Advertisement
ದೇಶದ ಆರ್ಥಿಕ ಬಲಿಷ್ಠತೆಗೆ ಅಡಿಪಾಯದಂತಿರುವ ಕೃಷಿಕರು, ಶ್ರಮಿಕರು ಕೋವಿಡ್ 19 ಲಾಕ್ ಡೌನ್‌ನಿಂದ ಹೆಚ್ಚು ಬಾಧಿತರಾದರು. ಕೋವಿಡ್ 19 ಸಂಕಷ್ಟ ಕಾಲದಲ್ಲಿ ಯಾರೂ ಹಸಿವಿನಿಂದ ಬಳಲದಂತೆ ನೋಡಿಕೊಳ್ಳಬೇಕು, ಮಾನವೀಯತೆ ಮೊದಲಾಗಬೇಕೆನ್ನುವ ಪ್ರಧಾನಿ ಮೋದಿ ಕರೆಯನ್ನು ಅಕ್ಷರಶಃ ಪಾಲಿಸಿ ಬಡವರ ನೋವಿಗೆ ಪ್ರಾಮಾಣಿಕವಾಗಿ ಸ್ಪಂದಿಸಿದವರು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಮತಕ್ಷೇತ್ರದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ. ಬಾಯಿ ಮಾತಿನ ಸಾಂತ್ವನ ಹೇಳದೆ, ಸಂಕಷ್ಟಕ್ಕೀಡಾದವರ ಹಸಿವು ನೀಗಿಸಿ ನೆಮ್ಮದಿಯ ನಗು ಅರಳಿಸಿದವರಲ್ಲಿ ಇವರು ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ.
ತನ್ನ ಜನರ ಹಸಿವು ನೀಗಿಸಲು ಆಗಲೇ ಸಂಕಲ್ಪ ತೊಟ್ಟು ದೂರದೃಷ್ಟಿ ಚಿಂತನೆ, ಮುಂದಾಲೋಚನೆ, ಯೋಜನಾಬದ್ಧ ಕಾರ್ಯಗಳಿಂದ ನೆರವಿಗೆ ಧಾವಿಸಿದರು. ನನಗೆ ಸೋಂಕು ತಗುಲಿದರೂ, ಪ್ರಾಣಕ್ಕೆ ಸಂಚಕಾರ ಬಂದರೂ ಚಿಂತಿಸೊಲ್ಲ. ನನ್ನ ಜನರಿಗೆ ಮಾತ್ರ ತೊಂದರೆಯಾಗಬಾರದು. ಅವರ ನೆಮ್ಮದಿಯೇ ನನ್ನ ನೆಮ್ಮದಿ. ಬಡವರ ಸೇವೆಯೇ ದೇವರ ಪೂಜೆ ಎಂದು ಹಿಂತಿರುಗಿ ನೋಡದೆ ಮುನ್ನಡೆದು ಈ ಭಾಗದ ಜನರ ಹೃದಯದಲ್ಲಿ ನೆಲೆ ನಿಂತು ಇಡೀ ಕರ್ನಾಟಕವೇ ಬೆರಗುಗಣ್ಣುಗಳಿಂದ ನೋಡುವಂಥ ಆಪದ್ಭಾಂಧವ ಎನಿಸಿಕೊಂಡರು.
Related Articles
Advertisement
ರೋಗಿಗಳಿಗೆ ಊಟ: ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ, ಕಾಳಗಿ ಸೇರಿ ತಾಲೂಕಿನ ಎಲ್ಲ ಸರ್ಕಾರಿ ಆಸ್ಪತ್ರೆಗಳ ರೋಗಿಗಳು, ಸಹಾಯಕರು ಸೇರಿ 65000 ಜನರಿಗೆ ಲಾಕ್‌ಡೌನ್ ಸಡಿಲಗೊಳ್ಳುವವರೆಗೂ ಊಟ, ಉಪಹಾರ ವ್ಯವಸ್ಥೆ ಕಲ್ಪಿಸಿ ಲಾಕ್‌ಡೌನ್ ಯುದ್ಧಕ್ಕೆ ಪ್ರಥಮ ಹೆಜ್ಜೆ ಇಟ್ಟರು.
ಆಹಾರ ಧಾನ್ಯದ ಕಿಟ್: ಮೊದಲೇ ರೂಪಿಸಿದ್ದ ಯೋಜನೆಯಂತೆ ಮುದ್ದೇಬಿಹಾಳ, ತಾಳಿಕೋಟೆ ಕೇಂದ್ರವಾಗಿಸಿಕೊಂಡು ಪತ್ನಿ ಮಹಾದೇವಿ ಜತೆಗೂಡಿ ಲಾಕ್‌ಡೌನ್‌ನಿಂದ ತೊಂದರೆಗೀಡಾದ ಅಂದಾಜು 40,000 ಜನರಿಗೆ ತಲಾ ಒಂದು ಕೆಜಿ ಸಕ್ಕರೆ, ಗೋಧಿ ರವಾ, ತೊಗರಿಬೇಳೆ, ತಲಾ 2 ಕೆಜಿ ಆಲೂಗಡ್ಡೆ, ಈರುಳ್ಳಿ, ತಲಾ ಕಾಲು ಕೆಜಿ ಜೀರಿಗೆ, ಸಾಸಿವೆ, ಖಾರದಪುಡಿ, ಚಹಾಪುಡಿ, ಅರಿಷಿಣಪುಡಿ (ವಲಸಿಗರಿಗೆ 5ಕೆಜಿ ಗೋ ಧಿ ಹಿಟ್ಟು) ಸಾಮಗ್ರಿಗಳ ಕಿಟ್ ಹಂಚಿದರು. ವಲಸೆ ಕಾರ್ಮಿಕರು, ಆಶಾ, ಆರೋಗ್ಯ, ಪೊಲೀಸ್, ಅಗ್ನಿಶಾಮಕ ಸಿಬ್ಬಂದಿ, ಪೌರ ಕಾರ್ಮಿಕರು, ಪತ್ರಿಕೆಯವರು, ನಿರ್ಗತಿಕರು, ಶ್ರಮಿಕರು ಪ್ರಯೋಜನ ಪಡೆದರು. ಕಿಟ್‌ಗಳ ಪ್ಯಾಕಿಂಗ್‌ನಲ್ಲಿ ನಡಹಳ್ಳಿ ಕುಟುಂಬ, ಸಂಘ-ಸಂಸ್ಥೆಗಳ ಪ್ರಮುಖರು, ಸ್ಥಳೀಯ ಜನಪ್ರತಿನಿಧಿಗಳು, ಕಾರ್ಯಕರ್ತರ ಪಡೆ ಸ್ವಯಂಪ್ರೇರಣೆಯಿಂದ ಪಾಲ್ಗೊಂಡಿದ್ದರು. ಹಗಲು ರಾತ್ರಿ ಬಡವರ ಮನೆ ಬಾಗಿಲಿಗೆ ಹೋಗಿ ಕಿಟ್ ಹಂಚಿ ಸಮಸ್ಯೆ ಆಲಿಸಿದ ನಡಹಳ್ಳಿಯವರ ಕ್ರಿಯಾಶಕ್ತಿ, ಅಗಾಧ ಸಾಮರ್ಥ್ಯ ಎಂಥವರನ್ನೂ ಬೆರಗುಗೊಳಿಸುವಂತಿತ್ತು. ಕೋವಿಡ್ 19 ಯೋಧರ ರಕ್ಷಕ: ಕೋವಿಡ್ 19 ಯೋಧರೆನ್ನಿಸಿಕೊಂಡ ಆಶಾ, ಆರೋಗ್ಯ ಕಾರ್ಯಕರ್ತರು, ವೈದ್ಯರು, ಪತ್ರಕರ್ತರು, ಪೊಲೀಸರು ಸೇರಿ ನಿಯಂತ್ರಣದಲ್ಲಿ ತೊಡಗಿಸಿಕೊಂಡಿದ್ದವರೆಲ್ಲರಿಗೂ 2000 ಎನ್-95 ಮಾಸ್ಕ್, ಹ್ಯಾಂಡ್ ಗ್ಲೌಜ್, ಖಾಸಗಿ ವೈದ್ಯರಿಗೆ 100 ಪಿಪಿಇ ಕಿಟ್ ವಿತರಿಸಿ ತಾವೊಬ್ಬ ಕೋವಿಡ್ 19 ಯೋಧರ ರಕ್ಷಕರೆನ್ನುವುದನ್ನು ತೋರಿಸಿದ್ದಾರೆ.
