ತೆಕ್ಕಟ್ಟೆ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಾಮೀಣ ಭಾಗದ ಜನತೆಗೆ ನೌಕರಿ ಎನ್ನುವುದೇ ದೂರದ ಮಾತು. ಅದೇ ನೌಕರಿ ಹಿಡಿದು ಪಟ್ಟಣ ಪ್ರದೇಶದಲ್ಲಿ ಅಲೆದಾಡಿದರೂ ಕೈಗೆ ಕೆಲಸ ಸಿಗದೆ ನಿರುದ್ಯೋಗಕ್ಕೆ ಒಳಗಾಗುವ ಯುವ ಸಮುದಾಯಗಳಿಗೆ ಮಾದರಿಯಾಗಿ ಹೀಗೊಬ್ಬರು ಕುಂದಾಪುರ ತಾಲೂಕಿನ ಕೆದೂರು ತೆಂಕಬೆಟ್ಟಿನ ಮಹಿಳೆ ಸಾಧು ಕುಲಾಲ್ತಿ ಎನ್ನುವವರು ಆಡು ಹಾಗೂ ದನ ಸಾಕಾಣಿಕೆಯ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಂಡು ಹೈನುಗಾರಿಕೆಯಲ್ಲಿ ವಿಶೇಷ ಸಾಧನೆ ಮೆರೆದಿದ್ದಾರೆ.
ಆಡು ಸಾಕಾಣಿಕೆಯ ಹಿಂದಿನ ರೋಚಕ ಕಥೆ
ಭಾರತೀಯ ಕೃಷಿ ಕ್ಷೇತ್ರದಲ್ಲಿ ಹೈನುಗಾರಿಕೆಯೇ ಹೆಚ್ಚು ಸುರಕ್ಷಿತ, ಸುಸ್ಥಿರ ಮತ್ತು ಲಾಭದಾಯಕ ಉದ್ಯಮವಾಗಿ ಬೆಳೆಯುತ್ತಿರುವಾಗ ಸರಕಾರದ ಯಾವುದೇ ಯೋಜನೆಗಳ ಲಾಭ ಪಡೆಯದೆ ಸುಮಾರು ಹನ್ನೆರಡು ವರ್ಷಗಳ ಹಿಂದೆಯೇ ಸಾಧು ಕುಲಾಲ್ತಿ ಎನ್ನುವವರು ತನ್ನ ತಾಯಿ ದಿ| ರುಕ್ಕು ಕುಲಾಲ್ತಿ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ಆಡಿನ ಹಾಲಿನ ಅನಿವಾರ್ಯತೆ ಎದುರಾದಾಗ ಒಂದು ಹೆಣ್ಣು ಆಡನ್ನು ಖರೀದಿಸಿ ಸಾಕಿ ಅದರ ಹಾಲನ್ನು ತಾಯಿಗೆ ನೀಡಲು ಆರಂಭಿಸಿದರು.
ಆಡಿನ ಜತೆಗೆ ಬದುಕುವುದು ಮತ್ತು ಅವುಗಳ ಕೆಲಸದ ಬಗ್ಗೆ ಪ್ರಥಮ ಮಾಹಿತಿಯನ್ನು ತಿಳಿದುಕೊಂಡ ಸಾಧು ಕುಲಾಲ್ತಿ ಅವರು ಆಡಿನ ತಳಿ ಅಭಿವೃದ್ಧಿಯ ವಿಚಾರದ ಬಗ್ಗೆ ಸಹೋದರಿ ಜಲಜಾ ಕುಲಾಲ್ತಿಯವರ ಸಹಕಾರದೊಂದಿಗೆ ಒಂದೇ ಹೆಣ್ಣು ಆಡಿನಿಂದ ಹೈನುಗಾರಿಕೆಯೆಡೆಗೆ ಆಸಕ್ತಿ ತಳೆದ ಇವರು ಸುಮಾರು ಹನ್ನೆರಡು ವರ್ಷಗಳಲ್ಲಿಯೇ ನೂರಾರು ಊರಿನ ತಳಿಯ ಆಡಿನ ಜತೆಗೆ ಜೀವನ ನಿರ್ವಹಿಸುತ್ತಿದ್ದರು. ನಿತ್ಯ ಅವುಗಳ ಆಹಾರಕ್ಕಾಗಿ ಅನ್ನ ಬೇಯಿಸಿದ ನೀರು ಹಾಗೂ ರಾಗಿಯ ಹುಡಿಯನ್ನು ನೀರಿನೊಂದಿಗೆ ಬೆರೆಸಿ ನೀಡಲಾಗುವುದು.
ಹೈನುಗಾರಿಕೆಯಿಂದಾಗಿ ಸ್ವಾವಲಂಬಿ ಮತ್ತು ಸ್ವಾಭಿಮಾನ ಬದುಕು ನಡೆಸಲು ಇದರಿಂದ ಸಾಧ್ಯವಾಗಿದೆ. ಅಲ್ಲದೆ ಈ ಕಸುಬಿನ ಬಗ್ಗೆ ಗೌರವವಿದೆ. ಪ್ರಸ್ತುತ 46 ಆಡುಗಳೊಂದಿಗೆ ದಿನ ನಿತ್ಯ ಮೇವಿಗಾಗಿ ಹತ್ತಿರ ಸುತ್ತಮುತ್ತಲಿನ ಪ್ರದೇಶಗಳಿಗೆ ಮೈಲಿಗಳ ದೂರ ಗುಂಪಾಗಿ ಸಾಗುವಾಗ ಅವುಗಳೊಂದಿಗೆ ಕಳೆಯುವ ಪ್ರತಿ ಕ್ಷಣಗಳು ಮನಸ್ಸಿಗೆ ಏನೋ ಆನಂದವನ್ನು ನೀಡುತ್ತದೆ .
ಸಾಧು ಕುಲಾಲ್ತಿ
ಟಿ.ಲೋಕೇಶ್ ಆಚಾರ್ಯ ತೆಕ್ಕಟ್ಟೆ