸಂಬಂಧಪಟ್ಟವರು ಗಮನಹರಿಸಿ ವೇತನ ಪಾವತಿಗೆ ಕ್ರಮ ಕೈಗೊಳ್ಳಬೇಕು.
-ಸೌಮ್ಯಾ ಅನಿರುದ್ಧ್, ಅತಿಥಿ ಶಿಕ್ಷಕಿ ಕೆಯ್ಯೂರು ಕೆಪಿಎಸ್‌

Advertisement

Udayavani is now on Telegram. Click here to join our channel and stay updated with the latest news.

Next