ಬಡ ಕಲಾವಿದರಿಗೆ ನೆರವು: ಲಾಕ್‌ಡೌನ್‌ನಿಂದ ಕಾರ್ಯಕ್ರಮ, ಪ್ರದರ್ಶನಗಳಿಲ್ಲದೆ ತಾಲೂಕಿನ ಕಲಾವಿದರು ಕಂಗೆಟ್ಟಿರುವುದನ್ನು ಅರಿತ ನಡಹಳ್ಳಿಯವರು ಅವರೆಲ್ಲರನ್ನೂ ದಾಸೋಹ ನಿಲಯಕ್ಕೆ ಕರೆಸಿಕೊಂಡರು. ಆಹಾರ ಸಾಮಗ್ರಿ ಕಿಟ್ ವಿತರಿಸಿ ಹಸಿವು ನೀಗಿಸುವಲ್ಲಿ ಭಾಗಿಯಾದರು. ಜುಲೈ 22ರ ತಮ್ಮ ಜನ್ಮದಿನದಂದು ವಿಶೇಷ ಕಾಣಿಕೆ ನೀಡುವ ವಾಗ್ಧಾನ ಮಾಡಿದರು. ಇವರ ಸಮಸ್ಯೆಯನ್ನು ಅ ಧಿವೇಶನದಲ್ಲಿ ಪ್ರಸ್ತಾಪಿಸಿ ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದರು. ಮಾಸ್ಕ್, ಸ್ಯಾನಿಟೈಜರ್: ಮೊದಲಿನಿಂದಲೂ ವಿದ್ಯಾರ್ಥಿಗಳ ಬಗ್ಗೆ ನಡಹಳ್ಳಿಯವರಿಗೆ ವಿಶೇಷ ಕಾಳಜಿ. ಸಮಾಜಸೇವಾ ದಿನಗಳಿಂದಲೂ ಅವರಿಗೆ ನೋಟಬುಕ್, ಪುಸ್ತಕ, ಪೆನ್, ಆರ್ಥಿಕ ನೆರವು ನೀಡಿ ನೆರವಾಗಿದ್ದರು. ಕೋವಿಡ್ 19 ಕಾಲದಲ್ಲೂ ಪಿಯುಸಿ, ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗೆ ಕಾಳಜಿ ವಹಿಸಿ ಪರೀಕ್ಷೆ ಬರೆಯಲು ಸಿದ್ಧರಾಗಿದ್ದ ಮುದ್ದೇಬಿಹಾಳ, ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರಗಳ ಅಂದಾಜು 25,000 ವಿದ್ಯಾರ್ಥಿಗಳಿಗೆ ಸೋಂಕು ತಡೆಗಟ್ಟುವ ಸಾಮರ್ಥ್ಯದ (3ಪ್ಲೈ) ಒಂದು ಲಕ್ಷ ಮಾಸ್ಕ್, ಒಬ್ಬರಿಗೊಂದರಂತೆ ಗುಣಮಟ್ಟದ 100 ಎಂಎಲ್‌ನ 25,000 ಹ್ಯಾಂಡ್ ಸ್ಯಾನಿಟೈಜರ್ ಬಾಟಲ್ ಕಿಟ್‌ಗಳನ್ನು ಪ್ರಾಂಶುಪಾಲರು, ಮುಖ್ಯಾಧ್ಯಾಪಕರು, ಪರೀಕ್ಷಾ ಕೇಂದ್ರಗಳ ಮುಖ್ಯ ಅಧೀಕ್ಷಕರ ಮುಖಾಂತರ ತಲುಪುವಂತೆ ನೋಡಿಕೊಂಡರು. ವಿದ್ಯಾರ್ಥಿಗಳ ಮೊಬೈಲ್ ಸಂಖ್ಯೆ ಸಮೇತ ಮಾಹಿತಿ ಸಂಗ್ರಹಿಸಿ ಅವರ ಭವಿಷ್ಯಕ್ಕೆ ಉಪಯುಕ್ತವಾಗುವ ಶೈಕ್ಷಣಿಕ ಯೋಜನೆ ರೂಪಿಸುವ ಕಾಳಜಿ ತೋರಿಸಿ ವಿದ್ಯಾರ್ಥಿ ವಲಯಕ್ಕೂ ಮಹತ್ವ ಕೊಟ್ಟಿರುವ ಸಂದೇಶವನ್ನು ಸಮಾಜಕ್ಕೆ ಕೊಟ್ಟರು. ಭೂರಹಿತ ಕಾರ್ಮಿಕರಿಗೆ ಉದ್ಯೋಗ ಸಂಕಲ್ಪ: ಲಾಕ್‌ಡೌನ್ ಅನ್‌ಲಾಕ್ ಆದ ನಂತರವೂ ನಡಹಳ್ಳಿಯವರು ಸುಮ್ಮನೆ ಕುಳಿತಿಲ್ಲ. ಅಧಿಕಾರಿಗಳ ತಂಡದೊಂದಿಗೆ ತಾಲೂಕು ವ್ಯಾಪ್ತಿಯ ಐದು ಜಿಪಂ ಮತಕ್ಷೇತ್ರಗಳ ಗ್ರಾಪಂ ಕೇಂದ್ರ ಸ್ಥಾನಕ್ಕೆ ತೆರಳಿ ಭೂರಹಿತ, ವಲಸೆ ಕಾರ್ಮಿಕರಿಗೆ ಆದ್ಯತೆ ನೀಡಿ ದುಡಿವ ಕೈಗಳಿಗೆ ಉದ್ಯೋಗ, ಅರ್ಹರಿಗೆ ಪಿಂಚಣಿ ಕೊಡಿಸಲು ಕ್ರಮ ವಹಿಸಿ ತಾವು ಎಲ್ಲ ಕಾಲದಲ್ಲೂ ಬಡವರ ಜತೆಗಿದ್ದೇವೆಂಬ ಸಂದೇಶ ರವಾನಿಸಿದ್ದಾರೆ. ಅಧಿಕಾರಿಗಳ, ಆಪ್ತರ ಸ್ಪಂದನೆ: ತಮ್ಮ ಕೆಲಸದ ವೇಗಕ್ಕೆ ತಾಲೂಕುಮಟ್ಟದ ಅಧಿಕಾರಿಗಳು, ಅಭಿಮಾನಿಗಳು, ಕಾರ್ಯಕರ್ತರು, ಮುಖಂಡರು, ಆಪ್ತರು ಸ್ಪಂದಿಸಿದ್ದು ನಡಹಳ್ಳಿಯವರಿಗೆ ಬಲ ನೀಡಿದಂತಾಗಿತ್ತು. ಸೂಚನೆಗಳನ್ನು ಚಾಚೂ ತಪ್ಪದೆ ಪಾಲಿಸುವಲ್ಲಿ, ಅಗತ್ಯ ಸಂದರ್ಭ ಸೂಕ್ತ ಸಲಹೆ, ಮಾರ್ಗದರ್ಶನ ನೀಡುವಲ್ಲಿ ಇವರೆಲ್ಲರ ಪಾತ್ರ ಮಹತ್ವದ್ದಾಗಿತ್ತು. ಗೋವಾ ಗಡಿಭಾಗಕ್ಕೆ ಕಾರ್ಮಿಕರ ಕರೆತರಲು ತೆರಳಿದ್ದ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ ಜತೆಯಾಗಿ ನಿಂತರು. ಬೆಂಗಳೂರಿನಲ್ಲಿದ್ದೇ ಎಲ್ಲವನ್ನೂ ನಿಭಾಯಿಸಿ ಸೋಷಿಯಲ್ ಮೀಡಿಯಾದಲ್ಲಿ ಶಾಸಕರ ದಿನಂಪ್ರತಿ ಚಟುವಟಿಕೆಗಳನ್ನು ಭಿತ್ತರಿಸಿ ಸಮನ್ವಯ ಸಾಧಿಸುವಲ್ಲಿ ಆಪ್ತ ಸಹಾಯಕ ಬಾಬುರಾವ್ ಕುಲಕರ್ಣಿ, ಸ್ಥಳೀಯ ಆಪ್ತ ಸಹಾಯಕ ಬಸನಗೌಡ ಪಾಟೀಲ, ಇಲ್ಲಿನ ಆಪ್ತರು, ಬಿಜೆಪಿ ಧುರೀಣರು, ಕಾರ್ಯಕರ್ತರು, ತಾಲೂಕಾಡಳಿತ ನಡಹಳ್ಳಿಯವರಿಗೆ ಹೆಗಲು ಕೊಟ್ಟು ಕೆಲಸ ಮಾಡಿದ್ದರಿಂದಲೇ ಬೇರೆ ತಾಲೂಕಿನಷ್ಟು ಸಮಸ್ಯೆಗಳು ಇಲ್ಲಿ ಕಂಡು ಬರಲಿಲ್ಲ. ಪತಿಗೆ ಸಾಥ್ ನೀಡಿದ ಮಹಾದೇವಿ ಪಾಟೀಲ
ನಡಹಳ್ಳಿಯವರ ಪ್ರತಿಯೊಂದು ಸಮಾಜಮುಖಿ ಚಟುವಟಿಕೆಗಳಿಗೆ, ಬಡವರೆಡೆಗಿನ ತುಡಿತಕ್ಕೆ ಬೆನ್ನೆಲುಬಾಗಿ ನಿಂತವರು ಅವರ ಧರ್ಮಪತ್ನಿ ಮಹಾದೇವಿ (ಅಕ್ಕಮಹಾದೇವಿ). ಕೋವಿಡ್ 19 ಮಹಾಮಾರಿಯಿಂದ ನೊಂದವರ ಕಣ್ಣೀರು ಒರೆಸಲು ನಡಹಳ್ಳಿಯವರ ಹಿಂದಿದ್ದ ನಿಜವಾದ ಪ್ರೇರಣೆಯೇ ಮಹಾದೇವಿ ಮೇಡಂ ಅನ್ನೋದು ವಾಸ್ತವ ಸತ್ಯ. ಪತಿಯ ಪ್ರತಿಯೊಂದು ಸಮಾಜಮುಖಿ ಕಾರ್ಯದಲ್ಲಿ ಜತೆಯಾಗಿ ಸಾರ್ಥಕತೆ ಕಂಡವರು. ಕಷ್ಟದ ದಿನಗಳಲ್ಲೂ ಪತಿ ಯಶಸ್ಸಿನ ಶಿಖರ ಏರುವಂತೆ ನೋಡಿಕೊಂಡವರು. ಬಡವರು, ಮಕ್ಕಳು, ಮಹಿಳೆಯರೆಡೆಗಿನ ಇವರ ತುಡಿತ ಅದಮ್ಯ. ಕರುಣಾಮಯಿ ಮಾತೆಯ ಸ್ಥಾನದಲ್ಲಿ ನಿಂತು ತಮ್ಮ ಹೆಸರನ್ನು ಸಾರ್ಥಕಪಡಿಸಿ ಸೋಂಕಿನ ಆತಂಕದ ನಡುವೆಯೂ ಪತಿಯ ಸಮಾಜಮುಖೀ ಚಟುವಟಕೆಗಳಲ್ಲಿ ಭಾಗಿಯಾದವರು. ಹಗಲು, ರಾತ್ರಿ ಪತಿಯ ಜತೆ ಸಂಚರಿಸಿ ಬಡವರಿಗೆ ನೆರವಾಗಿ ಹಸಿವು ನೀಗಿಸಿದವರು. ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ವಲಸಿಗರ ಬೇಡಿಕೆಯಂತೆ 2ಲಕ್ಷ ಖಡಕ್ ರೊಟ್ಟಿ, ಆಯುರ್ವೇದದ ಚಟ್ನಿ, 30,000ಕ್ಕೂ ಹೆಚ್ಚು ಹೂರಣದ ಹೋಳಿಗೆ, ಮಾವಿನ ಹಣ್ಣಿನ ಸೀಕರಣೆ ಊಟ ನೀಡಿ ಅಮೃತಧಾರೆ ಎರೆದ ಮಹಾತಾಯಿ. ಇವರಿಂದ ನೆರವು ಪಡೆದ ಬಡ ಮಹಿಳೆಯರು “ಯವ್ವಾ ನೀ ನಮ್ ಪಾಲಿಗಿ ಮಹಾದೇವಿ ಅಕ್ಕನಂತೆ ಬಂದಿ.. ತಾಯಿ ಸ್ಥಾನದಲ್ಲಿ ನಿಂತು ನಮ್ಮ, ನಮ್ಮ ಮಕ್ಕಳ ಹಸಿವು ನೀಗಿಸಿದಿ. ನೂರ್ಕಾಲ ಸುಖವಾಗಿರವ್ವ. ನಿನ್ ಗಂಡ, ಮಕ್ಳು ಸುಖವಾಗಿ ಬಾಳಿ ಬದುಕಲೆವ್ವ’ ಎಂದು ಹಾರೈಸಿದ್ದು ಇವರ ನಿಷ್ಕಲ್ಮಶ ಗುಣಕ್ಕೆ ಕನ್ನಡಿಯಾಗಿದೆ. ಮುದ್ದೇಬಿಹಾಳ, ತಾಳಿಕೋಟೆಯಲ್ಲಿ ಆಹಾರ ಸಾಮಗ್ರಿ ಕಿಟ್ ಪ್ಯಾಕಿಂಗ್‌ಗೆ ಬಂದಿದ್ದ ಕಾರ್ಮಿಕರಿಗೆ ಖುದ್ದು ತಾವೇ ಊಟ ಬಡಿಸಿ ಸರಳತೆ ತೋರಿದ್ದು ಅವರೊಳಗಿನ ಅಂತಃಕರಣ ಅನಾವರಣಗೊಳಿಸಿದಂತಿತ್ತು. ದೇವರ ಹಿಪ್ಪರಗಿ ಕ್ಷೇತ್ರದ ಬಗ್ಗೆಯೂ ಕಾಳಜಿ
ನಡಹಳ್ಳಿಯವರು 10 ವರ್ಷ ದೇವರಹಿಪ್ಪರಗಿ ವಿಧಾನಸಭಾ ಮತಕ್ಷೇತ್ರಕ್ಕೆ ಶಾಸಕರಾಗಿ ಜನಾನುರಾಗಿಯಾಗಿದ್ದರು. ಅಲ್ಲಿನ ಬಡತನ, ಸಂಕಷ್ಟ ಕಣ್ಣಾರೆ ಕಂಡಿದ್ದರು. ಮುದ್ದೇಬಿಹಾಳ ಮತ ಕ್ಷೇತ್ರಕ್ಕೆ ಶಾಸಕರಾಗಿ ಆಯ್ಕೆಗೊಂಡರೂ ಅಲ್ಲಿನ ಸೆಳೆತ, ಸಂಬಂಧ ಬಿಟ್ಟು ಕೊಟ್ಟಿರಲಿಲ್ಲ. ಅಲ್ಲಿನ ಜನರೂ ಇವರ ಸಂಪರ್ಕದಲ್ಲಿದ್ದರು. ಹೀಗಾಗಿಯೇ ಅಲ್ಲೂ ಲಾಕ್ ಡೌನ್ ಸಂಕಷ್ಟಕ್ಕೆ ಸಿಲುಕಿದವರ ನೆರವಿಗೆ ನಿಂತರು. ಧರ್ಮಪತ್ನಿ ಮಹಾದೇವಿ ಅವರೊಂದಿಗೆ ಇಲ್ಲಿ ಮಾಡಿದ ಜನಪರ ಕಾರ್ಯವನ್ನೇ ಅಲ್ಲೂ ಮಾಡಿ ಬಡವರ ಹಸಿವು ನೀಗಿಸಲು ಶ್ರಮಿಸಿದರು. ಗೋವಾಕ್ಕೆ ದುಡಿಯಲು ಹೋಗಿದ್ದ ಅಲ್ಲಿನವರಿಗೂ, ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ಮಹಾರಾಷ್ಟ್ರ ವಲಸಿಗರು, ಅವರ ಮಕ್ಕಳು, ಗರ್ಭಿಣಿಯರಿಗೂ ಆಹಾರ ಸಾಮಗ್ರಿ ಕಿಟ್, ಪೌಷ್ಟಿಕಾಂಶದ ವಿಶೇಷ ಕಿಟ್ ಹಂಚಿದರು. ಖಡಕ್ ರೊಟ್ಟಿ, ಚಟ್ನಿ, ಹೋಳಿಗೆ ಸೀಕರಣೆ ಊಟ ಬಡಿಸಿದರು. ಕೋವಿಡ್ 19 ಯೋಧರಿಗೂ ಎನ್-95 ಮಾಸ್ಕ್ ಪೂರೈಸಿದರು. ಪಿಯುಸಿ, ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೂ ಮಾಸ್ಕ್, ಸ್ಯಾನಿಟೈಜರ್ ಕಿಟ್‌ಗಳನ್ನು ಆಯಾ ಪ್ರಾಂಶುಪಾಲರು, ಮುಖ್ಯಾಧ್ಯಾಪಕರ ಮುಖಾಂತರ ತಲುಪಿಸಿದರು. ತನ್ಮೂಲಕ ತಮಗೆ 10 ವರ್ಷ ಬೆನ್ನೆಲುಬಾಗಿದ್ದ ಸಾಮಾನ್ಯ ಜನರನ್ನು ಮರೆತಿಲ್ಲ, ಮರೆಯುವುದೂ ಇಲ್ಲ ಎಂಬುದನ್ನು ಸಾಬೀತುಪಡಿಸಿದರು. ಸಮಾಜಕ್ಕೆ ಮಾದರಿಯಾದ ಮಕ್ಕಳು
ನಡಹಳ್ಳಿಯವರ ಮಕ್ಕಳಾದ ಭರತ್, ಶರತ್, ಸಹೋದರ ಸೋಮನಗೌಡರ ಮಕ್ಕಳಾದ ಸುಷ್ಮಿತಾ, ಸುನೀಲ್ ಕೂಡಾ ಕೋವಿಡ್ 19 ಸಂಕಷ್ಟಕ್ಕೆ ಸ್ಪಂದಿಸಿ ಸಮಾಜಕ್ಕೆ ಮಾದರಿಯಾಗಿ, ಯುವಜನತೆಗೆ ಪ್ರೇರಣೆಯಾಗಿ ಯುವಪೀಳಿಗೆಗೆ ಉತ್ತಮ ಸಂದೇಶ ನೀಡಿದ್ದಾರೆ. ತಮ್ಮ ಪಾಲಕರ ದಾಸೋಹ ಕಣ್ಣಾರೆ ಕಂಡಿದ್ದ ಇವರು ಬೆಂಗಳೂರಿನಿಂದ ಇಲ್ಲಿಗೆ ಬಂದಾಗ ಅವರ ಸಾಮಾಜಿಕ ಚಟುವಟಿಕೆಗಳಿಂದ ಪ್ರೇರಣೆಗೊಂಡು ಬಡಮಕ್ಕಳ ಕಷ್ಟಕ್ಕೆ ಮರುಗಿದ್ದರು. ಬೆಂಗಳೂರಿಗೆ ತೆರಳಿ ತಮ್ಮಲ್ಲೇ ಚರ್ಚಿಸಿ ಸಾಂಸ್ಥಿಕ ಕ್ವಾರಂಟೈನ್‌ನಲ್ಲಿದ್ದ ಮಹಾರಾಷ್ಟ್ರ ವಲಸೆ ಕಾರ್ಮಿಕರ ಮಕ್ಕಳು, ಗರ್ಭಿಣಿಯರ ಪೌಷ್ಟಿಕ ಆಹಾರ, ದಿನಬಳಕೆ ವಸ್ತುಗಳ ಕೊರತೆ ನೀಗಿಸಲು ತೀರ್ಮಾನಿಸಿದರು. ಪಾಕೆಟ್‌ಮನಿಯ 6-8 ಲಕ್ಷ ರೂ. ಒಟ್ಟುಗೂಡಿಸಿ ವಿಶೇಷ ಕಿಟ್ (ಟೆಟ್ರಾ ಪ್ಯಾಕೇಟ್‌ನಲ್ಲಿನ ನಂದಿನಿ ಗುಡ್ ಲೈಫ್ ಹಾಲು, ಬಿಸ್ಕೆಟ್, ಚಾಕೋಲೆಟ್, ಬನ್, ಟೂತ್‌ಪೇಸ್ಟ್, ಟೂತ್‌ಬ್ರಶ್, ಕೈ, ಮೈ, ಬಟ್ಟೆ ತೊಳೆಯುವ ಸಾಬೂನು) ವಿತರಿಸುವ ಯೋಜನೆಯನ್ನು ಪಾಲಕರಿಗೆ ತಿಳಿಸಿದರು. ಮಕ್ಕಳ ಸಮಾಜಮುಖಿ ಚಿಂತನೆಗೆ ಸ್ಪಂದಿಸಿದ ನಡಹಳ್ಳಿ ದಂಪತಿ ಸೋಂಕಿನ ಆತಂಕದ ನಡುವೆಯೂ ಖುದ್ದು ತಾವೇ ಕ್ವಾರಂಟೈನ್ ಕೇಂದ್ರಗಳಿಗೆ ತೆರಳಿ ಸಾಮಾಜಿಕ ಅಂತರ ಕಾಯ್ದುಕೊಂಡು ಕಿಟ್ ವಿತರಿಸಿ ಮಕ್ಕಳ ಅಪೇಕ್ಷೆ ಈಡೇರಿಸಿದರು. ಮುದ್ದೇಬಿಹಾಳ, ದೇವರ ಹಿಪ್ಪರಗಿ, ಸಿಂದಗಿ ಭಾಗದ 3600 ಮಕ್ಕಳು, ಗರ್ಭಿಣಿಯರು ಪ್ರಯೋಜನ ಪಡೆದು ಇವರೆಲ್ಲರನ್ನೂ ಹರಸಿದರು. ಇನ್ನೂ ಒಂದ್ಹೆಜ್ಜೆ ಮುಂದಿಟ್ಟ ಹಿರಿಯ ಪುತ್ರ, ಉದ್ಯಮಿ ಭರತ್ ತನ್ನ ಸ್ನೇಹಿತರೊಡಗೂಡಿ ಬೆಂಗಳೂರಿನಿಂದ ರೈಲಿನ ಮೂಲಕ ತಮ್ಮೂರಿಗೆ ತೆರಳುತ್ತಿದ್ದ ಅಂದಾಜು 3000 ಕಾರ್ಮಿಕರಿಗೆ ಬಿಸ್ಕೆಟ್, ನೀರಿನ ಬಾಟಲ್, ಫುಡ್ ಪ್ಯಾಕೇಟ್ ನೀಡಿ ತಂದೆಗೆ ತಕ್ಕ ಮಗನಾದರು. ಸ್ವಾಮೀಜಿ- ಗಣ್ಯರ ಮೆಚ್ಚುಗೆ
ನಡಹಳ್ಳಿಯವರು ಕೋವಿಡ್ 19 ಲಾಕ್‌ಡೌನ್ ಸಂಕಷ್ಟದಿಂದ ತೊಂದರೆಗೊಳಗಾದವರ ರಕ್ಷಣೆಗೆ ನಿಂತು ಅವರ ಹಸಿವು ನೀಗಿಸಲು ಮುಂದಾಗಿದ್ದನ್ನು ತಿಳಿದ ನಾಡಿನ ಮಠಾಧೀಶರು, ಧರ್ಮಗುರುಗಳು ಇವರ ದಾಸೋಹ ಕಾರ್ಯ ಮೆಚ್ಚಿ ಅಭಿನಂದನಾ ಪತ್ರ ಕಳಿಸಿ, ಮಾದರಿ ಕಾರ್ಯ ಮಾಡಿದ್ದೀರಿ ಎಂದು ಹರಸಿದ್ದಾರೆ. ಹಲವರು ನಡಹಳ್ಳಿ ದಂಪತಿಯನ್ನು ಸನ್ಮಾನಿಸಿ, ಆಶೀರ್ವದಿಸಿದ್ದಾರೆ. ಸಚಿವ ರಮೇಶ ಜಾರಕಿಹೊಳಿ, ಸಿಎಂ ರಾಜಕೀಯ ಕಾರ್ಯದರ್ಶಿಗಳಾದ ಶಂಕರಗೌಡ ಪಾಟೀಲ, ಮಹದೇವಪ್ರಸಾದ ಇಲ್ಲಿಗೆ ಭೇಟಿ ನೀಡಿದ್ದಾಗ ಇವರ ಜನಪರ ಕಾರ್ಯ ಮೆಚ್ಚಿ ಪ್ರೋತ್ಸಾಹಿಸಿದ್ದು ನಡಹಳ್ಳಿಯವರಿಗೆ ಪ್ರೇರಣೆಯಂತಾಗಿತ್ತು. ಅಧಿಕಾರಿಗಳ ಸಭೆ-ಸಂಚಾರ
ಕೋವಿಡ್ 19 ಕ್ಲಿಷ್ಟತೆ ಎದುರಿಸಲು ನಡಹಳ್ಳಿಯವರು ಮುದ್ದೇಬಿಹಾಳ, ತಾಳಿಕೋಟೆ ಕೇಂದ್ರಸ್ಥಾನವಾಗಿಸಿಕೊಂಡು 20ಕ್ಕೂ ಹೆಚ್ಚು ತಾಲೂಕು ಮಟ್ಟದ ಅಧಿ ಕಾರಿಗಳ, 7-8 ಬಾರಿ ಪಿಡಿಒ, ಗ್ರಾಮಲೆಕ್ಕಿಗರ, 2 ಬಾರಿ ಖಾಸಗಿ ವೈದ್ಯರ ಸಭೆ ನಡೆಸಿದರು. ಆಯಾ ಸಂಜೆ ದಿನದ ಬೆಳವಣಿಗೆ ಮಾಹಿತಿ ಪಡೆದು ಸಲಹೆ ಸೂಚನೆ ನೀಡಿದರು. ತಾವೇ ಹಲವೆಡೆ ಸಂಚರಿಸಿ ಸಮಸ್ಯೆ ನಿವಾರಣೆಗೆ ಕ್ರಮ ಕೈಕೊಂಡರು. ಕೆಲ ಸಂದರ್ಭಗಳನ್ನು ನಿಭಾಯಿಸಲು ಅಧಿಕಾರಿಗಳು ಹಿಂಜರಿದಾಗ ತಾವೇ ಮುಂದೆ ನಿಂತರು. ಕುಡಿವ ನೀರು ಸೇರಿದಂತೆ ಇತರೆ ಸಮಸ್ಯೆಗಳಿಗೂ ಆದ್ಯತೆ ನೀಡಿದ್ದು ಇವರ ಕ್ರಿಯಾಶೀಲತೆಗೆ ಕನ್ನಡಿಯಂತಾಗಿತ್ತು.
ವಲಸಿಗರ ಕರೆತಂದ ಆಪದ್ಭಾಂಧವ
ಅಂತರ ಜಿಲ್ಲೆ ವಲಸೆ ಕಾರ್ಮಿಕರಿಗೆ ಸ್ಪಂದನೆ: ಅಂತರ ಜಿಲ್ಲೆಯವರು ತಮ್ಮೂರಿಗೆ ಮರಳಲು ಸರ್ಕಾರ ಅವಕಾಶ ಕಲ್ಪಿಸುವುದನ್ನು ಮೊದಲೇ ಅರಿತಿದ್ದ ನಡಹಳ್ಳಿಯವರು ಇವರ ಸ್ವಾಗತಕ್ಕೆ, ಸ್ಕ್ರೀನಿಂಗ್‌ಗೆ ಇಲ್ಲಿನ ಬಸ್‌ನಿಲ್ದಾಣವನ್ನು ಅಗ್ನಿಶಾಮಕ ದಳ, ಪುರಸಭೆ ಪೌರ ಕಾರ್ಮಿಕರ, ಸಾರಿಗೆ ಸಿಬ್ಬಂದಿ ಸಹಕಾರದಿಂದ ಸ್ಯಾನಿಟೈಜ್ ಮಾಡಿಸಿ ಸಜ್ಜುಗೊಳಿಸಿದ್ದರು. ಖುದ್ದು ತಾವೇ ನಿಲ್ದಾಣದಲ್ಲಿ ಬಂದವರೆಲ್ಲರನ್ನೂ ಸ್ವಾಗತಿಸಿದರು. ಏ.28ರಿಂದ ಇಲ್ಲಿಗೆ ಬರಲು ಆರಂಭಿಸಿದ ಎಲ್ಲರಿಗೂ ಪತ್ನಿ ಮಹಾದೇವಿಯವರ ನೆರವಿನೊಂದಿಗೆ, ಅಧಿಕಾರಿಗಳು, ಕಾರ್ಯಕರ್ತರ ತಂಡದೊಂದಿಗೆ ಊಟ, ಬಿಸ್ಲೇರಿ ನೀರು, ಬ್ರೆಡ್, ಬಿಸ್ಕೆಟ್, ಚಾಕೋಲೆಟ್, ಬೇಕರಿ ಪದಾರ್ಥ, ಆಹಾರ ಸಾಮಗ್ರಿ ಕಿಟ್ ಕೊಟ್ಟು ಸಂತೈಷಿದರು. ಸರ್ಕಾರಿ ಬಸ್‌ಗಳಲ್ಲೇ ಅವರೆಲ್ಲ ತಮ್ಮೂರು ಸೇರಲು ವ್ಯವಸ್ಥೆ ಮಾಡಿದರು. ಅಗತ್ಯ ಇದ್ದವರಿಗೆ ಹಣ ನೀಡಿದರು. ಖಾಸಗಿ ವಾಹನ ವ್ಯವಸ್ಥೆ ಕಲ್ಪಿಸಿ ಬೀಳ್ಕೊಟ್ಟರು. ಗೋವಾ ಕನ್ನಡಿಗರ ಕರೆತಂದ ಯಶೋಗಾಥೆ: ಗೋವಾಕ್ಕೆ ಗುಳೇ ಹೋಗಿ ಲಾಕ್‌ಡೌನ್‌ನಿಂದ ಅಲ್ಲೇ ಲಾಕ್ ಆಗಿದ್ದ ಈ ಭಾಗದ ಸೀಜನಲ್ ಕಾರ್ಮಿಕರು ಅತ್ತ ಕೆಲಸವೂ ಇಲ್ಲದೆ, ಹೊಟ್ಟೆಗೆ ಅನ್ನ-ನೆಲೆಯೂ ಇಲ್ಲದೆ, ಇತ್ತ ತಮ್ಮೂರಿಗೆ ಮರಳಲೂ ಆಗದೆ ಜೀವನವೇ ಬೇಸರವಾದಂತಾಗಿ ಅತಂತ್ರ ಸ್ಥಿತಿಯಲ್ಲಿದ್ದರು. ಇದನ್ನರಿತಿದ್ದ ನಡಹಳ್ಳಿಯವರು ಗ್ರಾಮ ಲೆಕ್ಕಾಧಿಕಾರಿ, ಪಿಡಿಒ, ಕಾರ್ಯಕರ್ತರ ನೆರವಿನೊಂದಿಗೆ ಅಂಥವರ ಅಂಕಿ ಸಂಖ್ಯೆ ಮೊದಲೇ ಸಂಗ್ರಹಿಸಿ ಉಚಿತವಾಗಿ ಮರಳಿ ಕರೆತರಲು ಯೋಜನೆ ರೂಪಿಸಿದ್ದರು. ಸಿಎಂ, ಸಾರಿಗೆ ಸಚಿವರಿಗೆ ಪತ್ರ ಬರೆದು ಜಿಲ್ಲಾ ಉಸ್ತುವಾರಿ ಸಚಿವರ ನೆರವನ್ನೂ ಪಡೆದಿದ್ದರು. ಸರ್ಕಾರ ಗ್ರೀನ್‌ಸಿಗ್ನಲ್ ಕೊಟ್ಟ ಕೂಡಲೇ ಕಾರ್ಯೋನ್ಮುಖರಾಗಿ ತಮ್ಮಲ್ಲಿದ್ದ ಪಟ್ಟಿಯನ್ನು ವಿಜಯಪುರ ಡಿಸಿಗೆ ಕಳಿಸಿದರು. ತಮ್ಮ ಜನರಿಗೆ ತೊಂದರೆಯಾಗದಂತೆ ಕರೆತರಲು ಖುದ್ದು ತಾವೇ ಮೇ. 8ರಂದು ಗೋವಾ-ಬೆಳಗಾವಿ ಗಡಿಗೆ ಧಾವಿಸಿದರು. ಕಾರ್ಮಿಕರೊಂದಿಗೆ ನೆಲದ ಮೇಲೆ ಮಲಗಿ ರಾತ್ರಿ ಕಳೆದರು. ಕರ್ನಾಟಕ, ಗೋವಾ ಸರ್ಕಾರಗಳೊಂದಿಗೆ ಸಮನ್ವಯ ಸಾಧಿಸಿ, ವಿಜಯಪುರ, ಬೆಳಗಾವಿ, ಉತ್ತರ ಗೋವಾ ಡಿಸಿಗಳು, ಎರಡೂ ರಾಜ್ಯಗಳ ನೋಡಲ್ ಅಧಿ ಕಾರಿಗಳ ಜತೆ ಮಾತುಕತೆ ನಡೆಸಿದರು. ಸೇವಾ ಸಿಂಧು ಆ್ಯಪ್‌ನಲ್ಲಿ ಕಾರ್ಮಿಕರ ಹೆಸರು ನೋಂದಾಯಿಸಿ ಸರ್ಕಾರದ ನಿಯಮ ಪಾಲಿಸಿದರು. ಎಲ್ಲವನ್ನೂ ಕಾನೂನು ಚೌಕಟ್ಟಿನಲ್ಲೇ ನಿಭಾಯಿಸಿ 70-75 ಬಸ್‌ಗಳ ಮೂಲಕ ಅಂದಾಜು 2100-2500 ಕಾರ್ಮಿಕರನ್ನು ಕರೆತರುವಲ್ಲಿ ಯಶಸ್ವಿಯಾದರು. ಇವರ ಕಾರ್ಯವೈಖರಿ ಕಂಡಿದ್ದ ಗಡಿ ಚೆಕ್‌ಪೋಸ್ಟ್‌ನ ಅಧಿಕಾರಿಗಳ ಪ್ರಶಂಸೆ, ಬೇರೆ ಶಾಸಕರು ತಮ್ಮೂರಿನವರನ್ನು ಕರೆತರಲು ನಡಹಳ್ಳಿಯವರಿಗೆ ಸಲಹೆ ಕೇಳಿದ್ದು ಇವರ ಸಾಮರ್ಥ್ಯಕ್ಕೆ ಕನ್ನಡಿಯಾಗಿತ್ತು. ಈ ಪ್ರಸಂಗ ನಡಹಳ್ಳಿಯವರ ಜನಪರ ಕಾರ್ಯಗಳಲ್ಲಿಯೇ ಹೆಚ್ಚು ಗಮನ ಸೆಳೆಯುವಂತಾಯಿತು.
ಮಹಾರಾಷ್ಟ್ರ ಕನ್ನಡಿಗ ಕಾರ್ಮಿಕರಿಗೂ ನೆರವು: ಮಹಾರಾಷ್ಟ್ರಕ್ಕೆ ಇಲ್ಲಿನ ಸಾವಿರಾರು ಕಾರ್ಮಿಕರು ಗುಳೇ ಹೋಗಿದ್ದರು. ಸೋಂಕಿನ ಹೈರಿಸ್ಕ್ ರಾಜ್ಯವಾಗಿದ್ದರಿಂದ ಸರ್ಕಾರದ ಸೂಚನೆಯಂತೆ ಅಲ್ಲಿಂದ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿಡಲು ಸರ್ಕಾರ ನಿಯಮಗಳನ್ನು ಜಾರಿ ಮಾಡಿತ್ತು. ಇದನ್ನರಿತ ನಡಹಳ್ಳಿಯವರು ಸರ್ಕಾರಿ ಪದವಿ ಕಾಲೇಜಿನಲ್ಲಿ ಪ್ರತ್ಯೇಕ ವ್ಯವಸ್ಥೆ ಮಾಡಿಸಿ ಬೇರೆಯವರೊಂದಿಗೆ ಬೆರೆಯದಂತೆ ನೋಡಿಕೊಂಡರು. ಕಾಲೇಜನ್ನು ಸೋಂಕುರಹಿತ ಮಾಡಲು ತಾವೇ ಮುಂದೆ ನಿಂತರು. ಅಗ್ನಿಶಾಮಕ ಸಿಬ್ಬಂದಿ, ಪೌರಕಾರ್ಮಿಕರ ನೆರವಿನಿಂದ ಸ್ವಚ್ಛಗೊಳಿಸಿ ತಾತ್ಕಾಲಿಕ ಕೇಂದ್ರವನ್ನಾಗಿ ಪರಿವರ್ತಿಸಿದರು. ಅಲ್ಲಿಗೆ ಬಂದವರೆಲ್ಲರಿಗೂ ಸ್ಕ್ರೀನಿಂಗ್ ಮಾಡಿಸಿ, ಊಟೋಪಚಾರ ಒದಗಿಸಿ ಬೇರೆಡೆಯ ಕ್ವಾರಂಟೈನ್ ಕೇಂದ್ರಗಳಿಗೆ ಕಳಿಸಲು ಕ್ರಮ ಕೈಕೊಂಡರು. ಇಂಥವರೆಲ್ಲ ಕ್ವಾರಂಟೈನ್ ಅವಧಿ ಮುಗಿಸಿ ಮನೆಗೆ ಹೋಗುವಾಗ ವಾಗ್ಧಾನದಂತೆ ಆಹಾರ ಸಾಮಗ್ರಿ ಕಿಟ್ ಕೊಟ್ಟು ಇವರೆಲ್ಲರ ಮುಖದಲ್ಲಿ ಸಂತೃಪ್ತಿ ಕಂಡರು. ಹೊರ ರಾಜ್ಯದವರನ್ನು ಗೌರವಯುತವಾಗಿ ಬೀಳ್ಕೊಟ್ಟರು: ನಮ್ಮವರನ್ನು ಹೇಗೆ ಗೌರವಯುತವಾಗಿ ಬೇರೆ ರಾಜ್ಯಗಳಿಂದ ಕರೆತಂದರೋ ಹಾಗೇ ಇಲ್ಲಿಗೆ ದುಡಿಯಲು ಬಂದಿದ್ದ ಬೇರೆ ರಾಜ್ಯದವರನ್ನೂ ಅಷ್ಟೇ ಗೌರವಯುತವಾಗಿ ಕಳಿಸಿಕೊಟ್ಟ ಹೃದಯವಂತರು ನಡಹಳ್ಳಿ. ಇಲ್ಲಿದ್ದ ಉತ್ತರಪ್ರದೇಶ, ಬಿಹಾರ, ರಾಜಸ್ಥಾನ, ಗುಜರಾತ, ಓಡಿಸ್ಸಾ, ಆಂಧ್ರಪ್ರದೇಶ, ತಮಿಳುನಾಡು ಮೂಲದವರು ತಮ್ಮೂರಿಗೆ ಮರಳಲು ವಿಜಯಪುರ ಡಿಸಿಯೊಂದಿಗೆ ಮಾತನಾಡಿ ನಿಯಮಾನುಸಾರವೇ ಅನುಕೂಲ ಮಾಡಿಕೊಟ್ಟರು. ಇವರನ್ನು ಕರೆದುಕೊಳ್ಳಲು ನಿರಾಕರಿಸಿದ್ದ ಉತ್ತರಪ್ರದೇಶ, ಓಡಿಸ್ಸಾ, ಬಿಹಾರ ರಾಜ್ಯಗಳ ಸಂಬಂಧಿಸಿದ ಡಿಸಿಗಳು, ಬಿಜೆಪಿ ಶಾಸಕರೊಂದಿಗೆ ಸಂಪರ್ಕ ಸಾಧಿಸಿ ಮನವೊಲಿಸಿದರು. ಇಲ್ಲಿನ ಬಸ್ ನಿಲ್ದಾಣದಿಂದ ಬಸ್‌ಗಳ ಮೂಲಕ ತಮ್ಮ ರಾಜ್ಯಕ್ಕೆ ಹೋಗುವಾಗ ಅವರಿಗೆ, ಬಸ್ ಚಾಲಕ, ನಿರ್ವಾಹಕರಿಗೆ ಊಟದ ಬಾಕ್ಸ್, ಬಿಸ್ಲೇರಿ ನೀರು, ಬಿಸ್ಕೆಟ್ ಬಾಕ್ಸ್ ಕೊಟ್ಟು ಬೀಳ್ಕೊಟ್ಟರು. ಅವರೆಲ್ಲ ಹೋಗುವಾಗ ನಡಹಳ್ಳಿಯವರಿಗೆ, ಭಾರತಮಾತೆಗೆ ಜೈಕಾರ ಹಾಕಿದ್ದು, ನಡಹಳ್ಳಿಯವರ ಕುಟುಂಬದ ಫೋಟೊ ತಮ್ಮೊಟ್ಟಿಗೆ ಒಯ್ದದ್ದು ಕಣ್ಣಿಗೆ ಕಟ್ಟಿದಂತಿದೆ. ಸಮಾನತೆ ಪಾಲನೆ
ಇಲ್ಲಿನ ಬಸ್ ನಿಲ್ದಾಣಕ್ಕೆ ನಮ್ಮವರೂ ಸೇರಿ ನಡಹಳ್ಳಿಯವರ ಹೆಸರು ಹೇಳಿ ಬೇರೆ ತಾಲೂಕು, ಜಿಲ್ಲೆಯವರು ಬಸ್‌ಗಳ ಮೂಲಕ ಬಂದಿದ್ದರು. ಯಾರಿಗೂ ತಾರತಮ್ಯ ತೋರದೆ ಎಲ್ಲರಿಗೂ ಊಟ, ನೀರು, ಬ್ರೆಡ್, ಬಿಸ್ಕೆಟ್, ಆಹಾರ ಸಾಮಗ್ರಿ ಕಿಟ್, ಕೆಲವರಿಗೆ ಆರ್ಥಿಕ ನೆರವು ನೀಡಿ ಸುರಕ್ಷಿತವಾಗಿ ಅವರೂರುಗಳಿಗೆ ಕಳಿಸಿ ಸಮಾನತೆ ಪಾಲಿಸಿದರು. ಸರ್ಕಾರದ ನಿಯಮದಂತೆ ಬಸ್ ಚಾರ್ಜ್ ಭರಿಸಿದ್ದವರಿಗೆ ತಮ್ಮ ಸ್ವಂತದ ಹಣ ಕೊಟ್ಟು ಸಹೃದಯತೆ ಮೆರೆದರು. ಕೆಲವರಿಗೆ ಖಾಸಗಿ ವಾಹನ ಮಾಡಿ ಕಳಿಸಿಕೊಟ್ಟರು. ಸೌಲಭ್ಯ ಪಡೆದವರು ನಡಹಳ್ಳಿಯವರಲ್ಲಿ ದೇವರನ್ನು ಕಾಣುವಂತಾಗಿತ್ತು.
– ಡಿ.ಬಿ.ವಡವಡಗಿ, ಮುದ್ದೇಬಿಹಾಳ